ಹಾವೇರಿ: ಹಾವೇರಿಯ ಬ್ಯಾಡಗಿಯಲ್ಲಿ (Haveri Accident) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident), ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂದಿನಿಂದ ಗುದ್ದಿದ ಪರಿಣಾಮ 13 ಜನರು ಮೃತಪಟ್ಟಿದ್ದಾರೆ. ಈ ದುರಂತ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ನಿಂತಿದ್ದ ಲಾರಿಗೆ ಗುದ್ದಿದ ಪರಿಣಾಮ ಟಿಟಿ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ವಾಹನದಲ್ಲಿ ಮೃತದೇಹಗಳು ಅಪ್ಪಚ್ಚಿಯಾಗಿವೆ. ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಹೊರ ತೆಗೆಯುತ್ತಿದ್ದಾರೆ. ಪೊಲೀಸರು ಮೃತರ ಹಿನ್ನಲೆ ಪತ್ತೆ ಹಚ್ಚುತ್ತಿದ್ದಾರೆ.
ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ. ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ಮಾಯಮ್ಮನ ದರ್ಶನ ಮಾಡಿಕೊಂದು ಸ್ವಗ್ರಾಮಕ್ಕೆ ವಾಪಾಸಾಗುವಾಗ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟ 13 ಮಂದಿಯಲ್ಲಿ ಒಂದು ಮಗು ಸಹ ಇದೆ.
ಸ್ಥಳಕ್ಕೆ ಹಾವೇರಿ ಎಸ್‌ಪಿ ಅಂಶುಕುಮಾರ ಭೇಟಿ ನೀಡಿದ್ದಾರೆ. ಮೃತದೇಹಗಳನ್ನು ಟಿಟಿ ವಾಹನದಿಂದ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಹೊರತೆಗೆದಿದ್ದು, ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 13 ಜನರ ಸಾವಿನ ಸುದ್ದಿ ಕೇಳಿ ಎಮ್ಮೆಹಟ್ಟಿ ಗ್ರಾಮದ ಜನತೆ ಶಾಕ್ ಆಗಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ರೈಲು ಬಡಿದು ವ್ಯಕ್ತಿ ಸಾವು
ಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರದಲ್ಲಿ ರೈಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟರೆ, ರಾಯಚೂರಿನಲ್ಲಿ ಟಿಪ್ಪರ್ ವಾಹನವು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಕಾಲು ಮುರಿದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಹೊರವಲಯದ ಮುತ್ಸಂದ್ರ ಬಳಿ ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರ ಹೊರವಲಯದ ಮುತ್ಸಂದ್ರ ರೈಲ್ವೆ ಹಳಿ ಮೇಲೆ ಮಾರಪ್ಪ (45) ಎಂಬುವವರ ಮೃತ ದೇಹ ಪತ್ತೆಯಾಗಿದೆ.
ಮಾರಪ್ಪ ನಗರದ ಬಸವ ಭವನ ಬಳಿ ಮೀನಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಮುಂಜಾನೆ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ರೈಲು ಡಿಕ್ಕಿ ಹೊಡೆದು ಸಾವನ್ನಪಿರುವ ಶಂಕೆ ವ್ಯಕ್ತವಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ರೈಲ್ವೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: Yelahanka Railway : ರೈಲು ಬೋಗಿಯ ಕಸದ ಬುಟ್ಟಿಯಲ್ಲಿತ್ತು ನವಜಾತ ಶಿಶು; ನರಳಾಡಿ ಪ್ರಾಣಬಿಟ್ಟ ಕಂದ