Site icon Vistara News

ಜೆಡಿಎಸ್‌ನಲ್ಲಿ ರಣೋತ್ಸಾಹ | ಪಂಚರತ್ನ ಯಾತ್ರೆಗೆ ಇಂದು ಚಾಲನೆ, ಇಂದು- ನಾಳೆ ಕಾರ್ಯಕಾರಿಣಿ

hdk hdd

ಬೆಂಗಳೂರು: ಇಂದು ಮತ್ತು ನಾಳೆ‌ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಪಕ್ಷ ಸಂಘಟನೆಯ ಜಪ ಶುರುಮಾಡಿದೆ. ಇದೇ ವೇಳೆಗೆ ಪಂಚರತ್ನ ರಥಯಾತ್ರೆಗೆ ಇಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಚಾಲನೆ ನೀಡಲಿದ್ದಾರೆ.

ಇಂದು ಬೆಳಗ್ಗೆ 9.45ಕ್ಕೆ ಗುಟ್ಟಳ್ಳಿ ಗವಿಗಂಗಾಧರೇಶ್ವರ ದೇವಸ್ಥಾನದಿಂದ ಪಂಚರತ್ನ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಶಿಕ್ಷಣ, ಉದ್ಯೋಗ, ಕೃಷಿ, ನೀರಾವರಿ, ಆರೋಗ್ಯದ ಕುರಿತು ಯೋಜನೆ ರೂಪಿಸಿರುವ ಕುಮಾರಸ್ವಾಮಿ ಅವರು ರಾಜ್ಯದೆಲ್ಲೆಡೆ ಪ್ರವಾಸ‌ ಮಾಡಿ ಪಂಚರತ್ನ ಯೋಜನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮೆಗಾ ಪ್ಲಾನ್ ರೂಪಿಸಿದೆ. ನವೆಂಬರ್ 1, ಕನ್ನಡ ರಾಜ್ಯೋತ್ಸವದಿಂದ ಮೊದಲ ಹಂತದ ಕಾರ್ಯಕ್ರಮ ಆರಂಭವಾಗಲಿದೆ. ನವೆಂಬರ್ 1ರಂದು ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಎಚ್‌ಡಿಕೆ ಘೋಷಿಸಲಿದ್ದಾರೆ.

ಕೋಲಾರದ ಮುಳುಬಾಗಿಲು ಕುರುಡುಮಲೆ ಗಣೇಶ ದೇವಸ್ಥಾನದಿಂದ ಪಂಚರತ್ನ ರಥಯಾತ್ರೆಯ ಮೊದಲ ಹಂತ ಆರಂಭವಾಗಲಿದೆ. 1994ರಲ್ಲಿ ಕುರುಡುಮಲೆಯಿಂದಲೇ ಪ್ರಚಾರ ಶುರುಮಾಡಿದ್ದ ಹೆಚ್.ಡಿ ದೇವೇಗೌಡರು ಅಧಿಕಾರಕ್ಕೇರಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿಂದಲೇ ಪ್ರಚಾರ ಆರಂಭಿಸುತ್ತಿದ್ದಾರೆ ಕುಮಾರಸ್ವಾಮಿ. ಹಳೇಮೈಸೂರು ಭಾಗದಲ್ಲಿ ಮೊದಲ ಹಂತದ ರಥಯಾತ್ರೆ ನಡೆಯಲಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ರಾಮನಗರದಲ್ಲಿ ಹೆಚ್‌ಡಿಕೆ ಮೊದಲ ಹಂತದ ಪ್ರವಾಸ ಮಾಡಲಿದ್ದಾರೆ. ರಥಯಾತ್ರೆಯ ವೇಳೆ ಗ್ರಾಮವಾಸ್ತವ್ಯ ಮಾಡಲಿದ್ದಾರೆ.

ಪಂಚರತ್ನ ರಥಯಾತ್ರೆ ಹಿಂದಿನ ಲೆಕ್ಕಾಚಾರವೇನು?

ಕಾಂಗ್ರೆಸ್, ಬಿಜೆಪಿ ವಿರುದ್ಧ ಪರ್ಯಾಯ ಶಕ್ತಿ ಪ್ರದರ್ಶನ ಮಾಡುವುದು, ಶಕ್ತಿ ಕಳೆದುಕೊಂಡಿರುವ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ, ಸ್ಥಳೀಯ ಮಟ್ಟದ ನಾಯಕರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಎರಡೂ ಪಕ್ಷಗಳಿಗಿಂತ ಮೊದಲೆ ಅಭ್ಯರ್ಥಿ ಘೋಷಿಸಿ ಪ್ರಚಾರ ಕಾರ್ಯ ಆರಂಭಿಸುವುದು, ಎಲ್ಲಾ ವರ್ಗಗಳ ಜೊತೆ ಸಂವಾದ ನಡೆಸಿ ಜನರನ್ನು ತಲುಪುವುದು, ಗ್ರಾಮವಾಸ್ತವ್ಯದ ಮೂಲಕ ಮತ್ತೊಮ್ಮೆ ಇಮೇಜ್ ಹೆಚ್ಚಿಸಿಕೊಳ್ಳುವ ಪ್ರಯತ್ನ, ಜೆಡಿಎಸ್‌ನಲ್ಲಿ ಮೂಡಿರುವ ಒಡಕು ಸರಿಮಾಡಿಕೊಂಡು ಒಗ್ಗಟ್ಟಿನ ಮಂತ್ರ ಜಪಿಸುವುದು ಈ ಯಾತ್ರೆಯ ಉದ್ದೇಶ.

ಇದನ್ನೂ ಓದಿ | Election 2023 | ಎಚ್‌.ಡಿ. ಕುಮಾರಸ್ವಾಮಿ ಮುಂದಿನ ಸಿಎಂ ಆಗಲಿ; ಎಚ್‌ಡಿಕೆ ಫೋಟೊ ಇಟ್ಟು ಲಕ್ಷ್ಮೀ ಪೂಜೆ ಮಾಡಿದ ಅಭಿಮಾನಿ!

ಕಾರ್ಯಕಾರಿಣಿ ಸಭೆ

ಜೆಪಿ ಭವನದಲ್ಲಿ ಇಂದು ಹಾಗೂ ನಾಳೆ ಜೆಡಿಎಸ್‌ ಕಾರ್ಯಕಾರಿಣಿ ಮಹತ್ವದ ಸಭೆ ನಡೆಯಲಿದೆ. ಪಂಚರತ್ನ ರಥಯಾತ್ರೆ, 2023ರ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಭೆ ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ಕರ್ನಾಟಕ, ಕೇರಳ, ಬಿಹಾರ, ಆಂಧ್ರಪ್ರದೇಶ ಸೇರಿದಂತೆ ದೇಶದ 12 ರಾಜ್ಯಗಳ ರಾಜ್ಯಾಧ್ಯಕ್ಷರು, ಜೆಡಿಎಸ್ ರಾಷ್ಟ್ರೀಯ ಪರಿಷತ್ ಸದಸ್ಯರು, ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರು ಭಾಗಿಯಾಗಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ‌ ಕುರಿತು, ಮುಂಬರುವ ವಿಧಾನಸಭೆ ಚುನಾವಣೆ ಸಿದ್ಧತೆ, ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ.

ಪ್ರವಾಸ ಎಲ್ಲೆಲ್ಲಿ ಯಾವಾಗ?

ಪಂಚರತ್ನ ಪ್ರವಾಸ ನವೆಂಬರ್ 1ರಿಂದ 5ರವರೆಗೆ ಕೋಲಾರ ಜಿಲ್ಲೆಯಲ್ಲಿ, ನವೆಂಬರ್ 6ರಿಂದ 10ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ, 11ರಿಂದ 13ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ, 14ರಿಂದ 23ರವರೆಗೆ ತುಮಕೂರು ಜಿಲ್ಲೆಯಲ್ಲಿ, 24ರಿಂದ 30ರವರೆಗೆ ಹಾಸನ ಜಿಲ್ಲೆಯಲ್ಲಿ, ಡಿಸೆಂಬರ್ 2ರಿಂದ 5ರವರೆಗೆ ರಾಮನಗರ ಜಿಲ್ಲೆಯಲ್ಲಿ ಸಂಚಾರ ನಡೆಸಲಿದೆ. ಮೊದಲ ಹಂತದಲ್ಲಿ ಎಚ್‌ಡಿಕೆ 35 ದಿನ ಪ್ರವಾಸ ಮಾಡಲಿದ್ದಾರೆ.

ಇದನ್ನೂ ಓದಿ | Election 2023 | ಮೂರೂವರೆ ವರ್ಷದ ಬಳಿಕ ಜೆಡಿಎಸ್‌ ಕಚೇರಿಗೆ ಜಿಟಿಡಿ; ಸಿಹಿ ತಿನ್ನಿಸಿದ ಎಚ್‌ಡಿಕೆ

Exit mobile version