ಮೈಸೂರು: ದುಡ್ಡಿನ ಕೊರತೆಯಿಂದ ನಾನು ಚುನಾವಣೆಯಲ್ಲಿ (Karnataka Election) 30-40 ಕ್ಷೇತ್ರ ಸೋಲುತ್ತೇನೆ. ಬಿಜೆಪಿ, ಕಾಂಗ್ರೆಸ್ ರೀತಿ ದುಡ್ಡು ಇದ್ದರೆ 150-160 ಕ್ಷೇತ್ರ ಗೆಲ್ಲುತ್ತಿದ್ದೆ. ಆದರೆ ಸುಮಾರು 30-40 ಕ್ಷೇತ್ರಗಳಲ್ಲಿ 500 ರಿಂದ 3000 ವೋಟುಗಳ ಅಂತರದಲ್ಲಿ ಸೋಲುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬನ್ನೂರಿನಲ್ಲಿ ತಿ.ನರಸೀಪುರ ಜೆಡಿಎಸ್ ಅಭ್ಯರ್ಥಿ ಅಶ್ವಿನ್ ಕುಮಾರ್ ಪರ ಪ್ರಚಾರ ನಡೆಸಿದ ಅವರು, ಅಶ್ವಿನ್ ಕುಮಾರ್ ಬಳಿ ಹಣ ಇಲ್ಲ. ನಾನು ಕೊಡುವುದು ಯಾವುದಕ್ಕೂ ಸಾಲಲ್ಲ. ನಾವೂ ಅಷ್ಟೋ ಇಷ್ಟೋ ದುಡ್ಡು ಕೊಡಬಹುದು ಎಂದು ಹೇಳಿದರು.
ತಿ.ನರಸೀಪುರದಲ್ಲಿ ಪಂಚರತ್ನ ಯಾತ್ರೆ ಮಾಡಿದ್ದೇನೆ. ದೇವೇಗೌಡರು ಬಂದು ಮತ ಕೇಳಿದ್ದಾರೆ.
ನನ್ನ ಅವಶ್ಯತೆ ಇರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿಗೆ ದುಡ್ಡಿಗೆ ಕೊರತೆ ಇಲ್ಲ. ಆದರೆ, ದುಡ್ಡಿಗೆ ಜನ ಮರಳಾಗಲ್ಲ. ನಾನು ಬರದೇ ಇದ್ದರೂ ಗೆಲ್ಲುತ್ತೀಯ ಅಂತ ಹೇಳಿದ್ದೆ. ನೀನು ಮನೆ ಮಗನಂತೆ ಇದ್ದೀಯಾ, ಅದೇ ರೀತಿ ಜೀವನ ಪೂರ್ತಿ ಹೀಗೆ ಇರು ಎಂದು ಅಭ್ಯರ್ಥಿ ಅಶ್ವಿನ್ ಕುಮಾರ್‌ಗೆ ತಿಳಿಸಿದರು.
ಇದನ್ನೂ ಓದಿ | Karnataka Election 2023: ಈ ಜನಸಾಗರ ನೋಡಿದ್ರೆ ಬಿಜೆಪಿಯದ್ದೇ ಗೆಲುವು ಖಚಿತ; ಸಮೀಕ್ಷೆಗಳಿಗೆ ಪಿಎಂ ಮೋದಿ ಟಾಂಗ್
ನನ್ನ ಮುಂದಿನ ಜೀವ ಇರುವುದು ಬಡವರಿಗಾಗಿ. ದಿನ ಬೆಳಗಾದರೆ ಶ್ರೀಮಂತರು ಬರಲ್ಲ. ಬಡವರು ಬರುತ್ತಾರೆ. ಅವರಿಗೆ ಪಂಚರತ್ನ ಯಾತ್ರೆ ಮೂಲಕ ಪರಿಹಾರ ಕೊಡುತ್ತೇನೆ. ಕಾಂಗ್ರೆಸ್, ಬಿಜೆಪಿ ಜತೆ ಸರ್ಕಾರ ಮಾಡಿದರೆ ಕಷ್ಟ ಇದೆ. ಒಮ್ಮೆ ಸ್ವಾತಂತ್ರ್ಯ ಸರ್ಕಾರ ಕೊಟ್ಟರೆ ಮಾತ್ರ ಇದೆಲ್ಲಾ ಸಾಧ್ಯ. ಯುವಕರು, ರೈತರು, ವಿಧವೆಯರು ಎಲ್ಲರಿಗೂ ಅನುಕೂಲ ಆಗುವಂತೆ ಮಾಡುತ್ತೇನೆ. ಬಡತನ ಹೋಗಲಾಡಿಸಲು ಸ್ಪಷ್ಟ ಬಹುಮತ ಕೇಳುತ್ತಿದ್ದೇನೆ ಹೇಳಿದರು.
ಉತ್ತರ ಕರ್ನಾಟಕದಲ್ಲೇ 25 ಕ್ಷೇತ್ರಗಳಿಗೆ ಹೋಗಿ ಬಂದಿದ್ದೇನೆ. ಇಂದು ತುಮಕೂರು, ಮೈಸೂರು ಭಾಗಕ್ಕೆ ಬಂದಿದ್ದೇನೆ.
ಕನಿಷ್ಠ 60 ಕ್ಷೇತ್ರಕ್ಕೆ ಭೇಟಿ ನೀಡುವ ಉದ್ದೇಶವಿದೆ. ಸಮೀಕ್ಷೆಗಳನ್ನು ನಾನು ನಂಬಿಲ್ಲ. ಬಹುಮತದ ಸರ್ಕಾರ ಬಂದೇ ಬರುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ | Karnataka Election: ಮಗ, ಮೊಮ್ಮಗನ ಪರ ಎಚ್.ಡಿ.ದೇವೇಗೌಡ ಪ್ರಚಾರ; ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ತರುವಂತೆ ಕರೆ
ದೇವೇಗೌಡರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ
ಮಂಡ್ಯ: ಮೈಸೂರಿನಲ್ಲಿ ನಡೆದ ಜೆಡಿಎಸ್‌ನ ಪಂಚರತ್ನ ಸಮಾವೇಶದ ನಂತರ ದೇವೇಗೌಡರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡು ಬಂದಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕೆ.ಆರ್. ಪೇಟೆಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಅವರು, ಮೈಸೂರು ಸಭೆಗೂ ಮೊದಲು ದೇವೇಗೌಡರ ಆರೋಗ್ಯದ ದೃಷ್ಟಿಯಿಂದ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದರು. ಆದರೆ ಅಂದಿನ ಸಭೆಯಲ್ಲಿ ಜನರನ್ನು ನೋಡಿದ ದೇವೇಗೌಡರು ಈಗ ಸ್ವಲ್ಪ ಸುಧಾರಿಸಿಕೊಂಡಿದ್ದಾರೆ. ಜನರ ಆಶೀರ್ವಾದದಿಂದಾಗಿ ಅವರು ಈಗ ಮೂರ್ನಾಲ್ಕು ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಜೆಡಿಎಸ್ ಸರ್ಕಾರ ಬರುವುದನ್ನು ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ತಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.