Site icon Vistara News

HD Devegowda : ಬಿಜೆಪಿಗೆ ಯತ್ನಾಳ್‌ ವಿಪಕ್ಷ ನಾಯಕ, ಸಿ.ಟಿ. ರವಿ ರಾಜ್ಯಾಧ್ಯಕ್ಷ; ಘೋಷಣೆ ಮಾಡಿದವರು ಎಚ್‌.ಡಿ ದೇವೇಗೌಡ!

HD Devegowda CT Ravi Yarnal

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಮೈತ್ರಿ ನಡೆಯಲಿದೆ, ಜೆಡಿಎಸ್‌ ನಾಯಕರಾಗಿರುವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರೇ ವಿಪಕ್ಷ ನಾಯಕರಾಗುತ್ತಾರೆ (Opposition leader in Assembly) ಎಂಬ ಸುದ್ದಿಗಳ ನಡುವೆಯೇ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (HD Devegowda) ಅವರು ನಿಖರ ಮಾಹಿತಿಯೊಂದನ್ನು ತೆರೆದಿಟ್ಟಿದ್ದಾರೆ. ಅವರ ಪ್ರಕಾರ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagowda pateel yatnal) ಅವರು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಲಿದ್ದಾರೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿರುವ ಸಿ.ಟಿ. ರವಿ (CT Ravi) ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಲಿದ್ದಾರೆ (BJP State President).

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ವಿದೇಶ ಪ್ರವಾಸದಲ್ಲಿರುವ ಹೊತ್ತಿನಲ್ಲಿ ವಿಶೇಷ ಮಾಧ್ಯಮ ಗೋಷ್ಠಿ ನಡೆಸಿದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಈ ಮಾಹಿತಿ ತೆರೆದಿಟ್ಟರು. ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡು, ಇಲ್ಲವೇ ವಿಲೀನ ಮಾಡಿಕೊಂಡು ಕಾಂಗ್ರೆಸ್‌ ವಿರುದ್ಧ ಜತೆಯಾಗಿ ಹೋರಾಟ ಮಾಡಲಿದೆ. ವಿಧಾನಸಭೆಯಲ್ಲಿ ಆಗಲೇ ಕುಮಾರಸ್ವಾಮಿ ಅವರೇ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿಯಲಿದೆಯೇ ಎಂದು ಪ್ರಶ್ನಿಸಿದಾಗ ದೇವೇಗೌಡರು ಈ ಮಾತು ಹೇಳಿದರು.

ಎಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಪ್ರತಿಪಕ್ಷ ನಾಯಕನಾಗುವ ವಿಚಾರವೇನೂ ಇಲ್ಲ. ಬಿಜೆಪಿ ಪ್ರತಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರ ಆಯ್ಕೆಯನ್ನು ಆಗಲೇ ಚರ್ಚೆ ಮಾಡಿದೆ. ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನಾಗುವ ಮತ್ತು ಸಿ.ಟಿ. ರವಿ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಾರೆ ಎನ್ನುವುದು ಬಹುತೇಕ ಅಂತಿಮವಾಗಿ ಎಂದು ದೇವೇಗೌಡರು ಹೇಳಿದರು.

ಹೊಂದಾಣಿಕೆಯಲ್ಲ ಹೋರಾಟ ಎಂದ ದೇವೇಗೌಡರು

ಸದನದಲ್ಲಿ ಬಿಜೆಪಿ-ಜೆಡಿಎಸ್ ಪರಸ್ಪರ ಕೈಜೋಡಿಸಿಕೊಂಡು ಹೋಗುತ್ತಿರುವ ಬಗ್ಗೆ ಕೇಳಿದಾಗ, ಬಿಜೆಪಿ ಅಧಿಕೃತ ವಿರೋಧ ಪಕ್ಷ. ನಮ್ಮದು ನಮ್ಮದು ಅನಧಿಕೃತ ವಿಪಕ್ಷ. ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಹೋಗಿಲ್ಲ. ವಿರೋಧದ ವಿಚಾರ ಬಂದಾಗ ಹೋರಾಟ ನಡೆಯುತ್ತದೆ. ಇದು ಕಾಂಗ್ರೆಸ್ ಇದ್ದಾಗಲೂ ನಡೆದಿದೆ, ಬಿಜೆಪಿ ಇದ್ದಾಗಲೂ ನಡೆಯುತ್ತಿದೆ. ಕಾಂಗ್ರೆಸ್ ವಿಪಕ್ಷವಾಗಿ ಇದ್ದಾಗಲೂ ಒಟ್ಟಿಗೆ ವಿರೋಧ ಮಾಡಿದ್ದೇವೆ. ಇದರಲ್ಲಿ ಇದರಲ್ಲಿ ಹೊಂದಾಣಿಕೆ ಅನ್ನೋ ವಿಚಾರ ಬಳಸೋದು ಬೇಡ ಎಂದು ದೇವೇಗೌಡರು ಹೇಳಿದರು.

ಇದನ್ನೂ ಓದಿ: BJP Politics : ದಿಲ್ಲಿಯಲ್ಲಿ ರಾಜ್ಯ ಬಿಜೆಪಿ ಸಂಚಲನ; ಮೋದಿ ಜತೆ ತೇಜಸ್ವಿನಿ ಅನಂತಕುಮಾರ್, ಅಮಿತ್‌ ಶಾ ಜತೆ ವಿಜಯೇಂದ್ರ

ಕರೆಕ್ಟಾಗಿ ಟ್ರ್ಯಾಕ್‌ ಮಾಡಿದ ದೇವೇಗೌಡರು

ದೇವೇಗೌಡರು ತಮ್ಮ ಈ ವಯಸ್ಸಿನಲ್ಲೂ ಕರ್ನಾಟಕ ರಾಜಕೀಯವನ್ನು ಕರಾರುವಕ್ಕಾಗಿ ಟ್ರ್ಯಾಕ್‌ ಮಾಡುತ್ತಿರುವುದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಗೊಂಡಿತು. ವಿಪಕ್ಷ ನಾಯಕನ ವಿಚಾರ ಬಂದಾಗ ಯಾವುದೇ ಗೊಂದಲವಿಲ್ಲದೆ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿವರಿಸಿದರು.

ಸಿ.ಟಿ. ರವಿ ರಾಜ್ಯಾಧ್ಯಕ್ಷರಾಗುತ್ತಾರೆ ಎನ್ನುವ ಸಂಗತಿ ಕಳೆದ ಕೆಲವು ದಿನಗಳಿಂದಲೇ ಸುದ್ದಿಯಲ್ಲಿದೆ. ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿ ಕಾಲಿಗೆ ಬಿದ್ದು ಆಶೀರ್ವಾದ ಕೇಳಿದ್ದು, ಅಮಿತ್‌ ಶಾ ಅವರು ಬಿವೈ ವಿಜಯೇಂದ್ರ ಅವರನ್ನು ಕರೆಸಿಕೊಂಡು ಮಾತನಾಡಿದ್ದು ಎಲ್ಲವೂ ಸಿ.ಟಿ. ರವಿ ಅವರಿಗೆ ನಿಮ್ಮ ಕೃಪಾಶೀರ್ವಾದ ಇರಲಿ, ವಿರೋಧ ಬೇಡ ಎಂಬ ಸಂದೇಶವಾಗಿತ್ತು ಎಂದು ಹೇಳಲಾಗಿತ್ತು. ಜತೆಗೆ ಯಡಿಯೂರಪ್ಪ ಅವರು ತಮ್ಮ ಬದ್ಧ ಟೀಕಾಕಾರರಾದ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದು ಕೂಡಾ ಇದೇ ಲೆಕ್ಕಾಚಾರದ ಭಾಗವಾಗಿತ್ತು. ಇದನ್ನೇ ಎಚ್.ಡಿ. ದೇವೇಗೌಡ ಅವರು ಚೆನ್ನಾಗಿ ಗ್ರಹಿಸಿ ಬಹಿರಂಗವಾಗಿ ಹೇಳಿದ್ದಾರೆ.

Exit mobile version