ಹಾಸನ: ನಗರದಲ್ಲಿ ಡಿಸೆಂಬರ್ ೨೬ರ ಸೋಮವಾರ ಸಂಜೆ ಕೊರಿಯರ್ ಅಂಗಡಿಯಲ್ಲಿ ನಡೆದಿದ್ದ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಹಣಕಾಸಿನ ವಂಚನೆ, ಮದುವೆ ನಿರಾಕರಣೆ, ಹುಚ್ಚುತನದ ಪರಮಾವಧಿಗಳನ್ನು ಒಳಗೊಂಡ ಪಕ್ಕಾ ಪಾಗಲ್ ಲವ್ ಸ್ಟೋರಿ ಎಂದು ತನಿಖೆಯಿಂದ ಬಯಲಾಗಿದೆ.
ಹಾಸನದ ವಿಚ್ಛೇದಿತ ಮಹಿಳೆಗೆ ಮ್ಯಾಟ್ರಿಮೊನಿಯಲ್ಲಿ ಪರಿಚಿತನಾದ ಅನೂಪ್ ಕುಮಾರ್ ಎಂಬಾತ ಆಕೆಯ ರೂಪಕ್ಕೆ ಮರುಳಾಗಿ ಒಂದಿಷ್ಟು ಕಾಲ ಆಕೆ ಜತೆ ಓಡಾಡಿದ್ದ. ಲಕ್ಷಾಂತರ ರೂ. ಹಣವನ್ನೂ ನೀಡಿದ್ದ ಎನ್ನಲಾಗಿದೆ. ಆದರೆ, ಕೊನೆಗೆ ಆಕೆ ತನ್ನನ್ನು ದೂರ ಮಾಡಲು ಮುಂದಾದಾಗ ಆಕೆಯನ್ನು ಸಾಯಿಸಲು ಇಲ್ಲವೇ ಸೌಂದರ್ಯವನ್ನು ವಿರೂಪಗೊಳಿಸಲು ಮಾಡಿದ ತಂತ್ರವೇ ಈ ಮಿಕ್ಸಿ ಬಾಂಬ್! ದುರಂತವೆಂದರೆ, ಇದ್ಯಾವುದರ ಅರಿವೂ ಇಲ್ಲದ ಕೊರಿಯರ್ ಅಂಗಡಿ ಮಾಲೀಕ ಶಶಿಕುಮಾರ್ ಬಲಗೈನ ಎರಡು ಬೆರಳು ಕಳೆದುಕೊಳ್ಳುವುದರ ಜತೆ ನೆಮ್ಮದಿಯನ್ನೂ ಕಳೆದುಕೊಳ್ಳುವಂತಾಗಿದೆ.
ಈ ಪ್ರಕರಣದ ಕೇಂದ್ರ ಬಿಂದುವಾಗಿರುವ ಮಹಿಳೆ ಹಾಸನದ ಕುವೆಂಪು ನಗರದ ೪೧ ವರ್ಷದ ಒಬ್ಬ ಡೈವೋರ್ಸಿ. ಹೆಸರು ವಸಂತಾ. ಮದುವೆಯಾಗಿ ಕೆಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ ಆಕೆ ಬಳಿಕ ವರ ಬೇಕು ಎಂದು ಮ್ಯಾಟ್ರಿಮೋನಿಯಲ್ಲಿ ತನ್ನ ಫೋಟೊ ಹಾಕಿದ್ದಳು. ಇದನ್ನು ಗಮನಿಸಿದ ಮೂಲತಃ ಮಂಡ್ಯ ಜಿಲ್ಲೆಯ, ಹಾಲಿ ಬೆಂಗಳೂರಿನಲ್ಲಿ ವಾಸವಾಗಿರುವ ಸೈನಿಕನ ಮಗ ಅನೂಪ್‌ಕುಮಾರ್, ಈ ಮಹಿಳೆಯನ್ನು ಮೆಚ್ಚಿಕೊಂಡು ಮದುವೆ ಪ್ರಸ್ತಾಪವನ್ನೂ ಮುಂದಿಟ್ಟಿದ್ದ.
ಇದಕ್ಕೆ ಓಕೆ ಎಂದ ಮಹಿಳೆ ಮತ್ತು ಅನೂಪ್‌ಕುಮಾರ್ ಬಹುಬೇಗ ಹತ್ತಿರವಾದರು. ಅನೇಕ ಕಡೆಗಳಲ್ಲಿ ಇಬ್ಬರು ಜೊತೆಯಾಗಿ ಓಡಾಡಿದ್ದರು. ಈ ನಡುವೆ ಅನೂಪ್ ಕುಮಾರ್‌ನಿಂದ ಅನೇಕ ಕಾರಣ ನೀಡಿ ಮಹಿಳೆ ಲಕ್ಷಾಂತರ ರೂ. ಹಣವನ್ನು ವಸೂಲಿ ಮಾಡಿದ್ದಳು. ನಂತರದಲ್ಲಿ ಉಲ್ಟಾ ಹೊಡೆದ ವಸಂತಾ ಮದುವೆಗೆ ನಿರಾಕರಿಸಿ ಬಿಟ್ಟಳು. ಇದರಿಂದ ತೀವ್ರ ನಿರಾಸೆಗೆ ಒಳಗಾದ ಅನೂಪ್, ತಾನು ನೀಡಿರುವ ಹಣವನ್ನು ವಾಪಸ್ ಕೇಳಿದಾಗ ಮಹಿಳೆ ಅದಕ್ಕೂ ಸ್ಪಂದಿಸಿರಲಿಲ್ಲ. ಈ ಮಧ್ಯೆ ಒಂದೆರಡು ಬಾರಿ ಹಾಸನಕ್ಕೂ ಬಂದಿದ್ದ ಅನೂಪ್, ಮಹಿಳೆಯ ಮನೆ ಎದುರು ಗಲಾಟೆ ಮಾಡಿದ್ದ. ಈತನ ವಿರುದ್ಧ ಪೊಲೀಸರು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಮಹಿಳೆ ದೂರು ನೀಡಿದ್ದಳು.
ಇದು ಅನೂಪ್‌ನನ್ನು ಕೆರಳಿಸಿತ್ತು. ಯಾವಾಗ ಅನೂಪ್ ಕಾಟ ಹೆಚ್ಚಾಯಿತೋ ಆಗ ಆತನ ನಂಬರ್‌ಗಳನ್ನು ಮಹಿಳೆ ಬ್ಲಾಕ್ ಮಾಡಿದ್ದಳು. ಆದರೂ ನನಗೆ ಮೋಸ ಮಾಡಿದವಳಿಗೆ ಒಂದು ಗತಿ ಕಾಣಿಸಲೇಬೇಕೆಂದು, ಅನೂಪ್ ಮೊದಲು ಸೀರೆ ಕೊರಿಯರ್ ಮಾಡಿದ್ದ. ನಂತರ ಸೀರಿಯಲ್ ಸೆಟ್ ಕಳುಹಿಸಿದ್ದ. ಮೂರನೇ ಬಾರಿಗೆ ಮಿಕ್ಸಿಯಲ್ಲಿ ಡಿಟೋನೇಟರ್ ಇಟ್ಟು ಕಳಿಸಿದ್ದ. ಆದರೆ ಮಹಿಳೆ ರಿಸೀವ್ ಮಾಡಿರಲಿಲ್ಲ. ಆಕೆ ಸತ್ತರೆ ಸಾಯಲಿ, ಇಲ್ಲ ಅಂದ್ರೆ ಮುಖ, ದೇಹದ ಭಾಗ ವಿಕಾರವಾಗಬೇಕು ಎಂಬುದು ಅನೂಪ್‌ನ ಉದ್ದೇಶವಾಗಿತ್ತು. ಡಿಟಿಡಿಸಿ ಕೊರಿಯರ್ ಅಂಗಡಿಯಿಂದ ಗಣೇಶ್ ಎಂಬಾತ ಡಿ.17ರಂದು ಅದನ್ನು ಮಹಿಳೆ ಮನೆಗೆ ಡೆಲಿವರಿ ಮಾಡಿದ್ದ.
ಹೀಗೆ ಆವತ್ತು ಬಂದಿದ್ದೇ ಮಿಕ್ಸಿ ಪಾರ್ಸೆಲ್. ಬೆಂಗಳೂರಿನ ಪೀಣ್ಯ ಶಾಖೆ, ನಾಗಸಂದ್ರದಿಂದ ಸಂಖ್ಯೆ AA-26753848 ರಲ್ಲಿ RASOIYA CLASSIC ಮಿಕ್ಸರ್ ಗ್ರೈಂಡರ್ ಹೆಸರಿನ ನಾಲ್ಕು ಕೆ.ಜಿ ತೂಕದ ಪಾರ್ಸೆಲ್ ಬಂದಿತ್ತು. ಫ್ರಂ ಅಡ್ರೆಸ್ ಇಲ್ಲದ ಈ ಕೊರಿಯರ್‌ನ್ನು ವಾಪಸ್ ಕಳಿಸುವಂತೆ ಆಕೆ ಡಿಸೆಂಬರ್ ೨೬ರಂದು ಕೊರಿಯರ್ ಅಂಗಡಿಗೆ ಮರಳಿಸಿದ್ದಾಳೆ. ಆದರೆ, ಹಿಂದೆ ಕಳುಹಿಸಲು ೩೦೦ ರೂ. ವೆಚ್ಚವಾಗಲಿದೆ ಎಂದು ಅಂಗಡಿ ಮಾಲೀಕ ಶಶಿಕುಮಾರ್ ಹೇಳಿದ್ದರು.
ಇಷ್ಟು ಹಣ ನನ್ನ ಬಳಿಯಿಲ್ಲ ಎಂದ ಮಹಿಳೆ, ಮಿಕ್ಸಿಯನ್ನು ಏನಾದರೂ ಮಾಡಿಕೊಳ್ಳಿ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಳು. ಶಶಿ ತನ್ನ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಅರ್ಜೆಂಟ್‌ನಲ್ಲಿ ಮಿಕ್ಸಿಯನ್ನು ಪಕ್ಕಕ್ಕೆ ಎತ್ತಿಡಲು ಮುಂದಾಗಿದ್ದಾರೆ. ಈ ವೇಳೆ ಮಿಕ್ಸಿ ಹಾಗೂ ಜಾರ್ ಕೈಜಾರಿ ಕೆಳಗೆ ಬಿದ್ದು ಸ್ಫೋಟಗೊಂಡು ಶಶಿ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ʻʻನನ್ನ ತಂದೆ ಅನಾರೋಗ್ಯದಿಂದ ನರಳುತ್ತಿದ್ದಾರೆ. ನಿನ್ನೆ ನನಗೆ ಅವಳಿ ಮಕ್ಕಳಾಗಿದ್ದು ನೋಡಲು ಸಾಧ್ಯವಾಗುತ್ತಿಲ್ಲ. ಇಬ್ಬರ ನಡುವಿನ ಜಗಳದಿಂದ ನಾನು ನೋವು ಅನುಭವಿಸುವಂತಾಗಿದೆ. ಇದರಲ್ಲಿ ಯಾರೇ ತಪ್ಪು ಮಾಡಿದ್ದರೂ ಪೊಲೀಸರು ಕ್ರಮ ಕೈಗೊಳ್ಳಬೇಕುʼʼ ಎನ್ನುವುದು ಶಶಿಕುಮಾರ್ ಆಗ್ರಹ.
ಎಲ್ಲದಕ್ಕೂ ಇದೆ ವಿಡಿಯೊ ರೆಕಾರ್ಡ್
ಅನಾಮಧೇಯ ಹೆಸರಿನಲ್ಲಿ ಬಂದ ಎಲ್ಲಾ ಕೊರಿಯರ್ ಗಳನ್ನು ಮಹಿಳೆ ವಿಡಿಯೊ ರೆಕಾರ್ಡ್ ಮಾಡಿದ್ದಾಳೆ. ಮಿಕ್ಸಿ, ಗಿಫ್ಟ್ ಸೇರಿದಂತೆ ಬಂದ ಎಲ್ಲಾ ರೀತಿಯ ಕೊರಿಯರ್‌ಗಳನ್ನು ಸ್ವೀಕರಿಸಿ, ಅದನ್ನ ಓಪನ್ ಮಾಡೋ ಮುನ್ನ ಮಹಿಳೆ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಅನೂಪ್ ಕುಮಾರ್ ಅದೆಂಥ ಹುಚ್ಚನೆಂದರೆ ಮೊದಲೇ ಮಹಿಳೆಗಾಗಿ ಹಣ ಕಳೆದುಕೊಂಡಿದ್ದೇನೆ ಎನ್ನುತ್ತಾನೆ. ಆದರೆ, ಪಾರ್ಸೆಲ್ ಜತೆಗೂ ಹಣವನ್ನೂ ಇಟ್ಟಿದ್ದಾನೆ!
ಕೊನೆಯದಾಗಿ ಬಂದ ಪಾರ್ಸೆಲನ್ನು ಹತ್ತು ದಿನಗಳಿಂದ ಮಹಿಳೆ ಮನೆಯಲ್ಲೇ ಇಟ್ಟುಕೊಂಡಿದ್ದಳು. ಮನೆಯಲ್ಲೇ ಓಪನ್ ಮಾಡಿದ್ದರೆ ಅಲ್ಲೇ ಅನಾಹುತ ನಡೆದು ಹೋಗುತ್ತಿತ್ತು. ಅನೂಪ್ ಕುಮಾರ್ ಮತ್ತು ಮಹಿಳೆಯನ್ನು ವಶಕ್ಕೆ ಪಡೆದಿರುವ ಬಡಾವಣೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಒಟ್ಟಿನಲ್ಲಿ ವಸಂತಾ-ಅನೂಪ್‌ಕುಮಾರ್ ನಡುವಿನ ಜಗಳದಿಂದ ಶಶಿಕುಮಾರ್ ಶಿಕ್ಷೆ ಅನುಭವಿಸುತ್ತಿದ್ದಾರೆ!
ಇದನ್ನೂ ಓದಿ | Hassan Blast | ಆಂಟಿ ಪ್ರೀತ್ಸೆ ಎಂದವನಿಗೆ NO ಅಂದಿದ್ದಕ್ಕೆ ಉಗ್ರ ಪ್ಲ್ಯಾನ್; ಮಿಕ್ಸಿ ಬಾಂಬ್ ಕಳಿಸಿದ್ದ ಪಾಗಲ್ ಪ್ರೇಮಿ!