ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಹಾಸನ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಹರಸಾಹಸ ಪಟ್ಟಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸೊಸೆ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣರ ಕೈಯಲ್ಲಿ ಎಷ್ಟು ದುಡ್ಡಿದೆ, ಎಷ್ಟು ಆಭರಣಗಳಿವೆ, ಯಾರಿಗೆಲ್ಲಾ ಸಾಲ ನೀಡಿದ್ದಾರೆ ಎಂಬುದು ಈಗ ಬಹಿರಂಗವಾಗಿದೆ.
ಹಾಸನ ಜಿಲ್ಲೆ ಹೊಳೆ ನರಸೀಪುರದಿಂದ ಎಚ್.ಡಿ. ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸಲ್ಲಿಸಿರುವ ಆಸ್ತಿ ವಿವರಗಳಲ್ಲಿ ಭವಾನಿ ರೇವಣ್ಣರ ಆಸ್ತಿ ವಿವರಗಳೂ ಇವೆ. ಪತಿ ಎಚ್.ಡಿ. ರೇವಣ್ಣ ಅವರಿಗಿಂತ ಭವಾನಿ ರೇವಣ್ಣ ಅವರೇ ಹೆಚ್ಚು ಹಣವನ್ನು ಕೈಯಲ್ಲಿಟ್ಟುಕೊಂಡಿದ್ದಾರೆ. ಭವಾನಿ ರೇವಣ್ಣರ ಬಳಿ 31.13 ಲಕ್ಷ ನಗದಿದ್ದರೆ, ರೇವಣ್ಣರ ಬಳಿ ಕೇವಲ7. 54 ಲಕ್ಷ ನಗದಿದೆ. ಕೋಟ್ಯಧೀಶೆ ಭವಾನಿ ರೇವಣ್ಣ 2.70 ಕೋಟಿ ರೂ. ಹಣವನ್ನು ಬ್ಯಾಂಕಿನಲ್ಲಿಟ್ಟಿದ್ದಾರೆ.
ಮೈದುನ ಕುಮಾರಸ್ವಾಮಿಗೇ ಸಾಲ ಕೊಟ್ಟಿರುವ ಭವಾನಿ!
ಭವಾನಿ ರೇವಣ್ಣ ಮೈದುನ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ 3,26,565 ರೂ.ಗಳನ್ನು ನೀಡಿದ್ದಾರೆ. ಹಾಗೆಂದು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ಮಾಹಿತಿಯಲ್ಲಿ ಉಲ್ಲೇಖವಾಗಿದೆ. ಕುಮಾರಸ್ವಾಮಿಯವರಿಗೆ ಮಾತ್ರವಲ್ಲದೆ, ಮಗ ಪ್ರಜ್ವಲ್ ರೇವಣ್ಣ ಅವರಿಗೆ 50 ಲಕ್ಷ ರೂ.ಗಳನ್ನು ನೀಡಿದ್ದಾರೆ.
ಭವಾನಿ ರೇವಣ್ಣ ಪತಿಗಿಂತ ಒಂದು ಕೋಟಿ ಹೆಚ್ಚಿನ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಬಳಿ 8.66 ಕೋಟಿ ಮೌಲ್ಯದ ಚರಾಸ್ತಿ ಇದೆ. ಅಲ್ಲದೆ, 29.58 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿಯನ್ನೂ ಭವಾನಿ ಬಳಿಯಿದೆ.
ಭವಾನಿ ಬಳಿ ಕೆಜಿಗಟ್ಟಲೆ ಬಂಗಾರ!
ದೊಡ್ಡಗೌಡರ ಸೊಸೆ ಭವಾನಿ ಬಳಿ ಕೆಜಿಗಟ್ಟಲೆ ಬಂಗಾರ, ಬೆಳ್ಳಿ ಇದೆ. ಒಟ್ಟು 46 ಕೆಜಿ ಬೆಳ್ಳಿ, ಸುಮಾರು 3 ಕೆಜಿ ಚಿನ್ನ,25 ಕ್ಯಾರೆಟ್ ವಜ್ರದ ಆಭರಣ ಭವಾನಿ ರೇವಣ್ಣ ಬಳಿ ಇರುವುದಾಗಿ ತಿಳಿಸಲಾಗಿದೆ. ಒಟ್ಟು ಸುಮಾರು 2.20 ಕೋಟಿ ಮೌಲ್ಯದ ಚಿನ್ನ ಬೆಳ್ಳಿ ವಜ್ರದ ಆಭರಣವನ್ನು ಅವರು ಹೊಂದಿದ್ದಾರೆ. ಎಚ್.ಡಿ. ರೇವಣ್ಣ ಕೇವಲ 320 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ.
ಒಟ್ಟು 43 ಕೋಟಿ 37 ಲಕ್ಷದ 56 ಸಾವಿರದ 441 ರೂ. ಮೌಲ್ಯದ ಆಸ್ತಿ ರೇವಣ್ಣರ ಬಳಿಯಿದೆ. ಸುಮಾರು 7.36 ಕೋಟಿ ಚರಾಸ್ತಿ ಹೊಂದಿರುವ ಅವರು 36.01 ಕೋಟಿ ಸ್ಥಿರಾಸ್ತಿಯ ಒಡೆಯರು. ಇಷ್ಟೊಂದು ಆಸ್ತಿ ಇದ್ದರೂ ರೇವಣ್ಣ 9 ಕೋಟಿ ಸಾಲ ಮಾಡಿರುವುದಾಗಿ ಆಯೋಗಕ್ಕೆ ನೀಡಿರುವ ಮಾಹಿತಿಯಲ್ಲಿ ಹೇಳಿದ್ದಾರೆ.
ತಾಯಿ ಚನ್ನಮ್ಮರಿಂದ 60 ಲಕ್ಷ ರೂ. ತಂದೆ ದೇವೇಗೌಡರಿಂದ 31 ಲಕ್ಷ ರೂ. ರೇವಣ್ಣ ಸಾಲ ಪಡೆದಿದ್ದಾರೆ. ಅಲ್ಲದೆ, ಸಹೋದರ ರಮೇಶ್ ರಿಂದ 4 ಕೋಟಿ ರೂ. ಸಾಲ ಪಡೆದಿದ್ದು, ಮನೆ ನಿರ್ಮಾಣಕ್ಕೆ 2 ಕೋಟಿ ರೂ. ಸಾಲ ಮಾಡಿರುವುದಾಗಿ ತಿಳಿಸಿದ್ದಾರೆ. ಭವಾನಿ ರೇವಣ್ಣ ಕೂಡ 5.28 ಕೋಟಿ ರೂ. ಸಾಲ ತೋರಿಸಿದ್ದಾರೆ.
ಇದನ್ನೂ ಓದಿ : Karnataka Elections : ಜನಾರ್ದನ ರೆಡ್ಡಿಗಿಂತಲೂ ಪತ್ನಿ ಅರುಣಲಕ್ಷ್ಮಿಯೇ ಶ್ರೀಮಂತೆ; ಸಂಪತ್ತು ಎಷ್ಟಿದ್ದರೇನೂ ಅವರ ಬಳಿ ವಾಹನಗಳೇ ಇಲ್ಲ!