ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಲಾರಿ (Road Accident) ಪಲ್ಟಿಯಾಗಿದ್ದು, ಸರ್ವೀಸ್ ರಸ್ತೆಯ ಜಾಲರಿಗೆ ಹಾಕಿದ್ದ ಕಬ್ಬಿಣದ ಪೈಪ್ ನೇರವಾಗಿ ಚಾಲಕನ ಎದೆ ಸಿಳಿದೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಹೂಲಿಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಘಟನೆ ನಡೆದಿದೆ. ಚಾಲಕನ ಎದೆಗೆ ಹೊಕ್ಕಿರುವ ಕಬ್ಬಿಣದ ಪೈಪ್ ಹೊರತೆಗೆಯಲು ಹರಸಾಹಸ ಪಡೆಬೇಕಾಯಿತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೈವೇ ಆಂಬ್ಯುಲೆನ್ಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೂಡಲೇ ಚಾಲಕ ಶಿವಾನಂದ ಬಡಗಿ (27) ಎದೆಗೆ ಹೊಕ್ಕಿದ ಕಬ್ಬಿಣದ ಪೈಪ್ ಹೊರತೆಗೆಯಲು ಹರಸಾಹಸ ಪಟ್ಟರು.
ಇತ್ತ ಅತಿಯಾದ ನೋವು, ರಕ್ತ ಸೋರುತ್ತಿದ್ದರೂ ಎದೆಯಲ್ಲಿ ಹೊಕ್ಕಿರುವ ಕಬ್ಬಿಣದ ಪೈಪ್ ಕಂಡು ದಿಕ್ಕು ತೋಚದೆ ಚಾಲಕ ಕುಳಿತಿದ್ದ. ಹುಬ್ಬಳ್ಳಿಯಿಂದ ದಾವಣಗೆರೆ ಕಡೆಗೆ ಹೊರಟಿದ್ದಾಗ ಈ ಅಪಘಾತ ಸಂಭವಿಸಿದೆ. ಕೂಡಲೇ ಕಬ್ಬಿಣದ ಪೈಪ್ ಕಟ್ ಮಾಡಿ ಚಾಲಕನನ್ನು ಹೊರತೆಗೆದು ಬಳಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಾಲಿ ರೈಡ್ ಮಾಡಲು ಬಂದವರು ಆಸ್ಪತ್ರೆಪಾಲು
ದೊಡ್ಡಬಳ್ಳಾಪುರ: ಜಾಲಿ ರೈಡ್ ಮಾಡಲು ಬಂದವರ ಬೈಕ್ ಅಪಘಾತಕ್ಕೀಡಾಗಿದ್ದು ಆಸ್ಪತ್ರೆಪಾಲಾಗಿದ್ದಾರೆ. ಜಾಲಿ ರೈಡ್‌ಗೆ ಬಂದು ಯೂ ಟರ್ನ್‌ಗೆ ನಿಂತಿದ್ದ ಬುಲೆಟ್ ಬೈಕ್‌ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನೂರು ಮೀಟರ್ ದೂರ ಹೋಗಿ ಬಿದ್ದ ಬುಲೆಟ್ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ಹೊರವಲಯದ ಸಿದ್ದೆನಾಯಕನಹಳ್ಳಿ ಬಳಿ ಘಟನೆ ನಡೆದಿದೆ.
ಬುಲೆಟ್ ಬೈಕ್ ಸವಾರ ಹೆದ್ದಾರಿಯಲ್ಲಿ ಯೂ ಟರ್ನ್ ಮಾಡಲು ನಿಂತಿದ್ದ . ಈ ವೇಳೆ ಹಿಂದಿನಿಂದ ವೇಗವಾಗಿ ಜಾಲಿ ರೈಡ್ ಬಂದ ಯುವಕ ಬುಲೆಟ್ ಬೈಕ್‌ಗೆ ಗುದ್ದಿದ್ದಾನೆ. ಅಪಘಾತದ ರಭಸಕ್ಕೆ ಬುಲೆಟ್ ಬೈಕ್ ನಜ್ಜುಗುಜ್ಜಾಗಿದೆ. ಬುಲೆಟ್ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರು ದೊಡ್ಡಬಳ್ಳಾಪುರ ಸರ್ಕಾರಿ ಆಸ್ವತ್ರೆಗೆ ದಾಖಲು ಮಾಡಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ