ಬೆಂಗಳೂರು: ತಾನು ಬಿಬಿಎಂಪಿ ಚೀಫ್ ಎಂಜಿನಿಯರ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ, ಈ ರೀತಿ ಹೇಳಿಕೊಂಡೇ ಹಲವರನ್ನು ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ. ಇವನು ಸಿಕ್ಕಿಬಿದ್ದಿದ್ದು ಅಂತಿಂಥ ಕಡೆಯಲ್ಲ. ತನ್ನನ್ನು ಆಪ್ತ ಕಾರ್ಯದರ್ಶಿಗಳು ಬರಹೇಳಿದ್ದಾರೆ ಎಂಬ ಸಬೂಬು ನೀಡಿ ನೇರವಾಗಿ ಮುಖ್ಯಮಂತ್ರಿಗಳ ಕಚೇರಿಗೇ ನುಗ್ಗಿದಾಗ!
ಹೀಗೆ ಬಂಧಿತನಾದವನ ಹೆಸರು ಪರಮೇಶ್. ಬೀದರ್ ಮೂಲದವನು. ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡು ಯಾವ ಅಧಿಕಾರಿಗೂ ಕಡಿಮೆ ಇಲ್ಲದಂತೆ ಕಾಣುತ್ತಿದ್ದ ಅವನ ಮೇಲೆ ಸೆಕ್ಯುರಿಟಿ ಸಿಬ್ಬಂದಿಗೆ ಸಂಶಯ ಬಂದು ವಿಚಾರಣೆ ನಡೆಸಿದರು.
ʻʻನಾನು ಬಿಬಿಎಂಪಿಯಲ್ಲಿ ಚೀಫ್ ಎಂಜಿನಿಯರ್ ಆಗಿದ್ದೇನೆ. ಸಿಎಂ ಆಪ್ತ ಕಾರ್ಯದರ್ಶಿ ಆಗಿರುವ ಮಂಜುನಾಥ್ ಪ್ರಸಾದ್ ಅವರು ಒಳಗೆ ಕರೆದಿದ್ದಾರೆ. ನನ್ನನ್ನು ಸಿಎಂ ಅವರ ಪರ್ಸನಲ್ ಸೆಕ್ರೆಟರಿ ಪೋಸ್ಟ್ ಗೆ ನೇಮಿಸಲಾಗಿದೆʼʼ ಎಂದು ಹೇಳಿದ. ಆಗ ಪೊಲೀಸರ ಅನುಮಾನ ಇನ್ನೂ ಹೆಚ್ಚಾಯಿತು.
ಬಳಿಕ ಪೊಲೀಸರು ಬಿಬಿಎಂಪಿ ಕಚೇರಿಯನ್ನು ಚೆಕ್ ಮಾಡಿದರು. ಅವನ ಮೊಬೈಲ್ ಚೆಕ್ ಮಾಡಿದರು. ಆಗ ಅವನ ಎಲ್ಲ ವಿಚಾರಗಳು ಹೊರಬಿದ್ದವು. ಆತ ಬಿಬಿಎಂಪಿ ಚೀಫ್ ಎಂಜಿನಿಯರ್ ಎಂದು ಹೇಳಿಕೊಂಡು ಸಾಕಷ್ಟು ಮಂದಿಗೆ ಮೋಸ ಮಾಡಿದ್ದ. ಅದರಲ್ಲೂ ಸರಕಾರಿ ಅಧಿಕಾರಿಗಳನ್ನೇ ವಂಚಿಸಿದ್ದ! ಅದರಲ್ಲೂ ಸರ್ಕಾರಿ ಇಲಾಖೆಯಲ್ಲಿರುವ ಮಹಿಳಾ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಅವರಿಗೆ ಬೇಕಾದ ಕೆಲಸ ಮಾಡಿಕೊಡುವುದಾಗಿ ಹಣ ಪಡೆದು ನಂತರ ವಂಚಿಸುತ್ತಿದ್ದ.
ರಾಜಕಾರಣಿಗಳ ಜೊತೆ ಫೋಟೊ ತೆಗೆಸಿಕೊಂಡು ಅವರಿಗೆ ಆತ್ಮೀಯ ಎಂಬಂತೆ ಪೋಸು ಕೊಡುತ್ತಿದ್ದ. ನನಗೆ ಎಲ್ಲಾ ರಾಜಕಾರಣಿಗಳು ಪರಿಚಯ. ನಿಮಗೆ ವರ್ಗಾವಣೆ ಮಾಡಿಕೊಡ್ತೀನಿ, ಟೆಂಡರ್ ಕೊಡಿಸ್ತೀನಿ ಅಂತ ಲಕ್ಷ ಲಕ್ಷ ಸುಲಿಗೆ ಮಾಡ್ತಿದ್ದ ಎನ್ನುವುದು ಈಗ ತಿಳಿದುಬಂದಿದೆ. ಇದೀಗ ಮುಂದಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ| ಅಂದು ದೇಗುಲದಲ್ಲಿ ಚಪ್ಪಲಿ ಕಳ್ಳ, ಇಂದು ಕನ್ನ ಹಾಕೋ ಮನೆಗಳ್ಳ: ಐಷಾರಾಮಿ ಖದೀಮನ ಕಲರ್‌ಫುಲ್ ಲೈಫ್!