ಹಾಸನ: ಇಲ್ಲಿನ ಕೊರಿಯರ್ ಶಾಪ್‌ನಲ್ಲಿ ಮಿಕ್ಸಿ ಬ್ಲಾಸ್ಟ್ (Hassan Blast) ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿಚ್ಛೇದಿತ ಮಹಿಳೆಯೊಬ್ಬರ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿ, ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಆಕೆಯನ್ನು ಮುಗಿಸಲು ಸ್ಕೆಚ್ ಹಾಕಿ ಮಿಕ್ಸಿ ಬಾಂಬ್ ಕಳಿಸಿದ್ದ ಎಂಬ ಸಂಗತಿ ಬಯಲಾಗಿದೆ.
ನಗರದ ಕೆ.ಆರ್.ಪುರಂ ಸಬ್ ರಿಜಿಸ್ಟ್ರಾರ್ ಕಚೇರಿ ರಸ್ತೆಯಲ್ಲಿನ ಅಂಗಡಿಯಲ್ಲಿ ಸೋಮವಾರ (ಡಿ. ೨೬) ಸಂಜೆ ಮಿಕ್ಸಿ ಸ್ಫೋಟಗೊಂಡು ಆತಂಕಕ್ಕೆ ಕಾರಣವಾಗಿತ್ತು. ಇದು ಉಗ್ರ ಕೃತ್ಯ ಇರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಆದರೆ, ಈ ಮಧ್ಯೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಗೋಷ್ಠಿ ನಡೆಸಿ ಉಗ್ರ ಕೃತ್ಯವಲ್ಲ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆಸಿರುವ ಸ್ಫೋಟ ಎಂಬ ಮಾಹಿತಿ ನೀಡಿದ್ದರು. ಈಗ ಸಂಪೂರ್ಣ ತನಿಖೆ ನಡೆಸಿರುವ ಪೊಲೀಸರು ಇದು ಪಾಗಲ್ ಪ್ರೇಮಿಯೊಬ್ಬನ ಕೃತ್ಯ ಎಂಬುದನ್ನು ಬಯಲಿಗೆಳೆದಿದ್ದಾರೆ.
ಏನಿದು ಪ್ರಕರಣ?
ಬೆಂಗಳೂರು ಮೂಲದ ಪಾಗಲ್ ಪ್ರೇಮಿಯೊಬ್ಬ ಹಾಸನದ ಮಹಿಳೆಯೊಬ್ಬಳ ಹಿಂದೆ ಬಿದ್ದಿದ್ದ. ಆದರೆ, ಆತನ ಪ್ರೀತಿಯನ್ನು ಆಕೆ ನಿರಾಕರಿಸುತ್ತಲೇ ಬಂದಿದ್ದಳು ಎನ್ನಲಾಗಿದೆ. ಈ ಸಂಬಂಧ ಇಬ್ಬರ ನಡುವೆ ಗಲಾಟೆಯೂ ನಡೆದಿತ್ತು. ಎರಡು ಬಾರಿ ತನ್ನ ವಿಳಾಸ ಬರೆಯದೆ ಆತ ಆ ಮಹಿಳೆಯ ವಿಳಾಸಕ್ಕೆ ಕೊರಿಯರ್ ಮೂಲಕ ಕೆಲವು ವಸ್ತುಗಳನ್ನು ಕಳಿಸಿದ್ದರೂ ಆಕೆ ಅದನ್ನು ಕಸದ ಬುಟ್ಟಿಗೆ ಹಾಕಿದ್ದಳು. ಈ ಹಿನ್ನೆಲೆಯಲ್ಲಿ ವ್ಯಗ್ರನಾದ ಆತ ಉಗ್ರ ರೀತಿಯಲ್ಲಿ ಪ್ಲ್ಯಾನ್ ಮಾಡಿದ್ದ. ಆಕೆಯನ್ನೇ ಕೊಂದು ಹಾಕಲು ಮುಂದಾಗಿದ್ದ. ಇದರ ಭಾಗವಾಗಿ ಮಿಕ್ಸರ್‌ನಲ್ಲಿ ಸ್ಫೋಟಕವನ್ನು ಇಟ್ಟು ಕಳುಹಿಸಿದ್ದ.
ಇದನ್ನೂ ಓದಿ | Theft Case | ಪ್ರೀತಿಸಿದವಳಿಗೆ ಗೋವಾ ನೋಡುವಾಸೆ; ಉಂಡ ಮನೆಗೆ ಕನ್ನ ಹಾಕಿದ ಪ್ರಿಯತಮ ಈಗ ಅರೆಸ್ಟ್
ಆದರೆ, ಈ ಬಾರಿ ಮತ್ತೆ ಫ್ರಂ ಅಡ್ರೆಸ್ ಇಲ್ಲದೆ ಬಂದ ಕೊರಿಯರ್ ಅನ್ನು ಮಹಿಳೆ ಎಸೆಯದೆ ಪುನಃ ಕೊರಿಯರ್ ಶಾಪ್‌ಗೆ ತಂದುಕೊಟ್ಟು ಅದನ್ನು ವಾಪಸ್ ಮಾಡುವಂತೆ ಹೇಳಿದ್ದಳು. ಆಗ, ಶಾಪ್ ಮಾಲೀಕ ಶಶಿ ಅದನ್ನು ವಾಪಸ್ ಕಳುಹಿಸಲು ೩೫೦ ರೂಪಾಯಿ ಶುಲ್ಕವನ್ನು ಕೇಳಿದ್ದ. ಆದರೆ, ಹಣ ಕೊಡಲು ನಿರಾಕರಿಸಿದ ಮಹಿಳೆ, ಇದು ನನಗೆ ಸಂಬಂಧಪಟ್ಟಿದ್ದಲ್ಲ, ನೀವು ಏನಾದರೂ ಮಾಡಿ ಎಂದು ಹೊರ ನಡೆದಿದ್ದಳು.
ಕೊರಿಯರ್ ಅಂಗಡಿ ಮಾಲೀಕ ಶಶಿ ಆ ಪಾರ್ಸೆಲ್ ಬಾಕ್ಸ್‌ನಲ್ಲಿ ಏನಿದೆ ಎಂಬುದನ್ನು ಕುತೂಹಲದಿಂದ ತೆರೆದು ನೋಡಿದ್ದ. ಅದರೊಳಗೆ ಮಿಕ್ಸಿ ಇರುವುದನ್ನು ಕಂಡು ಪರಿಶೀಲನೆ ಮಾಡಲು ಮುಂದಾಗಿದ್ದ. ಹೀಗೆ ಪರಿಶೀಲಿಸುವಾಗ ಮಿಕ್ಸಿ ಬ್ಲಾಸ್ಟ್ ಆಗಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸಣ್ಣ ಪ್ರಮಾಣದ ಸ್ಫೋಟಕ ಇಟ್ಟಿದ್ದ ಪಾಗಲ್ ಪ್ರೇಮಿ
ಆ ಮಹಿಳೆ ತನ್ನ ಪ್ರೀತಿಯನ್ನು ನಿರಾಕರಣೆ ಮಾಡಿದ್ದರಿಂದ ಅವಳನ್ನು ಕೊಂದೇ ಬಿಡಲು ಯೋಚಿಸಿದ ಆರೋಪಿ ಮಿಕ್ಸಿಯೊಳಗೆ ಸಣ್ಣ ಪ್ರಮಾಣದ ಸ್ಫೋಟಕ ಇಟ್ಟಿದ್ದ. ಅದನ್ನು ಆನ್ ಮಾಡಿದರೆ ಬ್ಲಾಸ್ಟ್ ಆಗುವಂತೆ ಪ್ಲ್ಯಾನ್ ಮಾಡಿದ್ದ. ಆದರೆ, ಫ್ರಂ ಅಡ್ರೆಸ್ ಇಲ್ಲದೇ ಇದ್ದುದರಿಂದ ಇದು ಆತನದ್ದೇ ಗಿಫ್ಟ್ ಎಂದು ಭಾವಿಸಿದ ಮಹಿಳೆ ಆ ಕೊರಿಯರ್ ಬಾಕ್ಸ್ ಅನ್ನು ಓಪನ್ ಮಾಡದೆಯೇ ಹಿಂದಿರುಗಿಸಿದ್ದಳು. ಹಾಗಾಗಿ ಆಕೆ ಅಪಾಯದಿಂದ ಪಾರಾದಳು.
ಆರೋಪಿ ವಶಕ್ಕೆ
ಕೊರಿಯರ್ ಮಾಡಿದ್ದಾನೆನ್ನಲಾದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಹಾಸನದ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಆರೋಪಿಯ ವಿವರವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ | Bike Accident | ದಮ್ ಎಳೆಯುತ್ತಾ ಬೈಕ್ ಓಡಿಸಿದ ಹೆಲ್ತ್ ಇನ್ಸ್‌ಪೆಕ್ಟರ್; ಅಪಘಾತವಾಗಿ ಸಾವು