ಬೆಂಗಳೂರು: ಹಾಸನ ಅಶ್ಲೀಲ ವಿಡಿಯೊ ಪ್ರಕರಣ (Hassan Pen Drive Case) ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಇದರ ಬೆನ್ನಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ ಮಹಿಯೊಬ್ಬರು ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ತಂದೆ-ಮಗ ಇಬ್ಬರ ಮೇಲೂ ಮನೆ ಕೆಲಸದಾಕೆಯೇ ದೂರು ನೀಡಿದ್ದಾಳೆ.
ದೂರಿನಲ್ಲಿ ಏನಿದೆ?
47 ವರ್ಷದ ಮಹಿಳೆ ನೀಡಿದ ದೂರಿನ ಅನ್ವಯ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರುದಾರೆಗೆ ಭವಾನಿ ರೇವಣ್ಣ ಸೋದರತ್ತೆ ಮಗಳು. ಎಚ್.ಡಿ. ರೇವಣ್ಣ ಶಾಸಕರಾಗಿದ್ದಾಗ ನಾಗಲಾಪುರ ಹಾಲಿನ ಡೇರಿಯಲ್ಲಿ ಕೆಲಸ ಕೊಡಿಸಿದ್ದರು. ಬಳಿಕ ಬಿಸಿಎಂ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಕೊಡಿಸಿದ್ದರು. 2015ರಲ್ಲಿ ರೇವಣ್ಣ ಅವರ ಮನೆಯಲ್ಲೇ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಒಟ್ಟು 6 ಹೆಣ್ಣು ಮಕ್ಕಳು ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ಸೇರಿಕೊಂಡ ನಾಲ್ಕು ತಿಂಗಳಿಗೆ ಕೊಠಡಿಗೆ ಬರುವಂತೆ ರೇವಣ್ಣ ಆಹ್ವಾನಿಸಿದ್ದರು.
ಇನ್ನು ಭವಾನಿ ರೇವಣ್ಣ ಮನೆಯಲ್ಲಿ ಇಲ್ಲದಿದ್ದಾಗ ಎಚ್.ಡಿ. ರೇವಣ್ಣ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸ್ಟೋರ್ ರೂಮ್‌ನಲ್ಲಿ ಹಣ್ಣು ಕೊಡೋ ನೆಪದಲ್ಲಿ ಕೈ ಹಿಡಿದು ಎಳೆದಾಡಿದ್ದರು. ಅದೇ ರೀತಿ ಅಡುಗೆ ಮನೆಯಲ್ಲಿ ಇದ್ದಾಗ ಪ್ರಜ್ವಲ್ ರೇವಣ್ಣ ಹಿಂಬದಿಯಿಂದ ಬಂದು ಮೈಮುಟ್ಟಿ ಹೊಟ್ಟೆ ಜಿಗುಟುತ್ತಿದ್ದರು. ಜೊತೆಗೆ ಎಣ್ಣೆ ಹಚ್ಚಲು ಪದೇ ಪದೇ ಕರೆದು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಮನೆಯಲ್ಲಿದ್ದಾಗ ವಿಡಿಯೋ ಕಾಲ್ ಮಾಡಿ ನನ್ನ ಮಗಳ ಜೊತೆ ಅಸಭ್ಯವಾಗಿ ಮಾತನಾಡುತ್ತಿದ್ದರು. ಇದಕ್ಕೆ ಮಗಳು ಹೆದರಿಕೊಂಡು ನಂಬರ್ ಬ್ಲಾಕ್ ಕೂಡ ಮಾಡಿದ್ದಳು. ಇದರಿಂದ ಮನೆ ಕೆಲಸ ಬಿಟ್ಟು ಹೊರಗಡೆ ಬಂದಿದ್ದಾಗಿ ದೂರಿನಲ್ಲಿ ತಿಳಿಸಿದ್ದಾಳೆ.
ಇದನ್ನೂ ಓದಿ | Hassan Pen Drive Case: ಹಾಸನ ಅಶ್ಲೀಲ ವಿಡಿಯೊ ಪ್ರಕರಣ; ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚನೆ
ಈಗ ಕೆಲ ವಿಡಿಯೊಗಳು ವೈರಲ್ ಆಗುತ್ತಿದ್ದು, ನನ್ನ ಗಂಡ ಶೀಲ ಶಂಕಿಸುತ್ತಿದ್ದಾನೆ. ಇದರಿಂದ ಮನನೊಂದು ದೂರು ನೀಡುತ್ತಿರೋದಾಗಿ 47 ವರ್ಷದ ಮಹಿಳೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಸದ್ಯ ಮಹಿಳೆ ದೂರಿನನ್ವಯ ಪ್ರಜ್ವಲ್ ರೇವಣ್ಣ ಹಾಗೂ ಎಚ್.ಡಿ. ರೇವಣ್ಣ ಇಬ್ಬರ ಮೇಲೂ ಎಫ್‌ಐಆರ್ ದಾಖಲಾಗಿದೆ.
ಕೊನೆಗೂ ಮಹಿಳಾ ಆಯೋಗಕ್ಕೆ ಸಂತ್ರಸ್ತೆಯಿಂದ ಬಂತು ದೂರು
ಹಾಸನ ಆಶ್ಲೀಲ ವಿಡಿಯೊ ಪ್ರಕರಣದಲ್ಲಿ ಕೊನೆಗೂ ಮಹಿಳಾ ಆಯೋಗಕ್ಕೆ ಸಂತ್ರಸ್ತೆಯಿಂದ ದೂರು ಬಂದಿದೆ ಎಂದು ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ. ನಿನ್ನೆ ಸಂತ್ರಸ್ತೆಯೊಬ್ಬರು ಮಹಿಳಾ ಆಯೋಗಕ್ಕೆ ವಾಟ್ಸ್‌ಆ್ಯಪ್ ಮೂಲಕ ದೂರು ನೀಡಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಎಂದು ಮಹಿಳೆ ಹೇಳಿದ್ದಾರೆ. ಅವರಿಗೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ. ಸಂತ್ರಸ್ತೆ ಅನೇಕ ವಿಚಾರಗಳನ್ನು ಹೇಳಿರುವುದಾಗಿ ತಿಳಿಸಿದ್ದಾರೆ.
ಸಾಕಷ್ಟು ಮಹಿಳೆಯರ ಅಶ್ಲೀಲ ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ಪೆನ್‌ಡ್ರೈವ್‌ನಲ್ಲಿ ಲೈಂಹಿಕ ದೌರ್ಜನ್ಯದ ವಿಡಿಯೊಗಳಿವೆ. ಅಧಿಕಾರ ಹಾಗೂ ಸ್ಥಾನ ದೂರುಪಯೋಗ ಮಾಡಿಕೊಂಡು, ಅಸಹಾಯಕ ಮಹಿಳೆಯರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದರಿಂದ ಸಾವಿರಾರು ಮಹಿಳೆಯರ ಭವಿಷ್ಯ ಹಾಗೂ ಜೀವನ ಹಾಳಾಗಿದೆ. ಇತಂಹ ಘಟನೆ ಮತ್ತೆ ಎಲ್ಲೂ ಮರಕಳಿಸಬಾರದು. ಹಾಸನ ಎಸ್‌ಪಿಗೆ ಸುಮೋಟೊ ಕೇಸ್ ದಾಖಲಿಸುವಂತೆ ಹೇಳಿದ್ದೆ, ಆದರೆ, ಕೇಸ್ ದಾಖಲಿಸಿಕೊಂಡಿಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮಾಹಿತಿ ನೀಡಿದ್ದಾರೆ.
ಅಶ್ಲೀಲ ವಿಡಿಯೊ ಶೇರ್ ಮಾಡಬೇಡಿ
ವಿಡಿಯೊ ನೋಡಿದರೆ ನೊಂದ ಮಹಿಳೆಯರ ಬಗ್ಗೆ ಕನಿಕರ ಮೂಡುತ್ತದೆ. ಮಹಿಳೆಯರ ಕುಟುಂಬಸ್ಥರೇ ಈಗ ಅವರಿಗೆ ಧೈರ್ಯ ತುಂಬಬೇಕು. ತಪ್ಪು ಎಲ್ಲರೂ ಮಾಡುತ್ತಾರೆ, ಆದ್ರೆ ಇಲ್ಲಿ ನಡೆದಿರೋದು ಕೇವಲ ತಪ್ಪಲ್ಲ.
ಆರೋಪಿಯಾಗಿರೋ ಪ್ರಭಾವಿ ರಾಜಕಾರಣಿಯನ್ನು ರಕ್ಷಣೆ ಮಾಡೋ ಕೆಲಸ ಸಹಜವಾಗಿ ನಡೆಯುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಆರೋಪಿಸಿದ್ದಾರೆ.
ಇದನ್ನೂ ಓದಿ | Prajwal Revanna Pen Drive: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಆರೋಪ; ಎಸ್‌ಐಟಿ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ: ಪರಮೇಶ್ವರ್
ಅಧಿಕಾರಿಗಳನ್ನು ಬಳಸಿಕೊಂಡು ಪ್ರಕರಣದ ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆ. ನಾನೂ ಒಬ್ಬ ವೈದ್ಯೆಯಾಗಿ ಆತನ ಹೀನಾಯ ಮನಸ್ಥಿತಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ದಯಮಾಡಿ ಜನರು ಆ ವಿಡಿಯೊಗಳನ್ನು ಹಂಚಬೇಡಿ. ನೊಂದ ಮಹಿಳೆಯರ ಜೀವ ಹಾಗೂ ಜೀವನದ ಮೇಲೆ ಅದು ಕೆಟ್ಟ ಪ್ರಭಾವ ಬೀರುತ್ತಿದೆ. ವಿಡಿಯೊ ಮಾಡಿರೋ ವ್ಯಕ್ತಿ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾನೆ. ಹೆದರಿಸಿ ಬೆದರಿಸಿ ಒಪ್ಪಿಗೆ ಇಲ್ಲದಿದ್ದರೂ ಒತ್ತಡ ಹೇರಿದ್ದಾನೆ. ಆತನಿಗೆ ಕೋರ್ಟ್ ಕಡ್ಡಾಯವಾಗಿ ಶಿಕ್ಷೆ ನೀಡುವಂತೆ ಮಾಡಲಾಗುತ್ತದೆ. ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಅವರಿಗೆ ಭದ್ರತೆ ನೀಡಲಾಗಿದೆ. ಕೋರ್ಟ್‌ನಲ್ಲಿ ಸಾಕ್ಷಿಗಳು ಬೇಕಿರುವುದರಿಂದ ನೊಂದ ಮಹಿಳೆಯರು ದೂರು ನೀಡುವಂತೆ ಕೋರುತ್ತೇವೆ. ಕೋರ್ಟ್ ಮೇಲೆ ನಂಬಿಕೆಯಿದೆ, ಆತನಿಗೆ ಶಿಕ್ಷೆ ಆಗುತ್ತದೆ ಎಂದು ನಂಬಿರುವುದಾಗಿ ಹೇಳಿದರು.