ಬೆಂಗಳೂರು: ಪಿಎಫ್ಐ ಸಂಘಟನೆ ಕಚೇರಿಗಳ (Raids on PFI) ಮೇಲೆ ರಾಜ್ಯ ಪೊಲೀಸರು ದಾಳಿ ನಡೆಸಿ ಹಲವರನ್ನು ಬಂಧಿಸಿರುವ ಬಗ್ಗೆ ರಾಜ್ಯದ ಜನತೆಯ ಮುಂದೆ ವಾಸ್ತವಾಂಶ ಇಡಬೇಕು ಎಂದು ರಾಜ್ಯ ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ನಗರದ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮೇಲೆ ಅನೇಕ ಆರೋಪಗಳಿವೆ. ನಾನು ಸ್ವತಃ ಬಿಎಂಎಸ್ ಶಿಕ್ಷಣ ಟ್ರಸ್ಟ್‌ನಲ್ಲಿ ನಡೆದಿರುವ ಅಕ್ರಮ ಬಗ್ಗೆ ಸದನದಲ್ಲಿಯೇ ದಾಖಲೆಗಳ ಸಮೇತ ಮಾಹಿತಿ ನೀಡಿದ್ದೆ. ಇದಲ್ಲದೆ ಅನೇಕ ಹಗರಣ, ಅಕ್ರಮಗಳ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಒಂದು ವೇಳೆ ಪಿಎಫ್ಐ ಮೇಲೆ ನಡೆದಿರುವ ದಾಳಿ ಕುರಿತು ನೈಜ ಮಾಹಿತಿ ಕೊಡದಿದ್ದರೆ, ಆರೋಪ ಮತ್ತು ಹಗರಣಗಳ ಕುರಿತು ಜನರ ಗಮನ ಬೇರೆಡೆಗೆ ಸೆಳೆಯಲು ಈ ದಾಳಿ ನಡೆಸಲಾಗಿದೆ ಎಂದು ಭಾವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | PFI | ಪಿಎಫ್‌ಐ ಕಾರ್ಯಕರ್ತರ ಬಂಧನಕ್ಕೆ ಕುಟುಂಬಸ್ಥರ ವಿರೋಧ; ಠಾಣೆ ಎದುರು ಜಮಾವಣೆ
ಎರಡು ದಿನಗಳಿಂದ ಕರ್ನಾಟಕವೂ ಸೇರಿ ದೇಶದ ವಿವಿಧೆಡೆ ಪಿಎಫ್ಐ ಕಚೇರಿಗಳ ಮೇಲೆ ಎನ್‌ಐಎ ದಾಳಿ ಆಗಿದೆ. ದಾಳಿ ಸಮಯದಲ್ಲಿ ಪಿಎಫ್ಐ ಸಂಘಟನೆಗಳ ವ್ಯಕ್ತಿಗಳ ಬಂಧನವೂ ಆಗಿದೆ. ಮತ್ತೆ ಸೋಮವಾರ ರಾಜ್ಯದ ನಾನಾ ಭಾಗದಲ್ಲಿ ಮಧ್ಯರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆ ಎನ್ನುವುದು ಸರ್ಕಾರದ ಆದೇಶವೋ ಅಥವಾ ಪೊಲೀಸರ ಮಾಹಿತಿ ಆಧಾರದ ದಾಳಿ ಆಗಿದೆಯೋ ಗೊತ್ತಿಲ್ಲ. ಆದರೆ, ಕಾರ್ಯಾಚರಣೆ ಬಗ್ಗೆ ನಾಡಿನ ಜನರ ಮುಂದೆ ವಾಸ್ತವಾಂಶಗಳನ್ನು ಸರ್ಕಾರ ಮುಂದಿಡಬೇಕು ಎಂದು ಆಗ್ರಹಿಸಿದ್ದಾರೆ.
ಏಕಾಏಕಿ ಈ ಬೆಳವಣಿಗೆಯಿಂದ ರಾಜ್ಯದಲ್ಲಿ ಯಾವುದೇ ಸಮಾಜದ ಮೇಲೆ ಆತಂಕ ಸೃಷ್ಟಿ ಆಗಬಾರದು. ಇತ್ತೀಚೆಗೆ ಅನೇಕ ಸಂಘಟನೆಗಳು ತಮ್ಮ ಅಜೆಂಡಾ ಪೂರೈಸಲು ಕೆಲಸ ಮಾಡುತ್ತಿವೆ. ಅವುಗಳಿಗೆ ಆರ್ಥಿಕ ಶಕ್ತಿ ಹೇಗೆ ಬರುತ್ತಿದೆ? ಕೆಲ ಘಟನೆಗಳ ಹಿಂದೆ ಯಾವ ಸಂಘಟನೆಗಳಿವೆ ಎಂಬುವುದು ತನಿಖೆಯಿಂದ ಹೊರಬರಬೇಕು ಎಂದು ಹೇಳಿದ್ದಾರೆ.
ಕಳೆದ ರಾತ್ರಿ ಏಕಾಏಕಿ ದಾಳಿ ಆಗಿರುವುದು ಸಣ್ಣ ಪುಟ್ಟ ಕಾರ್ಯಕರ್ತರಿಗೆ ಆತಂಕ ಉಂಟು ಮಾಡಿದೆ ಎನ್ನುವುದು ನಿಜ. ಈ ದಾಳಿಯ ವೇಳೆ ಏನು ಸಿಕ್ಕಿದೆ. ಯಾವ ದಾಖಲೆ ಇದೆ ಎಂಬುದನ್ನು ಜನರ ಮುಂದೆ ಇಡಬೇಕು. ದಾಳಿಯ ಬಗ್ಗೆ ಸತ್ಯ ಹೇಳದೇ ಹೋದರೆ ಕಾಂಗ್ರೆಸ್‌ನ ಪೇಸಿಎಂ ಅಭಿಯಾನದ ಕಡೆಯಿಂದ ಜನರ ಗಮನವನ್ನು ಡೈವರ್ಟ್ ಮಾಡಲು ಸರ್ಕಾರ ಹೀಗೆ ಮಾಡಿದೆ ಎಂಬ ಅನುಮಾನ ಜನರಿಗೆ ಬರುತ್ತದೆ. ನಿಜವಾಗಿಯೂ ಸಮಾಜಘಾತುಕ ಶಕ್ತಿ ಬಗ್ಗೆ ಮಾಹಿತಿ ಇದ್ದರೆ ಜನರ ಮುಂದೆ ಇಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | ಗಲಭೆ, ಪ್ರತಿಭಟನೆಗೆ ಕುಮ್ಮಕ್ಕು; ಪಿಎಫ್‌ಐ ಸಂಘಟನೆಯ ಮೂವರು ಸದಸ್ಯರ ಸೆರೆ