Site icon Vistara News

ಎಲೆಕ್ಷನ್ ಹವಾ | ಅರಸೀಕೆರೆ | ಒಕ್ಕಲಿಗ ವರ್ಸಸ್ ವೀರಶೈವ-ಲಿಂಗಾಯತ ಅಭ್ಯರ್ಥಿ ಫೈಟ್‌ ನಿರೀಕ್ಷೆ

hassan arasikere

ಪ್ರತಾಪ್ ಹಿರೀಸಾವೆ, ಹಾಸನ
ಕಲ್ಪತರು ನಾಡಿನ ಅರಸೀಕೆರೆ ವಿಧಾನಸಭೆ ಚುನಾವಣೆ ಕಾವು ಜೋರಾಗಿದೆ. ಸಾಧನೆಯ ಮಾನದಂಡ, ಜಾತಿಯ ಅಸ್ತ್ರ ಅಭ್ಯರ್ಥಿಗಳ ಸೋಲು-ಗೆಲುವನ್ನು ನಿರ್ಧರಿಸಲಿದ್ದು, ಹಾಲಿ ಶಾಸಕ ಕೆ. ಎಂ. ಶಿವಲಿಂಗೇಗೌಡ (ಕೆಎಂಶಿ) ಹಾಗೂ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎನ್.ಆರ್ . ಸಂತೋಷ್ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ.

ಕ್ಷೇತ್ರದಲ್ಲಿ ವೀರಶೈವ -ಲಿಂಗಾಯತ ಅಭ್ಯರ್ಥಿ ಹೊರತುಪಡಿಸಿ ಬೇರೆಯವರ ಗೆಲುವು ಅಸಾಧ್ಯ ಎಂಬ ಕಾಲವೊಂದಿತ್ತು. ಇದಕ್ಕೆ 1994ರ ವಿಧಾನಸಭಾ ಚುನಾವಣೆಯಲ್ಲಿ ಹಾರನಹಳ್ಳಿ ರಾಮಸ್ವಾಮಿಯವರಂತಹ ಪ್ರಭಾವಿ ರಾಜಕೀಯ ಮುತ್ಸದ್ಧಿಯ ಸೋಲು ಒಂದು ಸಾಕ್ಷಿಯಾಗಿತ್ತು. ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ 2008, 2013 ಹಾಗೂ 2018 ರ ವಿಧಾನಸಭೆ ಚುನಾವಣೆಯಲ್ಲಿ ಕೆ.ಎಂ. ಶಿವಲಿಂಗೇಗೌಡರು ಸತತ ಮೂರು ಬಾರಿ ಗೆಲುವು ಸಾಧಿಸುವ ಮೂಲಕ ವೀರಶೈವ -ಲಿಂಗಾಯತರಲ್ಲದ ವ್ಯಕ್ತಿ ಕ್ಷೇತ್ರದಲ್ಲಿ ಎಂಎಲ್‌ಎ ಆಗಬಹುದು ಎಂಬುದನ್ನು ತೋರಿಸಿಕೊಟ್ಟರು.

ನಾಲ್ಕನೇ ಬಾರಿ ಗೆಲುವಿನ ಕನಸು
ಈ ಬಾರಿಯೂ ನೀರಾವರಿ ಯೋಜನೆಗಳು, ಸಮುದಾಯ ಭವನ, ಶಾಲೆ, ಕಾಲೇಜು, ರಸ್ತೆ ವಿಸ್ತರಣೆ ಮತ್ತಿತರ ಹಲವು ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಕೆಎಂಶಿ ನಾಲ್ಕನೇ ಗೆಲುವಿಗೆ ಹೋರಾಟ ನಡೆಸುತ್ತಿದ್ದಾರೆ. ಮಾಜಿ ಶಾಸಕ ಡಿ.ಬಿ. ಗಂಗಾಧರಪ್ಪ ಹೊರತುಪಡಿಸಿದರೆ, ಕ್ಷೇತ್ರದ ಮತದಾರರು ಮತ್ಯಾರನ್ನೂ ಎರಡಕ್ಕೂ ಹೆಚ್ಚು ಬಾರಿ ಗೆಲ್ಲಿಸಿರಲಿಲ್ಲ. ಹಾಗಾಗಿ ಕಳೆದ 14 ವರ್ಷದಿಂದ ಕ್ಷೇತ್ರದ ಶಾಸಕರಾಗಿರುವ ಶಿವಲಿಂಗೇಗೌಡರು, ಅರಸೀಕೆರೆಯನ್ನು ಶಿವಲಿಂಗೇಗೌಡರ ಭದ್ರಕೋಟೆಯೆಂಬಂತೆ ನಿರ್ಮಿಸಿಕೊಂಡು ಪುನಃ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಲಿಂಗಾಯತರ ಪ್ರಾಬಲ್ಯದೊಂದಿಗೆ ಸೇರಿದಂತೆ ಎಲ್ಲಾ ಸಮುದಾಯದವರೂ ಬೇಕು ಎಂದು ಸಾಬೀತುಪಡಿಸಿಕೊಂಡು ಬಂದಿರುವ ಕ್ಷೇತ್ರ ಅರಸೀಕೆರೆ ವಿಧಾನಸಭಾ ಕ್ಷೇತ್ರ. ಹ್ಯಾಟ್ರಿಕ್ ಗೆಲುವು ಪಡೆದು ಶಾಸಕರಾಗಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡ, ನಾಲ್ಕನೇ ಬಾರಿಯೂ ಸ್ಪರ್ಧೆ ಮಾಡುವುದು ಖಚಿತವಾಗಿದೆ.

ಆದರೆ ಈ ಬಾರಿ ಜೆಡಿಎಸ್‌ನಿಂದ ಅಲ್ಲ ಕಾಂಗ್ರೆಸ್‌ನಿಂದ ಎನ್ನುವುದೇ ಟ್ವಿಸ್ಟ್. ನಮಗೂ ನಮ್ಮ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನುತ್ತಲೇ ಸೈಲೆಂಟಾಗಿ, ಜೆಡಿಎಸ್ ಮನೆಯಿಂದ ಕಾಲ್ಕಿತ್ತಿರುವ ಶಿವಲಿಂಗೇಗೌಡ, ಕಾಂಗ್ರೆಸ್ ನಾಯಕರ ಜತೆ ಸಖ್ಯ ಬೆಳೆಸಿರುವುದು ಗುಟ್ಟಾಗಿ ಉಳಿದಿಲ್ಲ. ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಕಾರ್ಯಕ್ರಮಕ್ಕೆ ಅರಸೀಕೆರೆಯಿಂದ ಬಸ್‌ಗಳನ್ನು ಶಿವಲಿಂಗೇಗೌಡರೇ ಬುಕ್ ಮಾಡಿಕೊಟ್ಟಿದ್ದರು ಎನ್ನಲಾಗಿತ್ತು. ಇದನ್ನು ಶಿವಲಿಂಗೇಗೌಡರೂ ಖಚಿತಪಡಿಸಿದ್ದರು.

ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವುದು ಖಚಿತವಾಗಿದ್ದು, ದಳಪತಿಗಳು ಜೆಡಿಎಸ್‌ನಿಂದ ಪ್ರಬಲ ಫೈಟ್ ನೀಡುವ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜತೆಜತೆಗೇ ಶಿವಲಿಂಗೇಗೌಡರ ಮನವೊಲಿಸಲು ಇನ್ನಿಲ್ಲದ ಕಸರತ್ತನ್ನೂ ನಡೆಸುತ್ತಿದ್ದಾರೆ.

ಇತ್ತ ಬಿಜೆಪಿಯಿಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎನ್.ಆರ್. ಸಂತೋಷ್ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ. ಲಿಂಗಾಯತರೇ ಹೆಚ್ಚಾಗಿರುವ ಕ್ಷೇತ್ರದಲ್ಲಿ ಕಳೆದ ಎರಡು ವರ್ಷದಿಂದ ಪಕ್ಷ ಸಂಘಟನೆ ಮಾಡುತ್ತಾ, ಶಾಸಕ ಶಿವಲಿಂಗೇಗೌಡರ ವಿರುದ್ಧ ಸೆಣೆಸಾಡುತ್ತಿದ್ದಾರೆ. ಶಾಸಕರ ವಿರುದ್ದವಾಗಿ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುತ್ತ, ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಶಿವಲಿಂಗೇಗೌಡರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ, ನಮ್ಮ‌ ಪಕ್ಷದ ಆಭ್ಯರ್ಥಿ‌ ಸೋತರೂ ಪರವಾಗಿಲ್ಲ, ಶಿವಲಿಂಗೇಗೌಡರನ್ನು ಬಿಡಬಾರದು ಎಂದು ದಳಪತಿಗಳು ಶಪಥ ಮಾಡಿದರೆ, ವಿಜಯಲಕ್ಷ್ಮಿ ಯಾರ ಮಡಿಲಿಗೆ ಒಲಿಯುತ್ತಾಳೆ ಎನ್ನುವುದನ್ನು ಹೇಳುವುದು ಕಷ್ಟವಾಗುತ್ತದೆ.


2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಕೆ.ಎಂ.ಶಿವಲಿಂಗೇಗೌಡ(ಜೆಡಿಎಸ್)(ಕಾಂಗ್ರೆಸ್‌ನಿಂದ ಸ್ಪರ್ಧೆ ಸಾಧ್ಯತೆ)
2. ಶಶಿಧರ್, ಅಶೋಕ್ (ಕಾಂಗ್ರೆಸ್)
3. ಗಂಗಾಧರ್, ಬಿಳಿಚೌಡಯ್ಯ (ಜೆಡಿಎಸ್)
4. ಎನ್.ಆರ್. ಸಂತೋಷ್, ಜಿವಿಟಿ ಬಸವರಾಜ್(ಬಿಜೆಪಿ)

ಇದನ್ನೂ ಓದಿ | ಎಲೆಕ್ಷನ್‌ ಹವಾ | ಬೇಲೂರು | ಐತಿಹಾಸಿಕ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಅಭ್ಯರ್ಥಿಗೇ ಮಣೆ

Exit mobile version