Site icon Vistara News

ನಗರಸಭೆ ಸದಸ್ಯನ ಹತ್ಯೆ: ಅಂತಿಮ ದರ್ಶನ ಪಡೆದ ಸಾ.ರಾ. ಗೋವಿಂದು

prashanth

ಹಾಸನ : ಜೆಡಿಎಸ್ ಮುಖಂಡ, ಹಾಸನ ನಗರಸಭೆ ಸದಸ್ಯ ಪ್ರಶಾಂತ್‌ ನಗರದಲ್ಲಿ ಭೀಕರವಾಗಿ ಹತ್ಯೆಯಾದ ನಂತರ ಹಾಸನದಲ್ಲಿ ಇದೀಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಶಾಂತ್ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆಯೇ ಕಿಮ್ಸ್ ಆಸ್ಪತ್ರೆ ಆವರಣಕ್ಕೆ ದೌಡಾಯಿಸಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಯಾವುದೇ ಕಾರಣಕ್ಕೂ ಮೃತದೇಹವನ್ನು ಆಂಬುಲೆನ್ಸ್‌ನಿಂದ ಕೆಳಗಿಳಿಸಕೂಡದು. ನಗರದಲ್ಲಿ ರೌಡಿಸಂಗೆ ಪೊಲೀಸ್ ಇಲಾಖೆ ಬೆಂಬಲವಾಗಿ ನಿಂತಿದೆ. ಇದರಿಂದಲೇ ಗೂಂಡಾಗಿರಿ ಹೆಚ್ಚಿ, ಚುನಾಯಿತ ಪ್ರತಿನಿಧಿಯ ಕೊಲೆ ನಡೆದಿದೆ ಎಂದು ಗುಡುಗಿದ್ದಾರೆ. ಕರ್ತವ್ಯಲೋಪ ಆರೋಪದಡಿ ಯಾರದೋ ಗುಲಾಮರಾಗಿ ಕೆಲಸ ಮಾಡುತ್ತಿರುವ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು ಕೂಡಲೇ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಪ್ರಕರಣ ಸಂಬಂಧ ಬೆಸ್ತರ ಬೀದಿಯ ಪೂರ್ಣಚಂದ್ರ ವಿರುದ್ಧ ಪೆನ್ಷನ್ ಮೊಹೊಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಶಾಂತ್‌ ತಂದೆ,  ರಾಜ್‌ಕುಮಾರ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಹಾರಾ.ನಾಗರಾಜ್ ಅವರನ್ನೂ ಸುಮಾರು 16 ವರ್ಷದ ಹಿಂದೆ ಕೊಲೆ‌ ಮಾಡಲಾಗಿತ್ತು. ಇದೀಗ ಅವರ ಮಗ, ನಗರಸಭೆ ಸದಸ್ಯ ಪ್ರಶಾಂತ್ ಅವರನ್ನೂ ಹತ್ಯೆ ಮಾಡಲಾಗಿದೆ.

ಹಾಸನ ನಗರದ ಜವೇನಹಳ್ಳಿ ಮಠದ ರಸ್ತೆಯ, ಲಕ್ಷ್ಮಿಪುರ ಬಡಾವಣೆಯಲ್ಲಿ ಒಬ್ಬರೇ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಹಿಂಬಾಲಿಸಿದ ಹಂತಕರು ಅಟ್ಟಾಡಿಸಿ ಬರ್ಬರವಾಗಿ ಕೊಂದು ಪರಾರಿಯಾಗಿದ್ದಾರೆ. ನಗರಸಭೆ 16 ನೇ ವಾರ್ಡ್‌ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿ ಸುಮಾರು 1700 ಮತಗಳ ಅಂತರದಿಂದ ಗೆದಿದ್ದ ಪ್ರಶಾಂತ್, ಸಂಜೆ ಕೆಲಸ ಮುಗಿಸಿ ಮನೆ ತಲುಪಲು ಕೇವಲ ಅರ್ಧ ಕಿಮೀ ಇದ್ದಾಗ ದಿಢೀರ್ ಅಟ್ಯಾಕ್ ಮಾಡಿ , ತಲೆ ಮತ್ತು ಕೈ ಭಾಗಕ್ಕೆ ಬಲವಾಗಿ ಹೊಡೆದು ಗುರುತು ಸಿಗದಂತೆ ಕೊಚ್ಚಿದ್ದು, ಪ್ರಶಾಂತ್ ಸ್ಥಳದಲ್ಲೇ ಮೃತಪಟ್ಟಿದ್ದರು.

ಇದನ್ನೂ ಓದಿ | ನಗರಸಭೆ ಸದಸ್ಯ ಹತ್ಯೆ: ಡಾ.ರಾಜ್ ಕುಟುಂಬಕ್ಕೆ ಆಪ್ತವಾಗಿದ್ದ ಪ್ರಶಾಂತ್

ಪೊಲೀಸ್‌ ನೋಟಿಸ್‌ ಜಾರಿ :

ಮಾಜಿ ಸಚಿವ ರೇವಣ್ಣ ಆರೋಪದ ಹಿನ್ನೆಲೆಯಲ್ಲಿ ಹಾಸನ ನಗರ ಪೊಲೀಸ್ ಠಾಣೆಯ ಇನ್ಪೆಕ್ಟರ್ ರೇಣುಕಾ ಪ್ರಸಾದ್ ಗೆ ಪೊಲೀಸ್ ಇಲಾಖೆ ನೊಟೀಸ್ ನೀಡಿ, ಕಡ್ಡಾಗ ರಜೆ ಮೇಲೆ ಕಳಿಸಿದೆ. ಕೇವಲ ಒಬ್ಬರ ಮೆಲೇ ನೊಟೀಸ್ ನೀಡಿರುವುದಕ್ಕೆ ಗರಂ ಆದ ರೇವಣ್ಣ, ಡಿವೈಎಸ್ಪಿ ಉದಯಭಾಸ್ಕರ್ ಹಾಗೂ ಗ್ರಾಮಾಂತರ ಇನ್ಸ್‌ಪೆಕ್ಟರ್‌ ಆರೋಕಿಯಪ್ಪ ಅವರ ಮೇಲೂ ಕ್ರಮ ಆಗಬೇಕೆಂದು ಪಟ್ಟು ಹಿಡಿದಿದ್ದಾರೆ. ಎಸ್ಪಿ ಶ್ರೀನಿವಾಸಗೌಡ ಎಷ್ಟೇ ಮನವಿ ಮಾಡಿದ್ದರೂ ಕೂಡ ಒಪ್ಪದ ರೇವಣ್ಣ, ಕ್ರಮ ಆಗದ ಹೊರತು ನಾವು ಶವವನ್ನ ಪಡೆಯೋದಿಲ್ಲ ಅಂದಿದ್ದಾರೆ. ಪೊಲೀಸ್ ಕಂಪ್ಲೇಂಟ್‌ನಲ್ಲಿಯೂ ತಿರುಚಲಾಗಿದೆ. ಡಿವೈಎಸ್ಪಿ ಉದಯಬಾಸ್ಕರ್ ಅವರು ತಮಗೆ ಬೇಕಾದಂತೆ ಪ್ರಶಾಂತ್ ಪತ್ನಿಯಿಂದ ಬರೆಸಿಕೊಂಡಿದ್ದಾರೆ ಎಂದು ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.

ಹಾರಾ.ನಾಗರಾಜ್ ಕೊಲೆ ಹಿನ್ನೆಲೆ

ಕನ್ನಡಪರ ಹೋರಾಟಗಾರ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದ ಪ್ರಶಾಂತ್ ಅವರ ತಂದೆ ಹಾ.ರಾ.ನಾಗರಾಜ್ ಅವರನ್ನು 2005 ಸೆಪ್ಟೆಂಬರ್‌ನಲ್ಲಿ ಹತ್ಯೆಗಯ್ಯಲಾಗಿತ್ತು. ಹಾರಾ. ನಾಗರಾಜ್ ಕೊಲೆ ಆರೋಪದಲ್ಲಿ 2006 ಸೆಪ್ಟೆಂಬರ್ 19 ರಂದು ಗ್ಯಾರಳ್ಳಿ ತಮ್ಮಯ್ಯ ಅವರನ್ನು ಬೆಳ್ಳಂಬೆಳಗ್ಗೆ ಕೊಲೆ ಮಾಡಲಾಗಿತ್ತು. ಇದೀಗ ಪ್ರಶಾಂತ್ ಕೊಲೆ ನಡೆದಿದೆ. ಪ್ರಶಾಂತ್ ಗ್ಯಾರಳ್ಳಿ ತಮ್ಮಯ್ಯ ಕೊಲೆ ಕೇಸಿನಲ್ಲಿ ಖುಲಾಸೆಗೊಂಡ ನಂತರ ಯಾವುದೇ ಗಲಾಟೆ ಅಥವ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೇ ತನ್ನ ಪಾಡಿಗೆ ತಾನಿದ್ದ ಪ್ರಶಾಂತ್, ಇದೀಗ ಏಕಾಏಕಿ ಹೆಣವಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಆಕ್ರೋಶ ಹೊರ ಹಾಕಿದ ವರ್ತಕರು:

ಕಟ್ಟಿನಕೆರೆ ಮಾರ್ಕೆಟ್‌ನ ಬಂದ್ ಮಾಡಿ, ವರ್ತಕರು ಸಂತಾಪವನ್ನ ಸೂಚಿಸಿದ್ದಾರೆ. ಇತ್ತ ನಗರದಲ್ಲೆಡೆ ಆತಂಕದ ವಾತಾವರಣ ಇರುವುದರಿಂದ ರಾತ್ರಿ 10 ಗಂಟೆಯವರೆಗೆ ಮದ್ಯವನ್ನು ನಿಷೇಧ ಮಾಡಿ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ. ಇನ್ನು ನಗರಸಭೆ ಸದಸ್ಯ ಪ್ರಶಾಂತ್ ಹತ್ಯೆ ಘಟನೆಯಿಂದ ಹಾಸನದಲ್ಲಿ ಬೂದಿ ಮುಚ್ಚಿದ ಕೆಂಡದ ರೀತಿ ವಾತಾವರಣ ನಿರ್ಮಾಣವಾಗಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಸಾರಾ ಗೋವಿಂದು ಹೇಳಿಕೆ

ಕಿಮ್ಸ್ ಆಸ್ಪತ್ರೆಗೆ ಆಗಮಿಸಿ ಪ್ರಶಾಂತ್ ಅಂತಿಮ ದರ್ಶನ ಪಡೆದ ಸಾ.ರಾ. ಗೋವಿಂದು, ಇಲ್ಲಿಯ ಪೊಲೀಸರು ಇದನ್ನು ತನಿಖೆ ನಡೆಸೋದು ಬೇಡ, ತನಿಖೆಯನ್ನು ಸಿಬಿಐಗೆ ಒಪ್ಪಿಸಲಿ. ಪ್ರಶಾಂತ್ ಅವರ ತಂದೆ ಹಾ.ರಾ.ನಾಗರಾಜ್ ಅವರನ್ನೂ ಕೊಲೆ ಮಾಡಲಾಗಿತ್ತು. ಪ್ರಶಾಂತ್ ತಂದೆಗೆ ತಕ್ಕ ಮಗನಂತೆ ಬದುಕಿದ್ದರು. ಪ್ರಶಾಂತ್ ಅವರ ತಂದೆ ಕೊಲೆಯಾದಾಗಲೂ ನಾನು ಬಂದಿದ್ದೆ. ಪ್ರಶಾಂತ್ ಕೊಲೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಎಸ್ಪಿ ಶ್ರೀನಿವಾಸಗೌಡ – ಮಾಜಿ ಸಚಿವ ಹೆಚ್.ಡಿ‌. ರೇವಣ್ಣ ನಡುವೆ ಮಾತುಕತೆ ಸಫಲವಾಗಿದ್ದು, ಅಂತಿಮವಾಗಿ ಪೋಸ್ಟ್ ಮಾರ್ಟಂ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಶವಾಗಾರಕ್ಕೆ ಎಸ್‌ಪಿ, ಜೆಡಿಎಸ್ ಮುಖಂಡ ಸ್ವರೂಪ್ ಆಗಮಿಸಿದ್ದಾರೆ,

ಇದನ್ನೂ ಓದಿ | ನಗರಸಭೆ ಸದಸ್ಯ ಹತ್ಯೆ: ಡಾ.ರಾಜ್ ಕುಟುಂಬಕ್ಕೆ ಆಪ್ತವಾಗಿದ್ದ ಪ್ರಶಾಂತ್

Exit mobile version