ಬೆಂಗಳೂರು: ಅಶ್ಲೀಲ ವಿಡಿಯೊ, ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಹಾಸನ ಜೆಡಿಎಸ್ ಸಂಸದ (Hassan JDS MP) ಪ್ರಜ್ವಲ್ ರೇವಣ್ಣ (Prajwal Revanna Case) ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹಾರಾಟ ಮುಂದುವರಿಸಿದ್ದಾರೆ. ಅಶ್ಲೀಲ ವಿಡಿಯೊಗಳು ವೈರಲ್ ಆಗುತ್ತಲೇ ಜರ್ಮನಿಗೆ ತೆರಳಿದ್ದ ಪ್ರಜ್ವಲ್ ರೇವಣ್ಣ ಬಳಿಕ ದುಬೈಗೆ ತೆರಳಿದ್ದಾರೆ ಎನ್ನಲಾಗಿತ್ತು. ಈಗ ಮತ್ತೊಂದು ದೇಶಕ್ಕೆ ಹಾರಿರುವ ಪ್ರಜ್ವಲ್ ರೇವಣ್ಣ, ಹಂಗೇರಿಯ ಬುಡಾಪೆಸ್ಟ್‌ನಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಪಾಸ್‌ಪೋರ್ಟ್ ಎಂಟ್ರಿ ಮಾಹಿತಿಯ ಮೇರೆಗೆ ಒಂದಷ್ಟು ಸುಳಿವು ಪತ್ತೆಹಚ್ಚಿದ್ದಾರೆ. ಪಾಸ್‌ಪೋರ್ಟ್ ಎಂಟ್ರಿ ಆಧಾರದ ಮೇಲೆ ಪ್ರಜ್ವಲ್ ರೇವಣ್ಣ ಬುಡಾಫೆಸ್ಟ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಜ್ವಲ್ ರೇವಣ್ಣ ಪತ್ತೆಗೆ ಕಸರತ್ತು ನಡೆಸುತ್ತಿರುವ ಎಸ್‌ಐಟಿ ಅಧಿಕಾರಗಳು, ಬ್ಲ್ಯೂ ಕಾರ್ನರ್ ನೋಟಿಸ್ ಹೊರಡಿಸಬೇಕು ಎಂದು ಸಿಬಿಐಗೆ ಮನವಿ ಕೂಡ ಮಾಡಿದ್ದಾರೆ.
The recent case involving Prajwal Revanna has deeply disturbed the nation. Upholding justice for the victims is crucial for maintaining faith in our legal system.
— Siddaramaiah (@siddaramaiah) May 4, 2024
Shri @RahulGandhi has written a letter, emphasizing support for the victims. We are committed to providing all… pic.twitter.com/DnlP1BSRYJ
ಆರೋಪಿಯ ಚಲನವಲನಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಲು ಬ್ಲ್ಯೂ ಕಾರ್ನರ್ ನೋಟೀಸ್ ಜಾರಿಗೊಳಿಸಲಾಗುತ್ತದೆ. ಆರೋಪಿ ಬಗ್ಗೆ ಸುಳಿವು ಸಿಕ್ಕ ಬಳಿಕ ಆ ಮಾಹಿತಿಯನ್ನು ಸಿಐಡಿಗೆ ಸಿಬಿಐ ನೀಡಲಿದೆ. ಮತ್ತೆ ಇದನ್ನು ಆಧರಿಸಿ ಕೋರ್ಟ್‌ಗೆ ಮಾಹಿತಿ ನೀಡಿ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ಎಸ್ಐಟಿ ಮನವಿ ಮಾಡಬೇಕಿದೆ. ಸಿಬಿಐ, ಇಂಟರ್‌ಫೋಲ್‌ಗೆ ಮನವಿ ಮಾಡಿ ರೆಡ್ ಕಾರ್ನರ್ ನೊಟೀಸ್ ಪಡೆಯಲಿದೆ.
ಅಜ್ಞಾತ ಸ್ಥಳದಲ್ಲಿ ರೇವಣ್ಣ
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ರೇವಣ್ಣಗೆ ಎಸ್ಐಟಿ ಮೂರು ನೋಟಿಸ್ ಹಾಗೂ ಕೊನೆಗೆ ಲುಕೌಟ್ ನೋಟಿಸ್ ಜಾರಿ ಮಾಡಿದ್ದು, ರೇವಣ್ಣ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ರೇವಣ್ಣ ಅವರು ವಿದೇಶಕ್ಕೆ ಹಾರಬಹುದು ಎಂಬ ಮುಂದಾಲೋಚನೆಯಿಂದ ಲುಕೌಟ್ ನೋಟೀಸ್ ಜಾರಿ ಮಾಡಲಾಗಿದ್ದು, ಈಗ ಅವರು ಯಾವುದೇ ಏರ್‌ಪೋರ್ಟ್ ಮೂಲಕ ಹಾದು ಹೋಗಲು ಸಾಧ್ಯವಿಲ್ಲದಾಗಿದೆ.
ವಿದೇಶದಲ್ಲಿದ್ದುಕೊಂಡು ಲೈಂಗಿಕ ಹಗರಣ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ಎಸ್‌ಐಟಿ (SIT) ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ಇನ್ನೊಂದೆಡೆ ಭವಾನಿ ರೇವಣ್ಣ ಅವರಿಗೂ ವಿಚಾರಣೆಗೆ ಎಸ್‌ಐಟಿ ಬುಲಾವ್ ನೀಡಿದೆ. ಸದ್ಯ ರೇವಣ್ಣ ವಿರುದ್ಧ ತನಿಖೆಗೆ ಒಳಗಾಗಬೇಕಾದ ಗಂಭೀರ ಆರೋಪವಿದೆ. ಮೈಸೂರಿನಲ್ಲಿ ಸಂತ್ರಸ್ತೆಯ ಪುತ್ರ ರೇವಣ್ಣ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲು ಮಾಡಿದ್ದಾರೆ. ಹೀಗಾಗಿ ರೇವಣ್ಣಗೆ ಎಸ್ಐಟಿ ಮುಂದೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಆದರೆ ಕಳೆದ ಎರಡು ದಿನಗಳಿಂದ ರೇವಣ್ಣ ನಾಪತ್ತೆಯಾಗಿದ್ದಾರೆ. ಅವರು ಅತ್ತ ಎಚ್.ಡಿ ದೇವೇಗೌಡರ ನಿವಾಸದಲ್ಲಿಯಾಗಲೀ, ಈತ್ತ ಬಸವನಗುಡಿಯ ತಮ್ಮ ನಿವಾಸದಲ್ಲಿಯಾಗಲೀ, ಹಾಸನದ ಎರಡು ನಿವಾಸಗಳಲ್ಲಾಗಲೀ ಇಲ್ಲ.