ರಾಣೆಬೆನ್ನೂರು: ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆ ಹಿರಿಯ ರಾಜಕಾರಣಿಗಳು ಕಣದಿಂದ ಹಿಂದೆ ಸರಿಯುವ, ತಮ್ಮ ಕುಟುಂಬದ ಸದಸ್ಯರ ಮೂಲಕ ಅಧಿಕಾರವನ್ನು ಮುಂದುವರಿಸುವ ಪರಿಪಾಠ ಆರಂಭವಾಗಿದೆ. ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಎರಡು ದಿನದ ಹಿಂದೆಯಷ್ಟೆ ಶಿವಮೊಗ್ಗದಲ್ಲಿ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರು. ತಾವು ದಶಕಗಳಿಂದ ಪ್ರತಿನಿಧಿಸಿಕೊಂಡು ಬಂದಿರುವ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಬಹಿರಂಗ ಕಾರ್ಯಕ್ರಮದಲ್ಲಿ ಘೋಷಿಸಿದ್ದರು.ʼ
ಇದೀಗ ಕಾಂಗ್ರೆಸ್ ನಾಯಕ ಕೆ. ಬಿ. ಕೋಳಿವಾಡ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ರಾಣೆಬೆನ್ನೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೆ.ಬಿ. ಕೋಳಿವಾಡ, ತನಗೆ 78ವರ್ಷವಾಗಿದೆ. ಇದೇ ನವೆಂಬರ್ ಬಂದರೆ 79ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ.
ಪತ್ರ ಪ್ರಕಾಶ್ ಕೋಳಿವಾಡಗೆ ಕ್ಷೇತ್ರವನ್ನು ಬಿಟ್ಟುಕೊಡುತ್ತಿದ್ದೇನೆ. ಈ ವಿಚಾರವನ್ನು ಕಾಂಗ್ರೆಸ್ ನಾಯಕರ ಗಮನಕ್ಕೂ ತಂದಿದ್ದೇನೆ. ಪ್ರಕಾಶ್ ಈಗಾಗಲೆ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ. ಅಂತಿಮವಾಗಿ ಕ್ಷೇತ್ರದ ಸ್ಥಿತಿಗತಿ ನೋಡಿಕೊಂಡು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.
ಇದೀಗ ಕಾಂಗ್ರೆಸ್‌ಗೆ ಎಲ್ಲ ಕಡೆ ಉತ್ತಮ ವಾತಾವರಣವಿದೆ. ಬಿಜೆಪಿ ವಿರುದ್ಧ ಜನರು ಬೇಸರಗೊಂಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಕ್ಷೇತ್ರವನ್ನು ಬಿಟ್ಟುಕೊಡುವ ಕುರಿತು ಮಾತನಾಡಿದ ಕೋಳಿವಾಡ, ಈ ಹಿಂದೆ ಪರಿಷತ್ ಸ್ಥಾನಕ್ಕೆ ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ. ಈ ಬಾರಿ ಬಿಜೆಪಿ ಹೈಕಮಾಂಡ್ ಯಾವ ರೀತಿ ಸ್ಪಂದಿಸುತ್ತದೆ ಕಾದುನೋಡಬೇಕು ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಕಾಶ್ ಕೋಳಿವಾಡ, ಕಾಂಗ್ರೆಸ್ ಕಾರ್ಯಕರ್ತನಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿಯೂ ಹೊಣೆ ಹೊತ್ತಿದ್ದೆ. ಜನರ ಸೇವೆಯಲ್ಲಿ ತೊಡಗಿರುವುದರಿಂದ ಟಿಕೆಟ್ ಸಿಗುವ ಭರವಸೆ ಇದೆ ಎಂದಿದ್ದಾರೆ.
ಇದನ್ನೂ ಓದಿ | ಬಿ.ಎಸ್. ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿ: ವಿಜಯೇಂದ್ರ ಉತ್ತರಾಧಿಕಾರಿ