Site icon Vistara News

HD Kumaraswamy: ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಮಾಡಿದ ಎಚ್‌ಡಿಕೆ; ಡಿ.ಕೆ. ಶಿವಕುಮಾರ್

DK Shivakumar

ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಜೆಡಿಎಸ್ ಪಕ್ಷವನ್ನು ಬಿಜೆಪಿಯಲ್ಲಿ ಬಹುತೇಕ ವಿಲೀನ ಮಾಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಇದು ಅವರ ಪಕ್ಷದ ವಿಚಾರ, ಅವರು ಏನಾದರೂ ಮಾಡಿಕೊಳ್ಳಲಿ. ನಮಗೂ ಅದಕ್ಕೂ ಸಂಬಂಧವಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರು ಯಾವ ಬಣ್ಣದ ಶಾಲನ್ನಾದರೂ ಧರಿಸಲಿ. ಬಿಜೆಪಿಗೆ ಮಂಡ್ಯದಲ್ಲಿ ರಾಜಕೀಯ ನೆಲೆ ಇಲ್ಲ. ಅಲ್ಲಿ ನೆಲೆ ಕಂಡುಕೊಳ್ಳಲು ಇವರಿಬ್ಬರಲ್ಲಿ ಯಾರು ಯಾರನ್ನು ನುಂಗುತ್ತಾರೋ ಗೊತ್ತಿಲ್ಲ ಎಂದು ಹೇಳಿದರು. ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಕೇಸರಿ ಶಾಲು ಧರಿಸಿ ಬಿಜೆಪಿ ನಾಯಕರ ಜತೆ ಪ್ರತಿಭಟನೆ ಮಾಡಿದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದರು.

ಮಂಡ್ಯದಲ್ಲಿ ಕೋಮು ಗಲಭೆ ಪ್ರಯೋಗ

ಮಂಡ್ಯದಲ್ಲಿ ಕೇಸರಿ ಧ್ವಜದ ವಿವಾದಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಪ್ರತಿಭಟನೆ ನಡೆಸಿದ್ದರ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ಶಾಂತಿ ಕದಡಬೇಕು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬೇಕು ಎಂದು ಮುಗ್ಧ ಹಳ್ಳಿ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ನಮ್ಮ ಭಾಗದ ಎಲ್ಲ ಜಾತಿ ಹಾಗೂ ಧರ್ಮದ ಜನರು ಬಹಳ ಸೌಹಾರ್ದತೆಯಿಂದ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದರು. ನಮ್ಮ ಕಡೆ ಊರ ಹಬ್ಬ ಮಾಡುವಾಗ ಯಾವ ರೀತಿ ಮಾಡುತ್ತಾರೆ ಎಂದು ನೀವು ನೋಡಿದ್ದೀರಲ್ಲ? ಈಗ ಅವರು ಹೊಸ ಪ್ರಯೋಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಜನ ಎಲ್ಲವನ್ನೂ ಗಂಭೀರವಾಗಿ ಗಮನಿಸುತ್ತಿದ್ದಾರೆ

ರಾಷ್ಟ್ರ ಧ್ವಜ ಹಾಗೂ ಕನ್ನಡ ಬಾವುಟಕ್ಕೆ ಗೌರವ ನೀಡಬೇಕು. ಕನ್ನಡದಲ್ಲೇ ನಾಮಫಲಕ ಇರಬೇಕು ಎಂದೂ ನಾವು ಕಾನೂನು ಮಾಡಿದ್ದೇವೆ. ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿದ್ದೆವು. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಬಹುದಾಗಿತ್ತು, ಆದರೆ, ಅವರು ವಿಧಾನ ಮಂಡಲ ಅಧಿವೇಶನದಲ್ಲೇ ಜಾರಿ ಮಾಡಲು ಹೇಳಿದ್ದಾರೆ. ರಾಷ್ಟ್ರ ಧ್ವಜ, ಸಂವಿಧಾನಕ್ಕೆ ಏನು ಗೌರವ ನೀಡಬೇಕೋ ಆ ಗೌರವ ನೀಡುವುದು ನಮ್ಮ ಬದ್ಧತೆ. ಜನ ಎಲ್ಲವನ್ನೂ ಗಂಭೀರವಾಗಿ ಗಮನಿಸುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಹರ್ ಘರ್ ತಿರಂಗಾ ಮಾಡಿದವರು ಈಗ ತಿರಂಗಾ ಮರೆತರಾ?

ಬಿಜೆಪಿಯವರು ಮನೆ, ಮನೆಗೆ ಹನುಮಧ್ವಜ ಹಂಚುವ ಬಗ್ಗೆ ಕೇಳಿದಾಗ, “ಬೇಡ ಎಂದು ಹೇಳಿದವರು ಯಾರು? ಬಿಜೆಪಿಯವರು ಹರ್ ಘರ್ ತಿರಂಗಾ ಎಂದು ಪ್ರಚಾರ ಮಾಡಿದ್ದರು. ಈಗ ಆ ತಿರಂಗಾವನ್ನು ಯಾಕೆ ಮರೆತಿದ್ದಾರೆ? ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ತಿರಂಗಾ ಬದಲಿಗೆ ಕೇಸರಿ ಧ್ವಜವನ್ನೇ ಕಾನೂನು ಮೂಲಕ ತರಲಿ, ಬೇಡ ಎಂದವರು ಯಾರು?” ಎಂದು ಡಿ.ಕೆ. ಶಿವಕುಮಾರ್‌ ಛೇಡಿಸಿದರು.

ಸೋನಿಯಾ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಇದೆಲ್ಲವೂ ಊಹಾಪೋಹ ಎಂದು ತಿಳಿಸಿದರು.

ಇದನ್ನೂ ಓದಿ: Hanuman Flag: ಹನುಮಧ್ವಜ ಸಂಬಂಧ ನೋಟಿಸ್‌ ಕೊಡಲಿಲ್ಲವೇಕೆ? ನಿಯಮ ಮೀರಿ ರಾಷ್ಟ್ರಧ್ವಜ ಹಾರಿಸಿದ್ದು ಸರಿಯಾ?: ಅಶ್ವತ್ಥನಾರಾಯಣ

ಪ್ರಣಾಳಿಕೆಯ ಭರವಸೆ ಈಡೇರಿಸುತ್ತೇವೆ

ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುವ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್‌,, ಶಿಕ್ಷಕರ ಬದುಕಿನ ಬಗ್ಗೆ ನಮ್ಮ ಸರ್ಕಾರ ಕಾಳಜಿ ವಹಿಸಲಿದೆ. ಚುನಾವಣೆಗೂ ಮುನ್ನ ನಾವು ಶಿಕ್ಷಕರಿಗೆ ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತೇವೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಬಗ್ಗೆ ಈಗ ಮಾತನಾಡುವುದಿಲ್ಲ. ಒಪಿಎಸ್ ಸೇರಿದಂತೆ ಅನೇಕ ವಿಚಾರವಾಗಿ ನಾವು ಈಗಾಗಲೇ ನುಡಿದಂತೆ ನಡೆದಿದ್ದೇವೆ. ಶಿಕ್ಷಕ ವೃಂದದವರು ವಿದ್ಯಾವಂತರು, ಪ್ರಜ್ಞಾವಂತರಿದ್ದಾರೆ. ನಮ್ಮ ಪಕ್ಷದ ಎಲ್ಲ ನಾಯಕರು ಒಗ್ಗಟ್ಟಿನಿಂದ ಈ ಚುನಾವಣೆ ಎದುರಿಸುತ್ತೇವೆ. ನಮ್ಮ ಅಭ್ಯರ್ಥಿ ಅನುಭವಿ. ತಮ್ಮ ಸ್ಥಾನವನ್ನು ತ್ಯಾಗ ಮಾಡಿ, ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರಿಗೆ ನಾವು ಬೆಂಬಲ ನೀಡುತ್ತಿದ್ದೇವೆ ಎಂದು ತಿಳಿಸಿದರು.

Exit mobile version