ಬೆಂಗಳೂರು: ಹಾವೇರಿ ಸೇರಿ ಇನ್ನಿತರೆ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯನ್ನು ಪ್ರಸ್ತಾಪಿಸಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತುಗಳನ್ನೇ ಉಲ್ಲೇಖಿಸಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪವನ್ನು ಕಾಂಗ್ರೆಸ್ ತೀವ್ರಗೊಳಿಸಿದೆ. ಪ್ರಿಯಾಂಕ್ ಖರ್ಗೆ ತೀವ್ರಗೊಳಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ(Priyank Kharge) ಮಾತನಾಡಿದ್ದಾರೆ.
ರಾಜ್ಯದಲ್ಲಿರುವ ಸರ್ಕಾರಕ್ಕೆ ಭ್ರಷ್ಟಾಚಾರದ ಸೋಂಕು ತಗುಲಿದ್ದು, ಆರೋಗ್ಯ ಮತ್ತು ವೈದ್ಯಕೀಯ ಸಚಿವಾಲಯ ಕೂಡ ಭ್ರಷ್ಟಾಚಾರದ ಸೋಂಕಿಗೆ ತುತ್ತಾಗಿದೆ. ಈ ಇಲಾಖೆಯಲ್ಲಿ ಮತ್ತೊಂದು ಹಗರಣ ನಡೆದಿದ್ದು, ಈ ಸರ್ಕಾರ 40% ಸರ್ಕಾರ ಎಂಬುದು ಈ ಇಲಾಖೆಯ ಅಕ್ರಮದಲ್ಲಿ ಎದ್ದು ಕಾಣುತ್ತಿದೆ.
ಸರ್ಕಾರದ ವಿರುದ್ಧ ಈ ಆರೋಪ ಮಾಡುತ್ತಿರುವುದು ನಾವು ಮಾತ್ರವಲ್ಲ. ರಾಜ್ಯಪಾಲರ ಭಾಷಣದ ಮೇಲೆ ಭಾಷಣ ಮಾಡುವಾಗ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ವೈದ್ಯಕೀಯ ಕಾಲೇಜುಗಳಲ್ಲಿ ಸಿಬ್ಬಂದಿ ಕೊರತೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅದರಲ್ಲೂ ಹಾವೇರಿ ಹಾಗೂ ಕಿಮ್ಸ್ ಕುರಿತು ಮಾತನಾಡಿದ್ದು, ಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ಸಿಬ್ಬಂದಿ ಕೊರತೆಯಿಂದ ವಿದ್ಯಾರ್ಥಿ ಪರದಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಮೆಡಿಕಲ್ ಕಾಲೇಜಿನಲ್ಲಿ 150 ಮಂದಿ ಪದವಿ ವಿದ್ಯಾರ್ಥಿಗಳಿದ್ದಾರೆ. ರಾಷ್ಟ್ರೀಯ ಮೆಡಿಕಲ್ ಕೌನ್ಸಿಲ್ ಪ್ರಕಾರ ಪ್ರತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಆಧಾರದ ಮೇಲೆ ಕನಿಷ್ಠ ಬೋಧಕ ಸಿಬ್ಬಂದಿ ಇರುತ್ತಾರೆ. ನೇಮಕಾತಿ ಆಗಲಿಲ್ಲವಾದರೆ ಮೆಡಿಕಲ್ ಕೌನ್ಸಿಲ್ ಅನುಮತಿ ನೀಡುವುದಿಲ್ಲ. ಆದರೆ ಸರ್ಕಾರಿ ಕಾಲೇಜು ನೇಮಕಾತಿ ಮಾಡುತ್ತಾರೆ ಎಂಬ ಭರವಸೆ ಮೇರೆಗೆ ಅನುಮತಿ ನೀಡಿದ್ದಾರೆ. ಯಾದಗಿರಿ, ಹಾವೇರಿ, ಕರ್ನಾಟಕ, ಅಟರ್ ಬಿಹಾರಿ ವಾಜಪೇಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ತಲಾ 150 ವಿದ್ಯಾರ್ಥಿಗಳಿದ್ದಾರೆ. ನವೆಂಬರ್ ನಲ್ಲಿ ತರಗತಿ ಆರಂಭವಾಗಿದ್ದು, ಮುಂದಿನ ಸೆಪ್ಟೆಂಬರ್ ನಲ್ಲಿ ಪರೀಕ್ಷೆ ಎದುರಾಗುತ್ತಿದೆ. ಆದರೂ ಒರ್ವ ಬೋಧಕ ಸಿಬ್ಬಂದಿ ನೇಮಕಾವಾಗಿಲ್ಲ.
ಯಾದಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಫೆ.7-10, 2022, ಹಾವೇರಿ ಕಾಲೇಜಿನಲ್ಲಿ ಜ.19-22, 2022, ಕಿಮ್ಸ್ ನಲ್ಲಿ ಫೆ.7-10, 2022ರಂದು, ಬೌರಿಂಗ್ ಕಾಲೇಜಿನಲ್ಲಿ ಸೆ.3, 2022ರಂದು ಸಿಬ್ಬಂದಿ ನೇಮಕಾತಿಗೆ ಸಂದರ್ಶನ ನಡೆದಿದೆ. ಈ ಸಂದರ್ಶನವಾಗಿ ಒಂದು ವರ್ಷವಾದರೂ ಈವರೆಗೂ ಸಿಬ್ಬಂದಿ ನೇಮಕವಾಗಿಲ್ಲ ಯಾಕೆ? ಬಹುತೇಕ ಕಡೆಗಳಲ್ಲಿ ಪ್ರಾವಿಷನಲ್ ಪಟ್ಟಿ ನವೆಂಬರ್ ತಿಂಗಳಲ್ಲಿ ಬಂದಿದ್ದು, ಜನವರಿಯಲ್ಲಿ ಅಂತಿಮ ಪಟ್ಟಿ ಪ್ರಕಟವಾಗಿದ್ದು, ಆದರೂ ಆದೇಶ ಪ್ರತಿ ಸಿಗುತ್ತಿಲ್ಲ.
ಜಗದೀಶ್ ಶೆಟ್ಟರ್ ಅವರ ಹೇಳಿರುವ ಹಾವೇರಿ ಮೆಡಿಕಲ್ ಕಾಲೇಜಿನಲ್ಲಿ ಬೋಧಕರಿಲ್ಲದೇ ತರಗತಿಗಳು ನಡೆಯುತ್ತಿವೆ ಎಂಬ ಹೇಳಿಕೆಯನ್ನು ಮಾಧ್ಯಮಗಳು ಪ್ರಕಟಿಸಿವೆ. ಇಲ್ಲಿ ಹಣ ನೀಡದವರಿಗೆ ಆದೇಶ ಪ್ರತಿ ನೀಡುತ್ತಿಲ್ಲ. ಈ ನೇಮಕಾತಿ ಪ್ರಕ್ರಿಯೆ ಕಾಲಾನುಕ್ರಮ ನೋಡಿ. ಯಾದಗಿರಿಯಲ್ಲಿ ಸಂದರ್ಶನ ಫೆ.7-10, 2022ರಂದು ನಡೆದಿದ್ದು, ಪ್ರಾವಿಷನಲ್ ಪಟ್ಟಿ ಪ್ರಕಟವಾಗಿದ್ದು, ನ.9, 2022, ಕಾಲೇಜು ಆರಂಭವಾಗಿರುವುದು ನವೆಂಬರ್ 2022ರಂದು, ನೇಮಕಾತಿ ಅಂತಿಮ ಪಟ್ಟಿ ಬಂದಿರುವುದು ಜನವರಿ 2023ರಲ್ಲಿ. ಆದರೂ ನೇಮಕಾತಿ ಆದೇಶ ಪ್ರತಿ ನೀಡುತ್ತಿಲ್ಲ ಯಾಕೆ? ಎಲ್ಲರಿಗೂ ಒಂದೇ ಬಾರಿಗೆ ಆದೇಶ ಪ್ರತಿ ನೀಡಬಹುದಲ್ಲವೇ?
ಶೆಟ್ಟರ್ ಅವರ ಪ್ರಶ್ನೆಗೆ ಮಂತ್ರಿಗಳ ಉತ್ತರ ನೋಡಿದರೆ ಅರ್ಥವಾಗುತ್ತದೆ. ಸಚಿವರು, ಈ ನೇಮಕಾತಿ ಕುರಿತು ನಿರ್ದೆಶಕರು ನಮಗೆ ಕಳುಹಿಸಿಕೊಟ್ಟಿಲ್ಲ. ನೇಮಕಾತಿ ಆಗಿರುವವರು ನಿರ್ದೇಶಕರ ಬಳಿ ಹೋಗಿ ನಮಗೆ ಆದೇಶ ಪ್ರತಿ ನೀಡಿ ಎಂದು ಕೇಳಿದರೆ, ನೀವು ಬೆಂಗಳೂರಿಗೆ ಹೋಗಿ ಪ್ರತ್ಯೇಕ ಆದೇಶ ತರಬೇಕು ಎಂದು ಹೇಳುತ್ತಾರೆ. ಬೆಂಗಳೂರಿನಲ್ಲಿ ಬಂದು ಕೇಳಿದರೆ ನಿರ್ದೇಶಕರನ್ನು ಕೇಳಿ ಎನ್ನುತ್ತಿದ್ದಾರೆ.
ಮಾಧ್ಯಮಗಳಲ್ಲಿ ಪ್ರತಿ ಹುದ್ದೆಗೆ ರೇಟ್ ಕಾರ್ಡ್ ಪ್ರಕಟವಾಗಿದೆ. ಸಹಾಯಕ ಪ್ರಾಧ್ಯಪಕ ಹುದ್ದೆಗೆ 15-20 ಲಕ್ಷ, ಸಹ ಪ್ರಾಧ್ಯಾಪಕರಿಗೆ 25-30 ಲಕ್ಷ, ಪ್ರಾಧ್ಯಾಪಕರಿಗೆ 35-40 ಲಕ್ಷ. ಇಷ್ಟು ಹಣ ಎಲ್ಲಿಂದ ತರುತ್ತಾರೆ? ಈ ರೀತಿ ಹಣ ಕೊಟ್ಟವರು ಏನು ಪಾಠ ಮಾಡುತ್ತಾರೆ. ಇದರಿಂದಲೇ ಅವರು ಮೆಡಿಕಲ್ ಉಪಕರಣ ಖರೀದಿಯಲ್ಲಿ ಹಗರಣಗಳು ನಡೆಯುತ್ತವೆ. ಅವರು ಹಾಕಿರುವ ಬಂಡವಾಳ ತೆಗೆಯಬೇಕಲ್ಲ. ಸಂಸದ ಪ್ರತಾಪ್ ಸಿಂಹ ಅವರು ಉನ್ನತ ಶಿಕ್ಷಣ ಸಚಿವರ ಸಮ್ಮುಖದಲ್ಲಿ ಉಪಕುಲಪತಿಗಳ ನೇಮಕಕ್ಕೆ 5 ಕೋಟಿ ನೀಡಬೇಕು ಎಂದು ಹೇಳುತ್ತಾರೆ. ಇನ್ನು ಡೀನ್ ಅವರಿಗೆ ಎಷ್ಟು ಕೊಡಬೇಕು?
ನಿಮ್ಮ ಹೆಸರು ಅಂತಿಮ ಪಟ್ಟಿಯಲ್ಲಿ ಬಂದಿದೆ ಎಂದರೆ, ನೀವು ನಿರ್ದೇಶಕರ ಜತೆ ಹಾಗೂ ವ್ಯಾಪಾರ ಸೌಧದಲ್ಲಿ ಡೀಲ್ ಮಾಡಿಕೊಳ್ಳದಿದ್ದರೆ, ನಿಮ್ಮ ಹೆಸರನ್ನು ಪಟ್ಟಿಯಿಂದ ಕೈಬಿಡುವುದಿಲ್ಲ ಬದಲಿಗೆ ಪರ್ಯಾಯವಾಗಿ ಬೇರೆಯವರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.
ಉಷಾ ರಾಣಿ ಎಂಬುವವರು ಬೌರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಆಯ್ಕೆಯಾಗುತ್ತಾರೆ. ಅವರು ನಾನು ಮೆರಿಟ್ ಮೇಲೆ ಆಯ್ಕೆಯಾಗಿದ್ದು ಹಣ ಯಾಕೆ ನೀಡಬೇಕು ಎಂದು ಹಣ ನೀಡುವುದಿಲ್ಲ. ಹೀಗಾಗಿ ಬೇರೆಯವರನ್ನು ಪರ್ಯಾಯವಾಗಿ ನೇಮಕ ಮಾಡುತ್ತಾರೆ. ನಂತರ ಉಷಾ ರಾಣಿ ಅವರು ಕೋರ್ಟ್ ಮೆಟ್ಟಿಲೇರುತ್ತಾರೆ. ನ್ಯಾಯಾಲಯದಲ್ಲಿ ಅವರು ನಾನು ಅರ್ಹರಾಗಿದ್ದರೂ ಸಂದರ್ಶನದಲ್ಲಿ ಅನರ್ಹರಾದವರಿಗೆ ನೇಮಕಾತಿ ನೀಡಿದ್ದಾರೆ ಎಂದು ವಾದ ಮಾಡುತ್ತಾರೆ. ಆಗ ನ್ಯಾಯಾಲಯ ಇವರ ಪರ ತೀರ್ಪು ನೀಡುತ್ತದೆ. ಆಗ ಅವರ ಪರ ವಕೀಲರು ಡೀನ್ ಅವರಿಗೆ ಕಾನೂನು ನೋಟೀಸ್ ನೀಡಿ, ಸರ್ಕಾರಿ ನೇಮಕಾತಿಯಲ್ಲಿ ನಮ್ಮ ಕಕ್ಷೀದಾರರು ನೇಮಕವಾಗಿದ್ದು, ನ್ಯಾಯಾಲಯ ಅವರ ನೇಮಕಾತಿ ಎತ್ತಿಹಿಡಿದಿದೆ. ಅವರಿಗೆ ಆದೇಶ ಪ್ರತಿ ನೀಡಿ ಎಂದು ತಿಳಿಸಿದ್ದರೂ ಈವರೆಗೆ ಅವರಿಗೆ ಆದೇಶ ಪ್ರತಿ ನೀಡಿಲ್ಲ.
ಇನ್ನು ಮತ್ತೊಂದು ಉದಾಹರಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜಿನಲ್ಲಿ ಶಿಶುತಜ್ಞ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಕುಮಾರ್ ಅಂಗಡಿ ಎಂಬುವವರು ಅತಿ ಹೆಚ್ಚು ಅಂಕ ಪಡೆದಿದ್ದು, ಕಾನೂನು ಪ್ರಕಾರ ಇವರಿಗೆ ಹುದ್ದೆ ಸಿಗಬೇಕು. ಆದರೆ ಅವರು ಉಷಾ ಎಂಬುವ ಮತ್ತೊಬ್ಬರನ್ನು ನೇಮಕ ಮಾಡುತ್ತಾರೆ. ಇವರ ನೇಮಕಕ್ಕಾಗಿ ಅಂಗವೈಕಲ್ಯ ವಿಭಾಗವನ್ನು ಇವರೇ ಸೃಷ್ಟಿ ಮಾಡಿಕೊಳ್ಳುತ್ತಾರೆ. ಉಷಾ ಎಂಬುವವರು ಸಂದರ್ಶನದಲ್ಲಿ ಅನರ್ಹರಾಗಿರುತ್ತಾರೆ. ಅನರ್ಹರಾಗಿದ್ದರು ಇವರು ಕೆಲಸ ಹೇಗೆ ಪಡೆಯುತ್ತಾರೆ?
ಇದು 40% ಸರ್ಕಾರ ಎಂಬುದಕ್ಕೆ ಇನ್ನೆಷ್ಟು ದಾಖಲೆ ಬೇಕು? ಬೊಮ್ಮಾಯಿ ಅವರು ಯಾದಗಿರಿ ಮೆಡಿಕಲ್ ಕಾಲೇಜು ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಈ ಕಾಲೇಜಿಗೆ ಜಮೀನು ಮಂಜೂರು ಮಾಡಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡಿಸಿದ್ದು ನಾನು ಜಿಲ್ಲಾ ಮಂತ್ರಿಯಾಗಿದ್ದಾಗ. ಈ ಸರ್ಕಾರದ ಯೋಗ್ಯತೆಗೆ ನಾವು ಕೊಟ್ಟ ಕಾಲೇಜಿಗೆ ಸರಿಯಾಗಿ ಸಿಬ್ಬಂದಿ ನೇಮಕ ಮಾಡಲು ಆಗುತ್ತಿಲ್ಲ. ಇವರಿಗೆ ಭ್ರಷ್ಟಾಚಾರದ ಕ್ಯಾನ್ಸರ್ ತಟ್ಟಿದೆ. ರಕ್ತಬೀಜಾಸುರರಂತೆ ಭ್ರಷ್ಟಾಚಾರ ಹೆಚ್ಚುತ್ತಿದೆ.
ಅರ್ಹತೆಯಿಂದ ಆಯ್ಕೆಯಾಗಿರುವವರಿಗೆ ಒಂದೇ ಬಾರಿಗೆ ಆದೇಶ ನೀಡಬೇಕು. ಪರ್ಯಾಯವಾಗಿ ನೇಮಕವಾಗಿ 50 ಕೋಟಿಯಷ್ಟು ಅಕ್ರಮ ನಡೆದಿದ್ದು, ಈ ಬಗ್ಗೆ ತನಿಖೆ ಆಗಬೇಕು. ನಿನ್ನೆ ಈ ಸರ್ಕಾರದವರು ಲೋಕಾಯುಕ್ತ, ಎಸಿಬಿ ಬಗ್ಗೆ ಚರ್ಚೆ ಮಾಡುತ್ತಿದ್ದರು. ಈ ಸರ್ಕಾರ ಜೆಇಇ, ಪಿಎಸ್ಐ, ಕೆಪಿಟಿಸಿಎಲ್ ಸೇರಿದಂತೆ ಯಾವುದಾದರೂ ಒಂದು ಇಲಾಖೆಯ ನೇಮಕಾತಿಯನ್ನು ನ್ಯಾಯಯುತವಾಗಿ ಮಾಡಿದ್ದಾರಾ? ಅವರು ಈ ಪ್ರಕರಣಗಳಲ್ಲಿ ಸರಿಯಾದ ತನಿಖೆ ಮಾಡಿಸಿ ತಮ್ಮ ಪ್ರಾಮಾಣಿಕತೆಯನ್ನು ಸಾಬೀತುಮಾಡಲಿ.
ಇದನ್ನೂ ಓದಿ: 40% Commission | ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಮೇಲೆ 15% ಕಮಿಷನ್ ಆರೋಪ: ದ್ವೇಷದ ಆರೋಪ ಎಂದ ಚಿತ್ರದುರ್ಗ ಶಾಸಕ
ಈ ಸರ್ಕಾರ ಒಂದು ಕ್ಯೂಆರ್ ಕೋಡ್, ಕಿವಿ ಮೇಲೆ ಹೂ ಇಟ್ಟುಕೊಂಡಿದ್ದಕ್ಕೆ ಇವರು ಕಂಡಾಮಂಡಲವಾಗಿದ್ದಾರೆ. ನಿಮಗೆ ಗೆಲ್ಲುವ ಸಾಮರ್ಥ್ಯವಿಲ್ಲ ಎಂದು ಪ್ರಧಾನಿ ಮೋದಿ, ಅಣಿತ್ ಶಾ, ನಡ್ಡಾ ಅವರನ್ನು ಕರೆಸುತ್ತಿದ್ದೀರ. ನಿಮ್ಮ ಹಿಂದೆ ಮೋದಿ ಇದ್ದರೂ ಯಾಕೆ ಹೆದರುತ್ತಿದ್ದೀರಿ? ನೀವು ಈ ಅಖ್ರಮದ ಮೂಲಕ ವಿದ್ಯಾರ್ಥಿಗಳ ಕಿವಿ ಮೇಲೆ ಹೂವ ಇಡುತ್ತಿಲ್ಲವೇ? ಕಿವಿ ಮೇಲೆ ಹೂವ ಇಡುವುದನ್ನು ನಿಲ್ಲಿಸಿ ಅರ್ಹರಿಗೆ ನೇಮಕಾತಿ ಆದೇಶ ಪತ್ರ ನೀಡಿ. ಒಂದು ವಾರದಲ್ಲಿ ನೀಡುತ್ತೇವೆ ಎಂದು ಹೇಳಿ 3 ದಿನವಾಗಿದೆ. ಒಂದು ವರ್ಷದಲ್ಲಿ ಮಾಡದವರು 1 ವಾರದಲ್ಲಿ ಏನು ಮಾಡುತ್ತಾರೋ ಗೊತ್ತಿಲ್ಲ.
ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು, ಕೆಪಿಸಿಸಿ ವಕ್ತಾರ ಡಾ. ಶಂಕರ್ ಗುಹಾ ದ್ವಾರಕಾನಾಥ್, ಕೆಪಿಸಿಸಿ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಡಾ. ಕಿರಣ್ ದೇಶಮುಖ್ ಉಪಸ್ಥಿತರಿದ್ದರು.