Site icon Vistara News

ಗುದ್ದಲಿ ಪೂಜೆ ಗದ್ದಲ | ₹50 ಕೋಟಿ ಅನುದಾನ ತಪ್ಪಿಸಲು ನೋಡಿದ ಎಚ್‌ಡಿಕೆ ಗೂಂಡಾಗಳ ಕರೆಸಿದರು: ಸಿಪಿವೈ

cp yogeshwar

ರಾಮನಗರ: ನಾನು ಕಳೆದ 4 ವರ್ಷದಿಂದ ಈ ತಾಲೂಕಿನ ಯಾವುದೇ ವಿಚಾರದಲ್ಲಿ ಭಾಗಿಯಾಗಿಲ್ಲ. ಆದರೆ, ರಾಮನಗರ ಅಭಿವೃದ್ಧಿ ವಿಚಾರದಲ್ಲಿ ಈ ಕ್ಷೇತ್ರದ ಶಾಸಕರಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಫಲರಾಗಿದ್ದಾರೆ. ಅವರು ದುಡ್ಡು ಹೊಡೆಯುವುದರಲ್ಲಿ ನಿಸ್ಸೀಮರು. ನನ್ನ ಮನವಿ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ೫೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರು. ಅದನ್ನು ತಡೆಯಲು ಸಿಎಂಗೆ ಎಚ್‌ಡಿಕೆ ಪತ್ರ ಬರೆದಿದ್ದರು. ಅದೂ ಆಗಲಿಲ್ಲವೆಂದು ಗೂಂಡಾಗಳನ್ನು ಕರೆಸಿದ್ದಾರೆ. ಇದು ಅವರ ಹತಾಷೆಯ ಮನೋಭಾವ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಯೋಗೇಶ್ವರ್‌, ನಾನು ಹಳ್ಳಿಗಳಲ್ಲಿ ಪ್ರವಾಸ ಮಾಡಿದ್ದೇನೆ. ಆಗ ಜನರು ನನಗೆ ಸಾಕಷ್ಟು ದೂರು ಹೇಳಿದ್ದರು. ಈ ಭಾಗದ ಅಭಿವೃದ್ಧಿ ದೃಷ್ಟಿಯಲ್ಲಿ 50 ಕೋಟಿ ರೂಪಾಯಿ ಅನುದಾನ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೆ. ಅವರು ಸಹ ನಮಗೆ ಅನುದಾನ ನೀಡಿದರು. ಆದರೆ, ಇದು ಕುಮಾರಸ್ವಾಮಿ ಸಹಿಸಿಕೊಂಡಿಲ್ಲ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಬೊಮ್ಮಾಯಿ ರಾಮನಗರ ಕ್ಷೇತ್ರಕ್ಕೆ ೫೦ ಕೋಟಿ ರೂಪಾಯಿ ಅನುದಾನ ನೀಡುತ್ತಿದ್ದಂತೆ ಅಡ್ಡಗಾಲು ಹಾಕಲು ಮುಂದಾದ ಕುಮಾರಸ್ವಾಮಿ, ಹಲವು ಬಾರಿ ಸಿಎಂಗೆ ಪತ್ರ ಬರೆದಿದ್ದಾರೆ. ಅನುದಾನ ನೀಡದಂತೆ ಪತ್ರದಲ್ಲಿ ಉಲ್ಲೇಖಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಅವರ ಬಳಿ ಸಮಯ ಕೇಳಿದ್ದೆ. ಅವರು ಶನಿವಾರ (ಅ.೧)ರಂದು ಸಮಯ ನೀಡಿದ್ದರು. ಆದರೆ ಅವರಿಗೆ ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲ. ಹಾಗಾಗಿ ನಾನೇ ಚಾಲನೆ ನೀಡಿದ್ದೇನೆ ಎಂದು ಯೋಗೇಶ್ವರ್‌ ಹೇಳಿದರು.

ಇದನ್ನೂ ಓದಿ | ಗುದ್ದಲಿ ಪೂಜೆ ಗದ್ದಲ | ಬಾರದ ಎಚ್‌ಡಿಕೆ, ಸಿಡಿದೆದ್ದ ಜೆಡಿಎಸ್‌; ಸಿಪಿವೈ ಕಾರಿಗೆ ಕಲ್ಲು, ಮೊಟ್ಟೆ ಎಸೆತ, ರಾಮನಗರ ಉದ್ರಿಕ್ತ

ನಾವು ಶಿಷ್ಟಾಚಾರ ತಪ್ಪಿಲ್ಲ- ಯೋಗೇಶ್ವರ್‌ ಸ್ಪಷ್ಟನೆ
ನಾವು ಎಲ್ಲಿ ಶಿಷ್ಟಾಚಾರ ತಪ್ಪಿದ್ದೇವೆ? ನೆರೆ ಬಂದಾಗ ಮುಖ್ಯಮಂತ್ರಿ ಜತೆ ಕುಮಾರಸ್ವಾಮಿ ಬಂದಿದ್ದರು. ನಾನು ಸಹ ಜತೆಯಲ್ಲಿದ್ದೆ. ಈ ಕಾರ್ಯಕ್ರಮಕ್ಕೆ ಅವರು ಬರಬಹುದಿತ್ತು. ಬೆಂಗಳೂರಿನಲ್ಲಿದ್ದರೂ ಅವರು ಆಗಮಿಸಲಿಲ್ಲ. ಇದು ಕೇವಲ ಮರ್ಮವಷ್ಟೇ. ಬೇಕಿದ್ದರೆ ಅವರೇ ನಿಂತುಕೊಂಡು ಕೆಲಸ ಮಾಡಿಸಲಿ. ಇಲ್ಲಿ ತಪ್ಪೇನಾಗಿದೆ? ಕುಮಾರಸ್ವಾಮಿ ತಮ್ಮ ಜೀವನದಲ್ಲಿಯೇ ಆಹ್ವಾನ ಪತ್ರಿಕೆ ಮಾಡಿಸಿಲ್ಲ. ಅವರು ಎಲ್ಲರಿಗೂ ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಎಸ್ಪಿ,‌ ಡಿಸಿಗೆ ಹೆದರಿಸುತ್ತಾರೆ. ಅವರೊಬ್ಬ ಬ್ಲ್ಯಾಕ್‌ಮೇಲರ್. ಬೇಕಿದ್ದರೆ ಹಕ್ಕುಚ್ಯುತಿ ಮಂಡನೆ ಮಾಡಲಿ ಎಂದು ಯೋಗೇಶ್ವರ್‌ ಕಿಡಿಕಾರಿದರು.

ಆರು ತಿಂಗಳಲ್ಲಿ ಎಚ್‌ಡಿಕೆ ಯೋಗ್ಯತೆ ತಿಳಿಯಲಿದೆ- ಯೋಗೇಶ್ವರ್‌
ಮಾಜಿ ಸಿಎಂ ಕುಮಾರಸ್ವಾಮಿ ಯೋಗ್ಯತೆ ಏನು ಎಂಬುದು ಇನ್ನು 6 ತಿಂಗಳಲ್ಲಿ ಗೊತ್ತಾಗಲಿದೆ. ಜನರೇ ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಈಗ ಇಡೀ ತಾಲೂಕಿನಲ್ಲಿ ಜೆಡಿಎಸ್‌ನವರು ಪಕ್ಷ ಬಿಡುತ್ತಿದ್ದಾರೆ. ಬೇರೆ ಬೇರೆ ಪಕ್ಷದತ್ತ ಮುಖ ಮಾಡಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್‌ ಹೇಳಿದರು.

ಏನಿದು ಪ್ರಕರಣ?
ರಾಮನಗರದ ೫ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಭೂಮಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉನ್ನತ ಶಿಕ್ಷಣ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ ಉದ್ಘಾಟಕರಾಗಿದ್ದಾರೆ. ವಿಧಾನ ಪರಿಷತ್‌ ಸದಸ್ಯರಾದ ಸಿ.ಪಿ.ಯೋಗೇಶ್ವರ್‌ ಪರಿಷತ್‌ ಸದಸ್ಯರ ಖೋಟಾದಲ್ಲಿ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಎಂದು ಆಮಂತ್ರಣ ಪತ್ರದಲ್ಲಿ ಹಾಕಲಾಗಿದೆ. ಈ ಬಗ್ಗೆ ಗರಂ ಆಗಿದ್ದ ಮಾಜಿ ಮುಖ್ಯಮಂತ್ರಿ, ರಾಮನಗರ ಶಾಸಕ ಎಚ್‌.ಡಿ. ಕುಮಾರಸ್ವಾಮಿ, “ನನ್ನ ಹಕ್ಕುಚ್ಯುತಿ ಆಗಿದೆ. ನನಗೆ ಆಹ್ವಾನ ನೀಡಲಾಗಿಲ್ಲ” ಎಂದು ಆರೋಪಿಸಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಸಂಬಂಧ ಜೆಡಿಎಸ್‌ ಕಾರ್ಯಕರ್ತರು ಬೆಳಗ್ಗೆ ಭೂಮಿ ಪೂಜೆ ನಡೆಯುವ ಸ್ಥಳಗಳಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಲ್ಲದೆ, ಸಿ.ಪಿ.ಯೋಗೇಶ್ವರ್‌ ಕಾರಿನ ಮೇಲೆ ಕಲ್ಲು ಹಾಗೂ ಮೊಟ್ಟೆ ಎಸೆಯಲಾಗಿತ್ತು. ಅಲ್ಲದೆ, ಅವರ ಕಾರಿಗೆ ಘೇರಾವ್‌ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಇಡೀ ಕಾರ್ಯಕ್ರಮವನ್ನು ರದ್ದುಪಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.

ಇದನ್ನೂ ಓದಿ | ಗುದ್ದಲಿ ಪೂಜೆ ಗದ್ದಲ | ವಾಮಮಾರ್ಗ ಬೇಡ; ಮಾಜಿ ಸಿಎಂ ಎಚ್‌ಡಿಕೆ ವಿರುದ್ಧ ಅಶ್ವತ್ಥನಾರಾಯಣ ಕಿಡಿ

Exit mobile version