Site icon Vistara News

ಎಲೆಕ್ಷನ್‌ ಹವಾ | ಹೊಳೆನರಸೀಪುರ | ಎಚ್‌.ಡಿ. ರೇವಣ್ಣ ವಿರುದ್ಧ ಪಂಚೆ ಕಟ್ಟಿ ನಿಲ್ಲುವವರಿಗಾಗಿ ಹುಡುಕಾಟ ಜಾರಿಯಲ್ಲಿದೆ !

Holenarasipura

ಪ್ರತಾಪ್‌ ಹಿರೀಸಾವೆ, ಹಾಸನ
ಒಂದು ಕಾಲದಲ್ಲಿ ಜೆಡಿಎಸ್‌,‌ ಕಾಂಗ್ರೆಸ್‌ ಜಿದ್ದಾಜಿದ್ದಿ ರಾಜಕಾರಣಕ್ಕೆ ಹೆಸರಾದದ್ದು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ. ದೇಶಕ್ಕೆ ಪ್ರಧಾನಿಯನ್ನು ಕೊಟ್ಟ ಹಾಗೂ ಇಬ್ಬರು ಮುಖ್ಯಮಂತ್ರಿಗಳ ರಾಜಕೀಯ ಬೆಳವಣಿಗೆಗೆ ಬೇರುಮಟ್ಟದ ಬಲ ನೀಡಿದ ಕ್ಷೇತ್ರ ಎಂಬ ಹೆಗ್ಗಳಿಕೆಯೂ ಇದೆ.

ಜೆಡಿಎಸ್‌ಗೆ ಕಟ್ಟಾವಿರೋಧಿ ಎನಿಸಿದ್ದ ಮಾಜಿ ಸಂಸದ ಜಿ. ಪುಟ್ಟಸ್ವಾಮಿಗೌಡ ನಿಧನದ ನಂತರ ಕಾಂಗ್ರೆಸ್‌ ಪ್ರಾಬಲ್ಯ ಜೆಡಿಎಸ್‌ ಅನ್ನು ಎದುರಿಸುವ ಮಟ್ಟಿಗೆ ಮೇಲೆ ಏಳಲೇ ಇಲ್ಲ.

ರಾಜಕೀಯ ಹಿನ್ನೆಲೆ

ಗೌಡರ ಗದ್ದಲ ಎಂದೇ ಹೆಸರಾಗಿದ್ದ ಹೊಳೆನರಸೀಪುರ ಕ್ಷೇತ್ರದಿಂದ ಹಳ್ಳಿಮೈಸೂರು ಹೋಬಳಿ, ಕ್ಷೇತ್ರ ವಿಂಗಡಣೆಯಿಂದ ಬೇರ್ಪಟ್ಟಿತು. ದುದ್ದ ಮತ್ತು ಶಾಂತಿಗ್ರಾಮ ಹೋಬಳಿ ಸೇರ್ಪಡೆಯೊಂದಿಗೆ ವಿಸ್ತಾರವಾದ ನಂತರವಂತೂ ಅಧಿಕ ಸಂಖ್ಯೆಯಲ್ಲಿ ಒಕ್ಕಲಿಗ ಮತದಾರರನ್ನು ಒಳಗೊಂಡ ಕ್ಷೇತ್ರವಾಯಿತು. ಇದರಿಂದ ಜೆಡಿಎಸ್‌ ಗೆಲ್ಲುವ ಕುದುರೆಯಾಗಿ ಮಾರ್ಪಟ್ಟಿದೆ.

ಎಚ್‌.ಡಿ. ದೇವೇಗೌಡರು 6 ಬಾರಿ, ಜಿ. ಪುಟ್ಟಸ್ವಾಮಿಗೌಡರು 1 ಬಾರಿ, ದೊಡ್ಡೇಗೌಡರು 1 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1994ರಿಂದ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ದೇವೇಗೌಡರ ಪುತ್ರ ಎಚ್‌.ಡಿ.ರೇವಣ್ಣ 1999ರಲ್ಲಿ ಒಮ್ಮೆ ಸೋತಿದ್ದು ಹೊರತುಪಡಿಸಿದರೆ, 5 ಬಾರಿ ಗೆಲುವು ಕಂಡಿದ್ದಾರೆ.

ಕಾಂಗ್ರೆಸ್‌ ಸಮರ್ಥ ನಾಯಕತ್ವದ ಕೊರತೆ ಎದುರಿಸುತ್ತಿದ್ದರೂ, ಪ್ರತಿಪಕ್ಷದವರಿಗೆ ತಗುಲಿದ ಗಾಳಿಯನ್ನೂ ತಾವು ಉಸಿರಾಡುವುದಿಲ್ಲ ಎನ್ನುವಷ್ಟು ಪರಸ್ಪರ ವಿರೋಧ ಇಂದಿಗೂ ಜೀವಂತ ಇದೆ. ಅಂದಿನ ಜನತಾಪಕ್ಷದ ದೇವೇಗೌಡರ ಪ್ರತಿಸ್ಪರ್ಧಿ ಎಂದೇ ಖ್ಯಾತಿ ಪಡೆದಿದ್ದ ಜಿ. ಪುಟ್ಟಸ್ವಾಮಿಗೌಡರು ಕಾಂಗ್ರೆಸ್‌ನ ಗಟ್ಟಿಗ ಎನಿಸಿದ್ದರು. 1989ರಲ್ಲಿ ಗೆಲುವು ಕಂಡಿದ್ದರು. ನಂತರ ಇಬ್ಬರೂ ಗೌಡರು ಲೋಕಸಭೆಗೆ ಇಳಿದಿದ್ದರಿಂದ ತೆರವಾದ ಸ್ಥಾನ ತುಂಬುವಲ್ಲಿ ದೇವೇಗೌಡರ ಪುತ್ರ ಎಚ್‌.ಡಿ.ರೇವಣ್ಣ ರಾಜಕೀಯ ರಂಗಪ್ರವೇಶಿಸಿದರು. ನಂತರದಲ್ಲಿ ವಸತಿ, ಲೋಕೋಪಯೋಗಿ, ಇಂಧನ ಸಚಿವ ಖಾತೆಗಳನ್ನು ಅಲಂಕರಿಸಿದ್ದರು. ಅಪ್ಪ ದೇವೇಗೌಡರು ಒಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ನಂತರ ಪ್ರಧಾನಿ ಹುದ್ದೆಗೂ ಏರಿದರು. ಸಹೋದರ ಎಚ್‌.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ದಿನಗಳನ್ನು ಸದುಪಯೋಗಪಡಿಸಿಕೊಂಡ ರೇವಣ್ಣ ಹಾಸನ ಜಿಲ್ಲೆ, ಅದರಲ್ಲೂ ಹೊಳೆನರಸೀಪುರದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದರು.

ಆದರೆ ಸ್ವಪಕ್ಷೀಯತೆ, ಸದಾ ಅಧಿಕಾರಿಗಳ ವಿರುದ್ದ ಗರಂ ಆಗಿರುತ್ತಿದ್ದದ್ದು ಹಾಗೂ ಯಾರನ್ನೂ ಬೆಳೆಸದೆ ಸಮಯಕ್ಕೆ ಬಳಸಿಕೊಂಡರು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಒಮ್ಮೆ ಸೋಲು ಅನುಭವಿಸಿದರು. ಅಂದು ಎಚ್‌.ಡಿ.ರೇವಣ್ಣ ವಿರುದ್ದ ಎ. ದೊಡ್ಡೇಗೌಡರನ್ನು ಅಭ್ಯರ್ಥಿಯಾಗಿ ಮಾಡುವ ಮೂಲಕ ಕಾಂಗ್ರೆಸ್‌ ತಂತ್ರಗಾರಿಕೆ ಹೆಣೆದಿತ್ತು. ಹಾಸನ ಲೋಕಸಭೆಗೆ ಸ್ಪರ್ಧಿಸಿದ್ದ ಎಚ್‌.ಡಿ. ದೇವೇಗೌಡರ ವಿರುದ್ದ ಕಾಂಗ್ರೆಸ್‌ನಿಂದ ಜಿ. ಪುಟ್ಟಸ್ವಾಮಿಗೌಡರು ಗೆಲುವು ಸಾಧಿಸಿದ್ದರು. 1999ನೇ ಇಸವಿ, ಅಪ್ಪ ಮಗನ ಸೋಲಿಗೆ ಕಾರಣವಾದ ಕಹಿ ನೆನಪು, ನಂತರದ ಸುದೀರ್ಘ ಗೆಲುವನ್ನೂ ಮಾಸುವಂತೆ ಮಾಡಿದೆ.‌

ಪರವೋ, ವಿರೋಧವೋ?

ಇಲ್ಲಿ ಪಕ್ಷ ನಿಷ್ಟೆ, ಜಾತಿ ಲೆಕ್ಕಾಚಾರಕ್ಕಿಂತ ದೇವೇಗೌಡರ ಕುಟುಂಬದ ವಿರುದ್ದ ಅಥವಾ ಪರ ಎಂಬುದಷ್ಟೆ ಸೋಲು, ಗೆಲುವಿನ ನಿರ್ಣಾಯಕ ಅಂಶ. ಮಾಜಿ ಸಂಸದ ಜಿ. ಪುಟ್ಟಸ್ವಾಮಿಗೌಡರ ಕಾಲಾನಂತರ ‘ಅಭಿವೃದ್ದಿಯೋ ಅನುಕಂಪವೋ’ ? ಎಂದು ಮತದಾರರಿಗೆ ಪ್ರಶ್ನೆ ಇತ್ತು. 2004ರಲ್ಲಿ ಕಾಂಗ್ರೆಸ್‌ನ ಉತ್ತರಾಧಿಕಾರಿಯಾಗಿ ಪುಟ್ಟಸ್ವಾಮಿಗೌಡರ ಸೊಸೆ ಎಸ್‌. ಅನುಪಮಾ ಸ್ಪರ್ಧೆಗಿಳಿದು ಪರಾಭವಗೊಂಡರು. 2008ರಲ್ಲಿ ಮತ್ತೊಮ್ಮೆ ಸ್ಪರ್ಧಿಸಿದರಾದರೂ, 13 ಸಾವಿರ ಮತಗಳ ಅಂತರದಲ್ಲಿ ಸೋಲನುಭವಿಸಿದರು. 2018ರಲ್ಲಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಮೋಟಾರ್‌ ಸಾರಿಗೆ ಇಲಾಖೆ ಬ್ರೇಕ್‌ ಇನ್ಸ್‌ಪೆಕ್ಟರ್‌ ಬಾಗೂರು ಮಂಜೇಗೌಡರನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣಕ್ಕಿಳಿಸಿದರೂ ರೇವಣ್ಣ ಎದುರು ಗೆಲ್ಲಲಾಗಲಿಲ್ಲ.

ಹೊಳೆನರಸೀಪುರಕ್ಕೊಂದು ಇರಲಿ !

ದೇಶಕ್ಕೆ, ರಾಜ್ಯಕ್ಕೆ ಯಾವುದೇ ಯೋಜನೆ ಬರಲಿ, ಯಾರದ್ದೇ ಸರ್ಕಾರ ಇರಲಿ, ಹೊಳೆ ನರಸೀಪುರಕ್ಕೊಂದು ಬೇಕು ಎಂದು ಎಚ್. ಡಿ. ರೇವಣ್ಣ ಕೇಳುತ್ತಾರೆ. ಇದರ ಕುರಿತು ರಾಜಕೀಯ ವಲಯದಲ್ಲಿ ಅನೇಕ ಜೋಕುಗಳೂ ಹರಿದಾಡುತ್ತವೆ. ಕರ್ನಾಟಕಕ್ಕೆ ಒಂದು ಹತ್ತು ಹಡಗು ಕೇಂದ್ರ ಸರ್ಕಾರದಿಂದ ಸಿಗುತ್ತದೆ ಎಂದರೆ ಹೊಳೆನರಸೀಪುರಕ್ಕೆ ಎರಡು ಕೊಡಿ ಎಂದು, ಅಲ್ಲಿ ಸಮುದ್ರ ಇದೆಯೋ ಇಲ್ಲವೋ ಎಂದೂ ಯೋಚಿಸದೆ ರೇವಣ್ಣ ಕೇಳುತ್ತಾರೆ ಎಂದು ಕ್ಷೇತ್ರದ ಕುರಿತು ಅವರ ವ್ಯಾಮೋಹವನ್ನು ಬಣ್ಣಿಸಲಾಗುತ್ತದೆ.

ಇದಕ್ಕೆ ಪುಷ್ಠಿ ಎನ್ನುವಂತೆ 2018ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಗಬೇಕಿದ್ದ ಮಂಜೇಗೌಡರು ಅಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಫೋನ್‌ ಮಾಡಿದ್ದ ಪ್ರಕರಣ ಎಲ್ಲೆಡೆ ಹರಿದಾಡಿತ್ತು. ಹೊಳೆನರಸೀಪುರದ ಮತದಾರರೊಬ್ಬರು ಈ ವೇಳೆ ಮಾತನಾಡಿದ್ದರು. ನೀವೆಲ್ಲ ಸೇರಿ ಮಂಜೇಗೌಡರನ್ನು ಗೆಲ್ಲಿಸಬೇಕು ಎಂದು ಸಿದ್ದರಾಮಯ್ಯ, ಆ ಮತದಾರರಿಗೆ ಹೇಳಿದರು. ಅದಕ್ಕೆ ಉತ್ತರಿಸಿದ ಮತದಾರ, ಎಲ್ಲಿಂದ ಗೆಲ್ಲಿಸೋದು? ಎಲ್ಲ ಯೋಜನೆಗಳನ್ನೂ ರೇವಣ್ಣನವರಿಗೆ ಕೊಟ್ಟಿದ್ದೀರ. ಅವರು ಕೇಳಿದಾಗಲೆಲ್ಲ ಅನುದಾನ, ಯೋಜನೆ ನೀಡಿ ಈಗ ಮಂಜೇಗೌಡರನ್ನು ಗೆಲ್ಲಿಸಿ ಎಂದರೆ ಹೇಗೆ? ಎಂದು ಪ್ರಶ್ನಿಸಿದ್ದರು. ಅಂದರೆ, ಪ್ರತಿಪಕ್ಷದಲ್ಲಿದ್ದರೂ ರೇವಣ್ಣ ತಮ್ಮ ಕ್ಷೇತ್ರಕ್ಕೆ ಅನುದಾನ ಕೊರತೆ ಆಗದಂತೆ ನೋಡಿಕೊಳ್ಳುತ್ತಾರೆ. ಅದು ಬಿ.ಎಸ್‌. ಯಡಿಯೂರಪ್ಪ ಅವರು ಸಿಎಂ ಆಗಿರಲಿ, ಸಿದ್ದರಾಮಯ್ಯ ಅವರೇ ಇರಲಿ, ರೇವಣ್ಣ ಅವರ ಕೆಲಸಗಳು ನಿಲ್ಲದಂತೆ ನಡೆಯುತ್ತದೆ ಎಂಬುದು ಬೆಂಗಳೂರಿನ ವಿಧಾನಸೌಧದ ಪಡಸಾಲೆಯಲ್ಲಿ ಕೇಳಿಬರುವ ಮಾತು.

ಬೇರೆ ಪಕ್ಷದವರ ಹುಡುಕಾಟ

ಮಾಜಿ ಪ್ರಧಾ‌ನಿ ಹೆಚ್.ಡಿ.‌ ದೇವೇಗೌಡರ ಕುಟುಂಬದ ಕ್ಷೇತ್ರ, ದೇವೇಗೌಡರು ಸ್ಪರ್ಧಿಸಿ, ರಾಷ್ಟ್ರ ರಾಜಕಾರಣಕ್ಕೆ ಬಂದ ಬಳಿಕ ಕ್ಷೇತ್ರವನ್ನು ಹೆಚ್.ಡಿ. ರೇವಣ್ಣನವರು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ರೇವಣ್ಣನವರೇ ಕ್ಷೇತ್ರದ ಶಾಸಕರಾಗಿದ್ದು, ಅವರ ಎದುರು ನಿಲ್ಲೋದಕ್ಕೆ ಬೇರೆ ಪಕ್ಷದ ನಾಯಕರು ಕ್ಯಾಂಡಿಡೇಟ್‌ಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಸೋತಿದ್ದ ಬಾಗೂರು ಮಂಜೇಗೌಡ, ತಮಗೆ ಹಾಸನ ಟಿಕೆಟ್‌ ಕೊಡಿ, ಹೊಳೆನರಸೀಪುರ ಬೇಡ ಎಂದು ಹೇಳುತ್ತಿದ್ದಾರೆ. ಇದರ ನಡುವೆಯೂ ಕೆಲವರು ಟಿಕೆಟ್‌ಗಾಗಿ ಪೈಪೋಟಿ ನಡೆದಿದೆಯಾದರೂ ರೇವಣ್ಣ ಅವರ ಎದುರು ಸ್ಪರ್ಧಿಸಲು ಸಮರ್ಥರ ಹುಡುಕಾಟ ನಡೆದಿದೆ. ಕಾಂಗ್ರೆಸ್ ಟಿಕೆಟ್ ಯಾರಿಗೆ ಲಭಿಸುತ್ತದೆ ಎನ್ನುವುದರ ಮೇಲೆ ಕ್ಷೇತ್ರದ ಚುನಾವಣಾ ವಾತಾವರಣ ನಿರ್ಧಾರವಾಗಲಿದೆ. ಕ್ಷೇತ್ರದಾದ್ಯಂತ ಏಕಮೇವ ಚಕ್ರಾಧಿಪತಿ ಹಾಗೆ ರೇವಣ್ಣ ಓಡಾಡಿಕೊಂಡು ಇದ್ದಾರೆ. ಬಿಜೆಪಿ ಅಭ್ಯರ್ಥಿ ಆಟಂಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವುದು ಜಗಜ್ಜಾಹೀರು. ಅಲ್ಲಿಯೂ ಪ್ರಮುಖವಾಗಿ ಇಬ್ಬರು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ.

2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಎಚ್‌.ಡಿ. ರೇವಣ್ಣ (ಜೆಡಿಎಸ್‌)
2. ಶ್ರೇಯಸ್ ಪಟೇಲ್,ಅನುಪಮ, ಬಾಗೂರು ಮಂಜೇಗೌಡ (ಕಾಂಗ್ರೆಸ್)
3. ಮಾಯಣ್ಣ, ಮಳಲಿ ನಾರಾಯಣ್(ಬಿಜೆಪಿ)

ಇದನ್ನೂ ಓದಿ | ಎಲೆಕ್ಷನ್‌ ಹವಾ | ಶ್ರವಣಬೆಳಗೊಳ | ಜೆಡಿಎಸ್‌ ನಿಷ್ಠೆ ಬಿಡದ ಮತದಾರರು, ಮನವೊಲಿಸುವುದೇ ಕಾಂಗ್ರೆಸ್‌?

Exit mobile version