Site icon Vistara News

Prajwal Revanna Video: ನಾನು ‘ಅಮಾಯಕ’ ಎನ್ನುವ ಪ್ರಜ್ವಲ್‌ಗೆ ‘ವಿಸ್ತಾರ ನ್ಯೂಸ್‌’ 10 ಪ್ರಶ್ನೆಗಳು

Prajwal Revanna Video

HD Kumaraswamy First Reaction About Prajwal Revanna Video

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕಳೆದ ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರೀಗ ವಿಡಿಯೊದಲ್ಲಿ ಪ್ರತ್ಯಕ್ಷರಾಗಿದ್ದಾರೆ. ವಿದೇಶದಲ್ಲಿದ್ದಾರೆ ಎನ್ನಲಾಗುವ ಪ್ರಜ್ವಲ್‌ ರೇವಣ್ಣ, ವಿಡಿಯೊ (Prajwal Revanna Video) ಬಿಡುಗಡೆ ಮಾಡಿದ್ದು, “ನಾನು ಮೇ 31ರಂದು ವಿಚಾರಣೆಗೆ ಹಾಜರಾಗುತ್ತೇನೆ. ನಾನು ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತಿದ್ದು, ಆರೋಪಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ” ಎಂದಿದ್ದಾರೆ. ಆದರೆ, ನನಗೆ ಪ್ರಕರಣದ ಬಗ್ಗೆ ಗೊತ್ತೇ ಇರಲಿಲ್ಲ, ನಾನು ತಪ್ಪೇ ಮಾಡಿಲ್ಲ, ಕಾನೂನಿನ ಬಗ್ಗೆ ಗೌರವ ಇದೆ ಎನ್ನುವ ಪ್ರಜ್ವಲ್‌ ರೇವಣ್ಣ (Prajwal Revanna) ಅವರು ಕಳೆದ 1 ತಿಂಗಳಿಂದ ಏಕೆ ವಿಚಾರಣೆಗೆ ಹಾಜರಾಗಲಿಲ್ಲ? ಸಾರ್ವಜನಿಕರಿಗೆ ಮುಖ ತೋರಿಸಲಿಲ್ಲ? ಜನರ ಮನಸಲ್ಲಿರುವ ಇಂತಹ 10 ಪ್ರಶ್ನೆಗಳನ್ನು ‘ವಿಸ್ತಾರ ನ್ಯೂಸ್’‌ ಪ್ರಜ್ವಲ್‌ ರೇವಣ್ಣ ಅವರಿಗೆ ಕೇಳಿದೆ. ಅವು ಇಂತಿವೆ.

ವಿಸ್ತಾರ ನ್ಯೂಸ್‌ 10 ಪ್ರಶ್ನೆಗಳು

  1. ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಿದೆ ಎಂದು ಹೇಳುತ್ತಿರುವ ನೀವು ಒಂದು ತಿಂಗಳಿಂದ ತಲೆಮರೆಸಿಕೊಂಡಿರುವುದು ಏಕೆ?
  2. ಯುಟ್ಯೂಬ್‌ ಮೂಲಕ ಪ್ರಕರಣ ಗೊತ್ತಾಗಿದೆ ಅಂತಿದ್ದೀರಿ, ಗೊತ್ತಾದ ಮೇಲೂ ವಿದೇಶದಲ್ಲೇ ಇರುವುದೇಕೆ? ಆಗಲೇ ಸ್ಪಷ್ಟನೆ ನೀಡಲಿಲ್ಲ ಏಕೆ?
  3. ಅಮಾಯಕರಾದ ನೀವು ಕಾಂಗ್ರೆಸ್‌ನ ನವೀನ್‌ ಗೌಡ ಸೇರಿ ಹಲವರ ವಿರುದ್ಧ ಕೇಸ್‌ ದಾಖಲಿಸಿದ್ದೇಕೆ?
  4. ನ್ಯಾಯಾಂಗದ ಮೇಲೆ ವಿಶ್ವಾಸ ಇದೆ ಎಂದು ಹೇಳುವ ನೀವು, ನೋಟಿಸ್‌ ನೀಡಿದರೂ ವಿಚಾರಣೆಗೆ ಹಾಜರಾಗಲಿಲ್ಲ ಏಕೆ?
  5. ತಪ್ಪೇ ಮಾಡದ, ಸತ್ಯಸಂಧರಾದ ನೀವು ಒಂದು ತಿಂಗಳು ಮೊದಲೇ ಸ್ಟೇ ತಂದಿದ್ದು ಏಕೆ?
  6. ತಾತ, ತಂದೆ-ತಾಯಿ, ಚಿಕ್ಕಪ್ಪನ ಮೇಲೆ ಗೌರವ ಇರುವ ನೀವು, ಅವರು ವಾಪಸ್‌ ಬಾ ಎಂದರೂ ಏಕೆ ಬರಲಿಲ್ಲ?
  7. ವಿಚಾರಣೆ ಎದುರಿಸಿ, ದೋಷಮುಕ್ತರಾಗುವ ವಿಶ್ವಾಸ ಇರುವ ನೀವು ಎಸ್‌ಐಟಿಗೆ ಒಂದು ವಾರ ಕಾಲಾವಕಾಶ ಏಕೆ ಕೇಳಿದಿರಿ?
  8. ಒಂದು ವಾರ ಕಾಲಾವಕಾಶ ಕೇಳಿದ ಬಳಿಕವೂ ನಿಗದಿತ ದಿನಾಂಕದಂದು ಭಾರತಕ್ಕೆ ಏಕೆ ಬರಲಿಲ್ಲ? ಏಕೆ ವಿಚಾರಣೆ ಎದುರಿಸಲಿಲ್ಲ?
  9. ತಾತ, ತಂದೆ-ತಾಯಿ, ಕುಮಾರಣ್ಣನ ಮೇಲೆ ಗೌರವ ಹೊಂದಿರುವ ನೀವು, ಅವರ ಮಾತನ್ನು ಏಕೆ ಕೇಳಲಿಲ್ಲ?
  10. ವಿದೇಶದಲ್ಲಿದ್ದೇನೆ ಎಂದು ಹೇಳುವ ನೀವು ಏಕೆ ಯಾವ ದೇಶದಲ್ಲಿದ್ದೇನೆ ಎಂದು ಹೇಳುತ್ತಿಲ್ಲ?

ವಿಡಿಯೊದಲ್ಲಿ ಏನಿದೆ?

“ನಾನು ಎಲ್ಲಿದ್ದೇನೆ ಎಂಬ ಮಾಹಿತಿ ನೀಡಲು ಬಂದಿದ್ದೇನೆ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಷಡ್ಯಂತ್ರ ರೂಪಿಸಲಾಗಿದೆ. ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ಕೆಲವು ಶಕ್ತಿಗಳು ಒಟ್ಟಾಗಿ ನನ್ನ ವಿರುದ್ಧ ಪಿತೂರಿ ನಡೆಸಿವೆ. ಇಷ್ಟಾದರೂ ನಾನು ನನ್ನ ತಾತ, ಜೆಡಿಎಸ್‌ ಕಾರ್ಯಕರ್ತರಿಗೆ ಕ್ಷಮೆಯಾಚಿಸುತ್ತೇನೆ. ನಾನು ಮೇ 31ರಂದು ಬೆಳಗ್ಗೆ 10 ಗಂಟೆಗೆ ಭಾರತಕ್ಕೆ ಬಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ಆದರೂ, ನಾನು ಭಾರತಕ್ಕೆ ಬಂದು ವಿಚಾರಣೆ ಎದುರಿಸುತ್ತೇನೆ” ಎಂಬುದಾಗಿ ಪ್ರಜ್ವಲ್‌ ರೇವಣ್ಣ ವಿಡಿಯೊದಲ್ಲಿ ತಿಳಿಸಿದ್ದಾರೆ.

“ನಾನು ಇದೇ ಶುಕ್ರವಾರ ಕರ್ನಾಟಕಕ್ಕೆ ಆಗಮಿಸಿ, ಎಸ್‌ಐಟಿ ತನಿಖೆಗೆ ಸಹಕಾರ ನೀಡುತ್ತೇನೆ. ನನಗೆ ಕಾನೂನಿನ ಮೇಲೆ ಅಪಾರ ಗೌರವವಿದೆ. ನನ್ನ ವಿರುದ್ಧ ಮಾಡಿದ ಆರೋಪಗಳನ್ನು ಕೇಳಿ ನನಗೆ ಶಾಕ್‌ ಆಯಿತು. ಇದೇ ಕಾರಣಕ್ಕಾಗಿ ನಾನು ಕೆಲ ದಿನಗಳಿಂದ ಐಸೋಲೇಷನ್‌ನಲ್ಲಿ ಇದ್ದೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ನಾನು ವಿದೇಶಕ್ಕೆ ಬಂದ ಬಳಿಕ ಪ್ರಕರಣ ತಿಳಿಯಿತು. ನನ್ನ ವಿರುದ್ಧ ರಾಹುಲ್‌ ಗಾಂಧಿ ಸೇರಿ ಎಲ್ಲರೂ ವೇದಿಕೆ ಮೇಲೆಯೇ ಹೇಳಿಕೆಗಳನ್ನು ಕೊಟ್ಟರು. ಆ ಮೂಲಕ ರಾಜಕೀಯ ಪಿತೂರಿ ನಡೆಸಿದರು. ಆದರೂ, ನಾನು ರಾಜ್ಯಕ್ಕೆ ಆಗಮಿಸಿ ತನಿಖೆಗೆ ಸಹಕಾರ ನೀಡುತ್ತೇನೆ. ನಾನು ಈ ಪ್ರಕರಣದಿಂದ ಆರೋಪಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ” ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Prajwal Revanna Video: ವಿದೇಶದಿಂದಲೇ ಪ್ರಜ್ವಲ್‌ ವಿಡಿಯೊ ಮೆಸೇಜ್; ಮೇ 31ರ ಬೆಳಗ್ಗೆ 10ಕ್ಕೆ ಎಸ್‌ಐಟಿಗೆ ಹಾಜರ್‌!

Exit mobile version