Site icon Vistara News

Karnataka Election: 2023ರ ವಿಧಾನಸಭಾ ಚುನಾವಣೆ ಬಳಿಕ ವಿದಾಯ ಎಂದು ಹೇಳಿ ಯೂಟರ್ನ್‌ ಹೊಡೆದ ಕುಮಾರಸ್ವಾಮಿ

#image_title

ರಾಮನಗರ: 2023ರ ವಿಧಾನಸಭಾ ಚುನಾವಣೆ (Karnataka Election) ನನ್ನ ಕೊನೆಯ ಚುನಾವಣೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿ ನಂತರ ಯೂಟರ್ನ್‌ ಹೊಡೆದಿದ್ದಾರೆ. ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ಬಮುಲ್‌ ಉತ್ಸವದಲ್ಲಿ ಸೋಮವಾರ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜಕೀಯ ವಿದಾಯದ ಮಾತು ಹೇಳಿದ್ದರು. ನಂತರ ಈ ಮಾತನ್ನು ಸರಿಪಡಿಸಿಕೊಂಡ ಎಚ್‌ಡಿಕೆ, ತಾವು ಯಾವುದೇ ಕಾರಣಕ್ಕೂ ರಾಜಕೀಯ ಬಿಡಲ್ಲ ಎಂದು ತಿಳಿಸಿದ್ದಾರೆ.

ಮೊದಲಿಗೆ 2023ರ ವಿಧಾನಸಭಾ ಚುನಾವಣೆ ನನ್ನ ಕೊನೆಯ ಚುನಾವಣೆ. 2028ಕ್ಕೆ ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಥಳೀಯ ಕಾರ್ಯಕರ್ತರೇ ನಿಲ್ಲಬೇಕು. ಕ್ಷೇತ್ರದ ಜನರು ಒಗ್ಗಟ್ಟಾದರೆ ಕಾರ್ಯಕರ್ತನ ಗೆಲುವು ಖಚಿತ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಕಾರ್ಯಕ್ರಮದ ಬಳಿಕ ಮಾತನಾಡಿದ ಎಚ್‌ಡಿಕೆ, 2028ರ ವಿಧಾನಸಭೆ ಚುನಾವಣೆಗೆ ಚನ್ನಪಟ್ಟಣದಿಂದ ಕಾರ್ಯಕರ್ತರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತೇನೆ. ಆಗ ನಾನು ಬೇರೆ ಕ್ಷೇತ್ರದಲ್ಲಿ ನಿಲ್ಲಬೇಕಾಗಬಹುದು. ನಾನು ಯಾವುದೇ ಕಾರಣಕ್ಕೂ ರಾಜಕೀಯ ಬಿಡಲಾರೆ ಎಂದು ಸ್ಪಷ್ಟೀಕರಣ ನೀಡಿದರು.

ಚನ್ನಪಟ್ಟಣದಲ್ಲಿ ಮಾತ್ರ 2023ರ ಚುನಾವಣೆಯೇ ನನಗೆ ಕೊನೆಯದಾಗುತ್ತದೆ. ಈ ಬಾರಿ ಐದು ವರ್ಷದ ಸರ್ಕಾರ ತಂದು ಜನರಿಗೆ ಉತ್ತಮ ಬದುಕು ನೀಡುತ್ತೇನೆ. ನಂತರ ನಾನು ವಿಶ್ರಾಂತಿ ತೆಗೆದುಕೊಳ್ಳಬೇಕಲ್ಲವೇ ಅದಕ್ಕೆ ಕೊನೆಯ ವಿಧಾನಸಭೆ ಚುನಾವಣೆ ಎಂದಿರುವುದಾಗಿ ತಮ್ಮ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ | Modi at Belagavi: ಕುಂದಾನಗರಿಯಲ್ಲಿ ಮೋದಿ ಮೆಗಾ ರೋಡ್‌ ಶೋ; ಪ್ರಧಾನಿಗೆ ಹೂಮಳೆಯ ಸ್ವಾಗತ, ಮೊಳಗಿದ ಜಯಘೋಷ

ಕುಟುಂಬ ವಿಚಾರ ಪ್ರಚಾರ ಮಾಡುತ್ತಿದ್ದಾರೆ ಎಂದು ಕಣ್ಣೀರಿಟ್ಟ ಎಚ್‌ಡಿಕೆ

ಇದೇ ವೇಳೆ ಪಂಚರತ್ನ ಯಾತ್ರೆ ಬಗ್ಗೆ ಮಾಧ್ಯಮಗಳು ತೋರಿಸಿಲ್ಲ. ಆದರೆ, ನಮ್ಮ ಕುಟುಂಬದ ವಿಚಾರ ಬಂದಾಗ ಪ್ರಚಾರ ಮಾಡುತ್ತಿವೆ ಎಂದು ಬೇಸರಿಸಿ ಕಣ್ಣೀರಿಟ್ಟಿದ್ದಾರೆ. ನನಗೆ ಮಾಧ್ಯಮದವರು ಪ್ರಚಾರ ಕೊಡಲಿಲ್ಲ. ಪಂಚರತ್ನಕ್ಕೆ ಎಷ್ಟು ಜನ ಸೇರಿದರೂ ತೋರಿಸಲಿಲ್ಲ. ಈಗ ನಮ್ಮ ಕುಟುಂಬದ ವಿಚಾರವನ್ನು ಪ್ರಚಾರ ಮಾಡುತ್ತಿದ್ದಾರೆ. ಟಿವಿಯಲ್ಲಿ ಬೆಳಗ್ಗಿನ ಜ್ಯೋತಿಷ್ಯ ಕಾರ್ಯಕ್ರಮವನ್ನೂ ರದ್ದು ಮಾಡಿ ನಮ್ಮ ಮನೆ ವಿಚಾರ ತೋರಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಈ ಹಿಂದೆ ದೇವೇಗೌಡರು ಪ್ರಧಾನಿ ಆದಾಗ ಯಾವ ಮಾಧ್ಯಮವೂ ಬೆಂಬಲ ಕೊಡಲಿಲ್ಲ. ಯಾವ ಮಾಧ್ಯಮದಿಂದಲೂ ಎಚ್‌.ಡಿ. ದೇವೇಗೌಡ ಅವರು ಪ್ರಧಾನಿ ಆಗಲಿಲ್ಲ. ನಾನು ಯಾರಿಗೂ ಸಲಾಂ ಹೊಡೆಯುವ ಕೆಲಸ ಮಾಡಲ್ಲ. ನನಗೆ ಬೆಂಬಲ ಕೊಟ್ಟಿದ್ದು ಜನತೆ ಎಂದು ಎಚ್‌ಡಿಕೆ ಭಾವುಕರಾದರು. ರಾಷ್ಟ್ರೀಯ ಪಕ್ಷಗಳು ಬಡವರ ರಕ್ತ ಹೀರುವ ಕೆಲಸವನ್ನು ಮಾಡುತ್ತಿವೆ. ಬಿಜೆಪಿಯವರ 40 ಪರ್ಸೆಂಟ್‌, ಕಾಂಗ್ರೆಸ್‌ನವರ ರೀಡೂ ಬಗ್ಗೆ ಜನರು ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಪದೇಪದೆ ನನ್ನ ಕೆಣಕಬೇಡಿ

ಮೊದಲು ಕುಟುಂಬ ಸರಿಪಡಿಸಿಕೊಳ್ಳಿ ಆಮೇಲೆ ರಾಜಕೀಯ ಮಾಡಿ ಎಂದು ಪ್ರಲ್ಹಾದ್ ಜೋಶಿ ಹೇಳುತ್ತಾನೆ. ನಮ್ಮ ಮನೆಯಲ್ಲಿ 6 ಜನ ಇದ್ದೇವೆ, ನಮ್ಮದು ದೊಡ್ಡ ಕುಟುಂಬ. ಆದರೆ, ಇವನಿಗೆ ಇರುವುದು ಒಬ್ಬ ತಮ್ಮ. ಅವನನ್ನೇ ನೆಟ್ಟಗೆ ಇಟ್ಟುಕೊಂಡಿಲ್ಲ ಎಂದು ಪ್ರಹ್ಲಾದ್ ಜೋಶಿ ವಿರುದ್ಧ ಏಕವಚನದಲ್ಲಿಯೇ ಹರಿಹಾಯ್ದ ಎಚ್.ಡಿ. ಕುಮಾರಸ್ವಾಮಿ, ಅದಕ್ಕೆ ಪದೇ ಪದೆ ನನ್ನನ್ನು ಕೆಣಕಬೇಡಿ ಎಂದು ಹೇಳುತ್ತೇನೆ. ಆದರೂ ಕೆಣಕಿ ಅವರ ಬುಡಕ್ಕೆ ತಂದುಕೊಳ್ಳುತ್ತಾರೆ. ನಾನು ಏನೇ ಹೇಳಿದರೂ ದಾಖಲೆ ಇಟ್ಟುಕೊಂಡು ಹೇಳುತ್ತೇನೆ ಎಂದು ತಿಳಿಸಿದರು.

ಇಲ್ಲೊಬ್ಬ ನಾನೇ ಸಿಎಂ ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ

ಇಲ್ಲೊಬ್ಬ ಮಹಾನುಭಾವ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾನೆ. ಪಾಪ ಈಗೇನೋ ಸಿಎಂ ಆಗುತ್ತಾನಂತೆ. ಚನ್ನಪಟ್ಟಣದ ಹಳ್ಳಿ ಹಳ್ಳಿಗಳಲ್ಲಿ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ ಎಂದು ಮಾಜಿ ಸಚಿವ ಸಿ‌.ಪಿ.ಯೋಗೇಶ್ವರ್ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | PM Modi: ಬರ-ನೆರೆ ನೆರವಿಗೆ ಬಾರದ ಮೋದಿಗೆ ಈಗ ಕರ್ನಾಟಕ ನೆನಪಾಗುತ್ತದೆಯೇ: ದಿನೇಶ್‌ ಗುಂಡೂರಾವ್‌

ಚನ್ನಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಸ್ಥಗಿತ ಯೋಗೇಶ್ವರ್ ಕರ್ಮದ ಫಲ. ಅದು ಅವನ ಕರ್ಮದ ಫಲದಿಂದ ಇವತ್ತೂ ಆಗೆಯೇ ಇದೆ. ಇನ್ನೂ ಆರು ತಿಂಗಳು ನನ್ನ ಸರ್ಕಾರ ಇದ್ದಿದ್ದರೆ ಅದು ಕ್ಲಿಯರ್ ಆಗುತ್ತಿತ್ತು. ನನ್ನ ಸರ್ಕಾರ ತೆಗೆದು ಅದಕ್ಕೆ ಅಡ್ಡಗಾಲು ಹಾಕಿದ್ದೇ ಅವನು ಎಂದು ಕಿಡಿಕಾರಿದರು.

ನಂತರ ಒಂದು ಪಂಚಾಯಿತಿ ಗೆಲ್ಲುವುದಕ್ಕೂ ಆಗದವರನ್ನು ತಂದು ಎಂಎಲ್ಎ ಮಾಡಿಸಿದ್ದೆವು. ಕಡೆಗೆ ಬೆನ್ನಿಗೆ ಚೂರಿ ಹಾಕಿ ಮೋಸ ಮಾಡಿದರು ಎಂದು ಮಾಜಿ ಶಾಸಕ ಕೆ.ರಾಜು ವಿರುದ್ಧ ವಾಗ್ದಾಳಿ ನಡೆಸಿದರು.

Exit mobile version