Site icon Vistara News

Karnataka Election: ಸರ್ಕಾರಿ ಅಧಿಕಾರಿಗಳಂತೆ ರೈತರಿಗೂ ಪಿಂಚಣಿ ವ್ಯವಸ್ಥೆ: ಎಚ್‌.ಡಿ. ದೇವೇಗೌಡ

H D Deve Gowda talking about farmer pension

H D Deve Gowda

ಮೈಸೂರು: ಸರ್ಕಾರಿ ಅಧಿಕಾರಿಗಳಿಗೆ ಪಿಂಚಣಿ ಇದೆ. ಅದೇ ರೀತಿ 60 ವರ್ಷ ತುಂಬಿದ ರೈತರಿಗೂ ಪಿಂಚಣಿ ವ್ಯವಸ್ಥೆ ಜಾರಿ ಮಾಡಲಾಗುವುದು. ನೀರಾವರಿ, ಸ್ತ್ರೀ ಸಬಲೀಕರಣ, ಶಿಕ್ಷಣ, ಆರೋಗ್ಯ ಸುಧಾರಣೆ ಮಾಡಲು ಜೆಡಿಎಸ್ ಮೇಲೆ ವಿಶ್ವಾಸ ಇಟ್ಟು ಬಹುಮತದ ಸರ್ಕಾರ ಕೊಡಿ, ಕೈ ಮುಗಿದು ಕೇಳುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (H D Deve Gowda) ಮನವಿ ಮಾಡಿದ್ದಾರೆ (Karnataka Election).

ಕೆ.ಆರ್. ನಗರದಲ್ಲಿ ಮಂಗಳವಾರ ನಡೆದ ರೋಡ್ ಶೋ ವೇಳೆ ಮಾತನಾಡಿದ ಅವರು, ಕುಡಿಯುವ ನೀರಿಗಾಗಿ ಸದನದಲ್ಲಿ ಏಕಾಂಗಿಯಾಗಿ ಹೋರಾಟ ಮಾಡಿದ್ದೇನೆ. 40 ಎಂಪಿಗಳು ಪ್ರಾಣ ತೆಗೆಯುತ್ತಿದ್ದಾರೆ ಅಂತ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು. ನಾನು ಕೋರ್ಟ್‌ನಲ್ಲಿ ಹೋರಾಟ ಮಾಡಿದೆ. ಅದರ ಫಲವಾಗಿ ಈಗ ಪ್ರತಿ ಹಳ್ಳಿ, ಕೆರೆಗೆ ನೀರು ಬರುತ್ತಿದೆ. ಸಾ.ರಾ. ಮಹೇಶ್ ಮುತ್ಸದ್ಧಿ ರಾಜಕಾರಣಿ. ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸುತ್ತಿದ್ದಾರೆ. ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಕೋರಿದರು.

ರೈತರ ಸಾಲಮನ್ನಾ ಮಾಡಿದ ಕೀರ್ತಿ ಕುಮಾರಸ್ವಾಮಿಗೆ ಸಲ್ಲಬೇಕು. ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿಯಲ್ಲಿ ರಾಜಕೀಯ ಮೀಸಲಾತಿ ನೀಡಿದವನು ನಾನು. ನಾಯಕ, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದು ಯಾರು ಅಂತ ಸತ್ಯ ಎಲ್ಲರಿಗೂ ತಿಳಿಯಬೇಕು. ಕೇಂದ್ರ ಸರ್ಕಾರ ಹಾರಂಗಿ ನೀರಿಗೆ ಒಂದು ರೂ. ಕೊಡಲಿಲ್ಲ. ಜೆಡಿಎಸ್ ರೈತರ ಪರವಾಗಿ ಹೋರಾಟ ಮಾಡಿದ ಏಕೈಕ ಪಕ್ಷವಾಗಿದೆ ಎಂದು ಹೇಳಿದರು.

ಇದನ್ನೂ ಓದಿ | Karnataka Election: ಕೊಟ್ಟ ಮಾತಿನಂತೆ ನಡೆಯುವ ಏಕೈಕ ಗಂಡು ಕುಮಾರಸ್ವಾಮಿ: ಎಚ್‌.ಡಿ. ದೇವೇಗೌಡ

ನಾಡಿಗೆ ಒಳಿತು ಮಾಡಲು ರಾಷ್ಟ್ರೀಯ ಪಕ್ಷಗಳಿಂದ ಸಾಧ್ಯವಿಲ್ಲ. ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ಜನ ನೋಡಿದ್ದಾರೆ. ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮೂಲಕ ಚುನಾವಣೆಗೆ ಹೋಗಿದ್ದಾರೆ. ನೀರಾವರಿ, ಆರೋಗ್ಯದಂತಹ ಮೂಲ ಸೌಕರ್ಯಗಳಿಗೆ ಜನ ಬೆಂಬಲ ಸಿಗಲಿದೆ. ಎಚ್‌.ಡಿ. ಕುಮಾರಸ್ವಾಮಿ (H D Kumaraswamy) ಅವರಿಗೆ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ಆದರೂ ಜನರ ಸೇವೆ ಮಾಡಲು ಆಶೀರ್ವಾದ ಕೋರಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ ತಿಳಿಸಿದರು.

ನಮ್ಮಲ್ಲೂ ಸ್ಟಾರ್ ಪ್ರಚಾರಕರು ಇದ್ದಾರೆ. ಎಚ್.ಡಿ.ರೇವಣ್ಣ, ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು ಅವರಂತಹ ನಾಯಕರು ಸ್ಥಳೀಯವಾಗಿ ಚುನಾವಣೆ‌ ಎದುರಿಸುತ್ತಿದ್ದಾರೆ. ಸಾ.ರಾ. ಮಹೇಶ್ ಜನಾನುರಾಗಿ ರಾಜಕಾರಣಿ. ಜಾತಿ, ಧರ್ಮ, ಪಕ್ಷ ಭೇದ ಮರೆತು ಒಳ್ಳೆಯ ಕೆಲಸ ಮಾಡಿದ್ದಾರೆ. ಆದ್ದರಿಂದ ಮತ್ತೆ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ | Karnataka Election: ಡಿಕೆಶಿ, ಸಿದ್ದರಾಮಯ್ಯ ಸಿಎಂ ಆಗಲು ನಂಬರ‍್ರೇ ಬಂದಿಲ್ಲ; ಈ ಬಾರಿ ಬಿಜೆಪಿಯವರೇ ಸಿಎಂ: ಅಮಿತ್‌ ಶಾ

ಕುಮಾರಸ್ವಾಮಿ ಅನಾರೋಗ್ಯ ನೆನೆದು ದೇವೇಗೌಡ ಕಣ್ಣೀರು

ಕೆ.ಆರ್.ನಗರ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಪ್ರಚಾರದ ವೇಳೆ ದೇವೇಗೌಡ ಅವರು ಕಣ್ಣೀರಿಟ್ಟಿದ್ದಾರೆ. ಸಾರ್ವಜನಿಕ ಭಾಷಣದ ವೇಳೆ ಕುಮಾರಸ್ವಾಮಿಯನ್ನು ನೆನೆದು ಗದ್ಗದಿತರಾದ ಅವರು, ಕುಮಾರಸ್ವಾಮಿ ಹೃದಯಕ್ಕೆ ಎರಡು ಬಾರಿ ಆಪರೇಷನ್ ಆಗಿದೆ. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರೆ. ಆದರೂ ಪ್ರತಿ ದಿನ ಐದು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ಸರ್ಕಾರವನ್ನು ತರಲೇಬೇಕು ಎನ್ನುವ ಹಠ, ಛಲ ಆ ಮನುಷ್ಯ‌ನಿಗೆ ಇದೆ. ಜನರ ಕಣ್ಣೀರು ಒರೆಸಲು ಸ್ವಂತ ಬಲದ ಸರ್ಕಾರ ಕೊಡಿ. ನಮಗೆ ಯಾರ ಸಹವಾಸವೂ ಬೇಡ. ಈಗಾಗಲೇ ಕಾಂಗ್ರೆಸ್, ಬಿಜೆಪಿ ಇಬ್ಬರನ್ನೂ ನೋಡಿ ಆಗಿದೆ ಎಂದು ಹೇಳಿದರು.

Exit mobile version