ಹಾವೇರಿ: ಹಾವೇರಿಯಲ್ಲಿ ಕಳ್ಳತನದ ಆರೋಪಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ (Assault Case) ನಡೆಸಲಾಗಿದ್ದು, ಗಾಯಾಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿದೆ. ನಾಗೇಂದ್ರನಮಟ್ಟಿಯ ನಿವಾಸಿ ಸುದೀಪ್ ಎಂಬಾತನ ಮೇಲೆ ಹಲ್ಲೆ ನಡೆದಿದೆ.
ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಹಾವೇರಿಯ ವೀರಾಪುರ ಆಸ್ಪತ್ರೆ ಬಳಿ ಸುದೀಪ್ ಮೇಲೆ ಕೊಡಲಿ, ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಮಧ್ಯರಾತ್ರಿ ಪಾನ್ ಶಾಪ್‌ಗೆ ಬಂದಿದ್ದ ಸುದೀಪ್ ಮೇಲೆ ಬೈಕ್‌ನಲ್ಲಿ ಬಂದಿದ್ದ ಐದಾರು ಜನರ ತಂಡದಿಂದ ಏಕಾಏಕಿ ದಾಳಿ ನಡೆಸಿದ್ದಾರೆ. ಕೊಡಲಿಯಿಂದ ತಲೆ, ಕುತ್ತಿಗೆ ಸೇರಿ ಹಲವು ಕಡೆ ಹೊಡೆದಿದ್ದಾರೆ. ಮಾರಕಾಸ್ತ್ರಗಳಿಂದ ಹೊಡೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಾವೇರಿ ಶಹರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಅಬ್ದುಲ್, ರೆಬೆಲ್, ಬಬಲು, ಅಲ್ಲು, ಸಾಹಿಲ್ ಹಾಗೂ ಮತ್ತೋರ್ವನ ಮೇಲೆ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಹಣದಾಸೆಗೆ ಬಿದ್ದು ಕೋಟ್ಯಂತರ ರೂ. ಕಳೆದುಕೊಂಡ ವಿದ್ಯಾವಂತರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಮಹಾ ದೋಖಾ ನಡೆದಿದೆ. ಹಣದ ಆಸೆಗೆ ಬಿದ್ದು ವಿದ್ಯಾವಂತರು ಕೋಟ್ಯಾಂತರ ಹಣ ಕಳೆದುಕೊಂಡಿದ್ದಾರೆ. ಮೈಸೂರು ನಗರದಲ್ಲಿ 32 ಕೋಟಿ ರೂ.ಗೂ ಅಧಿಕ ಆನ್ ಲೈನ್ ದೋಖಾ ನಡೆದಿದೆ. ಪ್ರಮುಖವಾಗಿ ಟ್ರೇಡಿಂಗ್‌ನಲ್ಲಿ ಹಣ ಡಬ್ಬಲ್ ಆಸೆಗೆ ಬಿದ್ದು ಕೋಟಿ ಕೋಟಿ ಹಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಸೈಬರ್ ವಂಚಕರು ಕೇವಲ ಆರು ತಿಂಗಳಲ್ಲಿ 32 ಕೋಟಿ ಹಣ ಲಪಾಟಯಿಸಿದ್ದಾರೆ.
ಮೈಸೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ
ಮೈಸೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಒಂದೇ ಕುಟುಂಬದ ನಾಲ್ವರಿಂದ 80ಕ್ಕೂ ಪ್ರಕರಣಗಳನ್ನು ಬೇಧಿಸಿದ್ದು, ಬರೋಬ್ಬರಿ 45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ಮೂರು ಬೈಕ್, ಎರಡು ಪಿಸ್ತೂಲ್ ಜತೆಗೆ 4.6 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣ ನಡೆದಿತ್ತು. ತನಿಖೆಗೆ ಮುಂದಾದ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದರು. ಆರೋಪಿ ನೀಡಿದ ಸುಳಿವಿನ ಮೇರೆಗೆ ಕಳ್ಳರ ಜಾಲ ಬಯಲಾಗಿದೆ. ಮೈಸೂರು, ಮಂಡ್ಯ, ದಕ್ಷಿಣ ಕನ್ನಡ, ಕೊಡಗು ಭಾಗದಲ್ಲಿ ಕಳ್ಳತನ ನಡೆದಿದೆ. ಬಂಧಿತ ನಾಲ್ವರು ಆರೋಪಿಗಳು ಮೈಸೂರು ನಗರದವರು. ನಾಲ್ವರಲ್ಲಿ ಒಬ್ಬನ ಮೇಲೆ 3 ಪ್ರಕರಣ, ಮತ್ತೊಬ್ಬನ ಮೇಲೆ 36 ಪ್ರಕರಣ ಹಾಗೂ ಇನ್ನೊಬ್ಬನ ಮೇಲೆ 17 ಪ್ರಕರಣ ದಾಖಲಾಗಿದೆ. ಗಾಂಜಾ ಹೊಂದಿದ್ದ ಆರೋಪಿಯ ಮೇಲೆ 18 ಪ್ರಕರಣಗಳು ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ