ಬೆಂಗಳೂರು/ಯಾದಗಿರಿ: ಹಾಸನ ಸಂಸದ (Hassan MP), ಜೆಡಿಎಸ್ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣದ (Hassan Pen Drive Case) ಹಿಂದೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಇದ್ದಾರೆ. ಹಾಸನ ನಾಯಕರ ಕೈವಾಡ ಇದೆ. ಬಿಜೆಪಿ ಮುಖಂಡ ದೇವರಾಜೇಗೌಡ ಮೊದಲು ಭೇಟಿ ಮಾಡಿದ್ದು ಯಾರನ್ನು ಎಂದು ಡಿ.ಕೆ. ಸಹೋದರರು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಎಚ್‌ಡಿಕೆ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಹರಿಹಾಯ್ದಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಕುಮಾರಸ್ವಾಮಿಗೆ ಡಿ.ಕೆ. ಶಿವಕುಮಾರ್ ಅವರನ್ನು ನೆನಪು ಮಾಡಿಕೊಳ್ಳದಿದ್ದರೆ ನಿದ್ದೆ ಬರಲ್ಲ, ಊಟ ಸೇರಲ್ಲ. ನಮ್ಮ ಹತ್ತಿರ ಪೆನ್‌ಡ್ರೈವ್ ಇದ್ದಿದ್ದರೆ, ಅದನ್ನು ಚುನಾವಣೆಗೆ ಮೊದಲೇ ಬಿಡುಗಡೆ ಮಾಡುತ್ತಿದ್ದೆವು. ಇಲ್ಲೀಗ ವ್ಯವಸ್ಥಿತವಾಗಿ ನುಣುಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ಪ್ರಕರಣದಲ್ಲಿ ಹೆಣ್ಣು ಮಕ್ಕಳ ಸಮಸ್ಯೆ ಮುಖ್ಯವಾಗಿದೆ. ಯಾರು ಬಿಡುಗಡೆ ಮಾಡಿದರು ಎಂಬುದು ಅಲ್ಲ. ಕುಮಾರಸ್ವಾಮಿ ಅವರು ದಿನಕ್ಕೊಂದು ಹೇಳಿಕೆಯನ್ನು ಕೊಡುತ್ತಾ ಇರುತ್ತಾರೆ. ಡಿ.ಕೆ. ಶಿವಕುಮಾರ್ ಮೇಲೆ ಯಾವ ಆರೋಪ ಬಿಟ್ಟಿದ್ದಾರೆ? ಎಲ್ಲ ತರಹದ ಆರೋಪವನ್ನೂ ಮಾಡುತ್ತಾರೆ. ಇದರ ಹಿಂದೆ ಕುಮಾರಸ್ವಾಮಿ ಕೈವಾಡ ಇದೆ. ಹಾಸನ ನಾಯಕರ ಕೈವಾಡ ಇದೆ. ಈ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇತ್ತು ಎಂದು ಡಿ.ಕೆ. ಸುರೇಶ್ ಹೇಳಿದರು.
ಬಹಳ ಮುಂಚೆಯಿಂದ ಈ ಸುದ್ದಿ ಇತ್ತು. ವಿಡಿಯೊ ಬಿಡುಗಡೆ ಆಗಿರಲಿಲ್ಲ. ಬಿಡುಗಡೆ ಆದ ಮೇಲೆ ಚರ್ಚೆ ಆಗುತ್ತಿದೆ. ಸುಮ್ಮನೆ ಪ್ರಜ್ವಲ್ ರೇವಣ್ಣ ಅವರನ್ನು ಅಮಾನತು ಮಾಡಿದ್ದಾರೆ. ಅದು ಕುಟುಂಬದ ಪಾರ್ಟಿ, ಯಾವಾಗ ಬೇಕಾದರೂ ತೆಗೆದುಕೊಳ್ಳುತ್ತಾರೆ. ಬೇಕಾದಾಗ ಪಾರ್ಟಿಯಿಂದ ಬಿಡುತ್ತಾರೆ ಎಂದು ಡಿ.ಕೆ. ಸುರೇಶ್ ವ್ಯಂಗ್ಯವಾಡಿದರು.
ದೇವರಾಜೇಗೌಡ ಮೊದಲು ಯಾರನ್ನು ಭೇಟಿ ಮಾಡಿದ್ದ? ಡಿಕೆಶಿ ಪ್ರಶ್ನೆ
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾದಗಿರಿಯ ಸುರಪುರ ತಾಲೂಕಿನ ದೇವತ್ಗಲ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಮೊದಲು ದೇವರಾಜೇಗೌಡ ಯಾರನ್ನು ಭೇಟಿ ಮಾಡಿದ್ದ? ನಮಗೆ ಗೊತ್ತಿರುವ ಮಾಹಿತಿ ಪ್ರಕಾರ ಮೊದಲಿಗೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ. ಅದಾದ ಮೇಲೆ ಬಿಜೆಪಿ ಅವರಿಗೆ ಪೆನ್ ಡ್ರೈವ್ ಕೊಟ್ಟಿದ್ದ. ನಾವು ಮಾಡಬೇಕು ಅಂದಿದ್ದರೆ ಹೇಗೆ ಮಾಡಬೇಕು ಅಂತ ಗೊತ್ತಿತ್ತು. ನಮಗೆ ಅಂತಹ ಕೆಲಸದ ಅವಶ್ಯಕತೆ ಇಲ್ಲ. ಕುಮಾರಸ್ವಾಮಿ ನಾರಿ ಶಕ್ತಿ ಬಗ್ಗೆ, ತಂದೆ ತಾಯಿ ಬಗ್ಗೆ ಗೌರವವಿದೆ ಅಂತ ಹೇಳುತ್ತಾರಲ್ಲ. ಬಿಜೆಪಿಯವರೂ ಹೇಳುತ್ತಾರಲ್ಲವಾ? ಮೊದಲು ಆ ತಾಯಂದಿರಲ್ಲಿ ಹೋಗಿ ಗೌರವ ಕೊಟ್ಟು ಸಾಂತ್ವನ ಹೇಳಿ, ಧೈರ್ಯ ತುಂಬುವ ಕೆಲಸ ಮಾಡಲಿ ಎಂದು ಹೇಳಿದರು.
ಮಹಾನಾಯಕ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಯಾವ ನಾಯಕ ಅಂತಾದರೂ ಹೇಳಲಿ, ನಾನು ಮಾತನಾಡುತ್ತೇನೆ. ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿ ನಾನಲ್ಲ. ಸೂರಜ್ ರೇವಣ್ಣ ಅವರು ಬಂದಿದ್ದರು. ಏನೇನು ಮಾತನಾಡಿದ್ದರು ಅಂತ ಅವರನ್ನೇ ಕೇಳಿ ಎಂದು ಹೇಳಿದರು.
ಎಸ್‌ಐಟಿ ಎದುರು 24 ಗಂಟೆಯೊಳಗೆ ಹಾಜರಾಗದೇ ಇದ್ದರೆ ಪ್ರಜ್ವಲ್, ರೇವಣ್ಣ ಅರೆಸ್ಟ್?
ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಈಗಾಗಲೇ 24 ಗಂಟೆಯೊಳಗೆ ವಿಚಾರಣೆಗೆ ಹಾಜಾರಾಗುವಂತೆ ಎಸ್‌ಐಟಿ ನೋಟಿಸ್ ನೀಡಿದೆ. ಒಂದು ವೇಳೆ ಗಡುವಿನೊಳಗೆ ವಿಚಾರಣೆಗೆ ಹಾಜರಾಗದೇ ಇದ್ದರೆ ಬಂಧಿಸುವ ಅಧಿಕಾರ ಎಸ್‌ಐಟಿಗೆ ಇದೆ. ಇಲ್ಲವೇ ಇನ್ನೂ ಎರಡು ಬಾರಿ ನೋಟಿಸ್ ನೀಡಿ ಕಾಯಬಹುದಾಗಿದೆ. ಈ ಎಲ್ಲವೂ ತನಿಖಾಧಿಕಾರಿಯ ವಿವೇಚನೆಗೆ ಬಿಟ್ಟ ವಿಷಯವಾಗಿದೆ.
ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು (ಬುಧವಾರ – ಮೇ 1) ವಿಚಾರಣೆಗೆ ಹಾಜರಾಗಬೇಕು. ಕಾರಣ, ಸಿಆರ್‌ಪಿಸಿ 41ಎ ಅಡಿಯಲ್ಲಿ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ 24 ಗಂಟೆ ಒಳಗೆ ವಿಚಾರಣೆಗೆ ಹಾಜರಾಗದೆ ಹೋದಲ್ಲಿ ಮತ್ತೊಂದು ನೋಟಿಸ್ ಅನ್ನು ಎಸ್‌ಐಟಿ ನೀಡಲಿದೆ. ಇಲ್ಲವೇ ನೋಟಿಸ್ ನೀಡದೆಯೂ ಬಂಧಿಸುವ ಅಧಿಕಾರವಿದೆ.
ಸದ್ಯ ಆರೋಪಿಗಳು ವಿಚಾರಣೆಗೆ ಬರುವ ನಿರೀಕ್ಷೆಯಲ್ಲಿ ಎಸ್ಐಟಿ ಇದೆ. ಇನ್ನು ಪ್ರಜ್ವಲ್ ರೇವಣ್ಣ ವಿದೇಶದಲ್ಲಿರುವ ಕಾರಣ ನೋಟಿಸ್‌ನಲ್ಲಿ ಸಮಯ ನಿಗದಿ ಮಾಡಲಾಗಿಲ್ಲ.
ಹೊಳೆನರಸೀಪುರದ ಮನೆಯಲ್ಲಿ ಹೋಮ ಮಾಡಿಸಿದ ರೇವಣ್ಣ
ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಹೊಳೆನರಸೀಪುರದ ನಿವಾಸಲ್ಲಿ ಹೋಮ ಮಾಡಿಸಿದ್ದಾರೆ ಎನ್ನಲಾಗಿದೆ. ಯಾವ ಹೋಮವನ್ನು ನಡೆಸಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಬುಧವಾರ ಹೋಮ ಪೂರ್ಣಗೊಂಡ ಬಳಿಕ ಅಲ್ಲಿಂದ ಬೆಂಗಳೂರಿನತ್ತ ವಾಪಸ್ ಆಗಿದ್ದಾರೆ.
ಮೊದಲ ನೋಟಿಸ್‌ಗೆ ಪ್ರಜ್ವಲ್ ಗೈರು ಪಕ್ಕಾ
ಎಸ್‌ಐಟಿ ನೀಡಿರುವ ಮೊದಲ ನೋಟಿಸ್‌ಗೆ ಪ್ರಜ್ವಲ್ ರೇವಣ್ಣ ಗೈರಾಗುವುದು ಪಕ್ಕಾ ಆಗಿದೆ. ಏಕೆಂದರೆ, ಜರ್ಮನಿಯಿಂದ ಬೆಂಗಳೂರು ತಲುಪಬೇಕಾದರೆ ಕನಿಷ್ಠ 9ರಿಂದ 10 ಗಂಟೆ ಪ್ರಯಾಣ ಮಾಡಬೇಕು. 10 ಗಂಟೆ ಪ್ರಯಾಣ ಮಾಡಿದರೂ ನೋಟಿಸ್ ನೀಡಿದ 24 ಗಂಟೆಗಳ ಒಳಗೆ ತಲುಪಲು ಅಸಾಧ್ಯ. ಮೊದಲ ನೋಟಿಸ್‌ಗೆ ಗೈರಾದರೆ ಎರಡನೇ ನೋಟಿಸ್ ನೀಡುವ ಸಾಧ್ಯತೆ ಇದೆ. ಹೀಗೆ ಮೂರು ಬಾರಿ ಆರೋಪಿ ಸ್ಥಾನದಲ್ಲಿರುವವರಿಗೆ ನೋಟಿಸ್ ನೀಡಲಾಗುವುದು.
ಮೂರು ನೋಟಿಸ್‌ಗೂ ಸ್ಪಂದಿಸದೇ ಇದ್ದರೆ?
ಎಸ್‌ಐಟಿ ಮೂರು ಬಾರಿ ನೋಟಿಸ್ ನೀಡಿದರೂ ಆರೋಪಿಗಳು ಸ್ಪಂದಿಸದೇ ಇದ್ದಿದ್ದರೆ ಕೋರ್ಟ್ ಮುಖಾಂತರ ವಾರೆಂಟ್ ತಂದು ಬಂಧಿಸುವ ಅವಕಾಶವೂ ಇದೆ. ಇನ್ನು ಎರಡನೇ ನೋಟಿಸ್‌ಗೆ ಸ್ಪಂದಿಸಿ ವಿಚಾರಣೆಗೆ ಹಾಜರಾದರೆ, ತನಿಖಾಧಿಕಾರಿಗಳ ಮುಂದೆ ಸೂಕ್ತ ಕಾರಣ ನೀಡಬೇಕಾಗುತ್ತದೆ. ಈ ಪ್ರಕರಣದಲ್ಲಿ ದಾಖಲಾಗಿರುವ ಸೆಕ್ಷನ್‌ನಲ್ಲಿ ಜಾಮೀನು ಮಂಜೂರು ಆಗುವ ಸಾಧ್ಯತೆ ಇದೆ. ಇಂದು (ಬುಧವಾರ) ರಜೆಯಾಗಿರುವುದರಿಂದ ಗುರುವಾರ (ಮೇ 2) ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಗಾಗಿಯೇ ವಿಚಾರಣೆಗೆ ಹಾಜರಾಗದೆ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗುತ್ತಾ ಪೋಕ್ಸೋ ಕೇಸ್; ಬಾಲಕಿ ಉಲ್ಟಾ ಹೊಡೆದರೆ?
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಪ್ರಜ್ವಲ್ ರೇವಣ್ಣ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುವ ಸಾಧ್ಯತೆ ಹೆಚ್ಚಿದೆ.
ಈ ಸಂಬಂಧ ಮಕ್ಕಳ ಹಕ್ಕು ಆಯೋಗದಿಂದ ಪತ್ರ ಬರೆಯಲಾಗಿದೆ. ದೂರುದಾರೆಯ ಮಗಳ ಹೇಳಿಕೆಯನ್ನು ಪಡೆಯಲು ತಯಾರಿ ನಡೆಸಲಾಗುತ್ತಿದೆ. ಮಕ್ಕಳ ಹಕ್ಕು ಆಯೋಗದ ಕೌನ್ಸಿಲರ್‌ಗಳ ಸಮ್ಮುಖದಲ್ಲಿ ಹೇಳಿಕೆ ಪಡೆಯಲು ಸಿದ್ಧತೆ ನಡೆಸಲಾಗಿದೆ. ಇಂದು ಸಂಜೆ ಅಥವಾ ನಾಳೆ (ಮೇ 1 – 2) ಸಂತ್ರಸ್ತೆಯ ಮಗಳ ಹೇಳಿಕೆ ಪಡೆಯಲು ಮುಂದಾಗಲಾಗುತ್ತಿದೆ ಎನ್ನಲಾಗಿದೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆಗಿದ್ದರೆ ಈ ಸಂಬಂಧ ಹೇಳಿಕೆಯನ್ನು ಪಡೆಯುವಾಗ ಕಡ್ಡಾಯವಾಗಿ ಮಕ್ಕಳ ಹಕ್ಕು ಆಯೋಗದ ಸದಸ್ಯರು ಇರಬೇಕು. ನೇರವಾಗಿ ಪೊಲೀಸರು ಹೇಳಿಕೆ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಇಂದು ಅಥವಾ ನಾಳೆ ಸಂಜೆಯೊಳಗೆ ಅಧಿಕಾರಿಗಳು ಹೇಳಿಕೆ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಈ ವೇಳೆ ಏನಾದರೂ ಸಂತ್ರಸ್ತೆಯ ಮಗಳು ವ್ಯತಿರಿಕ್ತ ಹೇಳಿಕೆ ನೀಡಿದಲ್ಲಿ ಇಡಿ ಪ್ರಕರಣವೇ ಉಲ್ಟಾ ಆಗಲಿದೆ.
SIT ತನಿಖೆಗೆ ಸಂತ್ರಸ್ತೆಯರ ಹಿಂದೇಟು; ವಿಚಾರಣೆ ಅಂತ ತೊಂದರೆ ಕೊಟ್ಟರೆ ಸೂಸೈಡ್ ಬೆದರಿಕೆ!
ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿಗೆ ಮಾಹಿತಿ ನೀಡಲು ಸಂತ್ರಸ್ತೆಯರು ಹಿಂದೇಟು ಹಾಕುತ್ತಿದ್ದಾರೆ. “ನನಗೆ ತೊಂದರೆ ಕೊಟ್ಟರೆ ಸೂಸೈಡ್ ಮಾಡಿಕೊಳ್ಳುತ್ತೇವೆ” ಎಂದು ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಪ್ರಜ್ವಲ್ ರೇವಣ್ಣ ಒಬ್ಬ ಸಂಸದ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ವಂಶದ ಕುಡಿ. ಈ ಹಿನ್ನೆಲೆಯಲ್ಲಿ ಇದೊಂದು ಹೈ ಪ್ರೊಫೈಲ್ ಕೇಸ್ ಆಗಿದೆ. ಇದರ ಜತೆಗೆ ವಿಡಿಯೊ ಲೀಕ್ ವೇಳೆ ಸಂತ್ರಸ್ತೆಯರ ಮುಖವನ್ನು ಬ್ಲರ್ ಮಾಡಲಾಗಿಲ್ಲ. ಇದರಿಂದ ಅದೆಷ್ಟೋ ಹೆಣ್ಣು ಮಕ್ಕಳು ಹೊರಗಡೆ ತಲೆ ಎತ್ತಿ ತಿರುಗುವಂತೆ ಆಗುತ್ತಿಲ್ಲ. ಈ ಮಧ್ಯೆ ಎಸ್‌ಐಟಿ ಅಧಿಕಾರಿಗಳು ತನಿಖೆಗಾಗಿ ಅವರನ್ನು ಭೇಟಿ ಮಾಡಿ ಹೇಳಿಕೆ ಪಡೆಯಲು ಹೋದರೆ ಮೊದಲೇ ನೊಂದಿರುವ ನಮ್ಮನ್ನು ಮತ್ತಷ್ಟು ನೋಯಿಸಬೇಡಿ. ಈ ಬಗ್ಗೆ ನಮ್ಮ ಬಳಿ ಏನನ್ನೂ ಕೇಳಬೇಡಿ. ಇದು ನಮ್ಮ ಜೀವನದ ಪ್ರಶ್ನೆಯಾಗಿದೆ. ಅಷ್ಟಕ್ಕೂ ನೀವು ಒತ್ತಾಯ ಮಾಡಿದ್ದೇ ಆದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ದೂರುದಾರೆ ಹೊರತುಪಡಿಸಿ ಉಳಿದವರು ನೋ ರೆಸ್ಪಾನ್ಸ್!
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೊದಲ್ಲಿರುವ ಮಹಿಳೆಯರನ್ನು ಸಂಪರ್ಕಿಸಲು ಎಸ್‌ಐಟಿ ತಂಡವು ಸಾಕಷ್ಟು ಪ್ರಯತ್ನಪಟ್ಟಿದೆ. ಎಷ್ಟೇ ಪ್ರಯತ್ನ ಪಟ್ಟರೂ ಸಂತ್ರಸ್ತೆಯರು ಮಾತ್ರ ಇವರಿಗೆ ಸ್ಪಂದಿಸುತ್ತಿಲ್ಲ. ನಾವು ಏನೂ ಹೇಳಲ್ಲ, ಏನನ್ನೂ ಕೇಳಬೇಡಿ ಎಂದು ಸಂತ್ರಸ್ತೆಯರು ಹೇಳುತ್ತಿದ್ದಾರೆ.
ನಾವೇನು ದೂರು ಕೊಟ್ಟಿಲ್ಲ, ನಮ್ಮನ್ನು ಯಾಕೆ ಎಳೆದು ತರುತ್ತೀರಿ? ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ ಎಂದು ಹೇಳುತ್ತಿರುವುದರಿಂದ ಎಸ್‌ಐಟಿ ತನಿಖೆಗೆ ಸ್ವಲ್ಪ ಹಿನ್ನಡೆಯಾಗಿದೆ. ಹೀಗಾಗಿ ಸದ್ಯಕ್ಕೆ ದೂರುದಾರೆ ಸಂತ್ರಸ್ತೆಯ ಮಾಹಿತಿ ಆಧರಿಸಿ ತನಿಖೆಯನ್ನು ಮುನ್ನಡೆಸುವ ತೀರ್ಮಾನಕ್ಕೆ ಬರಲಾಗಿದೆ.
ಮೇ 3ರಂದು ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ, ಬಂದ ತಕ್ಷಣ ಎಸ್‌ಐಟಿ ವಶಕ್ಕೆ?
ಅಶ್ಲೀಲ ವಿಡಿಯೋದಲ್ಲಿರುವ (Obscene video) ಪ್ರಧಾನ ಆರೋಪಿ, ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna) ಮೇ 3ರಂದು ತಡರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಗೊತ್ತಾಗಿದೆ. ಸದ್ಯ ಅವರು ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿದ್ದಾರೆ.
ಲುಪ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಮೇ 3ರ ಪ್ರಯಾಣಕ್ಕೆ ಪ್ರಜ್ವಲ್ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೇ 3 ಮಧ್ಯರಾತ್ರಿ ಕೆಂಪೇಗೌಡ ಏರ್‌ಪೋರ್ಟ್‌ಗೆ ಅವರು ಆಗಮಿಸಬಹುದು. ಮೇ 4ರಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಅಥವಾ ಅವರು ವಿಮಾನದಿಂದ ಇಳಿದ ಕೂಡಲೇ ಅವರನ್ನು ವಿಶೇಷ ತನಿಖಾ ತಂಡ (SIT) ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಮೊದಲ ಹಂತದ ಮತದಾನದ ದಿನವೇ ಪ್ರಜ್ವಲ್ ಅವರು ದೇಶ ಬಿಟ್ಟು ತೆರಳಿದ್ದರು. ಬ್ಯುಸಿನೆಸ್ ವೀಸಾವನ್ನು ಅವರು ಹೊಂದಿದ್ದಾರೆ. ಟೂರಿಸ್ಟ್ ವೀಸಾದಲ್ಲಿ ಅವರು ಜರ್ಮನಿಗೆ ತೆರಳಿದ್ದು, ಇದರ ಅವಧಿ 90 ದಿನಗಳ ಕಾಲ ಚಾಲೂ ಇರುತ್ತದೆ. CRPC41A ಸೆಕ್ಷನ್ ಪ್ರಕಾರ, ಅವರು ನೋಟಿಸ್‌ಗೆ ಸ್ಪಂದಿಸಿ ಹಾಜರಾಗದೆ ಇದ್ದರೆ ಅವರನ್ನು ಬಂಧಿಸಬಹುದಾಗಿದೆ.
ಏಕಾಏಕಿ ಬಂಧನವಿಲ್ಲ: ಪರಮೇಶ್ವರ್
ಆದರೆ ಹಾಗೆ ಏಕಾಏಕಿ ಯಾರನ್ನೂ ಬಂಧಿಸಲು ಮುಂದಾಗುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಇಂದು ಬೆಳಗ್ಗೆ ಹೇಳಿದ್ದಾರೆ. “ಅದಕ್ಕೆ ಪುರಾವೆಗಳು, ದೂರು, ದೂರಿನಲ್ಲಿ ಏನು ಹೇಳಿರುತ್ತಾರೆ ಅನ್ನೋದು ಮುಖ್ಯ. ಯಾವ ಸೆಕ್ಷನ್ ಬರುತ್ತೆ, ಅದರಲ್ಲಿ ಅರೆಸ್ಟ್ ಮಾಡಬಹುದಾ, ಬೇಲ್ ಕೇಸಾ, ನಾನ್ ಬೇಲ್ ಕೇಸಾ ಅಂತ ನೋಡಬೇಕು. ಅದಕ್ಕೆ 41A CRPC ಸೆಕ್ಷನ್ ಅಡಿ ನೋಟಿಸ್ ಕೊಟ್ಟಿದ್ದಾರೆ. ಅವರು 24 ಗಂಟೆ ಒಳಗೆ ಒಂದು ಹಾಜರಾಗಬೇಕು. ಹಾಜರಾಗದೇ ಹೋದರೆ SITಯವರು ಮುಂದಿನ ಪ್ರಕ್ರಿಯೆ ಮಾಡ್ತಾರೆ” ಎಂದಿದ್ದಾರೆ.
ಪ್ರಜ್ವಲ್ ತನಿಖೆ ಮುಖ್ಯ
ಸದ್ಯ ಪ್ರಜ್ವಲ್ ತನಿಖೆ ಎಸ್‌ಐಟಿಗೆ ತುಂಬಾ ಮುಖ್ಯವಾಗಿದೆ. ಎ1 ರೇವಣ್ಣ ಆಗಿದ್ದರೂ ಪ್ರಕರಣಗಳು ಹೊರಬಂದಿದ್ದು ಪ್ರಜ್ವಲ್ ರೇವಣ್ಣ ವಿಡೀಯೋಗಳಿಂದ ಆಗಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಸ್ಟೇಟ್‌ಮೆಂಟ್ ಇಲ್ಲಿ ಅಗತ್ಯವಿದೆ. ಮಾಜಿ ಸಚಿವ ಎಚ್.ಡಿ ರೇವಣ್ಣ (HD Revanna) ಹಾಗೂ ಪ್ರಜ್ವಲ್ ರೇವಣ್ಣ (Hassan MP Prajwal Revanna) ಇವರಿಬ್ಬರ ಹೊಳೆನರಸೀಪುರ ಮನೆಯ ಬಾಗಿಲಿಗೆ ಇಂದು ನೊಟೀಸ್ (Notice) ಅನ್ನು ಎಸ್‌ಐಟಿ (SIT) ಟೀಂ ಅಂಟಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಯ ಬಾಗಿಲಿಗೆ ನೊಟೀಸ್ ಅಂಟಿಸಿದ್ದು, ಎಸ್‌ಐಟಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ತನಿಖೆಗೆ ಬೇಕು ಎಂದರೆ ಪ್ರಜ್ವಲ್ ಹಾಜರಾಗ್ತಾನೆ ಎಂದು ಎಚ್.ಡಿ ರೇವಣ್ಣ ಹೇಳಿದ್ದಾರೆ. ಪ್ರಜ್ವಲ್ ಬಾರದಿದ್ದಲ್ಲಿ ತನಿಖೆ ನಿಧಾನಗತಿಯಲ್ಲಿ ಸಾಗಬಹುದು. ಆದರೆ ಈಗಾಗಲೇ ಎಸ್‌ಐಟಿ ವಿಚಾರಣೆ ನೋಟಿಸ್ ಜಾರಿ ಮಾಡಿದೆ. ಇದಕ್ಕೆ ಉತ್ತರಿಸದೆ ತಲೆ ಮರೆಸಿಕೊಂಡರೆ ಆರೋಪಿಗೆ ಇಂಟರ್‌ಪೋಲ್ ಮುಖಾಂತರ ರೆಡ್ ಕಾರ್ನರ್ ಅಥವಾ ಲುಕ್ ಔಟ್ ನೋಟಿಸ್ ಜಾರಿ ಮಾಡುವ ಸಾಧ್ಯತೆಯೂ ಎಸ್‌ಐಟಿ ಮುಂದಿದೆ.
ಈಗಾಗಲೇ ಡ್ರೈವರ್ ಕಾರ್ತಿಕ್‌ನನ್ನು ಎಸ್‌ಐಟಿ ವಿಚಾರಣೆಗೊಳಪಡಿಸಿದೆ. ಸಂತ್ರಸ್ತೆಯ ಹೇಳಿಕೆಯನ್ನೂ ದಾಖಲಿಸಿದೆ. ನಾಳೆ ಅಥವಾ ನಾಡಿದ್ದು CRPC 164 ಅಡಿಯಲ್ಲಿ ಸ್ಟೆಟ್ಮೆಂಟ್ ಪಡೆಯಲಿದೆ. ವಿಚಾರಣೆ ಬಳಿಕ ಕಾರ್ತಿಕ್ ಮೊಬೈಲ್ ಸೀಜ್ ಮಾಡಿ ಎಫ್ಎಸ್ಎಲ್‌ಗೆ ವಿಧಿವಿಜ್ಞಾನ ಪರಿಶೀಲನೆಗಾಗಿ ಕಳಿಸಲಾಗಿದೆ.
ಇದನ್ನೂ ಓದಿ: Hassan Pen Drive Case: ಹೊಳೆನರಸೀಪುರದ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಎಸ್‌ಐಟಿ ವಾಪಸ್!
ಹೋಮ ಮಾಡಿಸುತ್ತಿರುವ ರೇವಣ್ಣ
ತಮ್ಮ ವಿರುದ್ಧ ಎಸ್ಐಟಿ ತನಿಖೆ ಚುರುಕುಗೊಂಡಿರುವ ನಡುವೆ ರೇವಣ್ಣ ದೇವರು ದಿಂಡಿರ ಮೊರೆ ಹೋಗಿದ್ದಾರೆ. ಹೊಳೆನರಸೀಪುರದ ಅವರ ಮನೆಯಲ್ಲಿ ಹೋಮ ಹವನ ಮಾಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಎದುರಾದ ಸಂಕಷ್ಟ ನಿವಾರಣೆಗಾಗಿ ಮನೆಯೊಳಗೇ ಹೋಮ ಕುಂಡ ನಿರ್ಮಿಸಿ ಬೆಳಗ್ಗೆಯಿಂದ ಪೂಜೆ ಸಲ್ಲಿಸಲಾಗುತ್ತಿದೆ.