ಬೆಂಗಳೂರು: ಹಾಸನ ಅಶ್ಲೀಲ ವಿಡಿಯೊ ಪ್ರಕರಣದ (Hassan Pen Drive Case) ತನಿಖೆಗಾಗಿ ಎಸ್‌ಐಟಿ ರಚನೆಗೆ ಸಿಎಂ ಸಿದ್ದರಾಮಯ್ಯ ಅವರು ಶನಿವಾರ ಆದೇಶಿಸಿದ್ದರು. ಇದೀಗ ಅಧಿಕೃತವಾಗಿ ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದ್ದು, ಇದರಲ್ಲಿ ಇಬ್ಬರು ಮಹಿಳಾ ಐಪಿಎಸ್ ಅಧಿಕಾರಿಗಳು ಇದ್ದಾರೆ.
ಎಡಿಜಿಪಿ ಬಿ.ಕೆ. ಸಿಂಗ್ ಅವರು ಎಸ್‌ಐಟಿ ಮುಖ್ಯಸ್ಥರಾಗಿದ್ದು, ಎಸ್‌ಪಿ ಸುಮನ್ ಡಿ ಪನ್ನೇಕರ್, ಎಸ್‌ಪಿ ಸೀಮಾ ಲಾಟ್ಕರ್ ಸದಸ್ಯರಾಗಿದ್ದಾರೆ. ಸಿಐಡಿಯಲ್ಲಿ ಎಡಿಜಿಪಿಯಾಗಿರುವ ಬಿ.ಕೆ ಸಿಂಗ್ ಅವರು, ಈ ಹಿಂದೆ ಗೌರಿ ಲಂಕೇಶ್ ಕೊಲೆ ಕೇಸ್ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಹಾಸನ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿ ಕ್ರಮ ಜರುಗಿಸುವಂತೆ ರಾಜ್ಯ ಮಹಿಳಾ ಆಯೋಗ ದೂರು ನೀಡಿತ್ತು. ಅದೇ ರೀತಿ ಮಹಿಳೆಯೊಬ್ಬರು ಏ.28ರಂದು ನೀಡಿದ ದೂರಿನ ಅನ್ವಯ ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕ್ರಿಮಿನಲ್ ಮೊಕದ್ದಮೆ ಸಂಖ್ಯೆ: 107/2024 ಕಲಂ 354A, 354D, 506, 509 ಐಪಿಸಿ ಅಡಿ ದಾಖಲಾದ ಪ್ರಕರಣದ ತನಿಖೆಗಾಗಿ ಸಿಐಡಿಯ ವಿಶೇಷ ತನಿಖಾ ತಂಡ (Special Investigation Team) ವನ್ನು ರಚಿಸಲಾಗಿದೆ ಎಂದು ಒಳಾಡಳಿತ ಇಲಾಖೆಯ(ಅಪರಾಧಗಳು) ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಆದೇಶ ಹೊರಡಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಸಲಾಗುತ್ತಿರುವ ಲೈಂಗಿಕ ಹಿಂಸೆಯ ಖಾಸಗಿ ವಿಡಿಯೊ ಚಿತ್ರೀಕರಣವು ಮಾಧ್ಯಮಗಳಲ್ಲಿ ಪ್ರಚಾರವಾಗಿದ್ದು, ಅಲ್ಲದೇ ಪ್ರಭಾವಿ ರಾಜಕಾರಣಿಗಳು ಅನೇಕ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಚಿತ್ರೀಕರಣ ಮಾಡಿದ ವ್ಯಕ್ತಿಗಳು ಮತ್ತು ಅದನ್ನು ಸಾರ್ವಜನಿಕ ಪಡಿಸಿದ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸುವ ಮೂಲಕ ಮಹಿಳೆಯರ ಘನತೆ ಹಾಗೂ ಅಸ್ತಿತ್ವಕ್ಕೆ ಹಾನಿ ಉಂಟು ಮಾಡುತ್ತಿರುವವರನ್ನು ಶೀಘ್ರವಾಗಿ ಪತ್ತೆಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಲು ಆದೇಶ ನೀಡಬೇಕೆಂದು ಹಾಗೂ ಆರೋಪಿಗಳ ವಿರುದ್ಧ ಕಠಿಣ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ರಾಜ್ಯ ಮಹಿಳಾ ಆಯೋಗ ಕೋರಿತ್ತು. ಈ ಹಿನ್ನೆಲೆ ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ತಾಂತ್ರಿಕ ಪರಿಣಿತಿ ಇರುವ ರಾಜ್ಯದ ವಿಶೇಷ ತನಿಖಾ ಸಂಸ್ಥೆಯಾದ ಸಿಐಡಿಯ ಒಂದು ವಿಶೇಷ ತನಿಖಾ ತಂಡ (Special Investigation Team) ವನ್ನು ರಚಿಸುವುದು ಸೂಕ್ತವೆಂದು ಸರ್ಕಾರವು ತೀರ್ಮಾನಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣದ ಸಮಗ್ರ ತನಿಖೆ ನಡೆಸಲು ರಚಿಸಿರುವ ಎಸ್‌ಐಟಿ ಮುಖ್ಯಸ್ಥರಾಗಿ ಸಿಐಡಿ ಅಪರ ಪೊಲೀಸ್ ಮಹಾ ನಿರ್ದೇಶಕ ಬಿಜಯ ಕುಮಾರ್ ಸಿಂಗ್, ಸದಸ್ಯರಾಗಿ ಪೊಲೀಸ್ ಪ್ರಧಾನ ಕಚೇರಿಯ ಸಹಾಯಕ ಪೊಲೀಸ್ ಮಹಾ ನಿರೀಕ್ಷಕರಾದ ಸುಮನ್ ಡಿ ಪೆನ್ನೇಕರ್, ಮೈಸೂರು ಪೊಲೀಸ್ ಅಧೀಕ್ಷಕರಾದ ಸೀಮಾ ಲಾಟ್ಕರ್ ಅವರನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ | Hassan Pen Drive Case: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಆರೋಪ; ಎಸ್‌ಐಟಿ ತನಿಖೆಗೆ ಸಿದ್ದರಾಮಯ್ಯ ಆದೇಶ
ಈ ಪ್ರಕರಣದ ಕುರಿತು ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ, ದಾಖಲಾಗಬಹುದಾದ ಪ್ರಕರಣಗಳನ್ನು ಡಿಜಿ & ಐಜಿಪಿ ಅವರು, ಈ ವಿಶೇಷ ತನಿಖಾ ತಂಡ (Special Investigation Team) ಕ್ಕೆ ವರ್ಗಾಯಿಸಬೇಕು ಹಾಗೂ ತನಿಖೆಗಾಗಿ ಇತರೆ ಸದಸ್ಯರ ಅವಶ್ಯವಿದ್ದಲ್ಲಿ ಡಿಜಿ & ಐಜಿಪಿ ಅವರ ಅನುಮೋದನೆಯೊಂದಿಗೆ ತನಿಖಾ ತಂಡಕ್ಕೆ ಸೇರಿಸಿಕೊಳ್ಳಬೇಕು. ಸಿಐಡಿ ಪೊಲೀಸ್ ಮಹಾ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (Special Investigation Team) ವು ಕಾರ್ಯನಿರ್ವಹಿಸಬೇಕು ಹಾಗೂ ಪ್ರಕರಣದ ಸಮಗ್ರ ತನಿಖೆಯನ್ನು ನಡೆಸಿ, ತನಿಖಾ ವರದಿಯನ್ನು ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾ ನಿರೀಕ್ಷಕರ ಮುಖಾಂತರ ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಕೊನೆಗೂ ಮಹಿಳಾ ಆಯೋಗಕ್ಕೆ ಸಂತ್ರಸ್ತೆಯಿಂದ ಬಂತು ದೂರು
ಹಾಸನ ಆಶ್ಲೀಲ ವಿಡಿಯೊ ಪ್ರಕರಣದಲ್ಲಿ ಕೊನೆಗೂ ಮಹಿಳಾ ಆಯೋಗಕ್ಕೆ ಸಂತ್ರಸ್ತೆಯಿಂದ ದೂರು ಬಂದಿದೆ ಎಂದು ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ. ನಿನ್ನೆ ಸಂತ್ರಸ್ತೆಯೊಬ್ಬರು ಮಹಿಳಾ ಆಯೋಗಕ್ಕೆ ವಾಟ್ಸ್‌ಆ್ಯಪ್ ಮೂಲಕ ದೂರು ನೀಡಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಎಂದು ಮಹಿಳೆ ಹೇಳಿದ್ದಾರೆ. ಅವರಿಗೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ. ಸಂತ್ರಸ್ತೆ ಅನೇಕ ವಿಚಾರಗಳನ್ನು ಹೇಳಿರುವುದಾಗಿ ತಿಳಿಸಿದ್ದಾರೆ.
ಸಾಕಷ್ಟು ಮಹಿಳೆಯರ ಅಶ್ಲೀಲ ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ಪೆನ್‌ಡ್ರೈವ್‌ನಲ್ಲಿ ಲೈಂಹಿಕ ದೌರ್ಜನ್ಯದ ವಿಡಿಯೊಗಳಿವೆ. ಅಧಿಕಾರ ಹಾಗೂ ಸ್ಥಾನ ದೂರುಪಯೋಗ ಮಾಡಿಕೊಂಡು, ಅಸಹಾಯಕ ಮಹಿಳೆಯರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದರಿಂದ ಸಾವಿರಾರು ಮಹಿಳೆಯರ ಭವಿಷ್ಯ ಹಾಗೂ ಜೀವನ ಹಾಳಾಗಿದೆ. ಇತಂಹ ಘಟನೆ ಮತ್ತೆ ಎಲ್ಲೂ ಮರಕಳಿಸಬಾರದು. ಹಾಸನ ಎಸ್‌ಪಿಗೆ ಸುಮೋಟೊ ಕೇಸ್ ದಾಖಲಿಸುವಂತೆ ಹೇಳಿದ್ದೆ, ಆದರೆ, ಕೇಸ್ ದಾಖಲಿಸಿಕೊಂಡಿಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮಾಹಿತಿ ನೀಡಿದ್ದಾರೆ.
ಅಶ್ಲೀಲ ವಿಡಿಯೊ ಶೇರ್ ಮಾಡಬೇಡಿ
ವಿಡಿಯೊ ನೋಡಿದರೆ ನೊಂದ ಮಹಿಳೆಯರ ಬಗ್ಗೆ ಕನಿಕರ ಮೂಡುತ್ತದೆ. ಮಹಿಳೆಯರ ಕುಟುಂಬಸ್ಥರೇ ಈಗ ಅವರಿಗೆ ಧೈರ್ಯ ತುಂಬಬೇಕು. ತಪ್ಪು ಎಲ್ಲರೂ ಮಾಡುತ್ತಾರೆ, ಆದ್ರೆ ಇಲ್ಲಿ ನಡೆದಿರೋದು ಕೇವಲ ತಪ್ಪಲ್ಲ.
ಆರೋಪಿಯಾಗಿರೋ ಪ್ರಭಾವಿ ರಾಜಕಾರಣಿಯನ್ನು ರಕ್ಷಣೆ ಮಾಡೋ ಕೆಲಸ ಸಹಜವಾಗಿ ನಡೆಯುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಆರೋಪಿಸಿದ್ದಾರೆ.
ಇದನ್ನೂ ಓದಿ | Prajwal Revanna Pen Drive: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಆರೋಪ; ಎಸ್‌ಐಟಿ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ: ಪರಮೇಶ್ವರ್
ಅಧಿಕಾರಿಗಳನ್ನು ಬಳಸಿಕೊಂಡು ಪ್ರಕರಣದ ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆ. ನಾನೂ ಒಬ್ಬ ವೈದ್ಯೆಯಾಗಿ ಆತನ ಹೀನಾಯ ಮನಸ್ಥಿತಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ದಯಮಾಡಿ ಜನರು ಆ ವಿಡಿಯೊಗಳನ್ನು ಹಂಚಬೇಡಿ. ನೊಂದ ಮಹಿಳೆಯರ ಜೀವ ಹಾಗೂ ಜೀವನದ ಮೇಲೆ ಅದು ಕೆಟ್ಟ ಪ್ರಭಾವ ಬೀರುತ್ತಿದೆ. ವಿಡಿಯೊ ಮಾಡಿರೋ ವ್ಯಕ್ತಿ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾನೆ. ಹೆದರಿಸಿ ಬೆದರಿಸಿ ಒಪ್ಪಿಗೆ ಇಲ್ಲದಿದ್ದರೂ ಒತ್ತಡ ಹೇರಿದ್ದಾನೆ. ಆತನಿಗೆ ಕೋರ್ಟ್ ಕಡ್ಡಾಯವಾಗಿ ಶಿಕ್ಷೆ ನೀಡುವಂತೆ ಮಾಡಲಾಗುತ್ತದೆ. ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಅವರಿಗೆ ಭದ್ರತೆ ನೀಡಲಾಗಿದೆ. ಕೋರ್ಟ್‌ನಲ್ಲಿ ಸಾಕ್ಷಿಗಳು ಬೇಕಿರುವುದರಿಂದ ನೊಂದ ಮಹಿಳೆಯರು ದೂರು ನೀಡುವಂತೆ ಕೋರುತ್ತೇವೆ. ಕೋರ್ಟ್ ಮೇಲೆ ನಂಬಿಕೆಯಿದೆ, ಆತನಿಗೆ ಶಿಕ್ಷೆ ಆಗುತ್ತದೆ ಎಂದು ನಂಬಿರುವುದಾಗಿ ಹೇಳಿದರು.