ಹಾಸನ: ಮುಸಲ್ಮಾನ ಸಹೋದರರಿಗೆ ನಾನು ಪ್ರಾಮಾಣಿಕವಾಗಿ ಎಲ್ಲ ಕೆಲಸವನ್ನೂ ಮಾಡಿ ಕೊಡುತ್ತಿದ್ದೇನೆ. ಆದರೆ ನೀವು ಪ್ರತಿ ಬಾರಿ ನನಗೆ ಮತ ಹಾಕದೆ ಕೈ ಕೊಡುತ್ತಿದ್ದೀರಿ. ಇನ್ನಾರು ತಿಂಗಳಲ್ಲಿ ಎಲೆಕ್ಷನ್ ಬರುತ್ತೆ. ಈ ಬಾರಿಯೂ ನೀವು ನನಗೆ ಮತ ಹಾಕದಿದ್ದರೆ, ನಿಮಗೆ ಎಷ್ಟು ಕೆಲಸ ಮಾಡಿದರೂ ಅಷ್ಟೆ ಎಂದು ನಾನು ನಿಮ್ಮ ಕೈ ಬಿಡುತ್ತೇನೆ”-…
ಇದು ಹಾಸನದ ಶ್ರೀನಗರದಲ್ಲಿ ನೂರಾರು ಮುಸ್ಲಿಂ ನಾಗರಿಕರನ್ನು ಉದ್ದೇಶಿಸಿ ಶನಿವಾರ ಮಧ್ಯರಾತ್ರಿಯಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ (Preetam Gowda) ಮಾಡಿರುವ ಭಾಷಣ!
ʻʻನನಗೆ ಮೂರು ಬಾರಿ ಕೈಕೊಟ್ಟಿದ್ದೀರಿ. ಕಳೆದ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ವೋಟ್ ಹಾಕಿಲ್ಲ. ಪಾಲಿಕೆ ಚುನಾವಣೆಯಲ್ಲೂ ಹಾಕಿಲ್ಲ. ಕೆಲಸ ನಾನು ಮಾಡಬೇಕು. ಆದರೆ ಎಲೆಕ್ಷನ್ ಬಂದಾಗ ಮಾತ್ರ -ಬಿಜೆಪಿ ಕೋ ವೋಟ್ ಮತ್ ಡಾಲ್‌ರೇ- ಎಂದು ಪ್ರಚಾರ ಮಾಡ್ತೀರಿ. ನೀವು ಹೀಗೆ ಮಾಡೋದು ಸರಿಯೇʼʼ ಎಂದು ಪ್ರೀತಂ ಪ್ರಶ್ನಿಸಿದ್ದಾರೆ.
ಬಾಯಲ್ಲಿ ಅಣ್ಣಾ ಅಂದು ಕೈಕೊಟ್ರೆ ಉರಿ ಹತ್ತುತ್ತೆ
ʻʻಯಾರು ಕೆಲಸ ಮಾಡಿದ್ದಾರೋ ಅವರಿಗೆ ವೋಟು ಹಾಕಬೇಕು. ಆದರೆ ನೀವು ಬಾಯಲ್ಲಿ ಅಣ್ಣಾ ಅಂತ ಹೇಳಿ ಕೊನೆಗೆ ನಾವು ಬಿಜೆಪಿಗೆ ಓಟು ಹಾಕಲ್ಲ ಅಂತ ಹೇಳಿದ್ರೆ ಕೆಲಸ ಮಾಡಿರೋರಿಗೆ ಉರಿ ಹತ್ತುತ್ತೆ. ನೀವು ಬೆಳಗ್ಗೆಯಿಂದ ಕೂಲಿ ಹೋಗೋರು ಅಂತಿರಾ, ಸಂಜೆ ಕೂಲಿ ಕೊಡದೇ ಇದ್ದರೆ ಬಿಡ್ತಿರಾ? ನಾನೂ ಇಲ್ಲಿ ಕೆಲಸ ಮಾಡಿರ್ತಿನಿ, ಕೂಲಿ ಮಾಡಿರ್ತಿನಿ, ವೋಟು ಕೇಳ್ತಿನಿ. ನೀವು ನನಗೆ ವೋಟು ಹಾಕದೇ ಬೇರೆ ಪಕ್ಷಕ್ಕೆ ವೋಟ್ ಹಾಕಿದರೆ ನಾನು ಸುಮ್ಮನಿರಲಾʼʼ ಎಂದು ಪ್ರೀತಂ ಪ್ರಶ್ನಿಸಿದ್ದಾರೆ.
ಎಷ್ಟು ಮಾಡಿದರೂ ಇಷ್ಟೆ ಅಂದ್ರೆ ತಿರುಗಿಯೂ ನೋಡಲ್ಲ
ʻʻನಾನು ನಮ್ಮ ಮುಸಲ್ಮಾನ ಸಹೋದರರನ್ನು ನಮ್ಮ ಸಹೋದರರ ರೀತಿಯಲ್ಲಿ ಪ್ರಾಮಾಣಿಕವಾಗಿ ಪ್ರೀತಿಯಿಂದ ಕಾಣ್ತಾ ಇದ್ದೇನೆ. ಮುಂದೆಯೂ ಕಾಣ್ತೇನೆ. ಆದರೆ ನಾನು ಕೆಲಸ ಮಾಡಿದ ಮೇಲೂ ನೀವು ನನಗೆ ಸಹಾಯ ಮಾಡದೇ ಹೋದರೆ, ಇವರಿಗೆ ಎಷ್ಟು ಕೆಲಸ ಮಾಡಿದರೂ ಅಷ್ಟೇ, ನಮ್ಮ ಹಣೆಬರಹ ಬದಲಾಗಲ್ಲ ಅಂತ ಹೇಳಿ ಈ ಕಡೆ ತಿರುಗಿ ನೋಡಬಾರದು ಅನ್ನುವ ತೀರ್ಮಾನಕ್ಕೆ ಬರ್ತೇನೆ. ಆ ತೀರ್ಮಾನಕ್ಕೆ ಬರದೆ ಇರುವ ರೀತಿ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿʼʼ ಎಂದು ಪ್ರೀತಂ ಹೇಳಿದ್ದಾರೆ.
ಮುಂದಿನ ಸಲವೂ ವೋಟ್ ಹಾಕದಿದ್ರೆ…
ʻʻಮುಂದಿನ ವಿಧಾನಸಭೆ ಚುನಾವಣೆಯಲ್ಲೂ ನೀವು ನನಗೆ ವೋಟ್ ಹಾಕದಿದ್ದರೆ ನಿಮ್ಮ ಯಾವ ಕೆಲಸವನ್ನೂ ಮಾಡಿಕೊಡುವುದಿಲ್ಲ. ನನ್ನ ಮನೆಗೆ ಬಂದರೆ ಕಾಫಿ ಕುಡಿಸಿ ಕಳಿಸ್ತೇನೆ ಅಷ್ಟೆ. ರಸ್ತೆ, ಚರಂಡಿ, ನೀರು ಕೊಡ್ತೇನೆ. ನನ್ನ ಧರ್ಮ ಅದು. ಒಬ್ಬ ಶಾಸಕನಾಗಿ ಅಷ್ಟನ್ನು ನಾನು ಮಾಡಲೇಬೇಕು, ಮಾಡ್ತಿನಿ. ಇನ್ನು ಉಳಿದಂತೆ ಯಾವುದೇ ವೈಯುಕ್ತಿಕ ಕೆಲಸ ಮಾಡಲು ಆಗಲ್ಲ. ಇದರಲ್ಲಿ ಯಾವುದೇ ಮುಲಾಜಿಲ್ಲ. ಇವತ್ತೇ ನೀವೆಲ್ಲ ಸೇರಿ ತೀರ್ಮಾನ ಮಾಡಿಕೊಳ್ಳಿʼʼ ಎಂದು ಮುಸ್ಲಿಂ ನಾಗರಿಕರಿಗೆ ಪ್ರೀತಂ ಎಚ್ಚರಿಕೆ ನೀಡಿದ್ದಾರೆ.
ರೇವಣ್ಣ ಯಾವತ್ತಾದರೂ ಶ್ರೀನಗರಕ್ಕೆ ಬಂದಿದಾರಾ?
ʻʻಶಾಸಕರಿಗೆ ಒಂದೂವರೆ ಸಾವಿರ ವೋಟು ಕೊಡ್ತೀವಿ ಅಂದರೆ ಇಲ್ಲಿಂದ ಹೊರಡುತ್ತೇನೆ. ಯಾರೋ ದಳದವರು, ಕಾಂಗ್ರೆಸ್‌ನವರು ಬರ್ತಾರೆ ಅಂತ, ಅವರು ಬಂದಾಗಲೆಲ್ಲಾ ಅವರ ಹಿಂದೆ ಸುಮ್ಮನೆ ಮೆರವಣಿಗೆ ಹೋಗಬೇಡಿ. ನನಗೂ ಜನ ಇರ್ತಾರೆ ಇಲ್ಲಿ ಇದನ್ನೆಲ್ಲ ಹೇಳುವವರು. ಕೆಲಸ ಮಾಡಿಕೊಡ್ತೀನಿ ಅಂತ ಹೇಳುವವರ ಮನೆಯವರು ಮೂರು ಬಾರಿ ಮುಖ್ಯಮಂತ್ರಿ ಆದರು. ದೊಡ್ಡಗೌಡ್ರು ಒಂದು ಬಾರಿ, ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿ ಆಗಿದ್ರು, ರೇವಣ್ಣ ಅವರು ನಾಲ್ಕು ಬಾರಿ ಮಂತ್ರಿಯಾಗಿದ್ರು. ಯಾವತ್ತಾದ್ರೂ ಶ್ರೀನಗರಕ್ಕೆ ಬಂದೀದ್ದಾರಾ? ನೋಡಿದಿರಾ ಅವರ ಮುಖಾನಾ? ಎಲೆಕ್ಷನ್ ಹತ್ತಿರ ಬಂತು. ಈಗ ಬರ್ತಾರೆ ನೋಡಿ. ಬಂದಾಗ ಏನ್ ಹೇಳ್ಬೇಕು ಅದನ್ನು ಹೇಳಲು ಯೋಚನೆ ಮಾಡ್ಕಂಡಿರಿ, ಅರ್ಥ ಆಗ್ತಾ ಇದೆಯಾ ನಾನು ಹೇಳ್ತಿರೋದುʼʼ ಎಂದು ಪ್ರೀತಂ ಖಡಕ್ ಆಗಿ ಹೇಳಿದ್ದಾರೆ.
ವೋಟು ಹಾಕದಿದ್ದರೆ ಯುಜಿಡಿ ಕಾಮಗಾರ ಮಾಡಲ್ಲ
ʻʻನಾನು ಎಂಎಲ್‌ಎ ಆಗಿರೋದು ನಾಲ್ಕು ವರ್ಷ. ನಾಲ್ಕು ವರ್ಷದಲ್ಲಿ ನಿಮಗೆ ಎಲ್ಲಾನೂ ರೆಡಿ ಮಾಡಿದ್ದೀನಿʼʼ ಎಂದಿರುವ ಪ್ರೀತಂ, ʻʻವೋಟು ಹಾಕದಿದ್ದರೆ ಯುಜಿಡಿ ಕಾಮಗಾರಿ ಮಾಡುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇಲ್ಲಿಯ ತನಕ ಏನ್ ಮಾಡ್ತಿದ್ರು ಪ್ರಧಾನಮಂತ್ರಿ ಆಗಿದ್ದವರು, ಮೂರು ಬಾರಿ ಮುಖ್ಯಮಂತ್ರಿ ಆಗಿದ್ದವರು, ನಾಲ್ಕು ಬಾರಿ ಮಂತ್ರಿಯಾಗಿದ್ದವರುʼʼ ಎಂದು ಪ್ರೀತಂ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ | Karnataka Elections | ವರುಣ ಕ್ಷೇತ್ರದಲ್ಲಿ ಸಿದ್ದುಗೆ ಸಡ್ಡು ಹೊಡೆಯುತ್ತಾರಾ ಬಿ.ವೈ. ವಿಜಯೇಂದ್ರ: ಅವರು ಹೇಳಿದ್ದೇನು?