Site icon Vistara News

HD Kumaraswamy : ಹಿಟ್‌ ಆ್ಯಂಡ್ ರನ್‌ ಅಲ್ಲ, ಗಾಳಿಯಲ್ಲಿ ಗುಂಡಲ್ಲ, ಟೈಮಿಗೆ ಸರಿಯಾಗಿ ಬಿಡ್ತೀನಿ ಎಂದ ಎಚ್‌ಡಿಕೆ

HD Kumaraswamy

ಮಂಡ್ಯ: ಕಾಂಗ್ರೆಸ್‌ ಸರ್ಕಾರದ ಮೇಲೆ ವರ್ಗಾವಣೆ ದಂಧೆಯ (Transfer scam) ಆರೋಪ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಇದೀಗ ಪೆನ್‌ಡ್ರೈವ್‌ (Pen drive politics) ಹಿಡಿದುಕೊಂಡು ರಾಜ್ಯ ರಾಜಕಾರಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಅವರ ಪೆನ್‌ ಡ್ರೈವ್‌ ರಾಜಕಾರಣವನ್ನು ಕೆಲವರು ಬುಟ್ಟಿಯಲ್ಲಿರುವ ಹಾವು, ಹಿಟ್‌ ಎಂಡ್‌ ರನ್‌ (Hit and run) ಎಂದೆಲ್ಲ ಗೇಲಿ ಮಾಡುತ್ತಿದ್ದಾರೆ. ಕೆಲವರಿಗೆ ಒಳಗಡೆ ಏನಿದೆಯೋ ಎಂಬ ಆತಂಕವೂ ಹುಟ್ಟಿಕೊಂಡಿದೆ.

ಆದರೆ, ಎಚ್‌.ಡಿ. ಕುಮಾರಸ್ವಾಮಿ ಮಾತ್ರ ಈ ವಿಚಾರದಲ್ಲಿ ಶಾಂತವಾಗಿದ್ದಾರೆ. ಗುರುವಾರ ಮಂಡ್ಯದಲ್ಲಿ ಮಾತನಾಡಿದ ಅವರು, ʻʻಪೆನ್ ಡ್ರೈವ್ ನಲ್ಲಿರುವ ದಾಖಲೆಯನ್ನು ಬಿಡುಗಡೆ ಮಾಡಲು ನನಗೆ ಅವಸರ ಇಲ್ಲ.
ಪೆನ್‌ಡ್ರೈವ್‌ನಲ್ಲಿರುವ ವಿಚಾರ ಹೊರ ಬಂದರೆ ಮಂತ್ರಿ ರಾಜೀನಾಮೆ ಕೊಡಬೇಕಾಗುತ್ತದೆʼʼ ಎಂದು ಹೇಳಿದರು.

“ನನ್ನ ವಿರುದ್ಧ ಏನು ಬೇಕಾದರೂ ಮಾತಾಡಲಿ, ಎಲ್ಲವನ್ನೂ ಮಾತನಾಡಲಿ. ಕೆಲವರು ಹಿಟ್ ಆ್ಯಂಡ್‌ ರನ್ ಅಂತಾರೆ, ಗಾಳಿಯಲ್ಲಿ ಗುಂಡು ಅಂತ ಏನಾದರೂ ಹೇಳಿಕೊಳ್ಳಲಿ.‌ ಅವರು ಹೀಗೆ ಮಾತನಾಡುತ್ತಿರಲಿ, ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡ್ತೀನಿʼʼ ಎಂದು ಹೇಳಿದರು.

ʻʻವರ್ಗಾವಣೆ ದಂಧೆ ಸಿಎಂ ಮೂಗಿನ ಕೆಳಗೇ ನಡೆಯುತ್ತಿದೆ. ವರ್ಗಾವಣೆ ಆದೇಶ ಆಗುತ್ತದೆ, ತಕ್ಷಣ ಅದು ಬದಲಾವಣೆ ಆಗುತ್ತದೆʼʼ ಎಂದು ಹೇಳಿದ ಅವರು, ಸರ್ಕಾರ ನಡೆಯಬೇಕಾದರೆ ವರ್ಗಾವಣೆ ಅನಿವಾರ್ಯ ಅನ್ನುವುದು ನನಗೂ ಗೊತ್ತು. ಆದರೆ ಯಾವ ಅಳತೆಗೋಲು ಇಟ್ಟುಕೊಂಡು ವರ್ಗಾವಣೆ ಮಾಡುತ್ತಿದ್ದೀರಿ. ಪ್ರಮುಖ ಎಲ್ಲಾ ಹುದ್ದೆಗಳೆಲ್ಲವೂ ದುಡ್ಡಿನಿಂದಲೇ ವರ್ಗಾವಣೆ ಆಗುತ್ತಿವೆʼʼ ಎಂದು ಆಪಾದಿಸಿದರು.

ʻʻಬಿಜೆಪಿಯವರು ಪ್ರತಿಪಕ್ಷ ಸ್ಥಾನದಲ್ಲಿದ್ದಾರೆ. ನಾವು ಕೂಡ ವಿಪಕ್ಷ‌ ಸ್ಥಾನದಲ್ಲಿ ಇದ್ದೇವೆ. ಬಿಜೆಪಿಯಲ್ಲಿ ಹಲವರು ಸಮರ್ಥ ನಾಯಕರಿದ್ದಾರೆ. ಬಿಜೆಪಿಯಲ್ಲೇ ವಿಪಕ್ಷ ನಾಯಕರು ಆಗುವವರು ಇದ್ದಾರೆ‌ʼʼ ಎಂದು ನೀವೇ ಪ್ರತಿಪಕ್ಷ ನಾಯಕರಾ ಎಂಬ ಪ್ರಶ್ನೆಗೆ ಕುಮಾರಸ್ವಾಮಿ ಉತ್ತರಿಸಿದರು.

ಚಲುವರಾಯ ಸ್ವಾಮಿ ವಜಾಕ್ಕೆ ಎಚ್‌.ಡಿ.ಕೆ ಆಗ್ರಹ

ಈ ನಡುವೆ, ಮಂತ್ರಿ ಮಂಡಲದಿಂದ ಸಚಿವ ಚಲುವರಾಯಸ್ವಾಮಿ ಅವರನ್ನು ವಜಾ ಮಾಡುವಂತೆ ಎಚ್‌ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಕೃಷಿ ಇಲಾಖೆಯಲ್ಲಿ ಮಾಡಿದ ವರ್ಗಾವಣೆ ಕಾರಣಕ್ಕೆ ಜಗದೀಶ್‌ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕೃಷಿ ಮಂತ್ರಿ ಚಲುವರಾಯ ಸ್ವಾಮಿಯ ಹೆಸರು ಹೇಳಿದ್ದರೂ ಪೊಲೀಸರು ಎಫ್‌ಐಆರ್‌ನಲ್ಲಿ ಸಚಿವರ ಹೆಸರು ಹಾಕಿಲ್ಲ. ಘಟನೆ ಸಂಬಂಧ ಅಧಿಕಾರಿಗಳನ್ನು ಕೇಳಿದರೆ ಇನ್ನೂ ವ್ಯಕ್ತಿ ಸತ್ತಿಲ್ಲ.
ಆ ಕಾರಣಕ್ಕೆ ಎಫ್‌ಐ‌ಆರ್ ಹಾಕಿಲ್ಲ ಅಂತಾರೆ. ಇವರಿಗೆ ಮತ ಹಾಕಿದ್ದು ಜನರ ಜೀವದ ಜತೆ ಚೆಲ್ಲಾಟ ಆಡಲು ಅಲ್ಲ.
ಈ ಮಂತ್ರಿಯನ್ನು ವಜಾಮಾಡಿ, ಸರಿಯಾದ ತನಿಖೆ ನಡೆಸಿ ಎಂದು ಎಚ್.ಡಿ.ಕೆ ಆಗ್ರಹಿಸಿದರು.

ʻʻನನ್ನ ಕ್ಷೇತ್ರ ಚನ್ನಪಟ್ಟಣದಲ್ಲಿ ನನ್ನ ಅಧಿಕಾರಿರದ ಅವಧಿಯಲ್ಲಿ ಒಬ್ಬನೇ ಅಧಿಕಾರಿಯನ್ನು ವರ್ಗಾವಣೆ ಮಾಡಿರಲಿಲ್ಲ.
ಆದರೆ ಕೃಷಿ ಮಂತ್ರಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆʼʼ ಎಂದು ಎಚ್‌ಡಿಕೆ ಆಪಾದಿಸಿದರು.

ಕೈ ಮುಗಿದ ಚಲುವರಾಯ ಸ್ವಾಮಿ

ಈ ನಡುವೆ, ಎಚ್‌.ಡಿ.ಕೆ. ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಚಲುವರಾಯ ಸ್ವಾಮಿ ಅವರು, ಕುಮಾರಸ್ವಾಮಿ ಅವರು ಏನಾದರೂ ಹೇಳಲಿ, ಅವರಿಗೆ ಒಳ್ಳೆಯದಾಗಲಿ ಎಂದು ಕೈಮುಗಿದರು.

ಕುಮಾರಸ್ವಾಮಿ ಅವರು ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ವೆಂಕಟೇಶ್‌ ಗುಣಮುಖರಾಗೋದು ಇಷ್ಟವಿಲ್ಲ. ಅವರನ್ನು ನಾಗಮಂಗಲದಲ್ಲೇ ಉಳಿಸಿ ಚಿಕಿತ್ಸೆಗೆ ಮುಂದಾಗಿದ್ದರು. ನಾನೇ ಹೇಳಿ ಮೈಸೂರಿಗೆ ಕಳುಹಿಸಿದ್ದು ಎಂದರು.

ಇದನ್ನೂ ಓದಿ : Karnataka Politics: ಹನಿಮೂನ್‌ ಪೀರಿಯಡ್‌ನಲ್ಲೇ ಹೀಗಾದ್ರೆ ಮುಂದೆ ಹೇಗೆ?: ಸರ್ಕಾರದ ದಮ್‌ ಪ್ರಶ್ನಿಸಿದ ಎಚ್‌.ಡಿ. ಕುಮಾರಸ್ವಾಮಿ

Exit mobile version