ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ (A 1) ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ಅವರನ್ನು ವಶಕ್ಕೆ ಪಡೆದುಕೊಂಡಿರುವ ಎಸ್‌ಐಟಿ ಅಧಿಕಾರಿಗಳು ಶನಿವಾರ ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ ಎಚ್.ಡಿ.ರೇವಣ್ಣ ಅವರ ಮುಂದಿನ ಕಾನೂನು ಹೋರಾಟ ಯಾವ ರೀತಿ ಇರಲಿದೆ ಎನ್ನುವ ಮಾಹಿತಿ ಇಲ್ಲಿದೆ.
ಮಹಿಳೆಯೊಬ್ಬರನ್ನು ಅಪಹರಣ ಮಾಡಿ ಅಕ್ರಮ ಬಂಧನದಲ್ಲಿಟ್ಟಿದ್ದ ಆರೋಪದ ಮೇಲೆ ಮೈಸೂರಿನ ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಚಾರಣೆ ನಡೆಸಿತ್ತು. ಶನಿವಾರ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿತ್ತು. ಇದಾದ ಕೆಲ ಹೊತ್ತಿನಲ್ಲೇ ಎಸ್‌ಐಟಿ ಅಧಿಕಾರಿಗಳು ಎಚ್.ಡಿ.ರೇವಣ್ಣ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.
ರೇವಣ್ಣ ಅರೆಸ್ಟ್ ಆದ ಬೆನ್ನಲ್ಲೆ ನಿರೀಕ್ಷಣಾ ಜಾಮೀನು ಅರ್ಜಿ ತನ್ನಿಂದ ತಾನೆ ವಜಾ ಆಗಿದೆ. ಹೀಗಾಗಿ ನಾಳೆ (ಜನವರಿ 6) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ರೆಗ್ಯುಲರ್ ಜಾಮೀನಿಗಾಗಿ ರೇವಣ್ಣ ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ. ಸಂತ್ರಸ್ತೆ ಪತ್ತೆಯಾಗಿದ್ದು, ರೇವಣ್ಣ ಅವರಿಗೂ ಅಪಹರಣ ಕೇಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ವಾದ ಮಂಡಿಸುವ ಸಾಧ್ಯತೆ ಇದೆ.
ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಜಾಮೀನು ರದ್ದಾದರೆ?
ಇನ್ನು ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಜಾಮೀನು ರದ್ದಾದರೆ ರೇವಣ್ಣ ಅವರು ಹೈಕೋರ್ಟ್‌ನ ಕದ ತಟ್ಟಲಿದ್ದಾರೆ. ಹೈಕೋರ್ಟ್‌ನ ಜನಪ್ರತಿನಿಧಿಗಳ ಪೀಠದಲ್ಲಿ ಅರ್ಜಿ ಸಲ್ಲಿಸಲು ವ್ಯವಸ್ಥೆ ಇದೆ. ಇದೆಲ್ಲವೂ ಅಪಹರಣಕ್ಕೊಳಗಾದ ಸಂತ್ರಸ್ತೆ ನೀಡುವ ಹೇಳಿಕೆಗಳ ಮೇಲೆ ನಿರ್ಧಾರವಾಗುತ್ತದೆ. ಒಂದು ವೇಳೆ ಸಂತ್ರಸ್ತೆ ರೇವಣ್ಣ ಪರ ಗುರುತರ ಆರೋಪಗಳನ್ನ ಮಾಡದಿದ್ದರೆ ಸುಲಭವಾಗಿ ಜಾಮೀನು ಸಿಗಬಹುದು. ಬದಲಾಗಿ ರೇವಣ್ಣ ವಿರುದ್ಧ ಸಂತ್ರಸ್ತೆ ಅಪಹರಣ, ಕಿರುಕುಳದ ಆರೋಪ ಮಾಡಿ ಅದು ಸಾಬೀತಾದರೆ ಜಾಮೀನು ಲಭಿಸುವುದು ಕಷ್ಟ ಎಂದು ಮೂಲಗಳು ತಿಳಿಸಿವೆ.
ವಿಚಾರಣೆ ವೇಳೆ ರೇವಣ್ಣ ಏನಂದ್ರು?
ಇನ್ನು ಶನಿವಾರ ತಡರಾತ್ರಿವರೆಗೂ ರೇವಣ್ಣ ಅವರ ವಿಚಾರಣೆ ನಡೆಸಲಾಯಿತು. ಎಸ್ಐಟಿ ಹಿರಿಯ ಅಧಿಕಾರಿಗಳು ಅಪಹರಣ ಪ್ರಕರಣದ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದರು. ಎಸ್ಐಟಿ ಎಡಿಜಿಪಿ ಬಿ.ಕೆ.ಸಿಂಗ್ ಹಾಗೂ ತಂಡ ರೇವಣ್ಣ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದೆ. ಆ ವೇಳೆ ತಮ್ಮ ಮೇಲಿನ ಆರೋಪಗಳನ್ನು ರೇವಣ್ಣ ನಿರಾಕರಿಸಿದ್ದಾರೆ.
ʼʼನಾವು ಆಕೆಯನ್ನ ಅಪಹರಣ ಮಾಡಿಲ್ಲ. ಚುನಾವಣೆ ಇರುವ ಇರುವ ಕಾರಣ ಆಕೆ ನಮ್ಮ ಮನೆಗೆ ಬಂದಿದ್ದರು. ಅವರು ಕೆಲವು ವರ್ಷಗಳಿಂದ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಅದಷ್ಟೆ ಗೊತ್ತು. ಅದನ್ನ ಹೊರತುಪಡಿಸಿ ಆಕೆಯ ಬಗ್ಗೆಯಾಗಲಿ, ಅಪರಹರಣದ ಬಗ್ಗೆಯಾಗಲೀ ಯಾವುದೂ ಗೊತ್ತಿಲ್ಲʼʼ ಎಂದು ರೇವಣ್ಣ ತಿಳಿಸಿದ್ದಾರೆ. ಇಂದು ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮುಂದೆ ರೇವಣ್ಣ ಅವರನ್ನು ಹಾಜರು ಪಡಿಸಿ ಬಳಿಕ ಎಸ್‌ಐಟಿ ತಮ್ಮ ಕಷ್ಟಡಿಗೆ ಕೇಳಲಿದೆ.
ಇದನ್ನೂ ಓದಿ: HD Revanna: ರೇವಣ್ಣ ಬಂಧನ ಬೆನ್ನಲ್ಲೇ ಕುಮಾರಸ್ವಾಮಿ ಮೀಟಿಂಗ್; ಮಗನ ಬಳಿಕ ತಂದೆಯೂ ಅಮಾನತು?