Site icon Vistara News

Prajwal Revanna Case: ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ಇದ್ದರೆ ಡಿಲೀಟ್‌ ಮಾಡಿ, ಇಲ್ಲದಿದ್ದರೆ ಕ್ರಮ: SIT ಮುಖ್ಯಸ್ಥರ ಖಡಕ್‌ ವಾರ್ನಿಂಗ್

Prajwal Revanna Case Delete vulgar video and avoid legal action says SIT chief

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ನಿಮ್ಮ ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿದೆಯೇ? ಇದ್ದರೆ ಅದು ದೊಡ್ಡ ಅಪರಾಧವಾಗಿದೆ. ಈಗಲೇ ಅದನ್ನು ಡಿಲೀಟ್‌ ಮಾಡಿಬಿಡಿ. ಒಂದು ವೇಳೆ ನೀವು ಡಿಲೀಟ್‌ ಮಾಡದೇ ಇದ್ದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾದೀತು ಎಂದು ಎಸ್ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಅಧಿಕೃತ ಪ್ರಕಟಣೆ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಈಗ ದೇಶಾದ್ಯಂತ ವೈರಲ್ ಆಗಿದೆ. ಈಗಾಗಲೇ ಈ ಪ್ರಕರಣ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿಯನ್ನು ರಚನೆ ಮಾಡಿದೆ. ಇನ್ನು ವಿಡಿಯೊದಲ್ಲಿ ಹಾಸನ ಸೇರಿದಂತೆ ಹಲವು ಕಡೆಯ ಮಹಿಳೆಯರು ಇದ್ದಾರೆನ್ನಲಾಗಿದ್ದು, ಅವರ ಮುಖವನ್ನು ಬ್ಲರ್‌ ಮಾಡಲಾಗಿಲ್ಲ. ಹೀಗಾಗಿ ಈ ಕೇಸ್‌ ಮತ್ತಷ್ಟು ಜಟಿಲವಾಗಿದೆ.

ಈ ಸಂಬಂಧ ಎಸ್ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಪ್ರಕಟಣೆ ನೀಡಿದ್ದು, ಅಶ್ಲೀಲ ವಿಡಿಯೊವನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ‌ ಇಟ್ಟುಕೊಳ್ಳುವುದು ಸಹ ಅಪರಾಧ. ಯಾವುದೇ ವ್ಯಕ್ತಿ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ ಹಾಗೂ ಪ್ರಸಾರ ಮಾಡುವ ಕೆಲಸವನ್ನು ಮಾಡಿದರೆ, ಅಂಥ ವ್ಯಕ್ತಿಗಳ‌ನ್ನು ಸಂದೇಶ ರಚನೆಕಾರರು ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Prajwal Revanna Case Delete vulgar video and avoid legal action says SIT chief

ಡಿಲೀಟ್‌ ಮಾಡಿ ಕಾನೂನು ಕ್ರಮದಿಂದ ಪಾರಾಗಿ

ಅಶ್ಲೀಲ ವಿಡಿಯೊ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್‌ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್‌ ಮಾಡಿಬಿಡಿ. ಹೀಗೆ ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದಾರೆ.

ಅತ್ಯಾಚಾರ ಸಂತ್ರಸ್ತೆ ಅಪಹರಣ ಕೇಸ್; ರೇವಣ್ಣ ಮುಂದಿರುವ ಆಯ್ಕೆಗಳೇನು?

ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣ (Hassan Pen Drive Case) ಸಂಬಂಧ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ ಹೊತ್ತಿರುವ ಮಾಜಿ ಸಿಎಂ ಎಚ್.ಡಿ. ರೇವಣ್ಣ (HD Revanna) ವಿರುದ್ಧದ ಕೇಸ್‌ಗೆ ಸಂಬಂಧಪಟ್ಟಂತೆ ಅವರಿಗೆ ಮುಂದೆ ಇರುವ ಆಯ್ಕೆ ಏನು ಎಂಬ ಪ್ರಶ್ನೆ ಎದುರಾಗಿದೆ. ಅಲ್ಲದೆ, ತನ್ನ ಅಪಹರಣ ಮಾಡಿಸಿದ್ದು ರೇವಣ್ಣ ಅವರೇ ಎಂದು ಸಂತ್ರಸ್ತೆ ಬಾಯಿಬಿಟ್ಟರೆ ಪರಪ್ಪನ ಅಗ್ರಹಾರವೇ ಗತಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಎಚ್.ಡಿ. ರೇವಣ್ಣ ಅವರ ಮುಂದೆ ಇರುವ ಆಯ್ಕೆ ಎಂದರೆ, ಎಸ್ಐಟಿ ಕಸ್ಟಡಿ ಮುಗಿಯುವವರೆಗೂ ತನಿಖೆಯನ್ನು ಎದುರಿಸುವುದಾಗಿದೆ. ಎಸ್ಐಟಿ ಕಸ್ಟಡಿ ಅಂತ್ಯವಾಗುವ ವೇಳೆಗೆ ಜಾಮೀನು ಕೋರಿ ಅದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇದು ರಾಜಕೀಯ ಪ್ರೇರಿತ ಪ್ರಕರಣವಾಗಿದ್ದು, ಸಂತ್ರಸ್ತೆಯನ್ನು ನಾನು ಕಿಡ್ನ್ಯಾಪ್‌ ಮಾಡಿಲ್ಲ ಎಂದು ವಾದ ಮಂಡಿಸುವುದು. ಇದಕ್ಕೆ ಪೂರಕ ಸಾಕ್ಷ್ಯಾಧಾರವನ್ನು ಒದಗಿಸಲು ಪ್ರಯತ್ನ ಮಾಡುವುದು. ಈ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸದಂತೆ ಜಾಮೀನು ಪಡೆದು ಬಚಾವ್ ಆಗುವ ಲೆಕ್ಕಾಚಾರಗಳು ಸಹ ನಡೆದಿವೆ. ಹಾಗಾಗಿ ಈಗ ಅಪಹರಣಕ್ಕೊಳಗಾಗಿದ್ದಾರೆ ಎಂಬ ಸಂತ್ರಸ್ತೆಯು ನೀಡುವ ಹೇಳಿಕೆ ಎಚ್.ಡಿ. ರೇವಣ್ಣ ಅವರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಅವರ ಹೇಳಿಕೆ ವಿರುದ್ಧವಾಗಿದ್ದರೆ ರೇವಣ್ಣ ಅವರಿಗೆ ಜೈಲೇ ಗತಿಯಾಗಿದೆ.

ಕೋರ್ಟ್‌ನಲ್ಲಿ ವಿಫಲವಾದರೆ ಜೈಲು ಪಕ್ಕಾ

ಇನ್ನು ಎಚ್‌.ಡಿ. ರೇವಣ್ಣ ಅವರು ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮರ್ಪಕವಾಗಿ ವಾದ ಮಂಡಿಸುವಲ್ಲಿ ವಿಫಲರಾದಲ್ಲಿ ಹಾಗೂ ರೇವಣ್ಣ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದೆ ಎಂಬುದಾಗಿ ಕೋರ್ಟ್ ನಿರ್ಧಾರಕ್ಕೆ ಬಂದಲ್ಲಿ ಸದ್ಯಕ್ಕೆ ಜೈಲುವಾಸ ಆಗಲಿದೆ. ಬಳಿಕ ಮೇಲ್ದರ್ಜೆಯ ಕೋರ್ಟ್‌ಗೆ ರೇವಣ್ಣ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು.

ಪ್ರಜ್ವಲ್‌ ರೇವಣ್ಣ ಕೇಸಲ್ಲಿ ಎಚ್‌ಡಿಡಿ, ಎಚ್‌ಡಿಕೆ ಹೆಸರು ಬಳಸಂಗಿಲ್ಲ; ಕೋರ್ಟ್‌ ತಡೆಯಾಜ್ಞೆ

ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣ ಹಾಗೂ ಎಚ್.ಡಿ. ರೇವಣ್ಣ ವಿರುದ್ಧದ ಅಪಹರಣ ಕೇಸ್‌ಗೆ ಸಂಬಂಧಪಟ್ಟಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಬಳಸದಂತೆ ತಡೆಯಾಜ್ಞೆ ನೀಡಲಾಗಿದೆ.

ಉಭಯ ನಾಯಕರು ಸೆಷನ್ಸ್ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಪ್ರಕರಣಗಳ ಬಗ್ಗೆ ಸುದ್ದಿ ಪ್ರಸಾರ‌ ಮಾಡುವಾಗ ತಮ್ಮ ಹೆಸರುಗಳನ್ನು ಬಳಸದಂತೆ ತಡೆಯಾಜ್ಞೆಯನ್ನು ತಂದಿದ್ದಾರೆ. ಇಷ್ಟು ದಿನ ಪ್ರಕರಣದ ಸಂದರ್ಭದಲ್ಲಿ ದೇವೇಗೌಡರ ಕುಟುಂಬದ ಹೆಸರುಗಳನ್ನು ಕೆಲವರು ಪ್ರಸ್ತಾಪ ಮಾಡುತ್ತಿದ್ದರು. ಇದರಿಂದ ಅವರ ಕುಟುಂಬಕ್ಕೆ ತೀವ್ರ ಮುಜುಗರವಾಗಿತ್ತು. ಅಲ್ಲದೆ, ಎಚ್‌.ಡಿ. ಕುಮಾರಸ್ವಾಮಿ ಅವರು ನೇರವಾಗಿಯೇ ಇದರ ಬಗ್ಗೆ ಕಿಡಿಕಾರಿದ್ದರು.

ಅಪಹರಣ ಕೇಸ್‌ನಲ್ಲಿ ಸ್ವ-ಇಚ್ಚಾ ಹೇಳಿಕೆಗೆ ಸಹಿ ಹಾಕಲು NO ಎಂದ ಎಚ್‌.ಡಿ. ರೇವಣ್ಣ!

ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಸ್ವ-ಇಚ್ಛಾ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಈ ಸ್ವ-ಇಚ್ಛಾ ಹೇಳಿಕೆಗೆ ಸಹಿ ಹಾಕಲು ಎಚ್.ಡಿ. ರೇವಣ್ಣ (HD Revanna) ನಿರಾಕರಿಸಿದ್ದಾರೆ. ನಿಮಗೆ ಬೇಕಾದಂತೆ ಬರೆದುಕೊಂಡಿದ್ದೀರಾ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

ಎಚ್.ಡಿ. ರೇವಣ್ಣ ಅವರನ್ನು ಐದು ದಿನಗಳ ಕಸ್ಟಡಿಗೆ ನೀಡಿ ಭಾನುವಾರ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಅಪಹರಣ ಕೇಸ್‌ನಲ್ಲಿ ರೇವಣ್ಣ ಅವರಿಂದ ಸ್ವ-ಇಚ್ಛಾ ಹೇಳಿಕೆ ದಾಖಲು ಮಾಡಿಕೊಳ್ಳಲು ಮುಂದಾಗಲಾಗಿದೆ. ಈ ಸಂಬಂಧ ರೇವಣ್ಣ ಅವರಿಗೆ ಭಾನುವಾರವೇ ಒಂದಷ್ಟು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಪ್ರಯತ್ನವನ್ನು ಅಧಿಕಾರಿಗಳೂ ಮಾಡಿದ್ದರು.

ಅಪಹರಣ ಕೇಸ್‌ ಬಗ್ಗೆ ಎಚ್.ಡಿ. ರೇವಣ್ಣ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಸತೀಶ್ ಬಾಬು ಪರಿಚಯವಿದ್ದಾರಾ? ಅವರ ಮೂಲಕ ಕಿಡ್ನ್ಯಾಪ್ ಮಾಡಿಸಲು ನೀವೇ ತಿಳಿಸಿದ್ದಿರಾ? ಅಪಹರಣ ಮಾಡಿದ್ದರ ಹಿಂದಿನ ಉದ್ದೇಶ ಏನು ಎಂಬಿತ್ಯಾದಿ ವಿಷಯಗಳ ಬಗ್ಗೆ ಪ್ರಶ್ನೆ ಮಾಡಿ ಉತ್ತರವನ್ನು ಪಡೆದುಕೊಂಡಿದ್ದರು. ಕೇಸ್‌ಗೆ ಸಂಬಂಧಿಸಿ ಕೆಲವು ಸಾಂದರ್ಭಿಕ ಪ್ರಶ್ನೆಗಳಿಗೆ ಹೇಳಿಕೆ ಪಡೆದು ಅದನ್ನು ಪೇಪರ್‌ನಲ್ಲಿ ನಮೂದಿಸಿ ಸ್ವ – ಇಚ್ಛಾ ಹೇಳಿಕೆಗೆ ಸಹಿ ಮಾಡುವಂತೆ ಹೇಳಿದ್ದಾರೆ. ಆದರೆ, ಅದಕ್ಕೆ ಸಹಿ ಹಾಕುವುದಿಲ್ಲ ಎಂದ ಎಚ್‌.ಡಿ. ರೇವಣ್ಣ ಹೇಳಿದ್ದಾರೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಕೇಸ್‌ನ ಸಂತ್ರಸ್ತೆಯರಿಗಾಗಿ ಆರಂಭಿಸಿದ ಹೆಲ್ಪ್‌ಲೈನ್‌ಗೆ ಬರ್ತಿವೆ ಹಲವು ಕರೆಗಳು

ಅಪಹರಣಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ. ಆದರೂ ನೀವುಗಳು ಬರೆದುಕೊಂಡಿದ್ದೀರಿ. ನಾನೇ ಮಾಡಿಸಿರುವ ಹಾಗೆ ಬರೆದುಕೊಂಡಿದ್ದೀರಿ. ನಾನು ಯಾವ ಹೇಳಿಕೆಗೂ ಸಹಿ ಹಾಕಲ್ಲ ಎಂದು ರೇವಣ್ಣ ನಿರಾಕರಣೆ ಮಾಡಿದ್ದಾರೆ.

Exit mobile version