ಕರ್ನಾಟಕ
Preetam Gowda | ನನಗೆ ವೋಟ್ ಹಾಕದಿದ್ದರೆ ನಿಮ್ಮ ಕೆಲಸ ಮಾಡಿಕೊಡಲ್ಲ: ಮುಸ್ಲಿಂ ಮತದಾರರಿಗೆ ಬಿಜೆಪಿ ಶಾಸಕ ಪ್ರೀತಂ ಗೌಡ ಎಚ್ಚರಿಕೆ
ಯಾರು ಕೆಲಸ ಮಾಡಿದ್ದಾರೋ ಅವರಿಗೆ ವೋಟು ಹಾಕಬೇಕು. ಆದರೆ ನೀವು ಬಾಯಲ್ಲಿ ಅಣ್ಣಾ ಅಂತ ಹೇಳಿ ಕೊನೆಗೆ ಬಿಜೆಪಿಗೆ ಓಟು ಹಾಕಲ್ಲ ಅಂದರೆ ನಮಗೆ ಉರಿ ಹತ್ತಲ್ವಾ ಎಂದು ಶಾಸಕ ಪ್ರೀತಂ ಗೌಡ (Preetam Gowda) ಮುಸ್ಲಿಮರು ಹೆಚ್ಚಿರುವ ಪ್ರದೇಶದಲ್ಲಿ ಭಾಷಣ ಮಾಡಿದ್ದಾರೆ.
ಹಾಸನ: ಮುಸಲ್ಮಾನ ಸಹೋದರರಿಗೆ ನಾನು ಪ್ರಾಮಾಣಿಕವಾಗಿ ಎಲ್ಲ ಕೆಲಸವನ್ನೂ ಮಾಡಿ ಕೊಡುತ್ತಿದ್ದೇನೆ. ಆದರೆ ನೀವು ಪ್ರತಿ ಬಾರಿ ನನಗೆ ಮತ ಹಾಕದೆ ಕೈ ಕೊಡುತ್ತಿದ್ದೀರಿ. ಇನ್ನಾರು ತಿಂಗಳಲ್ಲಿ ಎಲೆಕ್ಷನ್ ಬರುತ್ತೆ. ಈ ಬಾರಿಯೂ ನೀವು ನನಗೆ ಮತ ಹಾಕದಿದ್ದರೆ, ನಿಮಗೆ ಎಷ್ಟು ಕೆಲಸ ಮಾಡಿದರೂ ಅಷ್ಟೆ ಎಂದು ನಾನು ನಿಮ್ಮ ಕೈ ಬಿಡುತ್ತೇನೆ”-…
ಇದು ಹಾಸನದ ಶ್ರೀನಗರದಲ್ಲಿ ನೂರಾರು ಮುಸ್ಲಿಂ ನಾಗರಿಕರನ್ನು ಉದ್ದೇಶಿಸಿ ಶನಿವಾರ ಮಧ್ಯರಾತ್ರಿಯಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ (Preetam Gowda) ಮಾಡಿರುವ ಭಾಷಣ!
ʻʻನನಗೆ ಮೂರು ಬಾರಿ ಕೈಕೊಟ್ಟಿದ್ದೀರಿ. ಕಳೆದ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ವೋಟ್ ಹಾಕಿಲ್ಲ. ಪಾಲಿಕೆ ಚುನಾವಣೆಯಲ್ಲೂ ಹಾಕಿಲ್ಲ. ಕೆಲಸ ನಾನು ಮಾಡಬೇಕು. ಆದರೆ ಎಲೆಕ್ಷನ್ ಬಂದಾಗ ಮಾತ್ರ -ಬಿಜೆಪಿ ಕೋ ವೋಟ್ ಮತ್ ಡಾಲ್‌ರೇ- ಎಂದು ಪ್ರಚಾರ ಮಾಡ್ತೀರಿ. ನೀವು ಹೀಗೆ ಮಾಡೋದು ಸರಿಯೇʼʼ ಎಂದು ಪ್ರೀತಂ ಪ್ರಶ್ನಿಸಿದ್ದಾರೆ.
ಬಾಯಲ್ಲಿ ಅಣ್ಣಾ ಅಂದು ಕೈಕೊಟ್ರೆ ಉರಿ ಹತ್ತುತ್ತೆ
ʻʻಯಾರು ಕೆಲಸ ಮಾಡಿದ್ದಾರೋ ಅವರಿಗೆ ವೋಟು ಹಾಕಬೇಕು. ಆದರೆ ನೀವು ಬಾಯಲ್ಲಿ ಅಣ್ಣಾ ಅಂತ ಹೇಳಿ ಕೊನೆಗೆ ನಾವು ಬಿಜೆಪಿಗೆ ಓಟು ಹಾಕಲ್ಲ ಅಂತ ಹೇಳಿದ್ರೆ ಕೆಲಸ ಮಾಡಿರೋರಿಗೆ ಉರಿ ಹತ್ತುತ್ತೆ. ನೀವು ಬೆಳಗ್ಗೆಯಿಂದ ಕೂಲಿ ಹೋಗೋರು ಅಂತಿರಾ, ಸಂಜೆ ಕೂಲಿ ಕೊಡದೇ ಇದ್ದರೆ ಬಿಡ್ತಿರಾ? ನಾನೂ ಇಲ್ಲಿ ಕೆಲಸ ಮಾಡಿರ್ತಿನಿ, ಕೂಲಿ ಮಾಡಿರ್ತಿನಿ, ವೋಟು ಕೇಳ್ತಿನಿ. ನೀವು ನನಗೆ ವೋಟು ಹಾಕದೇ ಬೇರೆ ಪಕ್ಷಕ್ಕೆ ವೋಟ್ ಹಾಕಿದರೆ ನಾನು ಸುಮ್ಮನಿರಲಾʼʼ ಎಂದು ಪ್ರೀತಂ ಪ್ರಶ್ನಿಸಿದ್ದಾರೆ.
ಎಷ್ಟು ಮಾಡಿದರೂ ಇಷ್ಟೆ ಅಂದ್ರೆ ತಿರುಗಿಯೂ ನೋಡಲ್ಲ
ʻʻನಾನು ನಮ್ಮ ಮುಸಲ್ಮಾನ ಸಹೋದರರನ್ನು ನಮ್ಮ ಸಹೋದರರ ರೀತಿಯಲ್ಲಿ ಪ್ರಾಮಾಣಿಕವಾಗಿ ಪ್ರೀತಿಯಿಂದ ಕಾಣ್ತಾ ಇದ್ದೇನೆ. ಮುಂದೆಯೂ ಕಾಣ್ತೇನೆ. ಆದರೆ ನಾನು ಕೆಲಸ ಮಾಡಿದ ಮೇಲೂ ನೀವು ನನಗೆ ಸಹಾಯ ಮಾಡದೇ ಹೋದರೆ, ಇವರಿಗೆ ಎಷ್ಟು ಕೆಲಸ ಮಾಡಿದರೂ ಅಷ್ಟೇ, ನಮ್ಮ ಹಣೆಬರಹ ಬದಲಾಗಲ್ಲ ಅಂತ ಹೇಳಿ ಈ ಕಡೆ ತಿರುಗಿ ನೋಡಬಾರದು ಅನ್ನುವ ತೀರ್ಮಾನಕ್ಕೆ ಬರ್ತೇನೆ. ಆ ತೀರ್ಮಾನಕ್ಕೆ ಬರದೆ ಇರುವ ರೀತಿ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿʼʼ ಎಂದು ಪ್ರೀತಂ ಹೇಳಿದ್ದಾರೆ.
ಮುಂದಿನ ಸಲವೂ ವೋಟ್ ಹಾಕದಿದ್ರೆ…
ʻʻಮುಂದಿನ ವಿಧಾನಸಭೆ ಚುನಾವಣೆಯಲ್ಲೂ ನೀವು ನನಗೆ ವೋಟ್ ಹಾಕದಿದ್ದರೆ ನಿಮ್ಮ ಯಾವ ಕೆಲಸವನ್ನೂ ಮಾಡಿಕೊಡುವುದಿಲ್ಲ. ನನ್ನ ಮನೆಗೆ ಬಂದರೆ ಕಾಫಿ ಕುಡಿಸಿ ಕಳಿಸ್ತೇನೆ ಅಷ್ಟೆ. ರಸ್ತೆ, ಚರಂಡಿ, ನೀರು ಕೊಡ್ತೇನೆ. ನನ್ನ ಧರ್ಮ ಅದು. ಒಬ್ಬ ಶಾಸಕನಾಗಿ ಅಷ್ಟನ್ನು ನಾನು ಮಾಡಲೇಬೇಕು, ಮಾಡ್ತಿನಿ. ಇನ್ನು ಉಳಿದಂತೆ ಯಾವುದೇ ವೈಯುಕ್ತಿಕ ಕೆಲಸ ಮಾಡಲು ಆಗಲ್ಲ. ಇದರಲ್ಲಿ ಯಾವುದೇ ಮುಲಾಜಿಲ್ಲ. ಇವತ್ತೇ ನೀವೆಲ್ಲ ಸೇರಿ ತೀರ್ಮಾನ ಮಾಡಿಕೊಳ್ಳಿʼʼ ಎಂದು ಮುಸ್ಲಿಂ ನಾಗರಿಕರಿಗೆ ಪ್ರೀತಂ ಎಚ್ಚರಿಕೆ ನೀಡಿದ್ದಾರೆ.
ರೇವಣ್ಣ ಯಾವತ್ತಾದರೂ ಶ್ರೀನಗರಕ್ಕೆ ಬಂದಿದಾರಾ?
ʻʻಶಾಸಕರಿಗೆ ಒಂದೂವರೆ ಸಾವಿರ ವೋಟು ಕೊಡ್ತೀವಿ ಅಂದರೆ ಇಲ್ಲಿಂದ ಹೊರಡುತ್ತೇನೆ. ಯಾರೋ ದಳದವರು, ಕಾಂಗ್ರೆಸ್‌ನವರು ಬರ್ತಾರೆ ಅಂತ, ಅವರು ಬಂದಾಗಲೆಲ್ಲಾ ಅವರ ಹಿಂದೆ ಸುಮ್ಮನೆ ಮೆರವಣಿಗೆ ಹೋಗಬೇಡಿ. ನನಗೂ ಜನ ಇರ್ತಾರೆ ಇಲ್ಲಿ ಇದನ್ನೆಲ್ಲ ಹೇಳುವವರು. ಕೆಲಸ ಮಾಡಿಕೊಡ್ತೀನಿ ಅಂತ ಹೇಳುವವರ ಮನೆಯವರು ಮೂರು ಬಾರಿ ಮುಖ್ಯಮಂತ್ರಿ ಆದರು. ದೊಡ್ಡಗೌಡ್ರು ಒಂದು ಬಾರಿ, ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿ ಆಗಿದ್ರು, ರೇವಣ್ಣ ಅವರು ನಾಲ್ಕು ಬಾರಿ ಮಂತ್ರಿಯಾಗಿದ್ರು. ಯಾವತ್ತಾದ್ರೂ ಶ್ರೀನಗರಕ್ಕೆ ಬಂದೀದ್ದಾರಾ? ನೋಡಿದಿರಾ ಅವರ ಮುಖಾನಾ? ಎಲೆಕ್ಷನ್ ಹತ್ತಿರ ಬಂತು. ಈಗ ಬರ್ತಾರೆ ನೋಡಿ. ಬಂದಾಗ ಏನ್ ಹೇಳ್ಬೇಕು ಅದನ್ನು ಹೇಳಲು ಯೋಚನೆ ಮಾಡ್ಕಂಡಿರಿ, ಅರ್ಥ ಆಗ್ತಾ ಇದೆಯಾ ನಾನು ಹೇಳ್ತಿರೋದುʼʼ ಎಂದು ಪ್ರೀತಂ ಖಡಕ್ ಆಗಿ ಹೇಳಿದ್ದಾರೆ.
ವೋಟು ಹಾಕದಿದ್ದರೆ ಯುಜಿಡಿ ಕಾಮಗಾರ ಮಾಡಲ್ಲ
ʻʻನಾನು ಎಂಎಲ್‌ಎ ಆಗಿರೋದು ನಾಲ್ಕು ವರ್ಷ. ನಾಲ್ಕು ವರ್ಷದಲ್ಲಿ ನಿಮಗೆ ಎಲ್ಲಾನೂ ರೆಡಿ ಮಾಡಿದ್ದೀನಿʼʼ ಎಂದಿರುವ ಪ್ರೀತಂ, ʻʻವೋಟು ಹಾಕದಿದ್ದರೆ ಯುಜಿಡಿ ಕಾಮಗಾರಿ ಮಾಡುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇಲ್ಲಿಯ ತನಕ ಏನ್ ಮಾಡ್ತಿದ್ರು ಪ್ರಧಾನಮಂತ್ರಿ ಆಗಿದ್ದವರು, ಮೂರು ಬಾರಿ ಮುಖ್ಯಮಂತ್ರಿ ಆಗಿದ್ದವರು, ನಾಲ್ಕು ಬಾರಿ ಮಂತ್ರಿಯಾಗಿದ್ದವರುʼʼ ಎಂದು ಪ್ರೀತಂ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ | Karnataka Elections | ವರುಣ ಕ್ಷೇತ್ರದಲ್ಲಿ ಸಿದ್ದುಗೆ ಸಡ್ಡು ಹೊಡೆಯುತ್ತಾರಾ ಬಿ.ವೈ. ವಿಜಯೇಂದ್ರ: ಅವರು ಹೇಳಿದ್ದೇನು?
ಕರ್ನಾಟಕ
Elephant trapped : ಮೂರು ತಿಂಗಳಿನಿಂದ ಸತಾಯಿಸುತ್ತಿರುವ 10 ವರ್ಷದ ಗಂಡಾನೆ ಕೊನೆಗೂ ಹನಿ ಟ್ರ್ಯಾಪ್‌ಗೆ ಬಿತ್ತು!
ತೀರ್ಥಹಳ್ಳಿ ತಾಲೂಕಿನ ಹಲವು ಕಡೆ ಬೆಳೆ ಹಾನಿ ಮಾಡುತ್ತಾ, ರಾಜಾರೋಷವಾಗಿ ಓಡಾಡುತ್ತಾ ಆತಂಕ ಹುಟ್ಟಿಸಿದ್ದ ಗಂಡಾನೆಯನ್ನು ಕೊನೆಗೂ ಅರಣ್ಯ ಇಲಾಖೆ ಹನಿ ಟ್ರ್ಯಾಪ್ (Elephant trapped) ಬಳಸಿ ಹಿಡಿದಿದ್ದಾರೆ.
ತೀರ್ಥಹಳ್ಳಿ: ಪಟ್ಟಣದ ಕುರುವಳ್ಳಿ ರಾಮೇಶ್ವರ ದೇವಸ್ಥಾನದ ಬಳಿ ಡಿಸೆಂಬರ್ 31ರ ಮುಂಜಾನೆ ಕಾಣಿಸಿಕೊಂಡು ಕಳೆದ ಮೂರು ತಿಂಗಳಿನಿಂದ ಸತಾಯಿಸುತ್ತಿದ್ದ 10 ವರ್ಷ ಪ್ರಾಯದ ಗಂಡು ಕಾಡಾನೆಯನ್ನು ಅರಣ್ಯ ಇಲಾಖೆ ಕೊನೆಗೂ ಸೆರೆ (Elephant trapped) ಹಿಡಿದಿದೆ.
ಹಾರೋಗೊಳಿಗೆ, ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೆರೆ, ಅಮ್ತಿ, ಮಳೂರು, ಬಳಗಟ್ಟೆ, ಕೆರೆಕೊಪ್ಪ ಸುತ್ತಮುತ್ತಲಿನ ಸುಮಾರು 320 ಹೆಕ್ಟೇರ್ ಕಿರು ಅರಣ್ಯ ಪ್ರದೇಶದಲ್ಲಿ ಆನೆ ಮೂರು ತಿಂಗಳಿನಿಂದ ಬೀಡುಬಿಟ್ಟಿತ್ತು.
ಸುತ್ತಲಿನ ರೈತರ ತೋಟಗಳ ಬೆಳೆ ಹಾನಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆನೆ ಹಿಡಿಯುವಂತೆ ಅಗ್ರಹಿಸಿದ್ದರು. ಇಲ್ಲಿಯವರೆಗೆ ಈ ಆನೆ ಯಾವುದೇ ಜೀವ ಹಾನಿ ಮಾಡಿರಲಿಲ್ಲವಾದರೂ ಬೆಳೆ ಹಾನಿ ಮಾಡಿತ್ತು. ವಿಶೇಷ ಎಂದರೆ ಈ ಆನೆ ಹೆಚ್ಚಾಗಿ ಜನನಿಬಿಡ ಪ್ರದೇಶದಲ್ಲಿಯೇ ಹಾಜರು ಹಾಕುತ್ತಿತ್ತು.
ಹಾಗಾಗಿ ಹಿಡಿಯುವುದು ಅನಿವಾರ್ಯ ಆಗಿತ್ತು.
ಈ ಹಿನ್ನೆಲೆಯಲ್ಲಿ ಮಾರ್ಚ್ 24ರಂದು ಆನೆ ಹಿಡಿಯುವ ಕಾರ್ಯಾಚರಣೆ ಆರಂಭಗೊಂಡಿತ್ತು. ಆನೆ ಹಿಡಿಯಲು ಸೆಣಬು, ಚೈನ್, ಅರಿವಳಿಕೆ ಮದ್ದು, ಕ್ರೇನ್, ಸಾಕಾನೆ, ಮಚಾನ್ ಮುಂತಾದ ಅಗತ್ಯತೆಗಳನ್ನು ಸಿದ್ಧಪಡಿಸಿದ್ದರು. ಆನೆ ಹೆಜ್ಜೆ ಗುರುತು ಇರುವ ಪ್ರದೇಶದ ಯಾವುದು ಎಂದು ಗುರುತಿಸಲು ಸಿಬ್ಬಂದಿ ಮೊದಲು ಕೂಂಬಿಂಗ್ ಮಾಡಿಕೊಂಡಿದ್ದರು. ನಂತರ ಸಾಕಾನೆಗಳ ಸಹಾಯದಿಂದ ಆನೆಗೆ ಡಾಟ್ (ಶೂಟ್ ಮೂಲಕ ಅರಿವಳಿಕೆ ನೀಡುವುದು) ಮಾಡುವ ಪ್ರಯತ್ನ ನಡೆಸಿದ್ದರು.
ಆದರೆ ಈ ಗಂಡಾನೆ ವೇಗವಾಗಿ ನಾಪತ್ತೆಯಾಗುತ್ತಿದ್ದ ಕಾರಣ ತಕ್ಷಣಕ್ಕೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಗುರುವಾರ ಸಂಜೆ ಸುಮಾರು 6.30ರಿಂದ 7 ಗಂಟೆ ಸುಮಾರಿಗೆ ಆನೆಗೆ ಮೊದಲ ಡಾಟ್ ನೀಡಲಾಗಿತ್ತು. ಕೆಲವು ನಿಮಿಷಗಳ ನಂತರ ಮತ್ತೊಂದು ಬೂಸ್ಟರ್ ಡಾಟ್ ನೀಡಿ ಆನೆಯ ಕಾಲುಗಳನ್ನು ಕಟ್ಟಲಾಗಿತ್ತು. ಶುಕ್ರವಾರ ಬೆಳಿಗ್ಗೆ ಕ್ರೇನ್ ಸಹಾಯದಿಂದ ಆನೆಯನ್ನು ಲಾರಿಗೆ ಹತ್ತಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪಶು ವೈದ್ಯರಾದ ಚಾಮರಾಜನಗರದ ಡಾ. ಮುಜೀಬ್ ರೆಹಮಾನ್, ಬಂಡೀಪುರದ ಡಾ. ವಸೀಮ್, ಶಿವಮೊಗ್ಗದ ಡಾ. ವಿನಯ್, ಮೃಗಾಲಯದ ವೈದ್ಯ ಡಾ. ಮುರುಳಿ, ಶಾರ್ಪ್ ಶೂಟರ್ ಡಾ. ಅಕ್ರಮ್ ಕಾಡಾನೆಯನ್ನು ಸೆರೆ ಹಿಡಿಯಲು ವೈದ್ಯಕೀಯ ತಂಡವಾಗಿ ಕಾರ್ಯ ನಿರ್ವಹಿಸಿದ್ದರು.
ಸಕ್ರೇಬೈಲು ಆನೆ ಬಿಡಾರದ 4 ಆನೆಗಳಾದ ಭಾನುಮತಿ, ಸಾಗರ್, ಬಾಲಣ್ಣ, ಬಹದ್ದೂರ್, ನಾಲ್ವರು ಮಾವುತರು, ಎಂಟು ಮಂದಿ ಕಾವಾಡಿಗಳು, ತೀರ್ಥಹಳ್ಳಿ, ಮೇಗರವಳ್ಳಿ, ಮಂಡಗದ್ದೆ ವಲಯಾರಣ್ಯದ ಸಿಬ್ಬಂದಿ, ಎಸಿಎಫ್ ಪ್ರಕಾಶ್ ಹಾಗೂ ವನ್ಯಜೀವಿ ವಿಭಾಗದ ಸಹಕಾರದಲ್ಲಿ ಆನೆಯನ್ನು ಸೆರೆಹಿಡಿಯಲಾಗಿದೆ ಎಂದು ಡಿಎಫ್‌ಒ ಶಿವಶಂಕರ್ ತಿಳಿಸಿದ್ದಾರೆ.
ಸಾಕು ಹೆಣ್ಣಾನೆ ಭಾನುಮತಿ ಬಳಸಿ ಕಾಡಲ್ಲಿರುವ ಆನೆಯನ್ನು ಸೆಳೆಯುವ ತಂತ್ರವನ್ನು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯೋಗ ಮಾಡಿದ್ದಾರೆ. ಹನಿ ಟ್ರ್ಯಾಪ್‌ಗಾಗಿ ಹೆಣ್ಣಾನೆಯನ್ನು ಕಾಡಾನೆ ಓಡಾಡುವ ಸ್ಥಳಗಳಲ್ಲಿ ಕಟ್ಟಲಾಗುತ್ತದೆ. ವಾಸನೆ ಗ್ರಹಿಸಿ ಸುತ್ತಲ ಪ್ರದೇಶಲ್ಲಿ ಹೆಣ್ಣಾನೆ ಇರುವುದನ್ನು ಗಂಡಾನೆಗಳು ಗ್ರಹಿಸುತ್ತವೆ.
ಇದೇ ರೀತಿ ಮಧ್ಯ ಕಾಡಿನಿಂದ ಡಾಟ್‌ಗೆ ಅನುಕೂಲವಾಗುವ ಕಡೆಗೆ ಹೆಣ್ಣಾನೆಯನ್ನು ಓಡಾಡಿಸಿ ಒಂದು ಪ್ರದೇಶದಲ್ಲಿ ಕಟ್ಟುತ್ತಾರೆ. ಆನೆ ಬರುವ ಸಾಧ್ಯತೆ ಇದ್ದರೆ ವೈದ್ಯರ ತಂಡ ಮಚಾನ್ ನಿರ್ಮಿಸಿ ರಾತ್ರಿ ಕಾವಲು ಕಾಯುತ್ತಾರೆ. ಕಾಡಾನೆ ಕಂಡು ಬಂದ ತಕ್ಷಣ ಅರವಳಿಕೆ ನೀಡಿ ಸೆರೆ ಹಿಡಿಯಲಾಗುತ್ತದೆ. ಈಗ ಇಲ್ಲಿ ಸೆರೆ ಹಿಡಿದ ಕಾಡಾನೆಯನ್ನು ನಾಗರಹೊಳೆ ಅಭಯಾರಣ್ಯದಲ್ಲಿ ಬಿಡಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
ಇದನ್ನೂ ಓದಿ : Elephant calf rescued : ತಾಯಿಯಿಂದ ಬೇರ್ಪಟ್ಟು ಡ್ಯಾಂ ಬಳಿ ಬಂದಿದ್ದ ಮರಿಯಾನೆ, ಮತ್ತೆ ಹಿಂಡಿಗೆ ಸೇರಿಸಿದ ಜನ
ಕರ್ನಾಟಕ
Karnataka Election 2023: ಚುನಾವಣೆ ಹಿನ್ನೆಲೆ ಹಣದ ಹೊಳೆ, ದಾಖಲೆ ಇಲ್ಲದ 6 ಕೋಟಿ ರೂ., 17 ಕೆಜಿ ಚಿನ್ನ, ಬೆಳ್ಳಿ ವಶ
Karnataka Election 2023: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಅಧಿಕಾರಿಗಳು ನಿತ್ಯ ಕೋಟ್ಯಂತರ ರೂಪಾಯಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಮಾರ್ಚ್ 31ರಂದು ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೋಟ್ಯಂತರ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ.
ಚಿಕ್ಕಮಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ (Karnataka Election 2023) ಮುಹೂರ್ತ ನಿಗದಿಯಾಗುತ್ತಲೇ ರಾಜ್ಯಾದ್ಯಂತ ಹಣದ ಹೊಳೆಯೇ ಹರಿಯುತ್ತಿದೆ. ಚುನಾವಣೆ ಪ್ರಚಾರಕ್ಕಾಗಿ ಅಭ್ಯರ್ಥಿಗಳು ಕೋಟಿ ಕೋಟಿ ರೂಪಾಯಿಯನ್ನು ಸಾಗಣೆ ಮಾಡುತ್ತಿದ್ದಾರೆ. ಆದರೂ, ಅಧಿಕಾರಿಗಳ ಹದ್ದಿನ ಕಣ್ಣಿನಿಂದ ಕೋಟ್ಯಂತರ ರೂಪಾಯಿಯನ್ನು ಸಾಗಣೆ ಮಾಡುವುದು ಕಷ್ಟವಾಗುತ್ತಿದೆ. ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಕೋಟಿ ಕೋಟಿ ರೂಪಾಯಿಯನ್ನು ಜಪ್ತಿ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲೆ ಇಲ್ಲದ 6.44 ಕೋಟಿ ರೂಪಾಯಿ ಹಾಗೂ 17 ಕೆಜಿ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ಹಣ ಹಾಗೂ ಚಿನ್ನ ಜಪ್ತಿ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಹಾಕಿರುವ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ಟಾಟಾ ಏಸ್ ವಾಹನವನ್ನು ತಪಾಸಣೆ ಮಾಡಿದ್ದಾರೆ. ಇದೇ ವೇಳೆ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ, ಚಿನ್ನ ಹಾಗೂ ಬೆಳ್ಳಿ ದೊರೆತಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಬೆಂಗಳೂರಿನಲ್ಲಿ 30 ಲಕ್ಷ ರೂ. ಪತ್ತೆ
ಬೆಂಗಳೂರು: ನಗರದ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದ 30 ಲಕ್ಷ ರೂಪಾಯಿ ಪತ್ತೆಯಾಗಿದೆ. ಲಾಲ್ ಬಾಗ್ ದಕ್ಷಿಣ ಗೇಟ್ ಬಳಿ ಅಕ್ರಮವಾಗಿ ಹಣ ಸಾಗಣೆ ಮಾಡುತ್ತಿದ್ದಾಗ ಪೊಲೀಸರು ಇಬ್ಬರನ್ನು ಬಂಧಿಸಿ, ಹಣ ಜಪ್ತಿ ಮಾಡಿದ್ದಾರೆ. ಬಂಧಿತರನ್ನು ಗುಜರ್ ಹಾಗೂ ರತನ್ ಗುಪ್ತಾ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗದಲ್ಲಿ 1.39 ಕೋಟಿ ರೂ. ವಶಕ್ಕೆ
ಶಿವಮೊಗ್ಗ: ಜಿಲ್ಲೆಯ ಹರಕೆರೆ ಚೆಕ್ ಪೋಸ್ಟ್‌ನಲ್ಲಿ 1.39 ಕೋಟಿ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ವಾಹನ ತಪಾಸಣೆ ನಡೆಸುತ್ತಿರುವ ವೇಳೆ ನಗದು ಪತ್ತೆಯಾಗಿದೆ. ಯಾವುದೇ ದಾಖಲೆಯಿಲ್ಲದೆ ಬೊಲೆರೋ ವಾಹನದಲ್ಲಿ ಹಣ ಸಾಗಿಸಲಾಗುತ್ತಿತ್ತು. ಹಾಗಾಗಿ, ಪೊಲೀಸರು ಹಣ ಮತ್ತು ಚಾಲಕ ರವಿ ಮುಡಬೂಳ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಕಲಬುರಗಿಯಲ್ಲಿ 1 ಕೋಟಿ ರೂಪಾಯಿ ಜಪ್ತಿ
ಕಲಬುರಗಿ: ತಾಲೂಕಿನ ಅಫಜಲಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪರತಾಬಾದ್ ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಾಟ ಮಾಡಲಾಗುತ್ತಿದ್ದ 1 ಕೋಟಿ ರೂಪಾಯಿ ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರದ ನಿವಾಸಿ ರವಿ ಮುಡಬೂಳ ಎಂಬುವವರು ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಕೊಂಡ್ಯೊಯುತ್ತಿದ್ದರು. ಸದ್ಯ ಒಂದು ಕೋಟಿ ರೂಪಾಯಿ ಜತೆಗೆ ರವಿ ಅವರನ್ನೂ ಚುನಾವಣಾಧಿಕಾರಿಗಳು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಇಷ್ಟು ಮೊತ್ತದ ಹಣವನ್ನು ಎಲ್ಲಿಂದ, ಎಲ್ಲಿಗೆ ಸಾಗಾಟ ಮಾಡಲಾಗುತ್ತಿದೆ. ಯಾವ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಪರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಕರ್ನಾಟಕ
Communal Harmony : ಉರೂಸ್ ಸಂಭ್ರಮದಲ್ಲಿ ಹಿಂದೂ ಶ್ರೀಗಳನ್ನು ಗೌರವಿಸಿ ಭಾವೈಕ್ಯತೆ ಮೆರೆದ ಮುಸ್ಲಿಮರು
ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮ ಸೌಹಾರ್ದ (Communal harmony) ಪರಂಪರೆಯ ಕೊಂಡಿಯಾಗಿ ಸಮಾಜಕ್ಕೆ ದೊಡ್ಡ ಸಂದೇಶವನ್ನು ನೀಡಿತು. ಉರೂಸ್ ಸಂದರ್ಭದಲ್ಲಿ ಹಿಂದು ಸ್ವಾಮೀಜಿಗಳನ್ನು ಇಲ್ಲಿ ಗೌರವಿಸಲಾಯಿತು, ಆಶೀರ್ವಾದ ಪಡೆಯಲಾಯಿತು.
ವಿಜಯನಗರ: ಧರ್ಮ ಧರ್ಮಗಳ ನಡುವೆ ಸಂಘರ್ಷ, ಒಂದು ಧರ್ಮದ ಜಾತ್ರೆಗೆ ಇನ್ನೊಬ್ಬರು ಹೋಗಬಾರದು, ವ್ಯಾಪಾರ ಮಾಡಬಾರದು ಎನ್ನುವ ಧರ್ಮ ದಂಗಲ್‌ಗಳ ನಡುವೆ ಹೂವಿನಹಡಗಲಿ ಸೌಹಾರ್ದದ (Communal Harmony) ಸಂಭ್ರಮಕ್ಕೆ ಸಾಕ್ಷಿಯಾಯಿತು.
ಹೂವಿನಹಡಗಲಿ ತಾಲೂಕು ಹೊಳಲು ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಭಾಂದವರ ಭಾವೈಕ್ಯ ಸಂಗಮವಾದ ಗುರು ಹಜರತ್ ಮೆಹಬೂಬ ಸುಭಾನಿಗಳವರ ಉರೂಸು ಕಾರ್ಯಕ್ರಮ ವೈಭವದಿಂದ ಜರುಗಿತು. ಸೌಹಾರ್ದತೆಗೆ ಸಾಕ್ಷಿಯಾಗಿ ಗಮನ ಸೆಳೆದಿರುವ ಉರೂಸು ಆಚರಣೆಗೆ ಮುಸ್ಲಿಂ ಬಾಂದವರು ಗ್ರಾಮದ ವಿರಕ್ತ ಮಠದ ಶ್ರೀ ಚನ್ನಬಸವ ಶ್ರೀಗಳನ್ನು ಶ್ರದ್ಧಾ ಭಕ್ತಿಯಿಂದ ದರ್ಗಾಕ್ಕೆ ಬರಮಾಡಿಕೊಂಡು ದರ್ಶನಾಶೀರ್ವಾದ ಪಡೆದರಲ್ಲದೆ ಶ್ರೀಗಳ ಜೊತೆ ಹಿಂದೂ ಮುಖಂಡರನ್ನು ಗೌರವಿಸಿ ಸನ್ಮಾನಿಸಿದರು.
ಈವೇಳೆ ಹಿರಿಯರಾದ ಮುಜಾವರ್ ಇಮಾಮ್ ಸಾಬ್ ಮಾತನಾಡಿ, ʻನಮ್ಮ ಗ್ರಾಮದ ನೂತನ ಮಠಕ್ಕೆ ಚನ್ನಬಸವ ಶ್ರೀಗಳ ಆಗಮನ ಹೊಸ ಚೈತನ್ಯವನ್ನುಂಟು ಮಾಡಿದೆ. ಕೆಲ ವರ್ಷದಿಂದ ಸ್ವಲ್ಪ ಮರೀಚಿಕೆಯಾಗಿದ್ದ ಭಾವೈಕ್ಯತೆಗೆ ಮತ್ತೆ ಹೊಸ ಚಿಗುರು ಬಂದಂತಾಗಿದೆ. ಹಿಂದೂ ಮತ್ತು ಮುಸ್ಲಿಂ ಬಾಂದವರಿಗೆ ಶ್ರೀಗಳು ಕೊಂಡಿಯಾಗಿ ಸಮಾಜದ ಎಲ್ಲಾ ಮತ ಬಾಂಧವರಿಗೆ ಸದಾ ನೆರಳಾಗಿರಲಿʼ ಎಂದು ಆಶಯ ವ್ಯಕ್ತಪಡಿಸಿದರು.
ಉರೂಸು ಅಂಗವಾಗಿ ಹರಕೆ ಹೊತ್ತ ಭಕ್ತರು ದೀಡ ನಮಸ್ಕಾರ ಹಾಕಿದರು. ಸಂತಾನ ಫಲ ಬೇಡಿದ ಭಕ್ತರು ತಮಗೆ ಸಂತಾನವಾದ ಮಗುವಿನ ತೂಕದ ಸಕ್ಕರೆಯನ್ನು ಸ್ವಾಮಿಗೆ ಅರ್ಪಿಸಿ ಕೃಪೆಯನ್ನು ಪಡೆದರು.
ರೈತ ಬಾಂಧವರು ತಮ್ಮ ಎತ್ತುಗಳನ್ನು ಶೃಂಗರಿಸಿ ಚಕ್ಕಡಿ ಹೂಡಿ ದರ್ಗಾಕ್ಕೆ ಬರುವ ಭಕ್ತರಿಗೆ ಬೆಲ್ಲದ ಸಿಹಿ ನೀರು ಹಂಚುವುದರ ಮೂಲಕ ಸೇವೆ ಸಲ್ಲಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಹೊಳಲು ಹಾಗೂ ಸುತ್ತ ಮುತ್ತಗ್ರಾಮದ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮಾಜ ಬಾಂಧವರು ಇದ್ದರು.
ಇದನ್ನೂ ಓದಿ :Communal harmony : ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟ ಮುಸ್ಲಿಂ ಯುವಕರು, ಅನಾಥೆಗೆ ಗೌರವದ ಅಂತ್ಯ ಸಂಸ್ಕಾರ
ಕರ್ನಾಟಕ
Suicide case : ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ, ಆ ಮನೆಯಲ್ಲಿ ಇದು ಮೂರನೇ ಸುಸೈಡ್!
ಮನೆಯಲ್ಲಿ ಒಂಟಿಯಾಗಿದ್ದು, ವಿದ್ಯುತ್ ಲೈನ್ ಕೆಲಸಕ್ಕೆ ಹೋಗುತ್ತಿದ್ದ 27ರ ಯುವಕ ಮೊಬೈಲ್‌ನಲ್ಲಿ ಸ್ಟೇಟಸ್ (Whatsapp status) ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಟೇಟಸ್ ನೋಡಿದವರು ಅಲ್ಲಿಗೆ ತಲುಪುವಾಗ ಪ್ರಾಣಪಕ್ಷಿ ಹಾರಿ ಹೋಗಿತ್ತು.
ನೆಲ್ಯಾಡಿ: ಯುವಕನೊಬ್ಬ ಮೊಬೈಲ್‌ನಲ್ಲಿ ಸ್ಟೇಟಸ್ (Whatsapp status)ಹಾಕಿ ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಚ್ಲಂಪಾಡಿ ಗ್ರಾಮದಲ್ಲಿ ಮಾರ್ಚ್ 30ರ ಮಧ್ಯರಾತ್ರಿ ನಡೆದಿದೆ.
ಇಚ್ಲಂಪಾಡಿ ಗ್ರಾಮದ ಮೊಂಟೆತ್ತಡ್ಕ ನಿವಾಸಿ ರೆನೀಶ್ (27) ಮೃತ ಯುವಕ. ಈತನ ತಂದೆ ಕೆಲವು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈತನ ಸಹೋದರ ಮೂರು ವರ್ಷದ ಹಿಂದೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ರೆನೀಶ್ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ವಿದ್ಯುತ್ ಲೈನ್ ಕೆಲಸಕ್ಕೆ ಹೋಗುತ್ತಿದ್ದ. ಮಾ.30ರಂದು ರಾತ್ರಿ ಪಕ್ಕದ ಉಣ್ಣಿಕೃಷ್ಣನ್ ನಾಯರ್ ಎಂಬವರ ಮನೆಯಲ್ಲಿ ಊಟ ಮಾಡಿ, ಕೇರಂ ಆಡಿ ಮನೆಗೆ ಹೋಗಿದ್ದ.
ಮಧ್ಯರಾತ್ರಿ 12 ಗಂಟೆ ವೇಳೆಗೆ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಮೊಬೈಲ್‌ನಲ್ಲಿ ಸ್ಟೇಟಸ್ ಬರೆದುಕೊಂಡು ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದ. ಈತನ ಸ್ಟೇಟಸ್ ನೋಡಿದ್ದ ಬೆಂಗಳೂರಿನಲ್ಲಿರುವ ಗೆಳೆಯರು ಉಣ್ಣಿಕೃಷ್ಣನ್‌ರವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು.
ಅವರೂ ರೆನೀಶ್ ಮನೆಗೆ ತಲುಪುವುದರೊಳಗೆ ಆತ ಮರಕ್ಕೆ ನೇಣುಬಿಗಿದುಕೊಂಡಿದ್ದ. ತಕ್ಷಣ ಹಗ್ಗ ಬಿಚ್ಚಿ ಪುತ್ತೂರಿನ ಆಸ್ಪತ್ರೆಗೆ ಕರೆ ತರಲಾಯಿತಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ವರದಿಯಾಗಿದೆ.
ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 21ರ ಮಹಿಳೆ; ಕೌಟುಂಬಿಕ ಕಲಹ ಶಂಕೆ
ಶಿವಮೊಗ್ಗ: ಇಲ್ಲಿನ ಮಿಳಘಟ್ಟದ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide Case) ಶರಣಾಗಿದ್ದಾರೆ. ಕೌಟುಂಬಿಕ ಕಾರಣ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮಳಘಟ್ಟದ ಸಂಗೀತ (21) ಮೃತ ಮಹಿಳೆ. ಇವರು ಎರಡು ವರ್ಷಗಳ ಹಿಂದಷ್ಟೇ ಮಿಳಘಟ್ಟದ ನಿವಾಸಿ ಗುರೂಮೂರ್ತಿ ವಿವಾಹವಾಗಿದ್ದರು. ಮನೆಯಲ್ಲಿ ಒಬ್ಬರೇ ಇದ್ದಾಗ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೆ, ಪ್ರಕರಣ ದಾಖಲು ಮಾಡಿಕೊಂಡಿದ್ದು, ಕುಟುಂಬದವರ ವಿಚಾರಣೆ ಕೈಗೊಂಡಿದ್ದಾರೆ. ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ :Bangalore horror : 19ರ ಯುವತಿಯನ್ನು ಎಳೆದೊಯ್ದು ಚಲಿಸುವ ಕಾರಿನಲ್ಲೇ ನಾಲ್ಕು ಗಂಟೆ ಕಾಲ ನಿರಂತರ ಅತ್ಯಾಚಾರ
-
ದೇಶ18 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ19 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್8 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ19 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ19 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ9 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ10 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ13 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್