Site icon Vistara News

ಮತ್ತೊಮ್ಮೆ ಬೀದಿಗಿಳಿದ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು: ಕಾಯಂ ಸಾಧ್ಯವಿಲ್ಲ ಎಂದ ಸಚಿವ ಡಾ.ಕೆ.ಸುಧಾಕರ್‌

ಗುತ್ತಿಗೆ ನೌಕಕರು

ಬೆಂಗಳೂರು: ನಾ ಕೊಡೆ, ನೀ ಬಿಡೇ ಎಂಬ ಪರಿಸ್ಥಿತಿ ಆರೋಗ್ಯ ಇಲಾಖೆ/ಗುತ್ತಿಗೆ ಹೊರಗತ್ತಿಗೆ ನೌಕರರ ನಡುವೆ ಸೃಷ್ಟಿಯಾಗಿದೆ. ರಾಜ್ಯಾದ್ಯಂತ ಆರೋಗ್ಯ ಇಲಾಖೆ ಗುತ್ತಿಗೆ ನೌಕರರು ಕೆಲಸಕ್ಕೆ ಗೈರು ಹಾಜರಾಗಿ ಫ್ರೀಡಂ ಪಾರ್ಕ್‌ನಲ್ಲಿ ಬೆಂಗಳೂರು ಚಲೋಗೆ ನಡೆಸುತ್ತಿದ್ದಾರೆ. ಆದರೆ, ಸ್ಥಳಕ್ಕೆ ಭೇಟಿ ಕೊಟ್ಟಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಯಾವುದೇ ಕಾರಣಕ್ಕೂ ನೌಕರಿ ಕಾಯಂ ಮಾಡಲು ಸಾಧ್ಯವಿಲ್ಲ. ಆದರೆ, ಯೋಜನೆ ಇರುವವರೆ ಸೇವೆಯಿಂದ ತೆಗೆಯುವುದಿಲ್ಲ ಎಂಬ ಬಗ್ಗೆ ಖಾತ್ರಿ ಕೊಡಬಹುದು ಎಂದು ಹೇಳಿದ್ದಾರೆ.

ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನ ಮಾಡಿದ ಸಚಿವ ಸುಧಾಕರ್‌, ನಮ್ಮ ಸರ್ಕಾರ ನಿಮ್ಮೆಲ್ಲರ ಕಾಳಜಿ ವಹಿಸಲಿದೆ. ನಿಮ್ಮ ಎಲ್ಲ ಬೇಡಿಕೆಗಳನ್ನು ಆದಷ್ಟು ಬೇಗ ಪ್ರಾಮಾಣಿಕವಾಗಿ ಸ್ಪಂದಿಸುತ್ತೇವೆ. ಆದರೆ, ಮೊದಲು ಪ್ರತಿಭಟನೆಯನ್ನು ಕೈ ಬಿಡಿ ಎಂದು ಮನವಿ ಮಾಡಿದರು.

ಅಭಿಯಾನ ಇರೋವರೆಗೂ ಕೆಲಸದಿಂದ ತೆಗೆಯಲ್ಲ

ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮ ಇರುವ ತನಕ ಯಾರನ್ನೂ ಕೆಲಸದಿಂದ ತೆಗೆಯುವುದಿಲ್ಲ. ನಿಮಗೆ ಸೇವಾ ಭದ್ರತೆ ಇದ್ದೇ ಇರುತ್ತದೆ. ಕಠಿಣವಾಗಿ ನಾನು ಹೇಳಿದರೆ ನಿಮಗೆ ಕಷ್ಟವಾಗಬಹುದು. ಆದರೆ, ವಾಸ್ತವ ಸಂಗತಿಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಕಾಯಂ ನೌಕರಿಯನ್ನು ಕೊಡಲು ಸಾಧ್ಯವಿಲ್ಲ. ಸಾವಿರಾರು ಮಂದಿ ಗುತ್ತಿಗೆ ಮೇಲೆ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಸೇವೆಗೆ ತಕ್ಕ ಗೌರವ ನೀಡಲಾಗುವುದು. ಕಾನೂನಿನಲ್ಲಿ ಬದಲಾವಣೆ ಮೂಲಕ ತಂದು ನಿಮ್ಮ ಹಿರಿತನವನ್ನು ಪರಿಗಣಿಸಿ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ಅನುಭವದ ಮೇಲೆ ಅಂಕ ನೀಡಿ ನೇರ ನೇಮಕಾತಿ ಮಾಡಿಕೊಳ್ಳುತ್ತೇವೆ. ಇದಕ್ಕೆ ಸ್ವಲ್ಪ ಸಮಯ ಬೇಕು ಎಂದು ಸಚಿವ ಸುಧಾಕರ್‌ ತಿಳಿಸಿದರು.

ಗುತ್ತಿಗೆ ಹೊರಗುತ್ತಿಗೆ ನೌಕರರ ಮುಷ್ಕರ

ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ. ಆರ್ಥಿಕ ಇಲಾಖೆ ಜತೆ ಚರ್ಚೆ ಮಾಡಬೇಕಿದೆ. ವೇತನ ಕಡಿಮೆ ಇರುವ ಸಮಸ್ಯೆ ಅನೇಕ ವರ್ಷದಿಂದ ಇದೆ. ಗೌರವಧನ ಹೆಚ್ಚಳ ಬಗ್ಗೆ ನಿಮ್ಮ ಬೇಡಿಕೆ ಸರಿಯಾಗಿಯೇ ಇದೆ. ವೇತನ ಹೆಚ್ಚಳ ವಿಚಾರದಲ್ಲಿ ಸರ್ಕಾರ ನಿಮ್ಮ ಪರ ನಿಲುವು ತೆಗೆದುಕೊಳ್ಳುತ್ತದೆ. ಆ ಬಗ್ಗೆ ನಾನು ಗ್ಯಾರೆಂಟಿ ಕೊಡುತ್ತೇನೆ. ಗ್ರೂಪ್ ಹೆಲ್ತ್ ಇನ್ಸೂರೆನ್ಸ್ ಗೆ ನಿಮ್ಮನ್ನ ಸೇರಿಸುತ್ತೇವೆ. ನಿಮ್ಮ ಬೇಡಿಕೆಗಳನ್ನ ಅತಿ ಶೀಘ್ರದಲ್ಲಿ ಪೂರಕವಾಗಿ ಸ್ಪಂದಿಸುತ್ತೇವೆ ಎಂದು ಅಭಯ ನೀಡಿದರು. ಆದರೆ, ಸದ್ಯ ಪ್ರತಿಭಟನಾಕಾರರು ಸಚಿವರ ಹೇಳಿಕೆಯನ್ನು ವಿರೋಧಿಸಿದ್ದು, ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಇದಕ್ಕೂ ಮೊದಲು ಫ್ರೀಡಂ ಪಾರ್ಕ್‌ನಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಜತೆಗೆ ಹರಿಯಾಣ ಮತ್ತು ದೆಹಲಿ ರಾಜ್ಯ ಸರ್ಕಾರಗಳು ತಮ್ಮಲ್ಲಿ ಕೆಲಸ ಮಾಡುವ ಗುತ್ತಿಗೆ ಆಧಾರಿತ ನೌಕರರ ವೇತನವನ್ನು ದುಪ್ಪಟ್ಟು ಮಾಡಿವೆ. ಅವರಂತೆ ನಮಗೂ ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದ್ದಾರೆ.

ಈ ಮೊದಲು ಒಂದು ದಿನದ ಸಾಂಕೇತಿಕ ಮುಷ್ಕರ ಮಾಡಿ, ಮುಖ್ಯಮಂತ್ರಿ, ಪ್ರಧಾನಿಗೂ ಪತ್ರ ಕಳಿಸಿದ್ದೇವೆ. ಯಾರಿಂದಲೂ ನಮಗೆ ಯಾವುದೇ ಉತ್ತರ ಬರಲಿಲ್ಲ. ಕಾಯಂ ನೌಕಕರಿಗಿಂದ ದುಪ್ಪಟ್ಟು ಕೆಲಸ ನಿರ್ವಹಿಸುವ ನಮಗೆ ಸೇವಾ ಭದ್ರತೆ ಬೇಕು. 60 ವರ್ಷ ಆಗುವವರೆಗೆ ನಮ್ಮನ್ನು ಕೆಲಸದಿಂದ ವಜಾ ಮಾಡಬಾರದೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ | ಪರ್ಸೆಂಟೇಜ್ ಆರೋಪ: ಗುತ್ತಿಗೆದಾರರು ಹೆಸರು ಬಹಿರಂಗಪಡಿಸಲಿ ಎಂದ ಮಾಜಿ ಸಚಿವ ಈಶ್ವರಪ್ಪ

ಶ್ರೀನಿವಾಸಾಚಾರಿಯವರ ವರದಿ ಯಥಾವತ್ತಾಗಿ ಜಾರಿಯಾಗಬೇಕೆಂದು ಒತ್ತಾಯಿಸಿರುವ ನೌಕರರು, ವಯೋಮಿತಿ ಸಡಿಲಿಕೆ ಹೆಚ್ಚಳ, ಕೃಪಾಂಕ ಹೆಚ್ಚಳ, ವರ್ಗಾವಣೆ, ಹೊರಗುತ್ತಿಗೆ ನೌಕರರಿಗೆ ಸರ್ಕಾರದ ಸಂಸ್ಥೆಯಿಂದ ನಿರ್ವಹಣೆ ಮಾಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ.

ಮುಷ್ಕರ ಸಂಬಂಧ ಪಟ್ಟಂತೆ ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದು, ಆರೋಗ್ಯ ಇಲಾಖೆಯಲ್ಲಿ 21 ಸಾವಿರ ಗುತ್ತಿಗೆ ನೌಕರರು ಇದ್ದಾರೆ. ಇದು ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ಕೇಂದ್ರ ಸರ್ಕಾರದ ಅನುದಾನದ ಕಾರ್ಯಕ್ರಮವಾಗಿದೆ. ಕೆಲವು ಸಂಘದ ಪದಾಧಿಕಾರಿಗಳು ಬೇಡಿಕೆ ಇಟ್ಟು ಫ್ರೀಡಂ ಪಾರ್ಕಲ್ಲಿ ಜಮಾಯಿಸಿದ್ದಾರೆ. ಈ ಹಿನ್ನೆಲೆ ಅಧಿಕಾರಿಗಳ ಜೊತೆ ಕೂಲಂಕಷವಾಗಿ ಚರ್ಚೆ ಮಾಡಿದ್ದೇನೆ ಎಂದು ಉತ್ತರಿಸಿದ್ದಾರೆ.

ಪ್ರತಿಯೊಬ್ಬ ಸಿಬ್ಬಂದಿಯ ಮೇಲೂ ಅಪಾರ ಗೌರವ ಇದ್ದು, ಕೋವಿಡ್‌ನಂತಹ ಸಾಂಕ್ರಾಮಿಕ ರೋಗ ಬಂದಾಗಲೂ ತ್ಯಾಗದ ಕೆಲಸ ಮಾಡಿದ್ದಾರೆ. ಸದ್ಯ ಸಂಘದ ಪದಾಧಿಕಾರಿಗಳ ಜತೆ ಸಭೆ ಮಾಡಿದ್ದು, ಬೇಡಿಕೆ ಈಡೇರಿಕೆ ಬಗ್ಗೆ ಕ್ರಮ ಕೈಗೊಂಡಿದ್ದೇನೆ. ಇನ್ನೂ ಕೆಲವು ಬೇಡಿಕೆ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿಬೇಕಿದ್ದು, ಹಣಕಾಸಿನ ಅವಶ್ಯಕತೆ ಇದೆ. ನ್ಯಾಯ ಸಮ್ಮತ ಬೇಡಿಕೆ ಈಡೇರಿಕೆ ಬಗ್ಗೆ ಕ್ರಮಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಆರೋಗ್ಯ ವಿಮೆ ವಿಸ್ತರಣೆ, 10 ದಿನಗಳ ವೇತನ ಸಹಿತ ರಜೆಯ ಬೇಡಿಕೆಗಳನ್ನು ಇಟ್ಟಿದ್ದಾರೆ. ಇದಕ್ಕೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಲಿದೆ. ಪ್ರತಿಭಟನಾ ನಿರತ ನೌಕಕರು ಕೇಳಿರುವ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ. ಸರ್ಕಾರ ಅವರ ಪರವಾಗಿ ಕೆಲಸ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರಿ ಆರೋಗ್ಯ ವ್ಯವಸ್ಥೆಯ ಬಗ್ಗೆ ಜನರು ಬಹಳ ವಿಶ್ವಾಸ ಇಟ್ಟಿದ್ದಾರೆ. ಕೇವಲ ಮೂಲಭೂತ ಸೌಲಭ್ಯಗಳಿಂದ ಮಾತ್ರ ಜನರಿಗೆ ವಿಶ್ವಾಸ ಬರುವುದಿಲ್ಲ. ಬದಲಾಗಿ ಇಂತಹ ನೌಕರರಿಂದ ಆರೋಗ್ಯ ಸೇವೆಗೆ ಉತ್ತಮ ಹೆಸರು ಬಂದಿದೆ. ಅವರಿಗೆ ನೋವು ಕೊಟ್ಟು ನಾವು ಮುಂದುವರಿಯುವುದು ಅಸಾಧ್ಯ. ಕೆಲವು ಬೇಡಿಕೆ ಈಡೇರಿಸಲು ಕಾನೂನಾತ್ಮಕ, ತಾಂತ್ರಿಕ ತೊಡಕುಗಳಿವೆ. ಇವೆಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿ, ಸಾಧ್ಯವಿರುವ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ. ದೇಶದಲ್ಲೇ ಆರೋಗ್ಯ ಸೇವೆ ನೀಡುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಅದಕ್ಕೆ ಪೂರಕವಾಗಿ ಕೆಲಸ ನಡೆಯಬೇಕು. ನೌಕರರು ಮುಷ್ಕರ ಕೈ ಬಿಟ್ಟು ಶೀಘ್ರದಲ್ಲೇ ಸೇವೆಗೆ ಹಿಂದಿರುಗಬೇಕು ಎಂದು ಸಚಿವರು ಮನವಿ ಮಾಡಿದರು. ಆದರೆ ನೌಕರರ ಸಂಪೂರ್ಣ ಮನವಿಗೆ ಸರ್ಕಾರ ಒಪ್ಪದ ಕಾರಣ ಪ್ರತಿಭಟನೆ ಮುಂದುವರಿದಿದ್ದು, ಸರ್ಕಾರದ ನಡೆ ಮುಂದೇನು ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಇದನ್ನೂ ಓದಿ | ಖಾಸಗಿ ಆಸ್ಪತ್ರೆಗಳ ತಂತ್ರಕ್ಕೆ ಆರೋಗ್ಯ ಇಲಾಖೆ ತಿರುಮಂತ್ರ: ಕೋವಿಡ್‌ ಹಣ ವಸೂಲಿ

Exit mobile version