ಬೆಂಗಳೂರು: ಕಾಂಗ್ರೆಸ್ ಪಕ್ಷ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 130 ಸ್ಥಾನ ಪಡೆಯುತ್ತದೆ ಎಂದು ಸಮೀಕ್ಷೆ ಬಂದಿರುವುದೆಲ್ಲ ನಕಲಿಯಾಗಿದ್ದು, ಆ ಪಕ್ಷ 70ಕ್ಕಿಂತ ಹೆಚ್ಚು ಸ್ಥಾನ ಪಡೆಯುವುದಿಲ್ಲ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಗಿಂತಲೂ ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸವಾಲು ಹಾಕಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಈ ಮಾತು ಹೇಳಿದ್ದಾರೆ. ಕಾಂಗ್ರೆಸ್ ಶಕ್ತಿ ಇರುವುದು 60 ರಿಂದ 65 ಸೀಟು ಅಷ್ಟೇ. 2013ರಲ್ಲಿ ಬಿ.ಎಸ್. ಯಡಿಯೂರಪ್ಪನವರು ಬಿಜೆಪಿ ತೊರೆದು ಇನ್ನೊಂದು ಪಕ್ಷ ಮಾಡದಿದ್ದರೆ ಸಿದ್ದರಾಮಯ್ಯ ಅಂದು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಅವರು ಯಡಿಯೂರಪ್ಪನವರನ್ನು ನೆನಪಿಸಿಕೊಳ್ಳಬೇಕು. ಅಂದು ಅಧಿಕಾರದಲ್ಲಿದ್ದ ಪಕ್ಷ ನಂತರ 2018ರಲ್ಲಿ 78ಕ್ಕೆ ಇಳಿದಿದ್ದೇ ಇದಕ್ಕೆ ಸಾಕ್ಷಿ.
ಇವತ್ತು ಹೇಳುತ್ತಿದ್ದೇನೆ ಬರೆದಿಟ್ಡುಕೊಳ್ಳಿ. ಕಾಂಗ್ರೆಸ್ ಪಕ್ಷ 70 ಸೀಟು ದಾಟುವುದಿಲ್ಲ. ನಮ್ಮ ಪಕ್ಷಕ್ಕೆ ಜನತೆಯ ಮತ್ತು ದೇವರ ಆಶೀರ್ವಾದ ಇದೆ. ನಮ್ಮ ಪಕ್ಷ ಈ ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಮೇಲಿರುತ್ತದೆಯೇ ಹೊರತು ಕೆಳಗಿರುವುದಿಲ್ಲ ಎಂದು ನಾನು ಚಾಲೆಂಜ್ ಮಾಡುತ್ತೇನೆ ಎಂದರು.
ಇದನ್ನೂ ಓದಿ | ಬಿಜೆಪಿ ಎಂದರೆ ಬೆಲೆ ಏರಿಕೆ, ಬೆಲೆ ಏರಿಕೆ ಎಂದರೆ ಬಿಜೆಪಿ: ಕುಮಾರಸ್ವಾಮಿ ಕಿಡಿ
ಬೆಂಗಳೂರು ಅಭಿವೃದ್ಧಿ ಮಾಡಿದ್ದು ನಾವು
ಹಿಂದಿನ ಸರ್ಕಾರಗಳ ವೈಫಲ್ಯದಿಂದ ಬೆಂಗಳೂರಿನಲ್ಲಿ ಸಮಸ್ಯೆ ಹೆಚ್ಚಾಗಿದೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಎಚ್.ಡಿ. ಕುಮಾರಸ್ವಾಮಿ, 2008 ರಿಂದ 2013ರವರೆಗೂ ಅಧಿಕಾರ ನಡೆಸಿದ್ದು ಬಿಜೆಪಿ ಸರ್ಕಾರ. ಆಮೇಲೆ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಿದೆ. ನಾನು 14 ತಿಂಗಳು ಮೈತ್ರಿ ಸರ್ಕಾರದಲ್ಲಿದ್ದೆ. 2008ರಲ್ಲಿ ಹೊರ ವರ್ತುಲ ರಸ್ತೆ (ಔಟರ್ ಪೆರಿಫೆರಲ್ ರಿಂಗ್‌ರೋಡ್) ನಿರ್ಮಾಣಕ್ಕೆ ಚಾಲನೆ ನೀಡಿದ್ದೆ. ಒಳ ವರ್ತುಲ ರಸ್ತೆಗೆ (ಇನ್ನರ್ ರಿಂಗ್‌ರೋಡ್) ಅನುದಾನ ನೀಡಿದ್ದೆ. ಈ ಯೋಜನೆಗಳೆಲ್ಲವೂ ನನೆಗುದಿಗೆ ಬಿದ್ದಿವೆ ಎಂದು ಟೀಕಿಸಿದರು.
ಬಿಬಿಎಂಪಿ ಕಚೇರಿಯಲ್ಲಿ ದಾಖಲೆಗೆ ಬೆಂಕಿ ಇಟ್ಟವರು ಯಾರು? ಅದಕ್ಕೆ ಸಿಎಂ ಉತ್ತರ ಕೊಡುತ್ತಾರೆಯೇ? ಎಂದು ಪ್ರಶ್ನಿಸಿದ ಎಚ್‌ಡಿಕೆ, ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸೆಂಟರ್ ಅನ್ನು ನಾನು ಸಿಎಂ ಆದಾಗಲೇ ಮಾಡಿದ್ದೆ. ಈಗ ಅದಕ್ಕೆ ಸುಣ್ಣ ಬಣ್ಣ ಹೊಡೆದು ಚಾಲನೆ ನೀಡಿದ್ದಾರೆ. ಬೆಂಗಳೂರಿನ ಈಗಿನ ಪರಿಸ್ಥಿತಿಗೆ ಎರಡೂ ರಾಷ್ಟ್ರೀಯ ಪಕ್ಷಗಳು ಕಾರಣ. ಅಭಿವೃದ್ಧಿ ಹೆಸರಿನಲ್ಲಿ ಲೂಟಿ ನಡೆಯುತ್ತಲೇ ಇದೆ ಎಂದು ಕಿಡಿಕಾರಿದರು.
ಜನತಾಮಿತ್ರ ಕರಪತ್ರ ಬಿಡುಗಡೆ:
ಎಚ್.ಡಿ. ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬೆಂಗಳೂರಿಗೆ ನೀಡಿರುವ ಕೊಡುಗೆಗಳ ಕುರಿತ ಜನತಾ ಮಿತ್ರ ಕರಪತ್ರಗಳನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಕುಮಾರಸ್ವಾಮಿ, ಶುಕ್ರವಾರ 15 ಜನತಾ ಮಿತ್ರ ವಾಹನಗಳಿಗೆ ಚಾಲನೆ ನೀಡಿದ್ದೇವೆ. ಈಗ ಕರಪತ್ರಗಳ ದಾಖಲೆಯನ್ನು ಬಿಡುಗಡೆ ಮಾಡುತ್ತಿದ್ದೇವೆ. ದೇವೇಗೌಡರು ಹಾಗೂ ನನ್ನ ಅವಧಿಯಲ್ಲಿ ಆಗಿರುವ ಅಭಿವೃದ್ದಿಯನ್ನು ಜನರ ಮುಂದಿಡುತ್ತೇವೆ. ಮನೆ ಮನೆಗಳಿಗೆ ಕರಪತ್ರಗಳನ್ನು ಹಂಚಲು ತೀರ್ಮಾನ ಮಾಡಲಾಗಿದೆ. ಜತೆಗೆ ಹದಿನೈದು ದಿನ ಸುಮಾರು 70 ರಿಂದ 80 ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ಮಾಜಿ ಶಾಸಕರಾದ ಹೆಚ್.ಎಂ. ರಮೇಶ್ ಗೌಡ, ಸುರೇಶ್ ಬಾಬು ಉಪಸ್ಥಿತರಿದ್ದರು.
ಇದನ್ನೂ ಓದಿ | ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಂ ಅಲ್ಲ ಎಂದ ಎಚ್.ಡಿ. ಕುಮಾರಸ್ವಾಮಿ