ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಅವರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ (Diplomatic Passport) ಅನ್ನು ರದ್ದು ಮಾಡಲು ಈಗಾಗಲೇ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ಪಾಸ್‌ಪೋರ್ಟ್ ರದ್ದು ಮಾಡದೇ ಇದ್ದರೆ ಪ್ರಜ್ವಲ್ ಬಂಧನ ಅಸಾಧ್ಯವಾಗಿದ್ದು, ಅವರು ದೇಶದಿಂದ ದೇಶಕ್ಕೆ ಆರಾಮವಾಗಿ ಸಂಚಾರ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸಂಕಷ್ಟಕ್ಕೆ ದೂಡಲು ಸಿದ್ದರಾಮಯ್ಯ ಪ್ಲ್ಯಾನ್ ಮಾಡಿದ್ದು, ಚೆಂಡನ್ನು ಕೇಂದ್ರ ಸರ್ಕಾರದ ಅಂಗಳಕ್ಕೆ ಹಾಕಿದ್ದಾರೆ.
ಒಂದು ವೇಳೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡರೆ ಏನಾಗುತ್ತದೆ? ಏನಿದು ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್? ಇದನ್ನು ಯಾರು ಯಾರು ಪಡೆದುಕೊಳ್ಳಬಹುದು? ಇದರ ಅವಧಿ ಎಷ್ಟು ವರ್ಷ ಇರುತ್ತದೆ? ಇದನ್ನು ಹೇಗೆ ಪಡೆದುಕೊಳ್ಳಬಹುದು? ವಿಶೇಷ ಸೌಲಭ್ಯಗಳು, ಮಾನ್ಯತೆಗಳು ಏನು ಎಂಬ ವಿವರವನ್ನು ಇಲ್ಲಿ ನೀಡಲಾಗಿದೆ.
ಏನಿದು ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್? (diplomatic passport)
ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಅನ್ನು ಟೈಪ್ ಡಿ (Type D) ಪಾಸ್ ಪೋರ್ಟ್ ಎಂದೂ ಕರೆಯುತ್ತಾರೆ. ಭಾರತೀಯ ರಾಜತಾಂತ್ರಿಕರು, ಸರ್ಕಾರಿ ಅಧಿಕಾರಿಗಳು ಹಾಗೂ ಭಾರತ ಸರ್ಕಾರದ ಪರ ಪ್ರತಿನಿಧಿಸುವ ವ್ಯಕ್ತಿಗಳಿಗೆ ಇದನ್ನು ನೀಡಲಾಗುತ್ತದೆ. ಭಾರತ ಸರ್ಕಾರದ ಪರ ಅಧಿಕೃತ ವಿದೇಶ ಪ್ರಯಾಣದ ಸಂದರ್ಭ ಬಳಸುತ್ತಾರೆ.
ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ 28 ಪುಟಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯ ಪಾಸ್‌ಪೋರ್ಟ್ ಕಡು ನೀಲಿ ಕವರ್ ಅನ್ನು ಹೊಂದಿದ್ದರೆ, ಇದು ಮರೂನ್ ಬಣ್ಣದಲ್ಲಿ ಇರುತ್ತದೆ. ಸಾಮಾನ್ಯ ಪಾಸ್‌ಪೋರ್ಟ್ ವಯಸ್ಕರಿಗೆ 10 ವರ್ಷ ಹಾಗೂ ಅಪ್ರಾಪ್ತರಿಗೆ 5 ವರ್ಷ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ 5 ಅಥವಾ ಕಡಿಮೆ ಅವಧಿಗೆ ಬಿಡುಗಡೆಯಾಗುತ್ತದೆ.
ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
ದಿಲ್ಲಿಯಲ್ಲಿ ವಿದೇಶಾಂಗ ಇಲಾಖೆಯ ಪಾಸ್‌ಪೋರ್ಟ್ ಸೇವಾ ಪ್ರೋಗ್ರಾಮ್ ವಿಭಾಗದಲ್ಲಿ ಮಾತ್ರ ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ಬಗ್ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಪ್ರಯೋಜನವೇನು?
ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಭಾರತ ಸರ್ಕಾರವನ್ನು ರಾಜತಾಂತ್ರಿಕ ಉದ್ದೇಶಗಳಿಗೆ ವಿದೇಶಗಳಲ್ಲಿ ಪ್ರತಿನಿಧಿಸುವವರಿಗೆ ಅಧಿಕೃತ ಗುರುತಿನ ದೃಢೀಕರಣವಾಗಿ ಬಳಕೆಯಾಗುತ್ತದೆ. ಇದು ಅವರಿಗೆ ಗುರುತು ಮತ್ತು ಅಧಿಕೃತ ಸ್ಥಾನಮಾನವನ್ನು ಒದಗಿಸುತ್ತದೆ.
ಇದನ್ನೂ ಓದಿ: Hassan Pen Drive Case: SIT ತನಿಖೆಗೆ ಸಂತ್ರಸ್ತೆಯರ ಹಿಂದೇಟು; ವಿಚಾರಣೆ ಅಂತ ತೊಂದರೆ ಕೊಟ್ಟರೆ ಸೂಸೈಡ್ ಬೆದರಿಕೆ!
ಅರೆಸ್ಟ್ ಮಾಡುವುದು ಸಾಧ್ಯವೇ ಇಲ್ಲ
ಈ ಪಾಸ್‌ಪೋರ್ಟ್ ಇರುವವರಿಗೆ ಅಂತಾರಾಷ್ಟ್ರೀಯ ಕಾನೂನು ಅಡಿಯಲ್ಲಿ ಕೆಲವು ವಿಶೇಷ ಸೌಲಭ್ಯಗಳು, ಮಾನ್ಯತೆಗಳು ಸಿಗುತ್ತದೆ. ಆತಿಥೇಯ ರಾಷ್ಟ್ರದಲ್ಲಿ ಅರೆಸ್ಟ್, ವಶಕ್ಕೆ ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ.
ವೀಸಾ ಸೌಲಭ್ಯ
ಈ ಪಾಸ್‌ಪೋರ್ಟ್ ಇರುವವರಿಗೆ ಹಲವು ದೇಶಗಳು ವೀಸಾ ವಿಸ್ತರಿಸುತ್ತವೆ. ವೀಸಾ ಮನ್ನಾ ಸೌಲಭ್ಯವೂ ಸಿಗಬಹುದು. ಅಧಿಕೃತ ಪ್ರವಾಸ ಕಾರ್ಯಕ್ರಮಗಳು ಸುಗಮವಾಗುತ್ತದೆ. ಭಾರತೀಯ ರಾಯಭಾರ ಕಚೇರಿಯ ಸಂಪರ್ಕ ಸೌಲಭ್ಯಗಳು ಸಿಗುತ್ತವೆ.
ಪ್ರಜ್ವಲ್‌ಗೆ ಮತ್ತಷ್ಟು ಸಂಕಷ್ಟ ಶುರು
ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಪ್ರಕರಣವು ರಾಜಕೀಯವಾಗಿ ಭಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತೊಂದು ದಾಳ ಉರುಳಿಸಿದ್ದಾರೆ. ಪ್ರಜ್ವಲ್ ವಿದೇಶದಲ್ಲಿ ಇರುವುದರಿಂದ ಅವರನ್ನು ಬಂಧಿಸಿ ಎಸ್ಐಟಿ ತನಿಖೆಗೆ ಒಪ್ಪಿಸಬೇಕಿದೆ. ಹೀಗಾಗಿ ಅವರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಅನ್ನು ಕೇಂದ್ರ ರದ್ದು ಮಾಡಬೇಕು ಎಂದು ಕೋರುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ. ಈಗ ಕೇಂದ್ರ ಸರ್ಕಾರ ಮುಂದಿನ ಕ್ರಮವನ್ನು ಕೈಗೊಳ್ಳದೇ ಇದ್ದಲ್ಲಿ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಅಸ್ತ್ರವನ್ನಾಗಿ ಮಾಡಿಕೊಳ್ಳಲು ತೀರ್ಮಾನಿಸಿದೆ. ಹೀಗಾಗಿ ಕಾಂಗ್ರೆಸ್‌ಗೆ ಅಸ್ತ್ರ ಕೊಡದಿರಲು ಕೇಂದ್ರ ಸರ್ಕಾರವು ಪ್ರಜ್ವಲ್ ರೇವಣ್ಣ ಅವರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಅನ್ನು ರದ್ದು ಮಾಡುವ ಸಂಭವ ಜಾಸ್ತಿ ಇದೆ ಎನ್ನಲಾಗಿದೆ.
ಇದನ್ನೂ ಓದಿ: Hassan Pen Drive Case: ವಿಚಾರಣೆಗೆ ಹಾಜರಾಗಲು 7 ದಿನ ಸಮಯ ಕೇಳಿದ ಪ್ರಜ್ವಲ್; ಶೀಘ್ರ ಸತ್ಯ ಹೊರಬರಲಿದೆ ಎಂದು ಟ್ವೀಟ್!
ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದಾದರೆ ಕೂಡಲೇ ಬಂಧನ!
ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ಗೆ ಅಂತಾರಾಷ್ಟ್ರೀಯ ಕಾನೂನಿನ ಮಾನ್ಯತೆ ಇರುತ್ತದೆ. ಇದನ್ನು ಹೊಂದಿರುವವರು ಗಣ್ಯ ವ್ಯಕ್ತಿಗಳಾಗಿರುತ್ತಾರೆ. ಹೀಗಾಗಿ ಅವರು ಯಾವ ದೇಶದಲ್ಲಿದ್ದರೂ ಆತಿಥೇಯ ರಾಷ್ಟ್ರಗಳಲ್ಲಿ ಬಂಧನ ಮಾಡುವುದು, ವಶಕ್ಕೆ ತೆಗೆದುಕೊಳ್ಳುವಂತಹ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರವು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಅಂತಹ ವ್ಯಕ್ತಿಯ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಅನ್ನು ರದ್ದು ಮಾಡಿ, ಕ್ರಮಕ್ಕೆ ಆ ರಾಷ್ಟ್ರಗಳಿಗೆ ಮನವಿ ಮಾಡಿದಲ್ಲಿ ಬಂಧನ ಸಾಧ್ಯವಿದೆ. ಹೀಗಾಗಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪ್ರಜ್ವಲ್ ಭವಿಷ್ಯ ನಿಂತಿದೆ.