Site icon Vistara News

Karnataka Election 2023: ಮಂಡ್ಯದಲ್ಲೂ ಎಚ್‌.ಡಿ. ಕುಮಾರಸ್ವಾಮಿ ಸ್ಪರ್ಧೆ?; ಕೊನೇ ಕ್ಷಣದವರೆಗೂ ಇದೆ ಕೌತುಕ!

HD Kumaraswamy

HD Kumaraswamy

ಮಂಡ್ಯ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ರಾಜಕೀಯ ನಾಯಕರ ಅಬ್ಬರ ಪ್ರಾರಂಭವಾಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಪಕ್ಷಗಳು ಕಸರತ್ತು ನಡೆಸುತ್ತಿವೆ. ಈ ಮಧ್ಯೆ ನಾಮಪತ್ರ ಸಲ್ಲಿಸಲು ಇಂದೇ (ಗುರುವಾರ – ಏಪ್ರಿಲ್‌ 20) ಕೊನೇ ದಿನವಾಗಿದೆ. ಇನ್ನು ರಾಜಕೀಯ ಜಿದ್ದಾಜಿದ್ದಿ ಕಣ ಎಂದೇ ಖ್ಯಾತಿ ಹೊಂದಿರುವ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಇನ್ನೂ ಫೈನಲ್‌ ಆಗಿಲ್ಲ. ಈ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರೇ ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆ ಗಟ್ಟಿಯಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ಮಧ್ಯಾಹ್ನ 3 ಗಂಟೆ ಕೊನೆಯಾಗಿರುವುದರಿಂದ ಅಂತಿಮ ಕ್ಷಣದವರೆಗೂ ಈ ಕುತೂಹಲ ಮುಂದುವರಿಯಲಿದೆ ಎಂದೇ ಹೇಳಲಾಗುತ್ತಿದೆ. ಸದ್ಯ ಎಚ್‌ಡಿಕೆ ಸಹ ಮಂಡ್ಯ ಜಿಲ್ಲೆಯಲ್ಲಿಯೇ ಇರುವ ಕಾರಣ ಅವರೇ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದ್ದರೂ, ಅವರ ಸಹಿತ ಕುಟುಂಬ ಸದಸ್ಯರು ಇದನ್ನು ಅಲ್ಲಗಳೆಯುತ್ತಿದ್ದಾರೆ.

ಇನ್ನು ಮಂಡ್ಯದಲ್ಲಿ ಜೆಡಿಎಸ್‌ ಹಾಲಿ ಶಾಸಕ ಎಂ.ಶ್ರೀನಿವಾಸ್‌ ಅವರಿಗೆ ಈ ಬಾರಿ ಟಿಕೆಟ್‌ ನಿರಾಕರಿಸಿ ಮನ್‌ಮೂಲ್ ಅಧ್ಯಕ್ಷ ಬಿ.ಆರ್‌. ರಾಮಚಂದ್ರು ಅವರಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಬಿ ಫಾರಂ ನೀಡಿದ್ದಾರೆ. ಅಧಿಕೃತವಾಗಿ ಟಿಕೆಟ್‌ ಘೋಷಣೆ ಮಾಡದಿದ್ದರೂ ದೇವೇಗೌಡರು ಬಿ ಫಾರಂ ನೀಡಿರುವುದು ಮಂಡ್ಯದಲ್ಲಿ ಜೆಡಿಎಸ್‌ ಬಿಕ್ಕಟ್ಟಿಗೆ ಕಾರಣವಾಗಿದೆ. ಇದು ಶ್ರೀನಿವಾಸ್‌ ಅವರ ಆಕ್ರೋಶಕ್ಕೂ ಕಾರಣವಾಗಿದ್ದು, ಬಂಡಾಯವೆದ್ದಿದ್ದಾರೆ.

ಇದನ್ನೂ ಓದಿ: Karnataka Elections : ಕಾಂಗ್ರೆಸ್‌ ವಿರುದ್ಧ ಅಖಂಡ ದಲಿತಾಸ್ತ್ರ ಬಳಸಲು ಮುಂದಾದ ಬಿಜೆಪಿ

ಸ್ವಾಭಿಮಾನಿ ಪಡೆ ಹೆಸರಿನಲ್ಲಿ ಬಂಡಾಯವಾಗಿ ನಾಮಪತ್ರ ಸಲ್ಲಿಸಲು ಶ್ರೀನಿವಾಸ್‌ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರ ಜತೆಗೆ ಇನ್ನೂ ಮೂವರಿಂದ ನಾಮಪತ್ರ ಸಲ್ಲಿಕೆಗೆ ನಿರ್ಧಾರ ಮಾಡಲಾಗಿದೆ. ಹೀಗಾಗಿ ಬಂಡಾಯ ಶಮನ ಮಾಡುವ ತಲೆನೋವು ಸಹ ಕುಮಾರಸ್ವಾಮಿ ಅವರಿಗೆ ಈಗ ಎದುರಾಗಿದೆ. ಮತ್ತೊಂದೆಡೆ ಟಿಕೆಟ್ ಪಡೆದುಕೊಂಡಿರುವ ರಾಮಚಂದ್ರು ಅವರೂ ಸಹ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗ ಎದ್ದಿರುವ ಗೊಂದಲ ನಿವಾರಣೆ ಹಾಗೂ ಬಂಡಾಯ ಶಮನಕ್ಕೆ ತಾವೇ ಸ್ಪರ್ಧೆ ಮಾಡುವುದಾಗಿ ಎಚ್‌.ಡಿ. ಕುಮಾರಸ್ವಾಮಿ ಘೋಷಣೆ ಮಾಡುವ ಸಾಧ್ಯತೆ ಸಹ ಇದೆ ಎಂದು ಹೇಳಲಾಗಿದೆ. ಹೀಗಾಗಿ ಮಂಡ್ಯ ಅನಿರೀಕ್ಷಿತ ಬೆಳವಣಿಗೆಗೆ ಸಾಕ್ಷಿಯಾಗಲಿದೆ ಎನ್ನಲಾಗಿದೆ.

ಭಿನ್ನಮತ ಸರಿಪಡಿಸುವೆ- ಎಚ್‌ಡಿಕೆ

ಮಂಡ್ಯದಲ್ಲಿ ಎದ್ದಿರುವ ಭಿನ್ನಮತವನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತೇನೆ. ಶ್ರೀನಿವಾಸ್ ಜತೆ ಮಾತನಾಡಿದ್ದೇನೆ. ಪಕ್ಷದಿಂದ ಕಾರ್ಯಕರ್ತರನ್ನು ಅಭ್ಯರ್ಥಿ ಮಾಡಲು ಸೂಚಿಸಿದ್ದೇನೆ. ಪಕ್ಷದ ಮೇಲೆ ಗೌರವ ಇದ್ದರೆ ಸರಿಯಾದ ನಿರ್ಧಾರ ಮಾಡಲಿ. ಈಗಲೂ ಶ್ರೀನಿವಾಸ್‌ ಅವರಲ್ಲಿ ಮನವಿ ಮಾಡುತ್ತೇನೆ. ನಾನು ದುಡುಕಿ ನಿರ್ಧಾರ ಕೈಗೊಂಡಿಲ್ಲ.
ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದೇನಾ? ನನ್ನ ಹೆಸರು ಏಕೆ ಹೊರಗೆ ತರಲಾಗಿದೆಯೋ ಗೊತ್ತಿಲ್ಲ? ರೈತರ ಪರ ಕೆಲಸ ಮಾಡಲು ಸರ್ಕಾರ ತರಲು ಹೊರಟಿದ್ದೇನೆ. ಎಲ್ಲರನ್ನೂ ಕರೆದು ಮಾತನಾಡಿದ್ದೇನೆ. ನಾನು ಯಾವ ತಪ್ಪನ್ನೂ ಮಾಡಿಲ್ಲ ಎಂದು ಹೇಳಿದರು.

ಗುರುಚರಣ್ ಜೆಡಿಎಸ್‌ ಸೇರ್ಪಡೆ

ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಸಹೋದರನ ಪುತ್ರ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯ ಎಸ್.‌ ಗುರುಚರಣ್‌ ಅವರಿಗೆ ಮದ್ದೂರಿನಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಬಂಡಾಯವೆದ್ದಿದ್ದು, ಗುರುವಾರ ಅಧಿಕೃತವಾಗಿ ಜೆಡಿಎಸ್‌ ಸೇರ್ಪಡೆಯಾಗಿದ್ದಾರೆ. ಅವರಿಗೆ ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಶಾಸಕ ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ ಪಕ್ಷ ಸೇರ್ಪಡೆಗೊಂಡರು.

ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧೆ ಇಲ್ಲ- ಅನಿತಾ ಕುಮಾರಸ್ವಾಮಿ ಸ್ಪಷ್ಟನೆ

ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಮಾಡುವುದಿಲ್ಲ. ಮಂಡ್ಯದಲ್ಲಿ ನಿಲ್ಲುವಂತೆ ಒತ್ತಡ ಇರುವುದು ನಿಜ. ಆದರೆ, ಅವರು 2 ಕಡೆ ಸ್ಪರ್ಧೆ ಮಾಡುವುದಿಲ್ಲ. ಚನ್ನಪಟ್ಟಣದ ಒಂದೇ ಕಡೆ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ನಾಗಮಂಗಲದ ಆದಿಚುಂಚನಗಿರಿ ಮಠದಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಮಾಧ್ಯಮದವರಿಗೆ ಹೇಳಿದ್ದಾರೆ.

ಇದನ್ನೂ ಓದಿ: Karnataka Elections 2023 : ಚುನಾವಣಾ ಅಫಿಡವಿಟ್‌ನಲ್ಲಿ ಇಬ್ಬರು ಪತ್ನಿಯರು ಇರುವುದನ್ನು ದೃಢಪಡಿಸಿದ ಆಮ್‌ ಆದ್ಮಿ!

ಅಮಾವಾಸ್ಯೆ ಪೂಜೆಗೆ ಬಂದಿದ್ದೇನೆ. ನಾವು ಸಾಮಾನ್ಯವಾಗಿ ಪೂಜೆಗೆ ಬರುತ್ತಾ ಇರುತ್ತೇವೆ. ಜೆಡಿಎಸ್ ಅಧಿಕಾರಕ್ಕೆ ಬರಲಿ‌ ಅಥವಾ ಕುಮಾರಸ್ವಾಮಿ ಸಿಎಂ ಆಗಲಿ ಎಂದು ಪೂಜೆ ಸಲ್ಲಿಸುತ್ತಿಲ್ಲ. ಸಮಾಜದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ ಎಂದ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

Exit mobile version