Site icon Vistara News

HD Revanna: ಅಶ್ಲೀಲ ವಿಡಿಯೊ ಪ್ರಕರಣ: ದೂರು ನೀಡಲು ಮುಂದೆ ಬಂದ ಮೂವರು ಸಂತ್ರಸ್ತೆಯರು; ರೇವಣ್ಣ, ಪ್ರಜ್ವಲ್‌ಗೆ ಮತ್ತಷ್ಟು ಸಂಕಷ್ಟ?

HD Revanna

HD Revanna

ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆ ನಡೆದಿದೆ. ಈಗಾಗಲೇ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ (A 1) ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ಮಧ್ಯೆ ಹಾಸನ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ದೂರು ನೀಡಲು ಮೂವರು ಸಂತ್ರಸ್ತೆಯರು ಮುಂದೆ ಬಂದಿದ್ದಾರೆ ಎನ್ನಲಾಗಿದೆ.

ಈಗಾಗಲೇ ಎಸ್‌ಐಟಿ ಅಧಿಕಾರಿಗಳನ್ನು ಸಂಪರ್ಕಿಸಿರುವ ಮೂವರು ಸಂತ್ರಸ್ತೆಯರು ದೂರು ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ಬಗ್ಗೆ ಎಸ್‌ಐಟಿ ಪರಿಶೀಲನೆ ನಡೆಸುತ್ತಿದೆ. ಮತ್ತೆ ಮೂರು ಪ್ರತ್ಯೇಕ ದೂರು ದಾಖಲಾಗಲಿದ್ದು, ತಂದೆ-ಮಗನಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳ ಮಹಜರು ಸಾಧ್ಯತೆ

ಈ ಮಧ್ಯೆ ಇಂದು (ಭಾನುವಾರ) ಅಪಹರಣಕ್ಕೊಳಗಾದ ಮಹಿಳೆಯೊಂದಿಗೆ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ. ಮಹಿಳೆಯನ್ನ ಕರೆದುಕೊಂಡು ಹೋದ ಸ್ಥಳದಿಂದ, ಮಹಿಳೆ ಪತ್ತೆಯಾಗಿರುವ ಸ್ಥಳದವರೆಗೂ ಅಧಿಕಾರಿಗಳು ಮಹಜರು ನಡೆಸಲಿದ್ದಾರೆ. ಎಸ್‌ಐಟಿ ಈಗಾಗಲೇ ಸಂತ್ರಸ್ತ ಮಹಿಳೆಯ ಮೆಡಿಕಲ್ ಟೆಸ್ಟ್ ಮಾಡಿಸಿದೆ.

ಮಹಿಳೆಯ ಕೈಗಳ ಮೇಲೆ ಒಂದಷ್ಟು ಗಾಯಗಳು ಕೂಡ ಕಂಡು ಬಂದಿರುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಪ್ರಾಥಮಿಕವಾಗಿ ಸಂತ್ರಸ್ತೆ ಹೇಳಿಕೆ ದಾಖಲಿಸಿಕೊಂಡಿರುವ ಎಸ್ಐಟಿ, ಅವರ ಹೇಳಿಕೆ ಆಧರಿಸಿ ಸ್ಥಳ ಮಹಜರು ಪ್ರಕ್ರಿಯೆ ನಡೆಸಿ ಒಂದಷ್ಟು ಸಾಕ್ಷಿಗಳನ್ನು ಕಲೆ ಹಾಕಲಿದೆ. ಒಂದು ವೇಳೆ ಸಾಕ್ಷಿ ಸಿಕ್ಕರೆ ಈ ಕೇಸ್ ಮತ್ತಷ್ಟು ಬಿಗಿಯಾಗಲಿದೆ. ಇದರಿಂದ ರೇವಣ್ಣ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಮಹಜರು ವೇಳೆ ಬಲವಾದ ಸಾಕ್ಷಿ ಸಿಕ್ಕಿದ್ದೇ ಆದಲ್ಲಿ ರೇವಣ್ಣ ಜತೆಗೆ ಪತ್ನಿ ಭವಾನಿ ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣ ಅವರಿಗೂ ಕಾನೂನು ಕುಣಿಕೆ ಬಿಗಿಯಲಿದೆ. ಯಾಕೆಂದರೆ ಈಗಾಗಲೇ ಎಫ್ಐಆರ್‌ನಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ಹೆಸರು ಕೂಡ ಉಲ್ಲೇಖವಾಗಿದೆ. ಅವರ ವಿರುದ್ಧವೂ ಸಾಕ್ಷಿ ಸಿಗುತ್ತಾ ಎಂದು ಎಸ್‌ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಒಟ್ಟಿನಲ್ಲಿ ಸದ್ಯ ರೇವಣ್ಣ ಮತ್ತು ಅವರು ಕುಟುಂಬ ಕಾನೂನಿನ ತೊಡಕಿಗೆ ಸಿಲುಕಿಕೊಂಡಿರುವುದು ಸ್ಪಷ್ಟ. ಚುನಾವಣೆ ವೇಳೆಯಲ್ಲಿಯೇ ರೇವಣ್ಣ ಬಂಧನವಾಗಿರುವುದು ಪಕ್ಷಕ್ಕೆ ಮತ್ತಷ್ಟು ಮಜುಗರ ತಂದಿದೆ.

ಇದನ್ನೂ ಓದಿ: Prajwal Revanna Case: ದುಬೈ ವಿಮಾನದಲ್ಲೂ ರಾಜ್ಯಕ್ಕೆ ಬಾರದ ಸಂಸದ ಪ್ರಜ್ವಲ್ ರೇವಣ್ಣ

ಕೋರಮಂಗಲದಲ್ಲಿರುವ ನ್ಯಾಯಾಧೀಶರ ಎದುರು ಇಂದು (ಭಾನುವಾರ) ರೇವಣ್ಣ ಅವರನ್ನು ಹಾಜರುಪಡಿಸಲಿರುವ ಅಧಿಕಾರಿಗಳು, ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ನ್ಯಾಯಾಧೀಶರು ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ರೇವಣ್ಣ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲು ಎಸ್‌ಐಟಿ ಅಧಿಕಾರಿಗಳಿಗೆ ಭಾನುವಾರ ಸಂಜೆವರೆಗೆ ಸಮಯವಿದೆ.

Exit mobile version