ಹಾಸನ: ಆಟೋದಲ್ಲಿ ಬಂದ ಹಂತಕರು ಹಾಡಹಗಲೇ ನಗರಸಭಾ ಸದಸ್ಯರೊಬ್ಬರನ್ನು ಲಾಂಗು ಮಚ್ಚುಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ ನಂತರ ಇದೀಗ ಹಾಸನ ನಗರ ಸಂಪೂರ್ಣ ಸ್ತಬ್ಧವಾಗಿದೆ. 16ನೇ ವಾರ್ಡ್ ಶಾಂತಿನಗರದ ಜೆಡಿಎಸ್ ನಗರಸಭೆ ಸದಸ್ಯ ಪ್ರಶಾಂತ್ ಹತ್ಯೆ ನಂತರ ಹಲ್ಲೆ ನಡೆದ ಸ್ಥಳದಲ್ಲಿ ರಸ್ತೆ ಬಂದ್ ಮಾಡಿ ಪೊಲೀಸರು ಭದ್ರತೆ ಕಲ್ಪಿಸಿದ್ದಾರೆ, ಪ್ರಕರಣದಲ್ಲಿ ಪೂರ್ಣಚಂದ್ರ ಎಂಬವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
2018ರಲ್ಲಿ ನಡೆದಿದ್ದ ನಗರಸಭೆ ಚುನಾವಣೆಯಲ್ಲಿ ಅತಿಹೆಚ್ಚು ಮತಗಳ ಅಂತರದಿಂದ ಪ್ರಶಾಂತ್ ಗೆದ್ದಿದ್ದರು. ಪ್ರಶಾಂತ್ ತಂದೆ ಹಾ.ರಾ.ನಾಗರಾಜ್ ಕೂಡ 2005ರಲ್ಲಿ ಭೀಕರವಾಗಿ ಕೊಲೆಯಾಗಿದ್ದರು. ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರೂ ಆಗಿದ್ದರು.
ಹಾ.ರಾ. ಹತ್ಯೆ ದ್ವೇಷದ ಹಿನ್ನೆಲೆಯಲ್ಲಿ ಉದ್ಯಮಿ ಗ್ಯಾರಳ್ಳಿ ತಮ್ಮಯ್ಯ ಹತ್ಯೆ ಪ್ರಕರಣದಲ್ಲಿ ಪ್ರಶಾಂತ್ ಆರೋಪಿಯಾಗಿದ್ದರು. ಕೇಸ್ ಖುಲಾಸೆಯಾದ ಬಳಿಕ ಯಾವುದೇ ಗಲಾಟೆಗಳಿಲ್ಲದೆ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್, 16ನೇ ವಾರ್ಡ್ ನಿಂದ ನಗರಸಭೆಗೆ ಜೆಡಿಎಸ್ ನಿಂದ ಆಯ್ಕೆಯಾಗಿದ್ದರು. ಆದರೆ ಬುಧವಾರ ನಾಗರಾಜ್‌ರನ್ನು ಅಟ್ಟಾಡಿಸಿ ಕೊಂದು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ | ಅಮೆರಿಕದ ಆಸ್ಪತ್ರೆಯ ಆವರಣದಲ್ಲಿ ಗುಂಡಿನ ದಾಳಿಗೆ 5 ಸಾವು, ಶೂಟರ್ ಹತ್ಯೆ
ಮಾರುಕಟ್ಟೆಯಲ್ಲಿ ಹೂ ಮತ್ತು ಹಣ್ಣಿನ ಅಂಗಡಿ ಹೊಂದಿದ್ದ ಪ್ರಶಾಂತ್, ಹೂ ಹಣ್ಣಿನ ವ್ಯಾಪಾರಿಗಳ ಸಂಘದ ಅಧ್ಯಕ್ಷರೂ ಆಗಿದ್ದರು. ಪ್ರಶಾಂತ್ ಹತ್ಯೆಗೆ ನೂರಾರು ವರ್ತಕರು ನಗರದ ಕಟ್ಟಿನಕೆರೆ ಮಾರುಕಟ್ಟೆ ಬಂದ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಡಾ.ರಾಜ್ ಕುಟುಂಬಕ್ಕೆ ಆಪ್ತವಾಗಿದ್ದ ಪ್ರಶಾಂತ್
ಪ್ರಶಾಂತ ತಂದೆ ಹಾ.ರಾ. ನಾಗರಾಜ್ ಇದ್ದ ಕಾಲದಲ್ಲಿ ರಾಜ್ ಕುಟುಂಬದ ಜೊತೆ ಒಡನಾಟ ಹೊಂದಿದ್ದ ಹಾ.ರಾ. ನಾ ಕುಟುಂಬ, ಪುನೀತ್ ರಾಜ್‌ಕುಮಾರ್ ಹಾಸನಕ್ಕೆ ಬರುತ್ತಿದ್ದಾಗಲೆಲ್ಲಾ ಹಾ.ರಾ.ನಾ ಕುಟುಂಬ ಭೇಟಿ ಮಾಡುತ್ತಿದ್ದರು. ರಾಜ್ ಕುಮಾರ್ ಅಭಿಮಾನದ ಮೇಲೆ ತಮ್ಮ ಮೂರನೇ ಮಗನಿಗೆ ಮಯೂರ ಎಂದು ಹಾ.ರಾ. ನಾಗರಾಜ್ ಇಟ್ಟಿದ್ದರು. ಆದರೆ ಡಾ. ಪುನೀತ್ ರಾಜ್ ಕುಮಾರ್ ಸಾವಿನಿಂದ ನೊಂದು ಐದು ತಿಂಗಳ ಹಿಂದೆ ಮಯೂರ ಆತ್ಮಹತ್ಯೆ ಮಾಡಿಕೊಂಡಿದ್ದ.
ಪತ್ನಿಯಿಂದ ದೂರು
ನಗರದ ಬೆಸ್ತರ ಬೀದಿಯ ಪೂರ್ಣ ಚಂದ್ರ ಎಂಬಾತನಿಂದ ಪ್ರಶಾಂತ್ ಹತ್ಯೆ ಆಗಿದೆ ಎಂದು ಪ್ರಶಾಂತ್ ಪತ್ನಿ ಸೌಮ್ಯರಿಂದ ನಗರದ ಪೆನ್ಷನ್ ಮೊಹಲ್ಲಾ ಠಾಣೆಗೆ ದೂರು ನೀಡಿದ್ದಾರೆ. ಪೂರ್ಣಚಂದ್ರ ಮತ್ತು ಆತನ ಸ್ನೇಹಿತರು ಸೇರಿ ತನ್ನ ಪತಿಯನ್ನು ಕೊಂದಿದ್ದಾರೆ. ಹಳದಿ ಬಣ್ಣದ ಟಾಪ್ ಹೊಂದಿದ ಕೆ.ಎ.46, 6388 ಪ್ಯಾಸೆಂಜರ್ ಆಟೋದಲ್ಲಿ ಹಿಂಬಾಲಿಸಿ ಬಂದು ಹತ್ಯೆ ಮಾಡಿರುವುದಾಗಿ ಆರೋಪಿಸಿದ್ದಾರೆ.
ಕೊಲೆ ಆರೋಪಿಗಳ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸಿ ಎಂದು ಪತ್ನಿ ದೂರು ನೀಡಿದ್ದಾರೆ. ಪ್ರಶಾಂತ್ ಪತ್ನಿ ದೂರು ಆದರಿಸಿ ಪೂರ್ಣ ಮತ್ತು ಇತರರಿಂದ ಹತ್ಯೆಯಾಗಿದೆ ಎಂದು ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಸಿಪಿಐಗೆ ಕಡ್ಡಾಯ ರಜೆ
ನಗರಸಭೆ ಸದಸ್ಯ ಪ್ರಶಾಂತ್ ಹತ್ಯೆ ನಂತರ ಮಾಜಿ ಸಚಿವ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದ ಸಿಪಿಐ ರೇಣುಕಾ ಪ್ರಸಾದ್ ಅವರನ್ನು ಸರ್ಕಾರ ಕಡ್ಡಾಯ ರಜೆ ಮೇಲೆ ಕಳಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಿಪಿಐ ವಿಫಲರಾಗಿದ್ದಾರೆ ಎಂದು ರೇವಣ್ಣ ಆರೋಪಿಸಿದ್ದರು. ಘಟನೆಯ ಕುರಿತು ರೇಣುಕಾ ಪ್ರಸಾದ್ ಅವರಿಗೆ ನೋಟಿಸ್ ಜತೆಗೆ ಕಡ್ಡಾಯ ರಜೆ ಮೇಲೆ ಕಳಿಸಲಾಗಿದೆ.
ಇದನ್ನೂ ಓದಿ | ಹಾಸನ ನಗರಸಭೆ ಸದಸ್ಯ ಭೀಕರ ಹತ್ಯೆ! ಹಳೇ ದುಶ್ಮನಿ ಕಾರಣ ಎಂದು ಪೊಲೀಸರ ಶಂಕೆ