ಹಾವೇರಿ: ಪಿಎಫ್‌ಐ ಮೇಲೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ಗೆ ಈಗಲೂ ಒಳಗೊಳಗೆ ಪ್ರೀತಿ ಇದೆ ಎಂದು ವಾಗ್ದಾಳಿ ನಡೆಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಇದನ್ನು ವಿರೋಧಿಸಿದವರನ್ನು ಜನರು ಒದೆಯುತ್ತಾರೆ ಎಂದಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಲ್ಹಾದ ಜೋಶಿ, ರಾಷ್ಟ್ರೀಯ ಸುರಕ್ಷತೆ ವಿಚಾರದಲ್ಲಿ ಬಿಜೆಪಿ ಯಾವತ್ತೂ ಮತಬ್ಯಾಂಕ್ ರಾಜಕಾರಣ ಮಾಡಿಲ್ಲ ಎಂದರು.
ಕೇಂದ್ರ ಬಿಜೆಪಿ ಸರ್ಕಾರ ಪಿಎಫ್‌ಐ ಬ್ಯಾನ್ ಮಾಡಿರುವುದನ್ನು ಕಂಡು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಒಳಗೊಳಗೆ ಕುದಿಯುತ್ತಿದೆ. ಪಿಎಫ್‌ಐ ಭಯೋತ್ಪಾದಕ ಚಟುವಟಿಕೆಗಳು, ದೇಶ ದ್ರೋಹ ಕೃತ್ಯಗಳ ಬಗ್ಗೆ ಜನರಿಗೆ ಮಾಹಿತಿ ಇದೆ.
ಇಂಥಹ ಸಂದರ್ಭದಲ್ಲಿ ಪಿಎಫ್‌ಐ ಬ್ಯಾನ್ ಮಾಡಿರುವುದನ್ನು ವಿರೋಧಿಸಿದರೆ ಜನ ಒದೆಯುತ್ತಾರೆ ಅಷ್ಟೇ.
ಪಿಎಫ್‌ಐ ಪರ ಮಾತನಾಡಿದರೆ ಎಲ್ಲಿ ದೇಶದ ಜನರ ಕಂಗೆಣ್ಣಿಗೆ ಗುರಿಯಾಗಬೇಕಾಗುತ್ತೆ ಎಂಬುದು ಕಾಂಗ್ರೆಸ್‌ಗೆ ಚಿಂತೆಯಾಗಿದೆ. ಪಿಎಫ್‌ಐ ಬ್ಯಾನ್ ಮಾಡಿರುವ ಬಿಜೆಪಿ ಸರ್ಕಾರದ ನಿಲುವನ್ನು ವಿರೋಧಿಸಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಏನಾದರೂ ಮಾಡಿ ಮುಸ್ಲಿಂ ಒಲೈಕೆ ಮಾಡಬೇಕು ಎಂಬ ಕಾರಣಕ್ಕೆ ಆರ್‌ಎಸ್‌ಎಸ್ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ. ಆರ್‌ಎಸ್‌ಎಸ್ ಎಂದರೆ ನಾವೇ. ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ಆರ್‌ಎಸ್‌ಎಸ್‌ನಿಂದ ಬಂದವರು. ಆರ್‌ಎಸ್‌ಎಸ್ ಅನ್ನು ಯಾವ ಆಧಾರದ ಮೇಲೆ, ಹೇಗೆ ಬ್ಯಾನ್ ಮಾಡುತ್ತೀರ? ಈ ಹಿಂದೆ ಕಾಂಗ್ರೆಸ್ ಸರ್ಕಾರ ಮೂರು ಬಾರಿ ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಿತ್ತು. ಬ್ಯಾನ್ ಮಾಡಿ ಕಾಂಗ್ರೆಸ್ ಏನು ಸಾಧಿಸಿದೆ? ಆರ್‌ಎಸ್‌ಎಸ್ ವಿರುದ್ಧ ಒಂದೇ ಒಂದು ಸಾಕ್ಷಿಯನ್ನೂ ಪ್ರಸ್ತುತಪಡಿಸಲು ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ ಎಂದರು.
ಏಸ್‌ಡಿಪಿಐ ಕುರಿತು ಪ್ರತಿಕ್ರಿಯಿಸಿದ ಸಚಿವರು, ಎಸ್‌ಡಿಪಿಐ ಒಂದು ಪೊಲಿಟಿಕಲ್ ಪಾರ್ಟಿ. ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ತನ್ನ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಇದನ್ನೂ ಓದಿ | ವಿಸ್ತಾರ ನ್ಯೂಸ್‌ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶುಭ ಹಾರೈಕೆ