Site icon Vistara News

Hassan Pen Drive Case: ನಾನು ವಿಡಿಯೊ ಕೊಟ್ಟಿದ್ದು ದೇವರಾಜೇಗೌಡರಿಗೆ ಮಾತ್ರ; ಅವರೇ ಲೀಕ್‌ ಮಾಡಿರಬೇಕು ಎಂದ ಕಾರ್ತಿಕ್!

Hassan Pen Drive Case I gave video only to Devaraje Gowda says Karthik

ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಪ್ರಜ್ವಲ್‌ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ವಿಡಿಯೊಗಳು ನನ್ನ ಬಳಿ ಇತ್ತು ನಾನಿದನ್ನು ದೇವರಾಜೇಗೌಡ ಅವರಿಗೆ ಕೊಟ್ಟಿದ್ದೆ. ಅವರು ಇದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೋ ಏನೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಕಾರ್ತಿಕ್ ಅಜ್ಞಾತ ಸ್ಥಳದಲ್ಲಿದ್ದುಕೊಂಡು ವಿಡಿಯೊ ಮಾಡಿದ್ದು, ವಿಡಿಯೊ ಲೀಕ್ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಹದಿನೈದು ವರ್ಷದಿಂದ ಪ್ರಜ್ವಲ್‌ ರೇವಣ್ಣ ಹಾಗೂ ಅವರ ಫ್ಯಾಮಿಲಿಗೆ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದೇನೆ. ಒಂದು ವರ್ಷದಿಂದ ಕೆಲಸವನ್ನು ಬಿಟ್ಟಿದ್ದೇನೆ. ನನ್ನ ಜಮೀನು ಬರೆಸಿಕೊಂಡು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದರು. ಹಿಂಸೆ ಕೊಟ್ಟರು. ಆದ್ದರಿಂದ ಅವರ ಮನೆಯಿಂದ ಹೊರಬಂದೆ. ಆ ಸಮಯದಲ್ಲಿ ದೇವರಾಜೇಗೌಡ ಇವರ ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರು. ಯಾರಿಂದಲೂ ನ್ಯಾಯ ಸಿಗಲ್ಲ ಅಂತ ದೇವರಾಜೇಗೌಡ ಬಳಿ ಹೋದೆ. ಯಾವುದೇ ಅಶ್ಲೀಲ ವಿಡಿಯೊ ರಿಲೀಸ್ ಮಾಡಬಾರದು ಎಂದು ಅಂದು ನನ್ನ ವಿರುದ್ಧ ಪ್ರಜ್ವಲ್‌ ರೇವಣ್ಣ ಸ್ಟೇ ತಂದಿದ್ದರು. ನಿನ್ನ ಬಳಿ ಇರುವ ವಿಡಿಯೊ, ಫೋಟೊಗಳನ್ನು ಕೊಡು. ನಾನು ಯಾರಿಗೂ ತೋರಿಸುವುದಿಲ್ಲ ಎಂದು ದೇವರಾಜೇಗೌಡ ಕೇಳಿದ್ದರು. ಅವರನ್ನು ನಂಬಿ ನನ್ನ ಬಳಿಯಿದ್ದ ವಿಡಿಯೊದ ಒಂದು ಕಾಪಿ ಕೊಟ್ಟೆ. ಅವರು ಅದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೋ ಏನೋ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ದೇವರಾಜೇಗೌಡರಿಗೆ ಮಾತ್ರವೇ ಕೊಟ್ಟಿದ್ದೆ

ದೇವರಾಜೇಗೌಡರನ್ನು ಬಿಟ್ಟರೆ ಬೇರೆ ಯಾರಿಗೂ ನಾನು ವಿಡಿಯೊವನ್ನು ಕೊಟ್ಟಿಲ್ಲ. ಕಾಂಗ್ರೆಸ್‌ನವರಿಗಂತೂ ನಾನು ವಿಡಿಯೊ ಕೊಟ್ಟಿಲ್ಲ. ಕಾಂಗ್ರೆಸ್‌ನವರ ಮೇಲೆ ನಂಬಿಕೆ ಇಲ್ಲದೆ ದೇವರಾಜೇಗೌಡರ ಹತ್ತಿರ ಕೊಟ್ಟಿದ್ದೆ. ಪೆನ್‌ ಡ್ರೈವ್ ಅನ್ನು ಯಾರು ಹಂಚಿದರೋ ಗೊತ್ತಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಕಾಂಗ್ರೆಸ್‌ನವರಿಗೆ ಕೊಡುವುದಿದ್ದರೆ ದೇವರಾಜೇಗೌಡ ಬಳಿ ಏಕೆ ಹೋಗುತ್ತಿದ್ದೆ? ಇವತ್ತು ಎಸ್‌ಐಟಿ ಮುಂದೆ ಹಾಜರಾಗಿ ಎಲ್ಲವನ್ನೂ ಹೇಳಿಕೊಳ್ಳುತ್ತೇನೆ. ನಂತರ ಮಾಧ್ಯಮದ ಮುಂದೆ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ ಎಂದು ಕಾರ್ತಿಕ್‌ ಹೇಳಿದರು.

ಇದನ್ನೂ ಓದಿ: Hassan Pen Drive Case: ಪ್ರಜ್ವಲ್‌ ರೇವಣ್ಣ ಕೇಸ್‌; ಎಸ್‌ಐಟಿ ತನಿಖೆ ಹೇಗಿರುತ್ತೆ? ತಪ್ಪಿಸಿಕೊಳ್ಳೋಕೆ ಇರೋ ಚಾನ್ಸ್‌ ಏನು?

ಎಸ್‌ಐಟಿ ಮುಂದೆ ಕೂಲಂಕಷವಾಗಿ ಹೇಳುವೆ

ಕಾಂಗ್ರೆಸ್‌ನವರ ಹೆಸರನ್ನು ಬೆರೆಸಬೇಡಿ. ದೇವೇಗೌಡರನ್ನು ಬಿಟ್ಟರೆ ಯಾರಿಗೂ ಒಂದು ತುಣುಕು ಕೊಟ್ಟಿಲ್ಲ. ಇವತ್ತು ಎಸ್‌ಐಟಿ ಮುಂದೆ ಹಾಜರಾಗಿ ಕೂಲಂಕಷವಾಗಿ ಹೇಳುತ್ತೇನೆ. ರೇವಣ್ಣ ಮನೆಯಲ್ಲಿ ಏನೆಲ್ಲ ನಡೆದಿದೆ ಎಂಬುದನ್ನು ನಾನು ನೋಡಿದ್ದೇನೆ. ಎಲ್ಲವನ್ನೂ ಎಸ್‌ಐಟಿ ಮುಂದೆ ಹೇಳುತ್ತೇನೆ. ಯಾರಿಗೆ ಅನ್ಯಾಯ ಆಗಿದೆ ಧೈರ್ಯವಾಗಿ ಮುಂದೆ ಬನ್ನಿ ಎಂದು ಕಾರ್ತಿಕ್‌ ಹೇಳುವ ಮೂಲಕ ತಮ್ಮ ಬಳಿ ವಿಡಿಯೊ ಇತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ.

Exit mobile version