Site icon Vistara News

Prajwal Revanna Case: ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಜ್ವಲ್‌ ಬರುತ್ತಿದ್ದಂತೆ ಲಾಕ್‌! ಏನಿದು SIT ಸೂಚನೆ?

Prajwal Revanna Case Locked up as Prajwal arrives at Bengaluru airport

ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಎಸ್‌ಐಟಿ ತನಿಖೆ ಚುರುಕುಗೊಂಡಿದೆ. ಈಗಾಗಲೇ ಲುಕ್‌ ಔಟ್‌ ನೋಟಿಸ್‌ ನೀಡಿ ಬಿಸಿ ಮುಟ್ಟಿಸಲಾಗಿದ್ದರಿಂದ ಪ್ರಜ್ವಲ್‌ ರೇವಣ್ಣ ಯಾವ ಸಮಯದಲ್ಲಿ ಬೇಕಿದ್ದರೂ ಬೆಂಗಳೂರಿಗೆ ಬರಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಅಲ್ಲಿಯೇ ಲಾಕ್‌ ಮಾಡಲು ಪ್ಲ್ಯಾನ್‌ ಮಾಡಲಾಗಿದೆ.

ಪ್ರಜ್ವಲ್ ರೇವಣ್ಣ ಅವರಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿರುವ ಎಸ್‌ಐಟಿ ತಂಡ‌ವು ಏರ್‌ಪೋರ್ಟ್‌ ಸಿಬ್ಬಂದಿ, ಅಧಿಕಾರಿಗಳಿಗೆ ಸೂಚನೆ‌ ನೀಡಿದೆ. ಪ್ರಜ್ವಲ್ ರೇವಣ್ಣ ಕಂಡ ಕೂಡಲೇ ವಶಕ್ಕೆ ಪಡೆಯುವಂತೆ ಹೇಳಲಾಗಿದೆ. ಈ ಸಂಬಂಧ ಏರ್‌ಪೋರ್ಟ್‌ನ ಇಮಿಗ್ರೇಷನ್ ಅಧಿಕಾರಿಗಳಿಗೆ ಅಧಿಕಾರವನ್ನು ನೀಡಲಾಗಿದೆ. ವಿದೇಶದಿಂದ ಬಂದ ಕೂಡಲೇ ಇಮಿಗ್ರೇಷನ್‌ಗೆ ಪ್ರಜ್ವಲ್‌ ಹೋಗಬೇಕು. ಈ ವೇಳೆ ಅಲ್ಲಿಯೇ ವಶಕ್ಕೆ ಪಡೆದು ಸ್ಥಳೀಯ ಪೊಲೀಸರಿಗೆ ಹಸ್ತಾಂತರ ಮಾಡಲು ನಿರ್ದೇಶನ ನೀಡಲಾಗಿದೆ. ಇದಾದ ಬಳಿಕ ಏರ್‌ಪೋರ್ಟ್‌ ಪೋಲಿಸರು ಎಸ್‌.ಐ.ಟಿ. ಅಧಿಕಾರಿಗಳಿಗೆ ಪ್ರಜ್ವಲ್ ಅವರನ್ನು ವಶಕ್ಕೆ ನೀಡುತ್ತಾರೆ.

ಪ್ರಜ್ವಲ್‌ ವೀಸಾ, ಪಾಸ್‌ಪೋರ್ಟ್‌ ರವಾನೆ

ಈಗಾಗಲೇ ಪ್ರಜ್ವಲ್ ರೇವಣ್ಣ ಅವರ ಫೋಟೊ, ವೀಸಾ ಪಾಸ್‌ಪೋರ್ಟ್‌ನ ಮಾಹಿತಿಯನ್ನು ಏರ್‌ಪೋರ್ಟ್‌ನ ಸಿಬ್ಬಂದಿಗೆ ರವಾನೆ ಮಾಡಲಾಗಿದೆ. ಅಲ್ಲದೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪೊಲೀಸರು ಸಹ ಬೀಡುಬಿಟ್ಟಿದ್ದಾರೆ. ಸುತ್ತಮುತ್ತ ಹೈ ಅಲರ್ಟ್ ಆಗಿದ್ದು, ಪ್ರಜ್ವಲ್‌ ಬರುತ್ತಿದ್ದಂತೆ ಅಲ್ಲಿಯೇ ಹಿಡಿದು ಕರೆದೊಯ್ಯಲು ಮುಂದಾಗಲಾಗಿದೆ.

ಏನಿದು ಲುಕ್ ಔಟ್ ನೋಟಿಸ್? ಜಾರಿ ಅಧಿಕಾರ ಯಾರಿಗೆ? ಇದಕ್ಕೂ ತಡೆ ತರಬಹುದಾ?

ಲುಕ್‌ಔಟ್ ನೋಟಿಸ್‌ಗಳನ್ನು ಲುಕ್‌ಔಟ್ ಸರ್ಕ್ಯುಲರ್‌ಗಳು (LOC) ಎಂದೂ ಕರೆಯಲಾಗುತ್ತದೆ. ತಲೆ ಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆಹಚ್ಚಲು ಇವುಗಳನ್ನು ಇಶ್ಯೂ ಮಾಡಲಾಗುತ್ತದೆ. ಇದನ್ನು ದೇಶದ ವಲಸೆ ಬ್ಯೂರೋ (Bureau of Immigration) ಹಾಗೂ ಗೃಹ ಸಚಿವಾಲಯ (MHA) ಮಾತ್ರ ನೀಡಬಹುದು. ವಿಮಾನ ನಿಲ್ದಾಣ (Airport) ಮತ್ತಿತರ ಸಂಚಾರ ಪಾಯಿಂಟ್‌ಗಳಲ್ಲಿ ಕಾನೂನು ಜಾರಿ ಅಧಿಕಾರಿಗಳಿಗೆ ಅಗತ್ಯವಿರುವ ವ್ಯಕ್ತಿಗಳ ಪ್ರವೇಶ ಮತ್ತು ನಿರ್ಗಮನದ ಮೇಲೆ ನಿಗಾ ಇಡಲು, ಪರಿಣಾಮಕಾರಿಯಾಗಿ ತಡೆಗಟ್ಟಲು ಇದನ್ನು ಹೊರಡಿಸಲಾಗುತ್ತದೆ.

ಒಂದು ದೇಶದ ವಲಸೆ ಅಧಿಕಾರಿಗಳು ಯಾವುದೇ ತಲೆಮರೆಸಿಕೊಂಡಿರುವ ಅಪರಾಧಿಯ ವಿರುದ್ಧ ಲುಕ್‌ಔಟ್ ಸುತ್ತೋಲೆ ಹೊರಡಿಸಿದರೆ, ಆ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಬಹುದು. ಅಪರಾಧಿಗಳು ಇದರಿಂದಾಗಿ ವಿಮಾನ ನಿಲ್ದಾಣ ಅಥವಾ ಬಂದರಿನಲ್ಲಿ ಸಿಕ್ಕಿಬಿದ್ದಿರುವ ಸುದ್ದಿಯನ್ನು ನಾವು ಆಗಾಗ ಕೇಳುತ್ತಿರುತ್ತೇವೆ.

ಮಾರ್ಗಸೂಚಿಗಳು

ಭಾರತೀಯ ನಾಗರಿಕರಿಗೆ ಸಂಬಂಧಿಸಿದ ಈ ಸರ್ಕ್ಯುಲರ್‌ಗಳ ಮೂಲ ಮಾರ್ಗಸೂಚಿಗಳನ್ನು ಗೃಹ ವ್ಯವಹಾರಗಳ ಸಚಿವಾಲಯ (MHA) ಹೊರಡಿಸಿದೆ. ಈ ಮಾರ್ಗಸೂಚಿಗಳು ಹೀಗಿವೆ:

1) LOC ನೀಡುವ ವಿನಂತಿಯನ್ನು ಭಾರತ ಸರ್ಕಾರದ ಉಪ ಕಾರ್ಯದರ್ಶಿ, ರಾಜ್ಯ ಸರ್ಕಾರದ ಜಂಟಿ ಕಾರ್ಯದರ್ಶಿ, ಜಿಲ್ಲಾ ಮಟ್ಟದಲ್ಲಿ ಸಂಬಂಧಿಸಿದ ಪೊಲೀಸ್ ವರಿಷ್ಠಾಧಿಕಾರಿಗಳ ಶ್ರೇಣಿಯ ಅಧಿಕಾರಿಗಳು ಮಾತ್ರ ಮಾಡಬಹುದು.

2) ಯಾವುದೇ ಭಾರತೀಯ ವ್ಯಕ್ತಿಯ ವಿರುದ್ಧ ಎಲ್ಲ ವಲಸೆ ಚೆಕ್‌ಪೋಸ್ಟ್‌ಗಳಿಗೆ ಲುಕ್‌ಔಟ್ ನೋಟೀಸ್ ಅನ್ನು ಗೃಹ ಸಚಿವಾಲಯ ಸಿದ್ಧಪಡಿಸಿದ ಸ್ವರೂಪದಲ್ಲಿ ಮಾತ್ರ ನೀಡಬಹುದು.

3) ನೋಟಿಸ್ ನೀಡುವ ಏಜೆನ್ಸಿಯು ಆರೋಪಿಯ ಸಂಪೂರ್ಣ ಗುರುತಿನ ವಿವರಗಳನ್ನು ನಿಗದಿತ ನಮೂನೆಯಲ್ಲಿ ನೀಡಬೇಕು. ಆರೋಪಿಯ ಹೆಸರನ್ನು ಹೊರತುಪಡಿಸಿ ಮೂರಕ್ಕಿಂತ ಕಡಿಮೆ ಗುರುತಿನ ಮಾನದಂಡಗಳಿದ್ದಲ್ಲಿ LOC ನೀಡಲಾಗುವುದಿಲ್ಲ.

4) ಸಾಮಾನ್ಯವಾಗಿ ಲುಕ್‌ಔಟ್ ನೋಟಿಸ್ ವಿತರಣೆಯ ದಿನಾಂಕದಿಂದ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. ಏಜೆನ್ಸಿಯು ಈ ಸೂಚನೆಯ ಅವಧಿಯನ್ನು ಹೆಚ್ಚಿಸಲು ಬಯಸಿದರೆ, ಒಂದು ವರ್ಷ ಪೂರ್ಣಗೊಳ್ಳುವ ಮೊದಲು ಮಾಡಬಹುದು. ಒಂದು ವರ್ಷದ ನಿಗದಿತ ಅವಧಿಯೊಳಗೆ LOCಯನ್ನು ವಿಸ್ತರಿಸಲು ಯಾವುದೇ ವಿನಂತಿ ಮಾಡದಿದ್ದರೆ, LOC ಅನ್ನು ಅಮಾನತುಗೊಳಿಸಲು ಸಂಬಂಧಿಸಿದ ವಲಸೆ ಅಧಿಕಾರಿಗೆ ಅಧಿಕಾರವಿದೆ.

ಕೋರ್ಟ್ ಮತ್ತು ಇಂಟರ್‌ಪೋಲ್‌ನಿಂದ ಲುಕ್‌ಔಟ್ ನೋಟಿಸ್‌ಗಳನ್ನು ನೀಡಿದರೆ, ಲುಕ್‌ಔಟ್ ನೋಟಿಸ್‌ಗಳು ಒಂದು ವರ್ಷದೊಳಗೆ ಮುಕ್ತಾಯಗೊಳ್ಳುವುದಿಲ್ಲ.

ಲುಕ್‌ಔಟ್ ನೋಟಿಸ್‌ನ ದುರ್ಬಳಕೆ

ಹಲವು ಪ್ರಕರಣಗಳಲ್ಲಿ ಲುಕ್‌ಔಟ್‌ ನೋಟಿಸ್‌ ದುರ್ಬಳಕೆಯಾಗಿದೆ. ಯಾರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಯಾಗಿದೆಯೋ ಅವರಿಗೂ ಲುಕ್‌ಔಟ್ ನೋಟಿಸ್ ಬಗ್ಗೆ ಕೆಲವೊಮ್ಮ ತಿಳಿದಿರುವುದಿಲ್ಲ. ವ್ಯಕ್ತಿ ತನ್ನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿರುವುದನ್ನು ನಿರೀಕ್ಷಿಸದೇ ಇರಬಹುದು. ವಿಮಾನ ನಿಲ್ದಾಣ/ಗಡಿ ಇತ್ಯಾದಿಗಳಲ್ಲಿ ವಲಸೆ ಅಧಿಕಾರಿಗಳು ತಡೆದಾಗ ಅಥವಾ ಬಂಧಿಸಿದಾಗ ಮಾತ್ರ ಆರೋಪಿಗೆ ತಿಳಿಯುತ್ತದೆ.

ಆದರೆ ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಯುಗದಲ್ಲಿ ಹೀಗಾಗದು. ಕೆಲವೊಮ್ಮೆ ಲುಕ್‌ಔಟ್ ನೋಟಿಸ್‌ಗಳನ್ನು ಎಲ್ಲ ನಿಯಮಗಳ ಪಾಲನೆಯಾಗದೆ ನೀಡಲಾಗುತ್ತದೆ. ಈ ಪ್ರಕರಣಗಳು ಶಂಕಿತ ವ್ಯಕ್ತಿಗಳು, ದೇಶ ವಿರೋಧಿ ಅಂಶಗಳು ಇತ್ಯಾದಿಗಳೊಂದಿಗೆ ಸಂಬಂಧ ಹೊಂದಿವೆ. ಇಂತಹ ಪ್ರಕರಣಗಳಿಂದ ಬಾಧಿತರಾದ ಯಾವುದೇ ವ್ಯಕ್ತಿ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಪರಿಹಾರ ಪಡೆಯಲು ಮಾನವ ಹಕ್ಕುಗಳ ಆಯೋಗ ಅಥವಾ ಹೈಕೋರ್ಟ್‌ಗಳನ್ನು ಸಂಪರ್ಕಿಸಬಹುದು. ಆದರೆ ಈ ಪ್ರಕ್ರಿಯೆ ಹಲವು ವರ್ಷಗಳನ್ನು ತೆಗೆದುಕೊಳ್ಳಬಹುದು ಮತ್ತು ತುಂಬಾ ದುಬಾರಿಯಾಗಬಹುದು.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ವೈರಲ್‌ ಮಾಡಿದ್ದು ಸಚಿವ ಜಮೀರ್‌ ಅಹ್ಮದ್‌ ಆಪ್ತ?

ಲುಕ್‌ಔಟ್ ನೋಟಿಸ್‌ಗಳು ಅಪರಾಧಿಗಳಲ್ಲಿ ಭಯವನ್ನು ಉಂಟುಮಾಡುತ್ತವೆಯೇ? ಅನೇಕ ಪ್ರಕರಣಗಳಲ್ಲಿ ಅನೇಕ ಅಪರಾಧಿಗಳು ಮತ್ತು ಆರೋಪಿಗಳು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ವಿರುದ್ಧ ಭಾರತದಲ್ಲಿ ಲುಕ್‌ಔಟ್ ನೋಟಿಸ್‌ಗಳನ್ನು ಹೊರಡಿಸಲಾಗಿದೆ. ಆದರೆ ಇದರಿಂದ ಅವರು ವಿಚಲಿತರಾದಂತಿಲ್ಲ. ಇಲ್ಲಿಯವರೆಗೆ ಎಷ್ಟು ಲುಕ್‌ಔಟ್ ನೋಟಿಸ್‌ಗಳನ್ನು ನೀಡಲಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.

Exit mobile version