ಹಾವೇರಿ: ಹಾವೇರಿ ಜಿಲ್ಲೆಯ (Haveri news) ರಾಣೇಬೆನ್ನೂರಿನಲ್ಲಿ ಭೀಕರ ಆಪಘಾತವೊಂದು (Road Accident) ಸಂಭವಿಸಿದ್ದು, ತಿರುಪತಿಗೆ (Tirupati) ಯಾತ್ರಾರ್ಥಿಗಳಾಗಿ ಹೊರಟಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 6 ಜನರಿಗೆ ಗಂಭೀರ ಗಾಯಗಳಾಗಿವೆ.
ಹಾವೇರಿಯಿಂದ ತಿರುಪತಿ ದೇವರ ದರ್ಶನಕ್ಕೆ ಕಾರಿನಲ್ಲಿ ಹೊರಟಿದ್ದ ಕುಟುಂಬ ಈ ಭೀಕರ ಅಪಘಾತಕ್ಕೀಡಾಗಿದೆ. ರಾಣೆಬೇನ್ನೂರಿನ ಹಲಗೇರಿ ಬೈಪಾಸ್ ಬಳಿ ವಾಹನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಪಲ್ಟಿ ಹೊಡೆದಿದೆ. ಎನ್ಎಚ್ 4 ಪಿಬಿ ರಸ್ತೆಯಿಂದ ಹಾರಿ ಕೆಳಗೆ ಸರ್ವಿಸ್ ರಸ್ತೆಗೆ ಬಿದ್ದಿದೆ.
ಮೃತಪಟ್ಟವರನ್ನು ಸುರೇಶ ವೀರಪ್ಪ ಜಾಡಿ (45), ಐಶ್ವರ್ಯ ಈರಪ್ಪ ಬಾರ್ಕಿ (22), ಚೇತನಾ ಪ್ರಭುರಾಜ ಸಮಗಂಡಿ (7), ಪವಿತ್ರಾ ಪ್ರಭುರಾಜ ಸಮಗಂಡಿ (28) ಎಂದು ಗುರುತಿಸಲಾಗಿದೆ. ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಶ ಹೊನ್ನಪ್ಪ ಬಾರ್ಕಿ, ಹೊನ್ನಪ್ಪ ನೀಲಪ್ಪ ಬಾರ್ಕಿ, ಪ್ರಭುರಾಜ ಈರಪ್ಪ ಸಮಗಂಡಿ, ಗೀತಾ ಹೊನ್ನಪ್ಪ ಬಾರ್ಕಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
Thunderbolt: ಮುಂಗಾರಿಗೆ ಮೊದಲೇ ಸಿಡಿಲಿನ ದುಃಸ್ವಪ್ನ, ಇಬ್ಬರ ಬಲಿ, ಇಬ್ಬರು ಗಂಭೀರ
ಚಿಕ್ಕೋಡಿ: ಮುಂಗಾರು ಆಗಮನಕ್ಕೆ ಮುನ್ನವೇ ಸಿಡಿಲಿನ ಮೂಲಕ ಇಬ್ಬರ ಬಲಿ ಪಡೆದುಕೊಂಡಿದೆ. ಚಿಕ್ಕೋಡಿ ಗ್ರಾಮಾಂತರ ಭಾಗದಲ್ಲಿ ಸಿಡಿಲಿನ ಹೊಡೆತಕ್ಕೆ ಇಬ್ಬರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ಹೊರವಲಯದಲ್ಲಿ ಘಟನೆ ಸಿಡಿಲು ಬಡಿದು ರೈತ ಮಹಿಳೆ ಸಾವಿಗೀಡಾಗಿದ್ದಾರೆ. ಶೋಭಾ ಕೃಷ್ಣ ಕುಲಗೋಡೆ (45) ಮೃತ ರೈತ ಮಹಿಳೆ. ಸಂಜೆ ಕೃಷಿ ಚಟುವಟಿಕೆ ಮಾಡುವ ಸಂದರ್ಭದಲ್ಲಿ ಸಿಡಿಲು ಹೊಡೆದು ಮೃತಪಟ್ಟಿದ್ದಾರೆ. ನಾಲ್ಕು ಜನರಿಗೆ ಗಾಯಗಳಾಗಿವೆ. ಮಲ್ಲಪ್ಪ ಶಂಕರ್ ಮೇತ್ರಿ, ಭಾರತಿ ಕೆಂಪಣ್ಣ ಕಮತೆ, ಬಾಬುರಾವ್ ಅಶೋಕ ಚೌವ್ಹಾಣ್, ಪ್ರವೀಣ್ ಕಲ್ಲಪ್ಪ ಧರ್ಮಟ್ಟಿ ಗಾಯಗೊಂಡವರು. ಗಾಯಾಳುಗಳು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೆಬ್ಬಾಳ ಗ್ರಾಮದಲ್ಲಿ ಸಿಡಿಲು ಅಪ್ಪಳಿಸಿ ಗುರು ಪುಂಡಲಿಕ (35) ಎಂಬವರು ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮುಗಿಸಿ ಮರದ ಕೆಳಗೆ ನಿಂತಾಗ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ಹೊಡೆತಕ್ಕೆ ಗುರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡ ಇಬ್ಬರಿಗೆ ಸಂಕೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಸಿಡಿಲು ಬಡಿದು 12 ಕುರಿಗಳು ಸಾವಿಗೀಡಾಗಿವೆ.
ಇಳಿಜಾರಿನಲ್ಲಿ ತಪ್ಪಿದ ಕಂಟ್ರೋಲ್; ಟ್ರ್ಯಾಕ್ಟರ್ ಪಲ್ಟಿಯಾಗಿ ಯುವಕ ಮೃತ್ಯು
ಚಿಕ್ಕಮಗಳೂರು: ಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಯುವಕನೊರ್ವ (Road Accident) ದಾರುಣವಾಗಿ ಮೃತಪಟ್ಟಿದ್ದಾನೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಒಕ್ಕಳ್ಳಿ ಬಳಿ ಘಟನೆ ನಡೆದಿದೆ. ರಸ್ತೆಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಪರಿಣಾಮ ಟ್ರ್ಯಾಕ್ಟರ್‌ನಲ್ಲಿದ್ದ ಸತೀಶ್ (28) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಣಕಲ್‌ನಿಂದ ಸಾರಗೋಡು ಗ್ರಾಮಕ್ಕೆ ಟ್ರ್ಯಾಕ್ಟರ್‌ನಲ್ಲಿ 50ಕ್ಕೂ ಹೆಚ್ಚು ಗೊಬ್ಬರದ ಚೀಲಗಳನ್ನು ತುಂಬಿಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಇಳಿಜಾರಿನಲ್ಲಿ ಭಾರ ತಡೆಯಲು ಆಗದೆ ಟ್ರ್ಯಾಕ್ಟರ್ ಪಲ್ಟಿ ಹೊಡೆದಿದೆ. ಪಲ್ಟಿಯಾದ ರಭಸಕ್ಕೆ ಟ್ರ್ಯಾಕ್ಟರ್ ಸಂಪೂರ್ಣ ಉಲ್ಟಾ ಹೊಡೆದಿದೆ. ಅದೃಷ್ಟವಶಾತ್ ಟ್ರ್ಯಾಕ್ಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸತೀಶ್ ಟ್ರ್ಯಾಕ್ಟರ್‌ನಡಿ ಸಿಲುಕಿ ಮೃತಪಟ್ಟಿದ್ದಾನೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: Road Accident : ಬೈಕ್ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದ ಸವಾರ ಮೃತ್ಯು; ಕೆರೆಗೆ ಕಾರು ಹಾರಿಸಿ ಪ್ರಾಣಬಿಟ್ಟ ಚಾಲಕ