ಬೆಂಗಳೂರು: ಆನ್‌ಲೈನ್‌ನಲ್ಲಿ ಪಬ್‌ಜಿ ಆಡುವ ಹುಚ್ಚು ಬೆಳೆಸಿಕೊಂಡಿದ್ದ ಯುವಕನೊಬ್ಬ, ಅದಕ್ಕಾಗಿ ಹೊಸ ಮೊಬೈಲ್ ಕೊಳ್ಳಲು ದುಡ್ಡಿಗಾಗಿ ಒಬ್ಬ ಮಹಿಳೆಯನ್ನು ಕಟ್ಟಿ ಹಾಕಿ ಹಣ ದೋಚಿದ್ದ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಆಗಸ್ಟ್ ತಿಂಗಳ ಆರಂಭದಲ್ಲಿ ನಗರದ ಗಂಗಮ್ಮನ ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯೊಬ್ಬರ ಮನೆಗೆ ನುಗ್ಗಿ, ಅವರನ್ನು ಕಟ್ಟಿ ಹಾಕಿ ಚಿನ್ನಾಭರಣ ಮತ್ತು ಹಣ ದೋಚಲಾಗಿತ್ತು. ಈ ಘಟನೆಯ ಬೆನ್ನು ಬಿದ್ದ ಪೊಲೀಸರಿಗೆ ಪಬ್ ಜಿ ಪ್ರೇಮಿಯೊಬ್ಬ ಸಿಕ್ಕಿಬಿದ್ದಿದ್ದಾನೆ.
ಅವನ ಹೆಸರು ಸತೀಶ್. ಗಾರೆ ಕೆಲಸ ಮಾಡಿಕೊಂಡು ತಕ್ಕ ಮಟ್ಟಿಗೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಸತೀಶ್ ಗೆ ವಿಪರೀತವಾದಂತಹ ಪಬ್ಜಿ ಆಡುವ ಹುಚ್ಚು ಅಂಟಿಕೊಂಡಿತ್ತು. ಪಬ್ಜಿಯಲ್ಲಿ ಹಣವನ್ನು ಬೆಟ್ಟಿಂಗ್ ಕಟ್ಟಿ ಆಡುತ್ತಿದ್ದ. ಹಾಗೆ ಇರುವ ಹಣವನ್ನೆಲ್ಲ ಕಳೆದುಕೊಂಡಿದ್ದ. ಅಷ್ಟಲ್ಲದೆ ತನ್ನ ತಂಗಿ ಅಕೌಂಟ್ ನಿಂದಲೂ ಹಣ ತೆಗೆದು ಪಬ್ಜಿಗೆ ಹಾಕಿ ಸೋತು ಹೋಗಿದ್ದ .
ಈ ನಡುವೆ, ಆತನಿಗೆ ಪಬ್ಜಿ ಆಡಲು ಅಪ್ಡೇಟೆಡ್ ಹೊಸ ಮೊಬೈಲ್ ಬೇಕು ಅನಿಸಿದೆ. ಆದರೆ, ಹಣವಿರಲಿಲ್ಲ. ಹೀಗಾಗಿ ಕಳ್ಳತನ ಮಾಡುವ ತೀರ್ಮಾನಕ್ಕೆ ಬಂದಿದ್ದ. ಇದೇ ತಿಂಗಳ ಮೊದಲ ವಾರದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿದ್ದ ಸತೀಶ್, ಅವರ ಕೈಕಾಲು ಕಟ್ಟಿ ಅವಳ ಮನೆಯಲ್ಲಿದ್ದ ಆರು ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ.
ದೂರು ದಾಖಲಾಗುತ್ತಿದ್ದಂತೆ ಪ್ರಕರಣದ ಹಿಂದೆ ಬಿದ್ದ ಇನ್‌ಸ್ಪೆಕ್ಟರ್ ಸಿದ್ದೇಗೌಡ ಮತ್ತು ತಂಡ ಮೊದಲು ಆ ಪ್ರದೇಶದ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದೆ . ಈ ವೇಳೆ ಆತ ಹಾಕಿಕೊಂಡಿದ್ದ ಟಿ ಶರ್ಟ್ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ವಿಚಾರಿಸಿದೆ. ಆಗ ಸತೀಶ್ ತಪ್ಪೊಪ್ಪಿಕೊಂಡಿದ್ದಾನೆ. ಆತನಿಂದ ಹೊಸದಾಗಿ ಖರೀದಿಸಿದ ಐ ಫೋನ್ ಹಾಗು ಉಳಿದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ| Mobile robbery | ರಾತ್ರಿ ದರೋಡೆ ಮಾಡುತ್ತಿದ್ದ ಐವರ ಗ್ಯಾಂಗ್ ಸೆರೆ, ಹೈದ್ರಾಬಾದ್, ಚೆನ್ನೈಗೆ ಮೊಬೈಲ್ ರವಾನೆ