ಮಂಗಳೂರು: 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ (Karnataka Election) ಬಳಿಕ ನಾವು ಕಾಂಗ್ರೆಸ್ ಮನೆ ಬಾಗಿಲಿಗೆ ಹೋಗಿಲ್ಲ. ಅವರಾಗೇ ನಮ್ಮ ಬಳಿ ಬಂದಿದ್ದರು. ಆದರೆ, ಕೊನೆಗೆ ಕೈ ಕೊಟ್ಟರು. ಅದರ ದುಷ್ಪರಿಣಾಮವನ್ನು ಕಾಂಗ್ರೆಸ್ ಅನುಭವಿಸಲಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (HD Devegowda) ಗುಡುಗಿದರು.
ಸುರತ್ಕಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ. ದೇವೇಗೌಡ, ಇಡೀ ಹಿಂದುಸ್ತಾನದಲ್ಲಿ ರೈತರ ಸಾಲ ಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ. ಕಳೆದ ಬಾರಿ ಕಾಂಗ್ರೆಸ್ ನಮ್ಮ ಬಳಿಗೆ ಅಂದು ಬಂದು ಸಮ್ಮಿಶ್ರ ಸರ್ಕಾರದ ಪ್ರಸ್ತಾವನೆಯನ್ನು ಇಟ್ಟಿತ್ತು. ಅಶೋಕ್ ಗೆಹ್ಲೋಟ್, ಗುಲಾಂ ನಬಿ ಆಝಾದ್ ಬಂದು ನಿಮ್ಮ ಮಗನನ್ನು ಮುಖ್ಯಮಂತ್ರಿ ಮಾಡ್ತೇನೆ ಒಪ್ಪಿಕೊಳ್ಳಿ ಎಂದರು. ಆದರೆ, ಬಳಿಕ ಆದ ಘಟನೆಗಳಿಗೆ ಕಾರಣ ಯಾರೂ ಎನ್ನುವುದು ಎಲ್ಲರಿಗೂ ಗೊತ್ತು ಎಂದು ಹೇಳಿದರು.
ಮೇ 13 ರಂದು ಎಚ್.ಡಿ. ಕುಮಾರಸ್ವಾಮಿ ಸರ್ಕಾರ
ಪ್ರಧಾನಿ ನರೇಂದ್ರ ಮೋದಿ ಮಾತಿಗೆ ಮಹತ್ವವನ್ನು ಕೊಡುವುದಿಲ್ಲ. ರಾತ್ರಿ ಎರಡು ಗಂಟೆಯವರೆಗೂ ಪ್ರಚಾರವನ್ನು ಮಾಡುತ್ತಿದ್ದೇವೆ. ನಮ್ಮ ವಿಚಾರವನ್ನು ಮನೆ ಮನೆಗೆ ತಲುಪಿಸಿದ್ದೇವೆ. ಈ ಹಿಂದೆ ಇದ್ದಿದ್ದಕ್ಕೂ ಈಗ ಇರುವುದಕ್ಕೂ ವ್ಯತ್ಯಾಸ ಇದೆ. ಮೇ 13 ರಂದು ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರ ಬರಲಿದೆ
ಮೊಯಿದ್ದೀನ್ ಬಾವರಿಗೆ ಅನ್ಯಾಯವಾಗಿದೆ
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮೊಯಿದ್ದೀನ್ ಬಾವ ಅಭ್ಯರ್ಥಿಯಾಗಿದ್ದಾರೆ. ಎಲ್ಲ ಸಮೀಕ್ಷೆಗಳು ಬಾವ ಪರವಾಗಿ ಇದೆ. ಉತ್ತರ ಕ್ಷೇತ್ರಕ್ಕೆ ಅವರ ಸ್ವತಂತ್ರವಾದ ಕೊಡುಗೆ ಇದೆ. ಮೊಯಿದ್ದೀನ್ ಬಾವರಿಗೆ ಕಾಂಗ್ರೆಸ್‌ನಲ್ಲಿ ದುರುದ್ದೇಶದಿಂದ ಸೀಟು ತಪ್ಪಿಸಲಾಯಿತು. ಅವರ ಕೆಲಸವನ್ನು ಗುರುತಿಸಿ ಉತ್ತರದಲ್ಲಿ ನಾವು ಟಿಕೆಟ್ ನೀಡಿದ್ದೇವೆ. ಅವರಿಗಾದ ಅನ್ಯಾಯವನ್ನು ಸರಿಪಡಿಸಲು ನಮ್ಮ ಪಕ್ಷವಿದೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.
ಮೋದಿ ಹೇಳಿಕೆಗೆ ನಾನು ಟೀಕೆ ಮಾಡುವುದಿಲ್ಲ
ಕಳೆದ ಬಾರಿ ದೇವೇಗೌಡ ಗುಜರಾತಿಗೆ ಬನ್ನಿ ಸಾಕ್ತೇನೆ ಅಂತಾ ಹೇಳಿದ್ದರು. ಬಹುಮತದ ಸರ್ಕಾರ ಬಂದರೆ ರಾಜೀನಾಮೆ ಕೊಡ್ತೇನೆ ಅಂದಿದ್ದೆ. ರಾಜೀನಾಮೆ ಕೊಡೋಕೆ ಹೋದಾಗ ನರೇಂದ್ರ ಮೋದಿ ಅವರು ತಿರಸ್ಕರಿಸಿ ನಿಮ್ಮ ಸೇವೆ ಅಗತ್ಯ ಇದೆ ಎಂದು ಹೇಳಿದ್ದರು. ಮೋದಿಯವರಿಗೆ ವ್ಯಕ್ತಿಗತವಾಗಿ ನಾನು ಟೀಕೆ ಮಾಡಲ್ಲ. ಅವರ ಹೇಳಿಕೆಗೆ ನಾನು ಟೀಕೆ ಮಾಡುವುದಿಲ್ಲ ಎಂದು ಎಚ್.ಡಿ. ದೇವೇಗೌಡ ಹೇಳಿದರು.