Site icon Vistara News

Hassan Pen Drive Case: ವಿಚಾರಣೆಗೆ ಕರೆದಾಗ ವಿದೇಶದಿಂದ ಪ್ರಜ್ವಲ್ ಬರುತ್ತಾನೆ ಎಂದ ಎಚ್‌.ಡಿ.ರೇವಣ್ಣ

Hassan Pen Drive Case

ಬೆಂಗಳೂರು: ನಾವೆಲ್ಲಾ ಇಲ್ಲೇ ಇದ್ದೇವೆ, ಎಲ್ಲೂ ಓಡಿ ಹೋಗಲ್ಲ. ಹಾಸನ ಪೆನ್‌ ಡ್ರೈವ್ ಪ್ರಕರಣದ (Hassan Pen Drive Case) ಬಗ್ಗೆ ಸದ್ಯ ನಾನು ಏನೂ ರಿಯಾಕ್ಟ್ ಮಾಡಲ್ಲ, ಕಾನೂನು ರೀತಿ ಪ್ರಕರಣವನ್ನು ನಾವು ಎದುರಿಸುತ್ತೇವೆ. ವಿಚಾರಣೆಗೆ ಕರೆದಾಗ ವಿದೇಶದಿಂದ ಪುತ್ರ ಬರುತ್ತಾನೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

ಹಾಸನ ಸಂಸದ ಹಾಗೂ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ನಂತರ ನಗರದಲ್ಲಿ ಮೊದಲ ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, 4-5 ವರ್ಷದ ಹಿಂದೆ ಘಟನೆ ನಡೆದಿದೆ ಎಂದು ಈಗ ಕೇಸ್‌ ಹಾಕಿದ್ದಾರೆ. ಇದು ಯಾವ ತರಹದ್ದು ಎಂದು ಏನೂ ಮಾತನಾಡಲ್ಲ. ವಿಡಿಯೊ ಸೇರಿ ಯಾವುದರ ಬಗ್ಗೆಯೂ ಮಾತನಾಡಲ್ಲ ಎಂದು ತಿಳಿಸಿದ್ದಾರೆ.

ಪಕ್ಷದಿಂದ ಉಚ್ಚಾಟನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ನಿರ್ಧಾರ ಪಕ್ಷಕ್ಕೆ ಸೇರಿದ್ದು, ಎಸ್‌ಐಟಿ ರಚನೆ ಮಾಡಿರುವುದರಿಂದ ತನಿಖೆಗೆ ತೊಂದರೆ ಆಗಬಾರದೆಂದು ನಾನೇನೂ ಮಾತನಾಡಲ್ಲ. ಇದೆಲ್ಲಾ ರಾಜಕೀಯ. ಸರ್ಕಾರ ಅವರದು ಇದೆ, ಏನು ಬೇಕಾದರೂ ಮಾಡಿಕೊಳ್ಳಲಿ. ಪ್ರಕರಣದ ಬಗೆ ಕಾನೂನು ರೀತಿಯಲ್ಲಿ ತನಿಖೆ ಆಗಲಿ ಎಂದು ಹೇಳಿದ್ದಾರೆ.

ಪ್ರಜ್ವಲ್ ವಿದೇಶಕ್ಕೆ ಹೋಗಿರುವ ವಿಚಾರಕ್ಕೆ ಸ್ಪಂದಿಸಿ, ಚುನಾವಣೆ ಮುಗಿದ ನಂತರ ಅವನು ಹೋಗಿದ್ದಾನೆ. ಯಾವುದೋ ಕೆಲಸಕ್ಕಾಗಿ ಹೋಗ್ಬೇಕಿತ್ತು ಹೋಗಿದ್ದಾನೆ. ಇವರು ಎಫ್‌ಐಆರ್‌ ಹಾಕುತ್ತಾರೆ ಅಂತ ಗೊತ್ತಿತ್ತಾ? ಎಸ್‌ಐಟಿ ತನಿಖೆ ಮಾಡುತ್ತಾರೆ ಅಂತ ಗೊತ್ತಿತ್ತಾ? ವಿಚಾರಣೆಗೆ ಕರೆದಾಗ ಬರುತ್ತಾನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Hassan Pen Drive Case: ಜರ್ಮನಿಯಲ್ಲಿ ಪ್ರಜ್ವಲ್‌ ಎಲ್ಲಿದ್ದಾರೆ? ಪತ್ತೆ ಮಾಡುತ್ತಿದೆ ಎಸ್‌ಐಟಿ!

50 ವರ್ಷಗಳಿಂದ ನಾವು ತನಿಖೆ ಎದುರಿಸುತ್ತಿದ್ದೇವೆ. ದೇವೇಗೌಡರ ಮೇಲೆ ತನಿಖೆ ನಡೆಸಿದ್ದರು, ದೇವೆಗೌಡರ ಬಳಿ ಈ‌ ಪ್ರಕರಣದ ಬಗ್ಗೆ ಮಾತನಾಡಿಲ್ಲ. ಆದರೂ ಕಾನೂನು ಕ್ರಮ ಏನು ಆಗುತ್ತೆ ಆಗಲಿ ಎಂದು ಅವರು ಹೇಳಿರುವುದಾಗಿ ತಿಳಿಸಿದರು.

ಪ್ರಜ್ವಲ್ ರೇವಣ್ಣ ಉಚ್ಚಾಟನೆ ನಿರ್ಧಾರ ಆಗಿದೆ ಎಂದ ಎಚ್‌ಡಿಕೆ

Hassan Pen Drive Case

ಶಿವಮೊಗ್ಗ: ಹಾಸನ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ (Hassan Pen Drive Case) ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬಂದಿದ್ದರಿಂದ ಪ್ರಜ್ವಲ್‌ ರೇವಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಬೇಕು ಎಂದು ಕಾಂಗ್ರೆಸ್‌ ನಾಯಕರು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು, ಪ್ರಜ್ವಲ್‌ ಉಚ್ಚಾಟನೆ ಬಗ್ಗೆ ದೇವೇಗೌಡರ ಬಳಿ ಚರ್ಚೆ ಮಾಡಿದ್ದೆ. ನೆನ್ನೆ ರಾತ್ರಿಯೇ ಈ ಬಗ್ಗೆ ತೀರ್ಮಾನ ಆಗಿತ್ತು. ನಾಳೆ ಕೋರ್ ಕಮಿಟಿ ಸಭೆಯಲ್ಲಿ ಉಚ್ಚಾಟನೆ ಬಗ್ಗೆ ಅಂತಿಮ ತೀರ್ಮಾನ ಆಗಲಿದೆ. ಈ ನೆಲದ ಕಾನೂನಿನಲ್ಲಿ ತಪ್ಪು ಆಗಿದ್ರೆ ಶಿಕ್ಷೆ ಆಗಬೇಕು ಎಂದು ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಈ ಪ್ರಕರಣದಲ್ಲಿ ದೇವೇಗೌಡರು, ನನ್ನನ್ನು ಯಾಕೆ ತರುತ್ತೀರಿ? ಬಿಜೆಪಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಈಗಾಗಲೇ ನಾವು ಬೇರೆ ಆಗಿದ್ದೇವೆ. ನಮ್ಮ ವ್ಯವಹಾರ, ಅವರ ವ್ಯವಹಾರ ಬೇರೆ ಬೇರೆ ನಡೆಯುತ್ತದೆ. ರಾಜ್ಯದ ಹೆಣ್ಣು ಮಕ್ಕಳ ಧ್ವನಿಯಾಗಿ ನಾನು ಧ್ವನಿ ಎತ್ತುತ್ತೇನೆ. ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ತಪ್ಪು ನಡೆದಿದ್ದರೆ ಈ ನೆಲ್ಲದಲ್ಲಿ ಶಿಕ್ಷೆ ಆಗಬೇಕು. ಈ ನಿಟ್ಟಿನಲ್ಲಿ ನನ್ನ ನಿಲುವು ಮುಂದುವರಿದಿದೆ ಎಂದು ಹೇಳಿದರು.

ಇದನ್ನೂ ಓದಿ | Hassan Pen Drive Case: ಪ್ರಜ್ವಲ್‌ ಉಚ್ಚಾಟನೆಗೆ ದೇವೇಗೌಡರ ಹಿಂದೇಟು; ದೊಡ್ಡ ಗೌಡರ ಭಯಕ್ಕೆ ಏನು ಕಾರಣ?

ಕಾನೂನು ಉಲ್ಲಂಘನೆ ಆಗಿದ್ದರೆ ಕ್ರಮ ಆಗಲಿ, ಚುನಾವಣೆ ಸಮಯದಲ್ಲಿ ಪೆನ್ ಡ್ರೈ ಹಂಚಿರುವುದು ಕೂಡ ತನಿಖೆ ಯಾಗಬೇಕು. ಯಾರಿಂದ ಹೊರಬಂದಿದೆ, ಯಾರು ಲಕ್ಷಾಂತರ ಪೆನ್ ಡ್ರೈ ಹಂಚಿದವರು ಯಾರು ಅಂತ ತಿಳಿಯಬೇಕು. ಪೆನ್ ಡ್ರೈ ಹಂಚಿದ್ದು ದೊಡ್ಡ ಅಪರಾಧ ಎಂದು ಕಿಡಿಕಾರಿದ್ದಾರೆ.

Exit mobile version