ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್‌ಗಾಗಿ (Hasana Politics) ದೇವೇಗೌಡರ ಕುಟುಂಬದ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ಸಂಘರ್ಷ ತೀವ್ರ ಸ್ವರೂಪವನ್ನು ಪಡೆಯುತ್ತಿದೆ. ಎಚ್.ಡಿ. ರೇವಣ್ಣ ಅವರು ತಮ್ಮ ಪತ್ನಿಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ತನಗೆ ಯಾಕೆ ಟಿಕೆಟ್ ಕೊಡಬಾರದು ಎಂದು ಸ್ವತಃ ಭವಾನಿ ರೇವಣ್ಣ ಅವರೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಪ್ರಶ್ನಿಸಿದ್ದಾರೆ ಎಂಬ ಸುದ್ದಿಯೂ ಇದೆ. ಈ ನಡುವೆ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮಾತ್ರ ಟಿಕೆಟ್ ಕೊಡುವ ವಿಚಾರದಲ್ಲಿ ತಮ್ಮ ಹಿಂದಿನ ನಿಲುವಿಗೇ ಕಟ್ಟುಬಿದ್ದಂತೆ ಕಾಣುತ್ತಿದೆ. ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಲಾಗದು ಎಂಬ ಸಂದೇಶವನ್ನು ಅವರು ಪದೇಪದೆ ರವಾನಿಸುತ್ತಲೇ ಇದ್ದಾರೆ.
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಸಾಣೆನಹಳ್ಳಿಯಲ್ಲಿ ಮಾತನಾಡಿದ ಅವರು, ಹಾಸನ ಟಿಕೆಟ್ ಬಗ್ಗೆ ಆಡಿದ ಮಾತುಗಳೆಲ್ಲವೂ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಇತ್ತಾದರೂ ಬೆಳಕಿನ ಬಹುಪಾಲು ಸ್ವರೂಪ್ ಪ್ರಕಾಶ್ ಅವರ ಕಡೆಗೇ ಬಿದ್ದಂತೆ ಭಾಸವಾಗುತ್ತಿತ್ತು. ಈ ಮೂಲಕ ಭವಾನಿ ರೇವಣ್ಣ ಆಸೆ ಈಡೇರುವ ಲಕ್ಷಣಗಳಿಲ್ಲ ಎಂಬಂತಿತ್ತು ಮಾತಿನ ಧಾಟಿ. ಸಾಮಾನ್ಯ ಕಾರ್ಯಕರ್ತನಿಗೇ ಜೆಡಿಎಸ್ ಟಿಕೆಟ್ ಎಂದು ಮತ್ತೊಮ್ಮೆ ಪರೋಕ್ಷವಾಗಿ ಹೇಳಿದರು ಕುಮಾರಸ್ವಾಮಿ.
ಹಾಸನದ ಟಿಕೆಟ್ ಯಾರಿಗೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಕುಮಾರಸ್ವಾಮಿ ಅವರು, ನಿಮ್ಮೆಲ್ಲರ ಕುತೂಹಲಕ್ಕೆ, ಕಾರ್ಯಕರ್ತರು ಏನು ಬಯಸಿದ್ದಾರೆ ಎನ್ನುವುದೇ ಉತ್ತರ ಎಂದರು.
ʻʻಮಾಧ್ಯಮ ಸ್ನೇಹಿತರು ಕೂಡಾ ಯಾರಾಗಬೇಕು ಎಂದು ಬಯಸಿದ್ದಾರೆ. ನೀವು ಹೊರಗೆ ಹೇಳೋಕೆ ಆಗುತ್ತಿಲ್ಲ. ಒಳಗೆ ಇಟ್ಟುಕೊಂಡಿದಿರಾ? ನೀವು ಏನು ಯೋಚನೆ ಮಾಡುತ್ತಿದ್ದೀರೋ ಅದೇ ರೀತಿಯ ತೀರ್ಮಾನ ಮಾಡುತ್ತೇನೆʼʼ ಎಂದು ಕುಮಾರಸ್ವಾಮಿ ಹೇಳಿದರು. ಈ ಮೂಲಕ ಟಿಕೆಟ್ ಬಹುತೇಕ ಸ್ವರೂಪ್ ಅವರಿಗೇ ಎಂದು ಹೇಳಿದಂತಾಗಿದೆ. ಕೆಲವೇ ದಿನದಲ್ಲಿ ಎರಡನೇ ಪಟ್ಟಿ ಕೂಡ ಬಿಡುಗಡೆ ಆಗಲಿದೆ ಎಂದೂ ಕುಮಾರಸ್ವಾಮಿ ತಿಳಿಸಿದರು.
ಸ್ವರೂಪ್ ಮೂಲಕವೇ ತಮ್ಮ ಹೆಸರು ಹೇಳಿಸಲು ರೇವಣ್ಣ ಪ್ಲ್ಯಾನ್
ಇದರ ನಡುವೆಯೇ ಎಚ್.ಡಿ. ರೇವಣ್ಣ ಅವರು ಇನ್ನೊಂದು ಪ್ಲ್ಯಾನ್ ಮಾಡಿಕೊಂಡಂತೆ ಕಾಣುತ್ತಿದೆ. ಕುಮಾರಸ್ವಾಮಿ ಅವರು ಯಾವ ಸ್ವರೂಪ್ ಪ್ರಕಾಶ್ ಅವರಿಗೆ ಟಿಕೆಟ್ ಕೊಡಿಸಬೇಕು ಎಂದು ಬಯಸಿದ್ದಾರೋ ಅದೇ ಸ್ವರೂಪ್ ಮೂಲಕ ತಮ್ಮ ಅಥವಾ ಭವಾನಿ ರೇವಣ್ಣ ಅವರ ಹೆಸರನ್ನು ಹೇಳಿಸುವ ತಂತ್ರವೊಂದನ್ನು ರೇವಣ್ಣ ಹೆಣೆಯುತ್ತಿದ್ದಾರೆ ಎನ್ನಲಾಗಿದೆ.
ಟಿಕೆಟ್ ಫೈಟ್ ಆರಂಭಗೊಂಡಂದಿನಿಂದ ಕಳೆದ ಒಂದು ತಿಂಗಳ ಕಾಲ ಸ್ವರೂಪ್ ಜತೆ ಅಂತರ ಕಾಯ್ದುಕೊಂಡಿದ್ದ ರೇವಣ್ಣ ಅವರು ಗುರುವಾರ ಸ್ವರೂಪ್ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದು ಈ ಅಂಶಕ್ಕೆ ಪುಷ್ಟಿ ನೀಡಿದೆ. ಕ್ಷೇತ್ರದಲ್ಲಿ ಒಂದು ಸುತ್ತು ಪ್ರಚಾರ ಮುಗಿಸಿದ ಬಳಿಕ ಸ್ವರೂಪ್ ಬೆಂಬಲ ಪಡೆಯದೆ ಗೆಲುವು ಅಸಾಧ್ಯ ಎಂದು ರೇವಣ್ಣ ಕುಟುಂಬಕ್ಕೆ ಮನವರಿಕೆ ಆಗಿದೆ ಎನ್ನಲಾಗಿದೆ. ಹಾಗಾಗಿ ಸ್ವರೂಪ್ ಅವರನ್ನು ಜೊತೆಗಿಟ್ಟುಕೊಂಡೇ ಚುನಾವಣಾ ಅಖಾಡಕ್ಕೆ ಇಳಿಯಲು ತಂತ್ರ ರೂಪಿಸಲಾಗಿದೆ.
ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರನ್ನು ಮಣಿಸಲು ತಾವು ಅಥವಾ ಭವಾನಿ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಬಗ್ಗೆ ರೇವಣ್ಣ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದ್ದು, ಸ್ವರೂಪ್‌ಗೆ ಪರಿಷತ್ ಸ್ಥಾನ ಅಥವಾ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡೋ ಆಫರ್ ನೀಡಿದ್ದಾರೆ ಎನ್ನಲಾಗಿದೆ. ತಾನು ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆಯನ್ನು ಸ್ವರೂಪ್ ಅವರ ಮೂಲಕ ಹೊರಡಿಸುವ ರೇವಣ್ಣ ಪ್ರಯತ್ನ ಫಲ ನೀಡಲಿದೆಯೇ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : JDS Pancharatna: ನೀವು ಮತ್ತೆ ರಾಜ್ಯದ ಸಿಎಂ ಆಗ್ತೀರಿ: ಕುಮಾರಸ್ವಾಮಿಗೆ ಕೆರೆಕೋಡಿ ರಂಗಾಪುರ ಮಠದ ಶ್ರೀ ಆಶೀರ್ವಾದ