ಬೆಂಗಳೂರು: ಇದು ಪ್ರತಿಯೊಬ್ಬ ವಾಹನ ಸವಾರರೂ ಗಮನಿಸಬೇಕಾದ ಘಟನೆ. ಮಾನವೀಯ ನೆಲೆಯಲ್ಲಿ ಸಹಾಯ ಮಾಡಲು ಮುಂದಾಗುವ ಮುನ್ನ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆಯನ್ನು ನೆನಪಿಸುವ ಸುದ್ದಿ. ಯಾರೋ ಕಷ್ಟದಲ್ಲಿದ್ದಾನೆ ಎಂದು ಡ್ರಾಪ್ ಕೊಡಲು ಮುಂದಾದಾಗ ಆ ವ್ಯಕ್ತಿ ಸವಾರನಿಗೇ ಹಲ್ಲೆ ಮಾಡಿ ಸ್ಕೂಟರನ್ನೇ ಕಸಿದು ಪರಾರಿ ಆದ ಘಟನೆ ಇದು.
ನಗರದ ಹೊರಮಾವು ಬಳಿ ವಿಜಯಾ ಬ್ಯಾಂಕ್ ಕಾಲೊನಿ ಬಡಾವಣೆ ಬಳಿ ತರುಣ್ ಅಗರ್ವಾಲ್ ಎಂಬವರು ತಮ್ಮ ಸ್ಕೂಟರ್‌ನಲ್ಲಿ ಸಾಗುತ್ತಿದ್ದರು. ಆಗ ವ್ಯಕ್ತಿಯೊಬ್ಬ ಪೆಟ್ರೋಲ್ ತುಂಬಿಸಲು ಸಹಾಯ ಬೇಕು ಎಂದು ಅವರನ್ನು ಕೇಳಿಕೊಂಡ. ಯುವಕನ ದಯನೀಯ ಮನವಿಗೆ ಸ್ಪಂದಿಸಿದ ತರುಣ್ ಸ್ಕೂಟರ್ ನಿಲ್ಲಿಸಿದ್ದಾರೆ. ಆಗ ಏಕಾಏಕಿ ಅವರ ಮೇಲೆ ಹಲ್ಲೆ ನಡೆಸಿದ ಯುವಕ ಕತ್ತಿ ತೆಗೆದು ಬೆದರಿಸಿದ. ಅಷ್ಟೇ ಅಲ್ಲ. ತರುಣ್ ಅವರ ಕೈಯಲ್ಲಿದ್ದ ಎರಡೂ ಮೊಬೈಲ್‌ಗಳನ್ನು ಕಿತ್ತುಕೊಂಡ. ಮಾತ್ರವಲ್ಲ, ಅವರ ಸ್ಕೂಟರನ್ನೇ ಹಿಡಿದುಕೊಂಡು ಪರಾರಿಯಾಗಿದ್ದಾನೆ.
ತರುಣ್ ಅವರು ಕಕ್ಕಾಬಿಕ್ಕಿಯಾಗಿ ಭಯದಿಂದ ನೋಡುತ್ತಿರುವಂತೆಯೇ ಇಷ್ಟೆಲ್ಲ ನಡೆದುಹೋಗಿದೆ. ಈ ಎಲ್ಲ ಘಟನೆಗಳು ಸಮೀಪದ ಕಟ್ಟಡವೊದರ ಸಿಸಿಟಿವಿಯಲ್ಲಿ ಸಂಪೂರ್ಣ ಸೆರೆಯಾಗಿದೆ.
ತರುಣ್ ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದು, ಸಮಾಜಸೇವಾ ಮನೋಭಾವ ಹೊಂದಿದ್ದಾರೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ. ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಿಸಿಟಿವಿ ಫೂಟೇಜ್ ಮೂಲಕ ಸೆರೆಯಾಗಿರುವ ಯುವಕ ಪೊಲೀಸರಿಂದ ಸದ್ಯವೇ ಸೆರೆಯಾಗಲಿದ್ದಾನೆ.
ಇದನ್ನೂ ಓದಿ: ಅಪರಿಚಿತ ಮಹಿಳೆಯ ಕತ್ತು ಹಿಸುಕಿ ಕೊಲೆ