Site icon Vistara News

ರಮೇಶ್‌ ಕುಮಾರ್‌ `ಮಾಯಿಲ್‌ ಮರಾಠಿʼ: ಆರೋಗ್ಯ ಸಚಿವ ಡಾ. ಸುಧಾಕರ್‌ ಗೇಲಿ

ಜನೋತ್ಸವ

ಬೆಂಗಳೂರು: ಕಾಂಗ್ರೆಸ್‌ನ ಪ್ರಥಮ ಕುಟುಂಬದ ಆಶ್ರಯದಲ್ಲಿ ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿದ್ದೇವೆ ಎಂಬ ಮಾಜಿ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ಮಾತಿಗೆ ಬಿಜೆಪಿ ನಾಯಕರ ಪ್ರತಿ ಹೇಳಿಕೆ ಶುಕ್ರವಾರವೂ ಮುಂದುವರಿದಿದೆ. ರಮೇಶ್‌ ಕುಮಾರ್‌ ಅವರು ಮಾಟ ಮಾಡುವವರು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.ಸ್ಯಾಷನಲ್‌ ಹೆರಾಲ್ಡ್‌ ಪ್ರರಕಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ.) ವಿಚಾರಣೆಗೆ ಕರೆದಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ವತಿಯಿಂದ ಗುರುವಾರ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ರಮೇಶ್‌ ಕುಮಾರ್‌ ಮಾತನಾಡಿದ್ದರು.

ನೆಹರೂ, ಸೋನಿಯಾ ಗಾಂಧಿ ಅವರ ಹೆಸರಿನಲ್ಲಿ ನಾವೆಲ್ಲರೂ ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ. ಈಗ ಅವರು ಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ನಾವು ಸಣ್ಣ ಪ್ರತಿಭಟನೆಯನ್ನೂ ಮಾಡದಿದ್ದರೆ ತಿನ್ನುವ ಅನ್ನದಲ್ಲಿ ಹುಳ ಬೀಳುತ್ತದೆ ಎಂಬರ್ಥದಲ್ಲಿ ಭಾವುಕವಾಗಿ ಮಾತನಾಡಿದ್ದರು.

ಈ ಕುರಿತು ಗುರುವಾರವೇ ಅನೇಕ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌, ಕಾಂಗ್ರೆಸ್‌ನ ಒಬ್ಬೊಬ್ಬರೂ ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಮಾಡಿದ್ದಾರೆ. ಸೋನಿಯಾ, ರಾಹುಲ್‌ ಗಾಂಧಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ. ಇದರ ಬಗ್ಗೆ ನಾನು ಹೇಳುವುದಕ್ಕೆ ಏನಿದೆ? ಭ್ರಷ್ಟಾಚಾರ ಪ್ರಕರಣದಲ್ಲಿ ಕಾಂಗ್ರೆಸ್‌ನವರು ಹೊರಬರಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದರು. ಇದೀಗ ಸತ್ಯ ಹೇಳುವ ಮೂಲಕ ಇದೆಲ್ಲದಕ್ಕೆ ರಮೇಶ್ ಕುಮಾರ್ ತಿಲಾಂಜಲಿ ಇಟ್ಟಿದ್ದಾರೆ.

ಕೋಲಾರ ಭಾಗದ ಎಲ್ಲ ಜನತೆಗೂ ರಮೇಶ್‌ ಕುಮಾರ್‌ ಅವರ ಬಗ್ಗೆ ಗೊತ್ತಿದೆ. ಸ್ಪೀಕರ್ ಆಗಿ ಅವರ ವರ್ತನೆ ಬಗ್ಗೆ ನಾನು ಸದನದಲ್ಲೂ ಹೇಳಿದ್ದೇನೆ. ಇಡೀ‌ ದೇಶದಲ್ಲಿ ಯಾವ ಸ್ಪೀಕರ್ ಮಾಡದ ಘನಾಂದಾರಿ ಕೆಲಸ ಅವರು ಮಾಡಿದ್ದರು. ಈ ಹಿಂದೆ ಲಂಕೇಶ್ ಪತ್ರಿಕೆ ದ್ವಾರಕಾನಾಥ್ ಅವರು ರಮೇಶ್ ಕುಮಾರ್‌ಗೆ ಮಾಯಿಲ್‌ ಮರಾಠಿ ಎಂಬ ಬಿರುದು ಕೊಟ್ಟಿದ್ದಾರೆ ಎಂದು ಟೀಕಿಸಿದರು. ( ಮಾಯಿಲ್ ಮರಾಠಿ ಎಂದರೆ ತೆಲುಗುವಿನಲ್ಲಿ ಮಾಟ ಮಾಡುವವನು ಎಂದರ್ಥ).

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್‌. ಅಶೋಕ್‌, ಕಾಂಗ್ರೆಸ್‌ನ 60 ವರ್ಷದ ನಿಜ ಬಣ್ಣವನ್ನು ರಮೇಶ್ ಕುಮಾರ್ ಹೊರಹಾಕಿದ್ದಾರೆ. ಯಾವಾಗಲೂ ರಮೇಶ್ ಕುಮಾರ್ ಸತ್ಯವನ್ನೇ ಹೇಳುತ್ತಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇಡಿ ವಿಚಾರಣೆಗೆ ರಮೇಶ್ ಕುಮಾರ್ ಸಾಕ್ಷಿ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್‌ನವರು ಶೇ. 40 ಕಮಿಷನ್ ಆರೋಪ ಮಾಡಿದ್ದರು. ಇದೀಗ ಅವರ ಪಕ್ಷದವರು ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿದ್ದಾರೆ ಎಂದಾದರೆ ಕಾಂಗ್ರೆಸ್‌ನವರು ಶೇ.160 ಕಮಿಷನ್‌ ಹೊಡೆದಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ರಮೇಶ್ ಕುಮಾರ್ ಹೇಳಿಕೆಗೆ ನಮ್ಮ ಜತೆ ಬಿಜೆಪಿ ಚರ್ಚೆಗೆ ಬರಲಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅಶೋಕ್‌, ನಮ್ಮ ಜತೆ ಚರ್ಚೆ ಮಾಡುವ ಮೊದಲು ಶಿವಕುಮಾರ್‌ ಅವರು ರಮೇಶ್ ಕುಮಾರ್ ಜತೆ ಕುಳಿತು ಮಾತನಾಡಲಿ. ಮೊದಲು ಡಿ.ಕೆ. ಶಿವಕುಮಾರ್ ಮತ್ತು ರಮೇಶ್ ಕುಮಾರ್ ಅವರಿಗೆ ಚರ್ಚೆ ನಡೆಸಬೇಕು. ಆಮೇಲೆ ಬೇಕಿದ್ದರೆ ನಾವು ಅವರ ಜತೆ ಚರ್ಚೆಗೆ ಕೂರುತ್ತೇವೆ ಎಂದರು.

ಇದನ್ನೂ ಓದಿ | ರಮೇಶ್‌ ಕುಮಾರ್‌ ಒಬ್ಬ ಶಕುನಿ ಎಂದ ಸ್ವಪಕ್ಷೀಯ ನಾಯಕ ಕೆ.ಎಚ್‌.ಮುನಿಯಪ್ಪ

Exit mobile version