Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಆಕ್ರೋಶದ ಕವಿತೆ ಮತ್ತು ಕವಿಯ ಜೋಳಿಗೆಯ ಸವಿಜೇನು!

saraju katkar

ಹಾವೇರಿ: ಅಲ್ಲಿ ನವೋದಯದಿಂದ ಹಿಡಿದು ನವ್ಯೋತ್ತರದ ಮಾದರಿಯವರೆಗೆ, ಚಂಪೂ ಕಾವ್ಯದಿಂದ ಹಿಡಿದು ಪುನೀತ್ ರಾಜ್ ಕುಮಾರ್ ಸ್ಮರಣೆಯವರೆಗೆ ಎಲ್ಲ ಬಗೆಯ ಕವಿತೆಗಳಿದ್ದವು. ಹೆಣ್ಣಿನ ಮೇಲಿನ ದೌರ್ಜನ್ಯಕ್ಕೂ ಹೊರನಾಡಿನ ಕನ್ನಡಿಗರಿಗೆ ಸರಿಯಾದ ಮೀಸಲಾತಿ ಸಿಗದಿರುವುದಕ್ಕೂ ಆಕ್ರೋಶ ವ್ಯಕ್ತವಾಯಿತು. ಇತ್ತೀಚೆಗೆ ಚಿರಶಾಂತಿ ಹೊಂದಿದ ಸಿದ್ದೇಶ್ವರ ಶ್ರೀಗಳ ಬಗ್ಗೆಯೂ ಕವಿತೆ ಹುಟ್ಟಿಬಂತು.

ಇದೆಲ್ಲವೂ ಕಾಣಿಸಿದ್ದು ಹಾವೇರಿಯ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮೊದಲ ದಿನದ ಕವಿಗೋಷ್ಠಿಯಲ್ಲಿ.

ವಾಚ್ಯಾರ್ಥಕ್ಕೆ ಕಾವ್ಯದಲ್ಲಿ ಸ್ಥಾನವಿಲ್ಲ. ಆದರೆ ಚಳವಳಿ ಕಾವ್ಯದಲ್ಲಿ ವಾಚ್ಯಾರ್ಥವೇ ಪ್ರಧಾನ. ಇಂದು ಕನ್ನಡದ ಕಾವ್ಯಕ್ಕೆ ಒಂದೇ ಮೀಮಾಂಸೆಯಿಲ್ಲ. ಆದರೆ ಹಲವು ಮೀಮಾಂಸೆಗಳಿವೆ. ಉದಾಹರಣೆಗೆ  ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ಮೀಮಾಂಸೆ ಇತರ ಕಡೆಗಿಂತ ಭಿನ್ನವಾಗಿದೆ. ಮೀಮಾಂಸೆ ಹಾಗೂ  ವಿಮರ್ಶೆಗಳು ಕಾವ್ಯದ ಎರಡು ಮುಖಗಳು. ಕಾವ್ಯ ಬೆಳೆದಂತೆ ಮೀಮಾಂಸೆ ವಿಮರ್ಶೆಗಳು ಬೆಳೆದಿವೆ. ಕನ್ನಡದಲ್ಲಿ ಒಬ್ಬರಂತೆ ಮತ್ತೊಬ್ಬರ ಕಾವ್ಯವಿಲ್ಲ. ಎಲ್ಲವೂ ತಮ್ಮದೇ ಆದ ಶ್ರೀಮಂತಿಕೆಯನ್ನು ಕೊಟ್ಟಿವೆ ಎಂದು ಕವಿಗೋಷ್ಠಿಯ ಆಶಯ ಭಾಷಣ ಮಾಡಿದ ಕವಯಿತ್ರಿ ವಿಜಯಶ್ರೀ ಸಬರದ ನುಡಿದರು.

ಭತ್ತ ಬೆಳೆಯುವ ಬಗ್ಗೆ ಆಸಕ್ತಿ ತೋರಿಸಿದ ಹೊಸ ಕಾಲದ ಮಗಳು, ಅದನ್ನು ಬೆಳೆಯುತ್ತಾ ಬೆಳೆಯುತ್ತಾ ಸಹಜ ಜೀವನದ ಸೊಗಸನ್ನು ಕಂಡುಕೊಳ್ಳುವ ಕ್ರಮವನ್ನು ರೇಣುಕಾ ರಮಾನಂದ ಅವರ ‘ಭತ್ತ ಬೆಳೆಯುವುದೆಂದರೆ’ ಕವನ ಬಿಚ್ಚಿಟ್ಟಿತು. ‘ಮೋಹ ಕಳಚುವ ಬಗ್ಗೆ ಯೋಚಿಸಿದಷ್ಟೂ ಸರಪಳಿ ಬಿಗಿಯುತ್ತದೆ’ ಎಂದ ಶುಭಶ್ರೀ ಭಟ್, ‘ಒಮ್ಮೊಮ್ಮೆ ಯಶೋಧರೆಯೂ ಬುದ್ಧನಾಗಬಯಸುತ್ತಾಳೆ’ ಎಂದು ತಮ್ಮ ಕವನದಲ್ಲಿ ಮಾರ್ಮಿಕವಾಗಿ ಸೂಚಿಸಿದರು. ಮರೆಯಾದ ಸಿದ್ದೇಶ್ವರ ಶ್ರೀಗಳ ಬಗ್ಗೆ ಕೆ.ಸುನಂದಾ ಕವಿತೆ ವಾಚಿಸಿದರು. ‘ಅಮ್ಮ ಹಾರಿಕೊಂಡ ಬಾವಿಯ ನೀರು ಕುಡಿಯಬಹುದೇ, ಅಪ್ಪನನ್ನು ಕೇಳಲಾಗುವುದಿಲ್ಲ, ಅವನು ಆರಿಸಿಕೊಂಡದ್ದು ಹಗ್ಗವನ್ನು’ ಎಂದ ಇಂದ್ರಕುಮಾರ್ ಅವರ ಕವಿತೆ ಮನ ಕಲಕಿತು.

‘ವಿನಾಕಾರಣ ಕತ್ತಿಗಳನ್ನು ಝಳಪಿಸದಿರಿ, ಪುರಾಣೇತಿಹಾಸಗಳಿಂದ ಹೆಕ್ಕಿ ಉದಾಹರಣೆಗಳನ್ನು ವಿಷ ಕಕ್ಕುವ ಉಮೇದು ತೋರದಿರಿ’ ಎಂದು ಮಮತಾ ಅರಸೀಕೆರೆ ನುಡಿದರು. ಪುನೀತ್ ರಾಜ್್ಕುಮಾರ್ ಅವರನ್ನು ನೆನಪಿಸಿಕೊಂಡು ಧಮ್ಮೂರು ಮಲ್ಲಿಕಾರ್ಜುನ ಭಾವುಕರಾದರು. ‘ದೇಶಕಾಲವ ಮೀರಿ ಬೆಳೆದವನನ್ನು ಸ್ಥಾವರವಾಗಿಸಿ, ಪ್ರತಿಮೆಯಾಗಿಸಿ, ನಂತರ ತಲೆ ಕತ್ತರಿಸಿ ವಿವಾದ ಎಬ್ಬಿಸುವವರ ಮುಂದೆ’ ಡಿ.ಸಿ ಗೀತಾ ಅವರು ‘ಪ್ರೀತಿ ತಂದೀರಾ ಭಿಕ್ಷಕೆ’ ಎಂದು ಯಾಚಿಸಿದರು. ‘ದಯಪಾಲಿಸಿಬಿಡು ನಸುನಗುವೊಂದು, ಒಂದು ಹನಿ‌ಕಣ್ಣೀರಿನೊಡನೆ’ ಎಂದು ಮನವಿ ಶ್ರೀದೇವಿ ಕೆರೆಮನೆ ಅವರದಾಗಿತ್ತು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಭಾರತದಲ್ಲಿ ರಾಷ್ಟ್ರೀಯತೆಯ ಬೀಜ ಬಿತ್ತಿದ್ದೇ ಇಂಗ್ಲಿಷ್ ಶಿಕ್ಷಣ ವ್ಯವಸ್ಥೆ: ವೂಡೇ ಪಿ.‌ ಕೃಷ್ಣ ಅಭಿಮತ

ಗಡಿನಾಡು ತಾಳವಾಡಿಯವರಿಗೆ ಮೀಸಲಾತಿ ಸಿಗುತ್ತಿಲ್ಲ ಎಂಬ ಆಕ್ರೋಶ ಜಾನ್ಸನ್ ಸುಕುಮಾರ್  ಅವರದಾಗಿತ್ತು. ಸದಾಶಿವ ಸೊರಟೂರು ಅವರು ಯುದ್ಧದ ಭೀಕರತೆಯ ಚಿತ್ರಣವನ್ನು ‘ಕೊಲ್ಲುವ ನಿಮ್ಮ ಕೈಗಳು ನಡುಗಬಬಾರದು’ ಎಂದು ಬಣ್ಣಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸರಜೂ ಕಾಟ್ಕರ್ ಅವರು ಕವಿಗಳಿಗೆ ಶುಭ ಹಾರೈಸಿ, ‘’ತಪ್ಪಿಸಿಕೊಂಡುಬಿಟ್ಟಿವೆ ಒಂದಷ್ಟು ಸಾಲುಗಳು ಪುಸ್ತಕದ ಪುಟಗಳಿಂದ’’ ಎಂಬ ತಮ್ಮ ಕವಿತೆ ವಾಚಿಸಿದರು.

ಇದರ ನಡುವೆ ಹಾ.ತಿ ಜಯಪ್ರಕಾಶ ಅವರು ತಮ್ಮ ಹನಿಕವಿತೆಗಳ ಜತೆಗೆ ಮುತ್ತಿನಹಾರ, ಜೇನಿನ ಬಾಟಲಿ, ಹಡಗಿನ ಪ್ರತಿಕೃತಿಗಳನ್ನು ಪ್ರದರ್ಶಿಸಿದ್ದು ತಮಾಷೆಯಾಗಿತ್ತು. ‘’ಕವಿಯ ಜೋಳಿಗೆಯ ಒಳಗೆ ಏನಿದೆ’’ ಎಂದು ಪ್ರಶ್ನಿಸುತ್ತಾ ಅವರು ಅವುಗಳನ್ನು ತೆಗೆದು ತೋರಿಸಿ, ಕವಿಗೋಷ್ಠಿಯ ಅಧ್ಯಕ್ಷರಿಗೆ ತಮ್ಮ ಜೋಳಿಗೆಯಲ್ಲಿದ್ದ ‘ಕೊಡಗಿನ ಸವಿ ಜೇನನ್ನು’ ತೆಗೆದು ಅರ್ಪಿಸಿದರು!

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಆನ್‌ಲೈನ್‌ ಪೇಮೆಂಟ್‌ ಸ್ಥಗಿತವಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿರುವ ಪುಸ್ತಕ ಮಳಿಗೆಗಳು

Exit mobile version