Site icon Vistara News

Belief in Miracle : ಮೃತ ಬಾಲಕರ ಜೀವ ಉಳಿಸಲು ಶವವನ್ನು ಉಪ್ಪಿನಲ್ಲಿ ಹೂತಿಟ್ಟರು!

Burrying in Salt

ಹಾವೇರಿ: ಉಸಿರು ಚೆಲ್ಲಿದವರು ಮತ್ತೆ ಬದುಕಿ ಬರುವುದುಂಟೇ? ಯಾಕಿಲ್ಲ.? ವೈದ್ಯರು ಸತ್ತೇ ಹೋಗಿದ್ದಾರೆಂದು ಘೋಷಿಸಲ್ಪಟ್ಟವರು ಅಂತಿಮ ಸ್ನಾನಕ್ಕೆ ನೀರು ಹಾಕಿದಾಗ, ಚಿತೆಯ ಬೆಂಕಿಯಲ್ಲಿ ಉರಿ ಎದ್ದಾಗ ತಾವೇ ಎದ್ದು ಬಂದದ್ದು ಉಂಟು! ಹಾಗಾಗಿ ಜನರು ಸತ್ತವರು ಹೇಗಾದರೂ ಸರಿ ಮತ್ತೆ ಬದುಕಿ ಬರಬಹುದಾ ಎಂದು ಕಾಯುತ್ತಾರೆ. ಹೀಗೆ ಪವಾಡ ಸದೃಶವಾಗಿ ಬದುಕಿ ಬರುವಂತೆ ಮಾಡುವ ಒಂದು ವಿಧಾನವೆಂದರೆ ಮೃತಪಟ್ಟ ಕೆಲವೇ ಗಂಟೆಗಳ ಒಳಗೆ ಶವವನ್ನು ಉಪ್ಪಿನೊಳಗೆ ಹೂತಿಡುವುದು ಎಂಬ ವಿಡಿಯೋ (Belief in Miracle) ಆಗಾಗ ಹರಿದಾಡುತ್ತದೆ. ಜತೆಗೆ ಅಲ್ಲಿ ಹಾಗಾಯಿತಂತೆ ಇಲ್ಲಿ ಹೀಗಾಯಿತಂತೆ ಎಂಬ ನಿದರ್ಶನಗಳು. ಅಂತ ವಿಡಿಯೊವನ್ನು ನಂಬಿ ಪೋಷಕರು ನೀರಿನಲ್ಲಿ ಬಿದ್ದು ಮೃತಪಟ್ಟ ಇಬ್ಬರು ಮಕ್ಕಳ ಶವವನ್ನು ಉಪ್ಪಿನಲ್ಲಿ ಹೂತಿಟ್ಟು (Burrying dead bodies in salt) ಕಾದು ಕುಳಿತ ಘಟನೆಯೊಂದು ಹಾವೇರಿ ಜಿಲ್ಲೆಯಲ್ಲಿ (Haveri News) ನಡೆದಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಘಾಲಪೂಜೆ ಗ್ರಾಮದಲ್ಲಿ ನಾಗರಾಜ ಲಂಕೇರ (11) ಮತ್ತು ಹೇಮಂತ ಹರಿಜನ (12) ಎಂಬ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಭಾನುವಾರ ಸಂಜೆ ಒಟ್ಟಿಗೆ ಇವರಿಬ್ಬರು ನೀರಿನ ಹೊಂಡಕ್ಕೆ ಈಜಲು ತೆರಳಿದ್ದರು. ಆದರೆ ನೀರಿನಿಂದ ಹೊರಬರಲು ಆಗದೆ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ರಾತ್ರಿಯಾದರೂ ಬಾಲಕರಿಬ್ಬರು ಮನೆಗೆ ಬಾರದೆ ಇದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ನೀರಿನ ಹೊಂಡದ ಬಳಿ ಬಾಲಕರ ಚಪ್ಪಲಿ, ಬಟ್ಟೆಗಳೆಲ್ಲವೂ ಪತ್ತೆಯಾಗಿದೆ. ಹೀಗಾಗಿ ನೀರಿನ ಹೊಂಡದಲ್ಲಿ ಇಳಿದು ಹುಡಕಾಟ ನಡೆಸಿದಾಗ ಬಾಲಕರ ಮೃತದೇಹಗಳು ಪತ್ತೆಯಾಗಿದೆ. ಮೃತದೇಹಗಳನ್ನು ಗ್ರಾಮಸ್ಥರೇ ಹೊರ ತೆಗೆದರು.

ಮತ್ತೆ ನಡೆದದ್ದು ಪವಾಡದ ಹುಡುಕಾಟ

ಈ ನಡುವೆ ಯಾರೋ ಒಂದು ಹಳೆಯ ವಿಡಿಯೊವನ್ನು ನೆನಪಿಸಿದ್ದಾರೆ. ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ತುಂಬ ಹೊತ್ತು ಉಪ್ಪಿನಲ್ಲಿ ಹೂತಿಟ್ಟರೆ ಅವರಲ್ಲಿ ಜೀವ ಸಂಚಾರ ಉಂಟಾಗುತ್ತದೆ ಎಂದು ಅದರಲ್ಲಿ ಹೇಳಲಾಗಿತ್ತು.

ಆಗ ಪೋಷಕರು ಮತ್ತು ಇತರರು ಈ ಪ್ರಯತ್ನವನ್ನು ನಂಬಿ, ನೋಡಿಯೇ ಬಿಡೋಣ ಎಂದು ಕ್ವಿಂಟಾಲ್‌ಗಟ್ಟಲೆ ಉಪ್ಪು ತರಿಸಿಕೊಂಡು ಅವರನ್ನು ಅದರಲ್ಲಿ ಹೂತಿಟ್ಟಿದ್ದಾರೆ. ಆದರೆ, ಸುಮಾರು ಆರು ಗಂಟೆಗಳ ಕಾಲ ಹಾಗೆ ಹೂತಿಟ್ಟರೂ ಮಕ್ಕಳು ಮತ್ತೆ ಬರಲಿಲ್ಲ. ಹೆತ್ತವರು ಆಗಾಗ ಹೋಗಿ ಉಸಿರಾಡುತ್ತಿದ್ದಾರಾ ಎಂದು ನೋಡಿಬರುತ್ತಿದ್ದರು. ಆದರೆ, ಯಾವ ಲಕ್ಷಣವೂ ಕಾಣಿಸಲಿಲ್ಲ.

ಆದರೆ, ತುಂಬಾ ಹೊತ್ತು ಇದೇ ರೀತಿ ಕಾಯುವುದು, ಅಳುವನ್ನು ನೋಡಲಾಗದೆ ಯಾರೋ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದು ಕುಟುಂಬಕ್ಕೆ ತಿಳಿ ಹೇಳಿದರು. ಒಮ್ಮೆ ಪ್ರಾಣ ಕಳೆದುಹೋದರೆ ಮತ್ತೆ ಬರುವುದಿಲ್ಲ. ನೀವು ಯಾವುದೇ ಸುಳ್ಳು ಮಾಹಿತಿಗಳನ್ನು ನಂಬಿ ಮಕ್ಕಳ ಅಂತ್ಯಕ್ರಿಯೆ ತಡ ಮಾಡಬೇಡಿ. ಮೃತದೇಹ ಇಟ್ಟುಕೊಂಡು ಈ ರೀತಿ ಮಾಡುವುದು ಸರಿಯಲ್ಲ ಎಂದು ಮನವರಿಕೆ ಮಾಡಿದರು. ಕೊನೆಗೆ ಎಲ್ಲ ಒತ್ತಾಯಕ್ಕೆ ಕಟ್ಟುಬಿದ್ದು ಹೆತ್ತವರು ಶವಗಳ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಟ್ಟರು.

ಇದನ್ನೂ ಓದಿ: Viral Video: ಡ್ಯಾನ್ಸ್‌ ಆಯ್ತು, ರೊಮ್ಯಾನ್ಸ್‌ ಆಯ್ತು; ಇದೀಗ ಮೆಟ್ರೋದಲ್ಲಿ ಫೈಟ್‌ ಸೀನ್‌!

ಉಪ್ಪಿನಲ್ಲಿ ಹೂತಿಟ್ಟರೆ ಏನಾಗುತ್ತದೆ?

ಉಪ್ಪಿಗೂ ಮೃತದೇಹಕ್ಕೂ ಸಂಬಂಧವೇ ಇಲ್ಲ ಎಂತಲ್ಲ. ಉಪ್ಪಿನಲ್ಲಿ ಹೂತಿಟ್ಟ ಶವ ಬಹುಕಾಲ ಕೊಳೆಯದೆ ಉಳಿಯುತ್ತದೆ. ಸಾಮಾನ್ಯವಾಗಿ ಸತ್ತ ಕೆಲವೇ ಹೊತ್ತಿನಲ್ಲಿ ದೇಹ ಬಾತುಕೊಳ್ಳುತ್ತದೆ. ಆದರೆ, ಉಪ್ಪಿನಲ್ಲಿ ಇಟ್ಟರೆ ತುಂಬ ಹೊತ್ತಿ ಜೀವಂತ ಇದ್ದ ಹಾಗೇ ಇರುತ್ತದೆ.

Exit mobile version