ರಾಮನಗರ: ರಾಜ್ಯದಲ್ಲಿ ಬಡವರ ಪರ ಇರುವ ರಾಜಕಾರಣಿ ಎಂದರೆ ಅದುವೇ ಎಚ್.ಡಿ. ಕುಮಾರಸ್ವಾಮಿ. ಹಾಗಾಗಿ ಅವರಿಗೆ ಈ ಬಾರಿ ನೀವು ಆರ್ಶೀವಾದ ಮಾಡಬೇಕು. ಅವರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಚನ್ನಪಟ್ಟಣಕ್ಕೆ ಅವರು ಬರಲು ಸಾಧ್ಯವಾಗಲ್ಲ. ಅವರ ಪರವಾಗಿ ಎಲ್ಲಾ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕಿದೆ. ಚನ್ನಪಟ್ಟಣ ನಮಗೆ ಕರ್ಮಭೂಮಿಯಾಗಿದೆ. ಮೇ 10 ರಂದು ನಡೆಯುವ ಚುನಾವಣೆಯಲ್ಲಿ (Karnataka Election 2023) ಕುಮಾರಸ್ವಾಮಿ ಅವರನ್ನು ಗೆಲ್ಲಿಸಿ, ಮೇ 13ಕ್ಕೆ ಅವರು ಸಿಎಂ ಆಗುತ್ತಾರೆ. ಹಾಗಾಗಿ ಎಲ್ಲರೂ ಕುಮಾರಸ್ವಾಮಿ ಪರವಾಗಿ ಕೆಲಸ ಮಾಡಿ ಎಂದು ಎಚ್.ಡಿ. ದೇವೇಗೌಡ ಅವರು ಕರೆ ನೀಡಿದರು.
ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಮೊದಲ ಬಾರಿಗೆ ಕುಮಾರಸ್ವಾಮಿ ಕ್ಷೇತ್ರದಲ್ಲಿ ಪ್ರಚಾರಕ್ಕಾಗಿ ಬಂದಿದ್ದೇನೆ. ಪಂಚರತ್ನ ರಥಯಾತ್ರೆ ಎಂಬುದು ವಿಶೇಷ ಕಾರ್ಯಕ್ರಮವಾಗಿದೆ. ಇದು ಜನಪರ ಯೋಜನೆಯಾಗಿದೆ. ಈ ಕ್ಷೇತ್ರದಲ್ಲಿ ಪ್ರಚಾರ ಮುಗಿಸಿ ಬೇರೆ ಕ್ಷೇತ್ರಗಳಿಗೆ ಹೋಗುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಕ್ಷೇತ್ರಕ್ಕೆ ಬರೋದನ್ನು ಬೇಡ ಎನ್ನಲು ಆಗುತ್ತಾ? ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಜೆಡಿಎಸ್ – ಬಿಜೆಪಿ ಪ್ರಚಾರದ ಅಬ್ಬರ
ಭಾನುವಾರ ಒಂದೇ ದಿನ ಚನ್ನಪಟ್ಟಣ ಕ್ಷೇತ್ರ ಹಾಲಿ ಮತ್ತು ಮಾಜಿ ಪ್ರಧಾನಿಗಳ ಪ್ರಚಾರಕ್ಕೆ ಸಾಕ್ಷಿಯಾಗಿತ್ತು. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿದ ಬಳಿಕ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ನಡೆಸಿದರು. ಮತ್ತೊಂದೆಡೆ ಕ್ಷೇತ್ರದ ವಿವಿಧೆಡೆ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಪರ ಎಚ್.ಡಿ. ದೇವೇಗೌಡ ಅವರು ಪ್ರಚಾರ ನಡೆಸಿದರು.
ಇದನ್ನೂ ಓದಿ | Karnataka Election 2023: ಶೀಘ್ರವೇ ನನಗೆ ಬೈಯುವುದರಲ್ಲಿ ಕಾಂಗ್ರೆಸಿಗರು ಶತಕ ಬಾರಿಸಲಿದ್ದಾರೆ; ಪ್ರಧಾನಿ ಮೋದಿ
ಇಗ್ಗಲೂರು ಗ್ರಾಮಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಇಗ್ಗಲೂರು ಜಲಾಶಯ ವೀಕ್ಷಣೆ ಬಳಿಕ ಸಮಾವೇಶಕ್ಕೆ ತೆರಳಿದರು. ಈ ಜಲಾಶಯ ಚನ್ನಪಟ್ಟಣ ತಾಲೂಕಿಗೆ ನೀರಾವರಿ ಸೌಕರ್ಯ ಒದಗಿಸಲು ದೇವೇಗೌಡರು ನೀರಾವರಿ ಸಚಿವರಾಗಿದ್ದ ವೇಳೆ ನಿರ್ಮಾಣವಾಗಿತ್ತು.
ಮಂಡ್ಯದಲ್ಲಿ ಬುಲ್ಡೋಜರ್ ತಂದು ನೆಲಸಮ ಮಾಡ್ತೇನೆ ಅಂದರಾ ಯೋಗಿ?: ಎಚ್.ಡಿ. ಕುಮಾರಸ್ವಾಮಿ
ಮಂಡ್ಯ: ಚುನಾವಣಾ (Karnataka Election 2023) ಪ್ರಚಾರಕ್ಕೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಅವರು ಮಂಡ್ಯಕ್ಕೆ ಬಂದಾಗ ಬುಲ್ಡೋಜರ್ ತಂದು ಕಟ್ಟಡಗಳ ಸಹಿತ ಕೆಲವು ಸ್ಥಳಗಳನ್ನು ನೆಲ ಸಮ ಮಾಡುತ್ತೇನೆ ಎಂದು ಹೇಳಿದರಾ? ನಮಗೆ ಕರ್ನಾಟಕವೇ ಮಾಡೆಲ್. ಯುಪಿ ಮಾಡೆಲ್ ಅವಶ್ಯಕತೆ ನಮಗೆ ಇಲ್ಲ. ಕರ್ನಾಟಕದ ಮುಂದೆ ಯಾವುದೇ ಮಾಡೆಲ್ ಬೇಡ. ಕರ್ನಾಟಕದ ಮಾಡೆಲ್ ಮುಂದೆ ಯಾವುದೇ ಮಾಡೆಲ್ ವರ್ಕೌಟ್ ಕೂಡಾ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು.
ಆದಿಚುಂಚನಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯೋಗಿ ಆದಿತ್ಯನಾಥ ಅವರ ಮಂಡ್ಯ ಭೇಟಿ ವಿಚಾರದ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಯೋಗಿ ಆದಿತ್ಯನಾಥ ಅವರು ಜಿಲ್ಲೆಯ ಜನರಿಗೆ ಏನು ಸಂದೇಶ ಕೊಟ್ಟಿದ್ದಾರೆ? ನಾಥ ಪರಂಪರೆ ಇಟ್ಟುಕೊಂಡು ಉತ್ತರ ಪ್ರದೇಶದಲ್ಲಿ ರಾಜಕಾರಣ ಮಾಡೋದಕ್ಕೂ ಇಲ್ಲಿ ರಾಜಕಾರಣ ಮಾಡೋದಕ್ಕೂ ವ್ಯತ್ಯಾಸ ಇದೆ. ಇಲ್ಲಿ ನಾಥ ಪರಂಪರೆ ಪಂಥ ಚುಂಚನಗಿರಿ ಕ್ಷೇತ್ರಕ್ಕೆ ಮಾತ್ರ ಸೀಮಿತ. ಇದು ಬೇರೆಯವರಿಗೆ ಅಲ್ಲ. ಇಲ್ಲಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ | Karnataka Election 2023: ಕಾಂಗ್ರೆಸ್, ಜೆಡಿಎಸ್‌ಗೆ ಕರ್ನಾಟಕ ಎಟಿಎಂ; ಬಿಜೆಪಿಗೆ ಅಭಿವೃದ್ಧಿ ಮುಖ್ಯ ಎಂದ ಪ್ರಧಾನಿ ಮೋದಿ
ಬುಲ್ಡೋಜರ್ ಬಗ್ಗೆ ಮಾತನಾಡಲ್ಲ. ಆ ಸಂಸ್ಕೃತಿಯಲ್ಲೂ ಬೆಳೆದಿಲ್ಲ. ಸರ್ವೇ ಜನಾಃ ಸುಖಿನೋ ಭವಂತು ನಮ್ಮ ನಾಥಪರಂಪರೆಯಾಗಿದೆ. ಅಲ್ಲಿನ ನಾಥಪರಂಪರೆಯು ಬುಲ್ಡೋಜರ್ ಹೊಡೆಸೋದು, ಯಾರನ್ನು ಬೇಕಾದರೂ ಫೇಕ್ ಎನ್‌ಕೌಂಟರ್ ಮಾಡಿಸುವುದಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ನಾನು ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಇಬ್ಬರೂ ಒಂದೊಂದು ದಿನ ಜಿಲ್ಲಾ ಪ್ರವಾಸ ಮಾಡುತ್ತೇವೆ. ರಾಜ್ಯದಲ್ಲಿ ಈ ಬಾರಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.