ಹಾಸನ: ಅವರೆಲ್ಲ ದೇವರನ್ನು ನೋಡಲು ಹೋದವರು.. ಈ ರೀತಿ ನಡುರಸ್ತೆಯಲ್ಲಿ ಹೆಣವಾಗಿ ಬಿದ್ದರಲ್ಲಾ? ದೇವರಿಗೆ ಕಣ್ಣಿಲ್ಲ ಎಂದು ಹೇಳಬೇಕಾ? ಎದುರಿನಿಂದ ಬಂದು ಡಿಕ್ಕಿ ಹೊಡೆಸಿದನಲ್ಲಾ? ಆ ಡ್ರೈವರ್‌ನನ್ನು ಹಳಿಯಬೇಕಾ? ರಸ್ತೆಯನ್ನು ಈ ರೀತಿ ಮಾಡಿಟ್ಟವರಿಗೆ ಶಾಪ ಹಾಕಬೇಕಾ? ಅಥವಾ ಇದು ನಮ್ಮದೇ ಹಣೆಬರಹ, ಇದೇ ವಿಧಿ ಅಂತ ಕಣ್ಣೀರು ಹಾಕುತ್ತಾ ಕೂರಬೇಕಾ?
ಹೀಗೆಂದು ಪ್ರಶ್ನೆಗಳ ಪ್ರಶ್ನೆಗಳನ್ನು ಇಡುತ್ತಾ, ಉತ್ತರವೇ ಇಲ್ಲದೆ ಕುಳಿತಿದ್ದರು ಆ ಒಂಬತ್ತು ಮಂದಿ ನಿಷ್ಪಾಪಿ ಜೀವಗಳ ಅಮಾಯಕ ಬಂಧುಗಳು.
ಹೌದು, ಅವ್ರೆಲ್ಲಾ ಧರ್ಮಸ್ಥಳ ಮಂಜುನಾಥ ಸ್ವಾಮಿ, ಹಾಸನದ ಹಾಸನಾಂಬೆ ದರ್ಶನ ಮಾಡ್ಕೊಂಡು ಮನೆ ಕಡೆಗೆ ಹೊರಟಿದ್ದರು. ಇನ್ನು ಕೇವಲ ಮೂರು ಕಿ.ಮೀ. ಕ್ರಮಿಸಿದ್ದರೆ ಮನೆ ಸಿಕ್ಕಿಯೇ ಬಿಡುತ್ತಿತ್ತು. ಆದರೆ, ಅವರಿಗೆ ಆ ಮನೆ ದೂರವಾಗಿ ಸಾವಿನ ಮನೆಯೇ ಹತ್ತಿರವಾಗಿಬಿಟ್ಟಿತು.
ಇದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗಾಂಧಿ ನಗರದ ಬಳಿ ಶನಿವಾರ ತಡ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳ ಕಣ್ಣೀರ ಕಥೆ. ಈ ದುರ್ದೈವಿಗಳು ಸಾಗುತ್ತಿದ್ದ ಟೆಂಪೊ ಟ್ರಾವೆಲರ್ ಕೆಎಂಎಫ್ ಹಾಲಿನ ವಾಹನ ಮತ್ತು ಸರಕಾರಿ ಬಸ್ ನಡುವೆ ಅಪ್ಪಚ್ಚಿಯಾಗಿತ್ತು. ಒಂದೇ ಕುಟುಂಬದ ಒಂಬತ್ತು ಜೀವಗಳು ಅಲ್ಲಿ ಪ್ರಾಣ ಕಳೆದುಕೊಂಡಿದ್ದವು.
ಹಿರಿಯರ ಪೂಜೆ ಮುಗಿಸಿ ಹೋಗಿದ್ದರು
ಅವರು ಯಾರಿಗೂ ಏನೂ ಕಡಿಮೆ ಮಾಡಿರಲಿಲ್ಲ. ಕಳೆದ ಶುಕ್ರವಾರವಷ್ಟೇ ಹಿರಿಯರ ಪೂಜೆ ಮುಗಿಸಿದ್ದರು. ಒಂದು ಕುಟುಂಬದವರೆಲ್ಲರೂ ಜತೆ ಆಗಿದ್ದೇವಲ್ಲಾ.. ಒಮ್ಮೆ ದೇವಸ್ಥಾನಗಳಿಗೂ ಹೋಗಿ ಬರೋಣ ಎಂದು ಹೊರಟಿದ್ದರು. ಹಿರಿಯರನ್ನು ನೆನಪಿಸಿಕೊಂಡ ಖುಷಿ, ದೇವರ ದರ್ಶನದ ಖುಷಿ ಎಲ್ಲರೂ ಜತೆಯಾಗಿ ಅವರೆಲ್ಲರೂ ಸಂಭ್ರಮದಿಂದ ಇದ್ದರು.
33 ವರ್ಷದ ಚೈತ್ರ ಇನ್ನೇನು ಕೆಲವೇ ದಿನಗಳಲ್ಲಿ ಕೋವಿಡ್‌ನಿಂದ ಸತ್ತ ತಂದೆಯ ಅನುಕಂಪದ ಕೆಲಸಕ್ಕೆ ಹೋಗಬೇಕಿತ್ತು. ಆದರೆ, ಜವರಾಯ ಆಕೆಯ ಆಸೆಗೆ ತಣ್ಣೀರೆರಚಿದ್ದಾನೆ.
ʻʻಸಮರ್ಥನಿಗೆ ಸಂಗೊಳ್ಳಿ ರಾಯಣ್ಣ ಎಂದು ಹೆಸರಿಟ್ಟಿದ್ದೆವು. ನನ್ನ ತಮ್ಮ ಎರಡು ವರ್ಷದ ಹಿಂದೆ ಕೋವಿಡ್ ನಿಂದ ತೀರಿಕೊಂಡಿದ್ದ. ಇವತ್ತು ಅವನ ಮಕ್ಕಳು ತೀರಿಕೊಂಡಿದ್ದಾವೆʼʼ ಎಂದು ಒಬ್ಬರು ಕಣ್ಣೀರು ಹಾಕಿದರು. ಯಾವ ಕಾರಣಕ್ಕೂ ಒಂದೇ ಕುಟುಂಬದವರು ಜತೆಯಾಗಿ ಎಲ್ಲರೂ ಹೋಗಬೇಡಿ, ಕುಟುಂಬವೂ ಸರ್ವನಾಶವಾಗಿಬಿಡುತ್ತದೆ ಎಂದು ಕಣ್ಣೀರು ಹಾಕಿದರು.
ಮುಗಿಲು ಮುಟ್ಟಿದ ಆಕ್ರಂದನ
ಪ್ರವಾಸಕ್ಕೆ ಹೊರಟ ಒಂದೇ ಕುಟುಂಬದ 14 ಜನ ಶುಕ್ರವಾರ ಹಿರಿಯರ ಪೂಜೆ ಮಾಡಿ ಹಿರಿಯರಿಗೆ ಎಡೆ ಇಟ್ಟು ಊಟ ಮಾಡಿ ಹೋಗಿದ್ದರು. ಆದರೆ, ಹೋದವರ್ಯಾರು ವಾಪಸ್ಸು ಬರಲಿಲ್ಲವೆಂದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಅಪಘಾತದ ಬಗ್ಗೆ ಮಾತನಾಡಿದ ಹೊಸ್ಚಿನಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ಈ ಅನಾಹುತಕ್ಕೆ ಹಾಲಿನ ಟ್ಯಾಂಕರ್ ವಾಹನದ ಚಾಲಕನತೆ ನಿರ್ಲಕ್ಷ ಎಂದು ಚಾಲಕನ ವಿರುದ್ಧ ಸಮಾಧಾನ ಹೊರಹಾಕಿದ್ದಾರೆ. ಮೃತ ವಂದನಾ ಸ್ನೇಹಿತರು ಆಸ್ಪತ್ರೆ ಬಳಿ ಬಂದು ನೆಚ್ವಿನ ಗೆಳತಿ ನೋಡಿ ಕಣ್ಣೀರಿಟ್ಟರು. ಇನ್ನೂ ಒಂಬತ್ತು ಮೃತ ದೇಹವನ್ನ ಮೂರು ಆಂಬುಲೆನ್ಸ್ ನಲ್ಲಿ ಮೂರು ದಿಕ್ಕಿಗೆ ಕೊಂಡೊಯ್ದು. ಅಂತ್ಯ ಸಂಸ್ಕಾರ ಮಾಡಿದ್ದಾರೆ.